ಪುತ್ತೂರು ಬ್ಲಾಕ್ ಅಲ್ಪಸಂಖ್ಯಾತ ಘಟಕದ ಮಾಸಿಕ ಸಭೆ

0

ನಾನು ಬಿಜೆಪಿಯಲ್ಲಿರುವಾಗಲೇ ಬಡ ಮುಸ್ಲಿಂ ಮಹಿಳೆಯರಿಗೆ ಮನೆ ನಿರ್ಮಿಸಿ ಕೊಟ್ಟಿದ್ದೆ: ಶಾಸಕ ಅಶೋಕ್ ರೈ

ಪುತ್ತೂರು: ನಾನು ನನ್ನ ರಾಜಕೀಯ ಜೀವನಕ್ಕೆ ಕಾಲಿಡುವ ಮೊದಲು ಮತ್ತು ಅದರ ನಂತರ ಯಾವುದೇ ಜಾತಿ, ಧರ್ಮದವರಿಗೆ ನೋವು ತರುವ ಕೆಲಸ ಬಿಡಿ ಯಾರ ಮನಸ್ಸಿಗೂ ನೋವು ತರುವ ಹೇಳಿಕೆ ಅಥವ ಭಾಷಣ ಮಾಡಿಲ್ಲ. ಶಾಸಕನಾದ ಬಳಿಕ ಎಲ್ಲಾ ಜಾತಿ , ಧರ್ಮದವರನ್ನೂ ಸಮಾನವಾಗಿ ಕಾಣುತ್ತಿದ್ದೇನೆ, ನಾನು ಶಾಸಕನಾಗುವ ಹಿಂದೆ ಬಿಜೆಪಿಯಲ್ಲಿರುವಾಗಲೇ ನನ್ನ ಟ್ರಸ್ಟ್ ಮೂಲಕ ಅನೇಕ ಬಡ ಮುಸ್ಲಿಂ ಮಹಿಳೆಯರಿಗೆ ಮನೆಯನ್ನು ನಿರ್ಮಾಣ ಮಡಿಕೊಟ್ಟಿದ್ದೆ ಎಂದು ಪುತ್ತೂರು ಶಾಸಕ ಅಶೋಕ್ ರೈ ಹೇಳಿದರು.

ಅವರು ಪುತ್ತೂರು ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಬ್ಲಾಕ್ ಅಲ್ಪಸಂಖ್ಯಾತ ಘಟಕದ ಮಾಸಿಕ ಸಭೆಯಲ್ಲಿ ಮಾತನಾಡಿದರು.

ಪಕ್ಷದವರೇ ಆದ ಕೆಲವರು ತೆರೆಮರೆಯಲ್ಲಿ ಕುಳಿತು ನನ್ನ ಬಗ್ಗೆ ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಿದ್ದಾರೆ. ಹಿಂಬಾಗಿಲ ಮೂಲಕ ಮಾಡುವ ಮಿಥ್ಯಾರೋಪಗಳಿಗೆ ಬೆಲೆ ಕೊಡುವ ವ್ಯಕ್ತಿ ನಾನಲ್ಲ. ನನ್ನದು ಏನಿದ್ದರೂ ತೆರೆದ ಹೃದಯ, ಇದ್ದದ್ದನ್ನು ಇದ್ದ ಹಾಗೆ ಧೈರ್ಯದಿಂದ ಎಲ್ಲಿ ಬೇಕಾದರೂ ಹೇಳುವ ಮನಸ್ಸು ನನ್ನದಾಗಿದೆ. ಇದುವರೆಗೂ ಯಾರಿಗೂ ಗೊತ್ತಿದ್ದು ಅನ್ಯಾಯ ಮಾಡಿಲ್ಲ. ನನ್ನ ಬಗ್ಗೆ ತೆರೆಮರೆಯಲ್ಲಿ ಕುಳಿತು ಆರೋಪ ಮಾಡುವವರು ಅವರ ಸಮುದಾಯಕ್ಕೆ, ಸಮುದಾಯದ ಬಡ ಕುಟುಂಬಗಳಿಗೆ ಏನು ಮಾಡಿದ್ದಾರೆ ಎಂಬುದನ್ನು ಅವಲೋಕನ ಮಾಡಿಕೊಳ್ಳಲಿ ಎಂದು ಹೇಳಿದರು.

ಗುಂಡು ಹಾಕಿ ಎಂಬ ಹೇಳಿಕೆ ಕೊಟ್ಟಿದ್ದು ಹೌದು:
ಕಳೆದ ಕೆಲವು ದಿನಗಳ ಹಿಂದೆ ಅಕ್ರಮವಾಗಿ ದನ ಸಾಗಾಟ ಮಾಡುತ್ತಿದ್ದ ಕೇರಳದ ವ್ಯಕ್ತಿ ಮೇಲೆ ಪೊಲೀಸರು ಗುಂಡು ಹಾರಿಸಿದ್ದಾರೆ, ಸ್ಥಳಕ್ಕೆ ನಾನು ಭೇಟಿ ನೀಡಿದ್ದೆ, ಪೊಲೀಸರ ಗುಂಡಿಗೆ ಗಾಯಗೊಂಡ ಆರೋಪಿ ಕೇರಳದ ದನ ವ್ಯಾಪಾರಿ, ಆತ 5 ಬಾರಿ ದನ ಸಾಗಾಟದ ವೇಳೆ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದ. 5 ಬಾರಿಯೂ ಇವನಿಗೆ ಎಚ್ಚರಿಕೆ ಕೊಡಲಾಗಿತ್ತು. ಆ ಬಳಿಕವೂ ಸಾಗಾಟ ಮಾಡಿದ್ದಾನೆ, ಪೊಲೀಸರ ವಾಹನಕ್ಕೆ ಡಿಕ್ಕಿ ಹೊಡೆದು ಪರಾರಿಯಾಗುವ ವೇಳೆ ಗುಂಡು ಹಾಕಿದ್ದಾರೆ. ಇನ್ನು ಕದ್ದು ದನ ಸಾಗಾಟ ಮಾಡಿದರೆ ಬೇರೆ ಕಡೆ ಗುಂಡು ಬೀಳ್ತದೆ ಎಂದು ಹೇಳಿದ್ದೆ. ಕೇರಳದ ವ್ಯಕ್ತಿ ಬಂದು ಇಲ್ಲಿ ದನ ಕದ್ದು ಸಿಕ್ಕಿ ಬಿದ್ದಾಗ ಬೈಯ್ಯುವುದು ಇಲ್ಲಿನ ಮುಸ್ಲಿಂಮರಿಗೆ . ಒಬ್ಬ ವ್ಯಕ್ತಿ ಮಾಡುವ ತಪ್ಪಿಗೆ ಇಡೀ ಸಮಾಜವನ್ನೇ ಧೂಷಣೆ ಮಾಡಿದರೆ ಅದನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ. ಎಲ್ಲಾ ಸಮುದಾಯದಲ್ಲಿ ಕೆಟ್ಟವರೂ ಇದ್ದಾರೆ ಒಳ್ಳೆಯವರೂ ಇದ್ದಾರೆ. ಕೆಟ್ಟ ಒಬ್ಬ ವ್ಯಕ್ತಿಯ ಕಾರಣಕ್ಕೆ ಯಾರೂ ಸಮಾಜವನ್ನು ದೂಷಿಸಬಾರದು ಎಂದು ಹೇಳಿದರು.

ಜಿಲ್ಲೆಯ ಮುಸ್ಲಿಂಮರ ಬಗ್ಗೆ ನನಗೆ ಅಭಿಮಾನವಿದೆ
ದ ಕ ಜಿಲ್ಲೆಯ ಮುಸ್ಲಿಮರ ಬಗ್ಗೆ ನನಗೆ ಅಭಿಮಾನವಿದೆ. ಒಂದು ಕಾರ್ಯಕ್ರಮಕ್ಕೆ ಕರೆದರೆ ಅಲ್ಲಿಗೆ ತೆರಳಿದರೆ ಅವರು ಮಾಡುವ ಆತಿಥ್ಯ ಅತ್ಯಂತ ಗೌರವದಿಂದ ಕೂಡಿರುತ್ತದೆ. ಬಹಳ ಪ್ರೀತಿಯಿಂದ ನಡೆಸಿಕೊಳ್ಳುತ್ತಾರೆ. ಒಂದು ಕಾರ್ಯಕ್ರಮಕ್ಕೆ ಕರೆದರೆ ನನಗೆ ಮಾತ್ರವಲ್ಲ ಅನ್ಯಧರ್ಮದ ಯಾರೇ ಆಗಲಿ ಅವರನ್ನು ಅತ್ಯಂತ ಪ್ರೀತಿಯಿಂದ ಸ್ವಾಗತ ಮಾಡುತ್ತಾರೆ. ಇಂತಹ ವ್ಯಕ್ತಿಗಳನ್ನು ಯಾರೋ ಒಬ್ಬನ ಕಾರಣಕ್ಕೆ ಅಪಮಾನ ಮಾಡುವುದು ಎಷ್ಟು ಸರಿ? ಇದೇ ಕಾರಣಕ್ಕೆ ನಾನು ದನಕಳ್ಳರ ವಿರುದ್ದವಾಗಿ ಹೇಳಿಕೆ ಕೊಟ್ಟಿದ್ದೇನೆ, ಮುಸ್ಲಿಮರ ಮೇಲೆ ಗುಂಡು ಹಾರಿಸಿ ಎಂದು ಹೇಳಿದ್ದೇನಾ? ಎಂದು ಶಾಸಕರು ಪ್ರಶ್ನಿಸಿದರು. ಅಲ್ಪ ಸಂಖ್ಯಾತ ಸಮುದಾಯದಲ್ಲಿ ಅನೆಕ ಮಂದಿ ಬಡ ವಿಧವೆಯರಿದ್ದಾರೆ, ಮನೆ ಇಲ್ಲದವರಿದ್ದಾರೆ, ಅವರಿಗೆ ನೆರವು ನೀಡುವ ಬಗ್ಗೆ ಚಿಂತನೆ ಮಾಡಬೇಕಿದೆ. ಬ್ಯಾಂಕಿನಿಂದ ಸಾಲ ಪಡೆದು ಮರುಪಾವತಿ ಸಾಧ್ಯವಿಲ್ಲದ ಕೆಲವು ಬಡ ಕುಟುಂಬಗಳು ನನ್ನ ಕಚೇರಿಗೆ ಬಂದು ತಮ್ಮ ಸಂಕಷ್ಟಗಳನ್ನು ಹೇಳಿಕೊಳ್ಳುತ್ತಾರೆ ನನ್ನಿಂದಾದ ನೆರವನ್ನು ನೀಡಿದ್ದೇನೆ, ಈ ಬಗ್ಗೆ ನಾಯಕರು ಮೌನ ಮುರಿಯಬೇಕು ಎಂದು ಶಾಸಕರು ಮನವಿ ಮಾಡಿದರು.

ಕಾಂಗ್ರೆಸ್‌ನ ಬೆನ್ನಲುಬು ಎಂದೇ ನೆರವು ನೀಡುತ್ತಿದ್ದೇನೆ
ಅಲ್ಪಸಂಖ್ಯಾತ ಮತಗಳು ಕಾಂಗ್ರೆಸ್‌ನ ವೋಟು ಬ್ಯಾಂಕ್ ಎಂದು ನನಗೆ ಚೆನ್ನಾಗಿ ಗೊತ್ತಿದೆ. ಅಲ್ಪಸಂಖ್ಯಾತರು ನನಗೆ ಮತ ಹಾಕಿದ್ದಾರೆ ಎಂದೂ ಗೊತ್ತಿದೆ ಇದೇ ಕಾರಣಕ್ಕೆ ನನ್ನಿಂದ ಏನೆಲ್ಲಾ ಸಹಾಯ ಮತ್ತು ಆ ಸಮುದಾಯಗಳಿಗೆ ಸರಕಾರದಿಂದ ಎಷ್ಟು ಅನುದಾನ ತರ‍್ಲಿಕ್ಕೆ ಸಾಧ್ಯವೋ ಅಷ್ಟು ಅನುದಾನವನ್ನು ತಂದಿದ್ದೇನೆ. ಕಳೆದ ವರ್ಷ 8 ಕೋಟಿ ಅಲ್ಪ ಸಂಖ್ಯಾತ ಸಮುದಾಯಕ್ಕೆ, ಜೈನ ಸಮುದಾಯಕ್ಕೆ, ಕ್ರೈಸ್ತ ಸಮುದಾಯಕ್ಕೆ ಮೀಸಲಿಟ್ಟಿದ್ದೇನೆ ಈ ವರ್ಷ 9 ಕೋಟಿ ಅನುದಾನದ ಪ್ರಸ್ತಾವನೆಯನ್ನು ಕಳುಹಿಸಿದ್ದೇನೆ, ಮಸೀದಿ, ಚರ್ಚ್‌, ಬಸದಿಗಳ ಅಭಿವೃದ್ದಿಗೆ ಅನುದಾನ ನೀಡಿದ್ದೇನೆ, ನನ್ನ ಕ್ಷೇತ್ರದ ಮತ್ತು ನನ್ನ ಪಕ್ಕದ ಕ್ಷೇತ್ರದ ಬಡ ಕುಟುಂಬಗಳಿಗೆ ಸಿ ಎಂ ಪರಿಹಾರ ನಿಧಿಯಿಂದ ಆರ್ಥಿಕ ನೆರವನ್ನು ಒದಗಿಸಿದ್ದೇನೆ, ನನ್ನ ಕಚೇರಿಗೆ ಬಂದ ಅದೆಷ್ಟೋ ಕುಟುಂಬಗಳಿಗೆ ನನ್ನಿಂದಾದ ಆರ್ಥಿಕ ನೆರವು ಮಾಡಿದ್ದೇನೆ. ಇಷ್ಟು ವರ್ಷ ಮಾಡದೇ ಇದ್ದ , ಆಗದೇ ಇದ್ದ 94 ಸಿ ಸಿ, 94 ಸಿ ಹಕ್ಕು ಪತ್ರವನ್ನು ಮಾಡಿಕೊಟ್ಟಿದ್ದೇನೆ, ಮದುವೆ, ವಿದ್ಯಾಬ್ಯಾಸಕ್ಕೆ ನೆರವು ನೀಡಿದ್ದೇನೆ. ಸರಕಾರದಿಂದ ದೊರೆಯುವ ಟೈಲರಿಂಗ್ ಯಂತ್ರ, ಕಾರ್ಮಿಕ ಕಿಟ್‌ಗಳನ್ನು ಅಲ್ಪಸಂಖ್ಯಾತ ಮಹಿಳೆಯರಿಗೆ ನೀಡಿದ್ದೇನೆ. ಇವೆಲ್ಲವೂ ತನ್ನಿಂತಾನೆ ಬರುವುದಲ್ಲ ಸರಕಾರವನ್ನು ಕಾಡಿ ಬೇಡಿ ತಂದು ಕೊಟ್ಟಿದ್ದೇನೆ ಎಂದು ಶಾಸಕರು ಹೇಳಿದರು.

ಬಹುತೇಕರಿಗೆ ಕಾಂಗ್ರೆಸ್ಸಿನ ನೆರಳು ಮಾತ್ರ ದೊರೆಯುತ್ತದೆ
ಕಾಂಗ್ರೆಸ್ ಒಂದು ಮರವಿದ್ದಂತೆ, ಇದರಲ್ಲಿ ಆಗುವ ಹಣ್ಣುಗಳು ಕೆಲವರಿಗೆ ಮಾತ್ರ ದೊರೆಯುತ್ತದೆ, ಉಳಿದವರಿಗೆ ನೆರಳು ಸಿಗಬಹುದು. ಪಕ್ಷ ಅಧಿಕಾರದಲ್ಲಿದ್ದರೆ ನೆರಳಿನಡಿ ನಿಂತು ತಮ್ಮ ಕೆಲಸ ಮಾಡಿಸಬಹುದು, ತಮ್ಮ ಹಕ್ಕುಗಳನ್ನು ಪಡೆದುಕೊಳ್ಳಬಹುದು ಎಂದು ಹೇಳಿದ ಶಾಸಕರು. ನಮ್ಮ ಪಕ್ಷದ ಶಾಸಕರು ಇದ್ದಾಗ ನಮಗೆ ಕಷ್ಟವಾದಾಗ ಸಹಾಯವನ್ನು ಪಡೆಯಬಹುದು, ಅಧಿಕಾರಿಗಳಿಂದ ಕೆಲಸ ಮಾಡಿಸಬಹುದು ಎಂಬುದನ್ನು ಪ್ರತೀಯೊಬ್ಬ ಕಾರ್ಯಕರ್ತರೂ ಅರ್ಥ ಮಾಡಿಕೊಳ್ಳಬೇಕು. ಪಕ್ಷ ಇದ್ದರೆ, ಪಕ್ಷ ಅಭಿವೃದ್ದಿಯಾದರೆ ಮಾತ್ರ ನಮಗೆಲ್ಲಾ ನೆಮ್ಮದಿಯಿಂದ ಇರಲು ಸಾಧ್ಯವಾಗುತ್ತದೆ. ಪಕ್ಷಕ್ಕಿಂತ ದೊಡ್ಡವರು ಯಾರೂ ಇಲ್ಲ. ಪಕ್ಷ ಇದ್ದರೆ ಮಾತ್ರ ನಾವು , ಸ್ವತಂತ್ರ್ಯ ಅಭ್ಯರ್ಥಿಯಾಗಿ ಸ್ಪರ್ಧಿಸಿ ಶಾಸಕನಾಗಲು ಅಶೋಕ್ ರೈಗೂ ಸಾಧ್ಯವಿಲ್ಲ ಎಂಬುದು ಜನಜನಿತ ಎಂದು ಶಾಸಕರು ಹೇಳಿದರು.

ಶಾಸಕರು ನಮ್ಮ ಪರವಾಗಿಯೇ ಇದ್ದಾರೆ: ಕೆ ಪಿ ಆಳ್ವ
ಶಾಸಕ ಅಶೋಕ್ ರೈ ಎಂದೂ ಅಲ್ಪಸಂಖ್ಯಾತರ ಪರವಾಗಿದ್ದಾರೆ, ಅವರನ್ನು ಕೆಲವು ದುಷ್ಟ ಶಕ್ತಿಗಳು ಅವರ ಬಗ್ಗೆ ಇಲ್ಲದ ಆರೋಪವನ್ನು ಮಾಡಿ ಅದನ್ನು ಸಾಮಾಜಿಕ ತಾಣದಲ್ಲಿ ಹಾಕುತ್ತಿದ್ದಾರೆ, ಇದಕ್ಕೆ ಕಾರ್ಯಕರ್ತರೇ ತಕ್ಕ ಉತ್ತರವನ್ನು ಕೊಡಬೇಕು. ಒಬ್ಬರು ಅಥವಾ ಇಬ್ಬರಿಂದ ಇಲ್ಲಿ ಪಕ್ಷ ಕಟ್ಟಲು ಸಾಧ್ಯವಿಲ್ಲ. ನಮ್ಮ ಪಕ್ಷದವರೇ ಶಾಸಕರಾದ ಕಾರಣ ಇಲ್ಲಿ ಪಕ್ಷವನ್ನು ಬಲಿಷ್ಟವಾಗಿ ಕಟ್ಟಲು ಸುಲಭ ಸಾಧ್ಯವಾಗುತ್ತದೆ. ಪುತ್ತೂರಿನಲ್ಲಿ ಬಿಜೆಪಿ ಶಾಸಕರಿದ್ದಲ್ಲಿ ಅಲ್ಪಸಂಖ್ಯಾತರ ಯಾವುದೇ ಕೆಲಸಗಳು ಆಗುವುದಿಲ್ಲ, ಅಲ್ಪ ಸಂಖ್ಯಾತರ ಅನುದಾನವೂ ಬರುವುದಿಲ್ಲ. ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಮಾತ್ರ ಎಲ್ಲಾ ಜಾತಿ, ಧರ್ಮದವರ ಏಳಿಗೆ ಕಾಣಲು ಸಾಧ್ಯ ಎಂಬುದನ್ನು ನಾವು ಅರ್ಥ ಮಾಡಿಕೊಳ್ಳಬೇಕು. ಶಾಸಕ ಅಶೋಕ್ ರೈ ಮಾರ್ಗದರ್ಶನದಂತೆ ನಾವು ನಡೆದುಕೊಳ್ಳಬೇಕಿದೆ. ಪುತ್ತೂರಿಗೆ ಮೊಟ್ಟ ಮೊದಲ ಬಾರಿಗೆ ಕಾಂಗ್ರೆಸ್ ಭವನಕ್ಕೆ ಜಾಗ ಮಂಜೂರಾಗಿದೆ ಇದು ಇತಿಹಾಸವಾಗಿದೆ. ಮುಂದಿನ ದಿನಗಳಲ್ಲಿ ಎಲ್ಲರೂ ಒಗ್ಗಟ್ಟಿನಿಂದ ಕಾಂಗ್ರೆಸ್ ಕಟ್ಟಿ ಬೆಳಸಬೇಕಿದೆ. ಯಾರೋ ಒಂದಿಬ್ಬರು ಕಿಡಿಗೇಡಿಗಳ ಮಾತಿಗೆ ಬೆಲೆ ಕೊಟ್ಟು ಪಕ್ಷದ ನಾಯಕರನ್ನು ಅವಹೇಳಿಸುವ ಕೆಲಸವನ್ನು ಯಾರೂ ಮಾಡಬಾರದು ಎಂದು ಬ್ಲಾಕ್ ಅಧ್ಯಕ್ಷ ಕೆ ಪಿ ಆಳ್ವ ಮನವಿ ಮಾಡಿದರು.

ಪುತ್ತೂರು ಬ್ಲಾಕ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಅಬ್ದುಲ್ ರಹಿಮಾನ್ ಆಝಾದ್ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ ಎಸ್ ಮಹಮ್ಮದ್, ಅಕ್ರಮ ಸಕ್ರಮ ಸಮಿತಿ ಸದಸ್ಯರಾದ ಮಹಮ್ಮದ್ ಬಡಗನ್ನೂರು, ಸೇವಾ ದಳದ ಜೋಕಿಂಡಿಸೋಜಾ, ಇಬ್ರಾಹಿಂ ಗೋಳಿಕಟ್ಟೆ, ಯಾಕೂಬ್‌ಮುಲಾರ್, ರಾಮಣ್ಣ ಪಿಲಿಂಜ, ಅಬೂಬಕ್ಕರ್ ಆರ್ಲಪದವು, ಫಾರೂಕ್ ಬಾಯಬ್ಬೆ, ಪುಡಾ ಸದಸ್ಯ ಅನ್ವರ್ ಖಾಸಿಂ ಅರ್ಷದ್ ದರ್ಬೆ, ಸಿಯಾನ್ ದರ್ಬೆ, ಸೂಫಿ ಬಪ್ಪಳಿಗೆ, ಹಬೀಬ್ ಕಣ್ಣೂರು ತಿಂಗಳಾಡಿ, ಶರೀಫ್ ಬಲ್ನಾಡು, ಮೊದಲಾದವರು ಇದ್ದರು.
ಕಾರ್ಯಕ್ರಮದಲ್ಲಿ ತಾಲೂಕು ಕನ್ನಡ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಅಬೂಬಕ್ಕರ್ ಆರ್ಲಪದವು ಅವರನ್ನು ಘಟಕದ ವತಿಯಿಂದ ಶಾಸಕರು ಸನ್ಮಾನಿಸಿ ಗೌರವಿಸಿದರು.

LEAVE A REPLY

Please enter your comment!
Please enter your name here