VCET ಬೆಳ್ಳಿಹಬ್ಬ ಪಂಚವಿಂಶತಿ-25 : ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳ ಅಂತರ್‌ಜಿಲ್ಲಾ ಚೆಸ್ ಪಂದ್ಯಾಟ

0

ಪುತ್ತೂರು: ಚೆಸ್ ಅಪ್ರತಿಮ ಬುದ್ಧಿವಂತಿಕೆಯ ಆಟವಾಗಿದ್ದು ತನ್ನದೇ ಆದ ವೈಶಿಷ್ಟ್ಯವನ್ನು ಹೊಂದಿ ಜಗತ್ತಿನೆಲ್ಲೆಡೆಯ ಮಹತ್ವಾಕಾಂಕ್ಷಿ ಕ್ರೀಡೆಯಾಗಿ ಪ್ರಸಿದ್ಧಿಯಾಗಿದೆ ಎಂದು ಮಂಗಳೂರಿನ ಗೋರಿಗುಡ್ಡೆಯ ಕಿಟ್ಟೆಲ್ ಮೆಮೋರಿಯಲ್ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಪ್ರೊ.ವಿಠ್ಠಲ.ಎ ಹೇಳಿದರು.


ಅವರು ಪುತ್ತೂರಿನ ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯ ಬೆಳ್ಳಿಹಬ್ಬ ಪಂಚವಿಂಶತಿ-25 ಇದರ ಪ್ರಯುಕ್ತ ಸಾವರ್ಕರ್ ಸಭಾಭವನದಲ್ಲಿ ನಡೆಸಲಾದ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳ ಅಂತರ್‌ಜಿಲ್ಲಾ ಚೆಸ್ ಪಂದ್ಯಾಟವನ್ನು ಉದ್ಘಾಟಿಸಿ ಮಾತನಾಡಿದರು.

ಚದುರಂಗದ ಉಗಮ ಭಾರತದಲ್ಲಿಯೇ ಎಂದು ಹೇಳಲಾಗುತ್ತಿದ್ದು, ಪುರಾಣ ಕಾಲದಲ್ಲಿಯೇ ಇದನ್ನು ಆಡಲಾಗುತ್ತಿತ್ತು, ಬಳಿಕ ರೂಪಾಂತರಗೊಂಡು ಇಂದು ಜನಪ್ರಿಯ ಕ್ರೀಡೆಯಾಗಿ ಬೆಳೆದಿದೆ ಎಂದರು. ಮಕ್ಕಳನ್ನು ಇದರಲ್ಲಿ ತೊಡಗಿಸಿಕೊಳ್ಳುವಂತೆ ಮಾಡಿದರೆ ಉತ್ತಮ ಸಕಾರಾತ್ಮಕ ಪರಿಣಾಮಗಳನ್ನು ಕಂಡುಕೊಳ್ಳಲು ಸಾಧ್ಯವಿದೆ ಎಂದರು.


ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕಾಲೇಜು ಆಡಳಿತ ಮಂಡಳಿಯ ಸಂಚಾಲಕ ಸುಬ್ರಮಣ್ಯ ಭಟ್.ಟಿ.ಎಸ್ ಮಾತನಾಡಿ ಏಕಾಗ್ರತೆ, ಯೋಚನಾಶಕ್ತಿ, ಅಳೆದು ನೋಡುವ ವಿವೇಚನಾ ಶಕ್ತಿ, ತ್ವರಿತವಾಗಿ ಪರ್ಯಾಯ ಮಾರ್ಗಗಳನ್ನು ಅನ್ವೇಷಿಸುವ ಶಕ್ತಿಯನ್ನು ಬಯಸುವ ಈ ಚೆಸ್ ಕ್ರೀಡೆಯಿಂದ ಮಾನಸಿಕ ಮತ್ತು ಬೌದ್ಧಿಕ ಮಟ್ಟವು ಹೆಚ್ಚಾಗುತ್ತದೆ ಎಂದರು. ನಮ್ಮ ಸಂಸ್ಥೆಯು ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳಿಗೆ ಸಮಾನ ಆದ್ಯತೆಯನ್ನು ನೀಡುತ್ತದೆ. ಕ್ರೀಡೆ, ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಕಾಲೇಜಿನ ವಿದ್ಯಾರ್ಥಿಗಳು ವಿಶ್ವವಿದ್ಯಾನಿಲಯ ಮಟ್ಟದಲ್ಲಿ ಅನೇಕ ಪ್ರಶಸ್ತಿಗಳನ್ನು ಗೆದ್ದುಕೊಂಡಿದ್ದಾರೆ ಎಂದರು. ಆಗಮಿಸಿದ ಎಲ್ಲಾ ಸ್ಪರ್ಧಾಳುಗಳನ್ನು ಅಭಿನಂದಿಸಿದ ಅವರು ಸೋಲು ಗೆಲುವುಗಳನ್ನು ಸಮಾನವಾಗಿ ಸ್ವೀಕರಿಸಿ ಎಂದರು.


ಕಾಲೇಜು ಆಡಳಿತ ಮಂಡಳಿಯ ನಿರ್ದೇಶಕ ರವಿಕೃಷ್ಣ.ಡಿ.ಕಲ್ಲಾಜೆ, ಪ್ರಾಂಶುಪಾಲ ಡಾ.ಮಹೇಶ್‌ಪ್ರಸನ್ನ.ಕೆ, ಫಿಡೆ ಆರ್ಬಿಟರ್ ಸಾಕ್ಷಾತ್.ಬಿ.ಕೆ, ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಬಾಲಚಂದ್ರ ಗೌಡ ಭಾರ್ತಿಕುಮೇರು, ಕಾರ್ಯಕ್ರಮ ಸಂಯೋಜಕ ಪ್ರೊ.ದಿನೇಶ್‌ಪ್ರಸನ್ನ ವೇದಿಕೆಯಲ್ಲಿ ಉಪಸ್ಥಿತರಿದ್ದರು. ನೀಕ್ಷಿತಾ ಸ್ವಾಗತಿಸಿ, ಪ್ರೊ.ಸೌಜನ್ಯ.ಎಂ.ಎಂ ಮತ್ತು ಪ್ರೊ.ಶ್ರುತಿ ಬಂಗೇರಾ ಕಾರ್ಯಕ್ರಮ ನಿರ್ವಹಿಸಿದರು.


ದಕ್ಷಿಣಕನ್ನಡ, ಉಡುಪಿ, ಕೊಡಗು, ಹಾಸನ, ಉತ್ತರಕನ್ನಡ, ಚಿಕ್ಕಮಗಳೂರು ಹಾಗೂ ಕಾಸರಗೋಡು ಜಿಲ್ಲೆಗಳ 139 ಹುಡುಗರು, 53 ಹುಡುಗಿಯರು ಸೇರಿದಂತೆ ಒಟ್ಟು 192 ವಿದ್ಯಾರ್ಥಿಗಳು ಭಾಗವಹಿಸಿದ್ದರು. ರ‍್ಯಾಪಿಡ್ ಮಾದರಿಯಲ್ಲಿ ಈ ಪಂದ್ಯಾಟವು ನಡೆಯಿತು.
ಸಂಜೆ ನಡೆದ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಕಾಲೇಜು ಆಡಳಿತ ಮಂಡಳಿಯ ಸಂಚಾಲಕ ಸುಬ್ರಮಣ್ಯ ಭಟ್.ಟಿ.ಎಸ್ ಬಹುಮಾನ ವಿತರಿಸಿದರು. ಪ್ರಾಂಶುಪಾಲ ಡಾ.ಮಹೇಶ್‌ಪ್ರಸನ್ನ.ಕೆ, ಫಿಡೆ ಆರ್ಬಿಟರ್ ಸಾಕ್ಷಾತ್.ಬಿ.ಕೆ, ವಿವೇಕಾನಂದ ಪದವಿ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ರವಿಶಂಕರ್, ಇಂಜಿನಿಯರಿಂಗ್ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಬಾಲಚಂದ್ರ ಗೌಡ ಭಾರ್ತಿಕುಮೇರು, ಕಾರ್ಯಕ್ರಮ ಸಂಯೋಜಕ ಪ್ರೊ.ದಿನೇಶ್‌ಪ್ರಸನ್ನ ವೇದಿಕೆಯಲ್ಲಿ ಉಪಸ್ಥಿತರಿದ್ದರು.


ಫಲಿತಾಂಶ ಈ ಕೆಳಗಿನಂತಿದೆ:
ಹುಡುಗರ ವಿಭಾಗ:

ಪ್ರಥಮ ಸ್ಥಾನ- ರವೀಶ್ ಕೋಟೆ, ಸಂತ ಅಲೋಶಿಯಸ್ ಪದವಿಪೂರ್ವ ಕಾಲೇಜು ಮಂಗಳೂರು.
ದ್ವಿತೀಯ ಸ್ಥಾನ- ಕಿಶನ್ ಕುಮಾರ್.ಎನ್.ಎನ್, ಎಸ್‌ಡಿಎಂ ಪದವಿಪೂರ್ವ ಕಾಲೇಜು ಉಜಿರೆ.
ತೃತೀಯ ಸ್ಥಾನ- ಪ್ರಜ್ವಲ್.ಎ.ಬಿ, ನ್ಯೂ ವೈಬ್ರೆಂಟ್ ಪದವಿಪೂರ್ವ ಕಾಲೇಜು ಮೂಡಬಿದ್ರಿ.
ನಾಲ್ಕನೇ ಸ್ಥಾನ- ಯೋಗೀಶ್, ಎಸ್‌ಡಿಎಂ ಪದವಿಪೂರ್ವ ಕಾಲೇಜು ಉಜಿರೆ.
ಐದನೇ ಸ್ಥಾನ- ಪ್ರಣವ್.ಪಿ.ಜಿ, ಇಂದ್ರಪ್ರಸ್ಥ ಪದವಿಪೂರ್ವ ಕಾಲೇಜು ಉಪ್ಪಿನಂಗಡಿ.


ತಂಡ ಪ್ರಶಸ್ತಿ:
ಪ್ರಥಮ- ಎಸ್‌ಡಿಎಂ ಪದವಿಪೂರ್ವ ಕಾಲೇಜು ಉಜಿರೆ.
ದ್ವಿತೀಯ- ನ್ಯೂ ವೈಬ್ರೆಂಟ್ ಪದವಿಪೂರ್ವ ಕಾಲೇಜು ಮೂಡಬಿದ್ರಿ.
ತೃತೀಯ- ಸಂತ ಫಿಲೋಮಿನಾ ಪದವಿಪೂರ್ವ ಕಾಲೇಜು ಪುತ್ತೂರು.

ಹುಡುಗಿಯರ ವಿಭಾಗ:
ಪ್ರಥಮ ಸ್ಥಾನ- ಚೇತನಾ ಕುಮಾರಿ.ಎಸ್, ನ್ಯೂ ವೈಬ್ರೆಂಟ್ ಪದವಿಪೂರ್ವ ಕಾಲೇಜು ಮೂಡಬಿದ್ರಿ.
ದ್ವಿತೀಯ ಸ್ಥಾನ- ಮೊನಿಶಾ.ಎ.ಎಸ್, ಬೋಸ್ಕೋಸ್ ಪದವಿಪೂರ್ವ ಕಾಲೇಜು ಮಂಗಳೂರು.
ತೃತೀಯ ಸ್ಥಾನ- ಅನಿಖಾ.ಯು ಸುದಾನ ಪದವಿಪೂರ್ವ ಕಾಲೇಜು ಪುತ್ತೂರು
ನಾಲ್ಕನೇ ಸ್ಥಾನ- ಚಹನಾ, ಎಸ್‌ಡಿಎಂ ಪದವಿಪೂರ್ವ ಕಾಲೇಜು ಉಜಿರೆ.
ಐದನೇ ಸ್ಥಾನ- ಶಿವಾನಿ, ಶ್ರೀರಾಮ ಪದವಿಪೂರ್ವ ಕಾಲೇಜು ಕಲ್ಲಡ್ಕ.


ತಂಡ ಪ್ರಶಸ್ತಿ:
ಪ್ರಥಮ- ನ್ಯೂ ವೈಬ್ರೆಂಟ್ ಪದವಿಪೂರ್ವ ಕಾಲೇಜು ಮೂಡಬಿದ್ರಿ.
ದ್ವಿತೀಯ- ವಿವೇಕಾನಂದ ಪದವಿಪೂರ್ವ ಕಾಲೇಜು ಪುತ್ತೂರು
ತೃತೀಯ- ಇಂದ್ರಪ್ರಸ್ಥ ಪದವಿಪೂರ್ವ ಕಾಲೇಜು ಉಪ್ಪಿನಂಗಡಿ.

LEAVE A REPLY

Please enter your comment!
Please enter your name here