





ನಿರಂತರ ಭಜನೆ-ರಂಗೋಲಿ, ಹಣತೆ ಬೆಳಕಿನಿಂದ ಕಂಗೊಳಿಸಿದ ದೇವಳದ ರಥಬೀದಿ



ಭಜನೆಯಿಂದ ಸಾನಿದ್ಯ ವೃದ್ಧಿ – ಈಶ್ವರ ಭಟ್ ಪಂಜಿಗುಡ್ಡೆ






ಪುತ್ತೂರು: ಮಹತೋಭಾರ ಪುತ್ತೂರು ಶ್ರೀಮಹಾಲಿಂಗೇಶ್ವರ ದೇವಾಲಯದಲ್ಲಿ ಲಕ್ಷ ದೀಪೋತ್ಸವವು ನ.19ರಂದು ದೇವಳದ ತಂತ್ರಿ ಬ್ರಹ್ಮಶ್ರೀ ಕುಂಟಾರು ರವೀಶ ತಂತ್ರಿಯವರ ನೇತೃತ್ವದಲ್ಲಿ ಸಂಪ್ರದಾಯದಂತೆ ಶ್ರೀದೇವರ ಉತ್ಸವಗಳೊಂದಿಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳ ಸಂಯೋಜನೆಯೊಂದಿಗೆ ವೈಭವದಿಂದ ನಡೆಯಿತು.

ಬೆಳಿಗ್ಗೆ ದೇವಳದ ರಾಜಗೋಪುರದಲ್ಲಿ ಭಜನಾ ಕಾರ್ಯಕ್ರಮ ಸಂಜೆಯ ತನಕ ನಡೆಯಿತು. ರಾತ್ರಿ ದೇವಳದ ರಥ ಬೀದಿಯುದ್ದಕ್ಕೂ ಹಣತೆ ಬೆಳಕು ಕಂಗೊಳಿತು. ರಥ ಬೀದಿಯ ಉದ್ದಕ್ಕೂ ರಂಗೋಲಿ. ಅದರ ಮೇಲೆ ಹಣತೆಯ ಬೆಳಕು ಪ್ರಜ್ವಲಿಸುತ್ತಿತ್ತು. ದೀಪ ಪ್ರಜ್ವಲನೆ ಬಳಿಕ ಶ್ರೀದೇವರ ಬಲಿ ಉತ್ಸವ, ಬಂಡಿ ಉತ್ಸವ, ತೆಪ್ಪೋತ್ಸವ ನಡೆಯಿತು.


ಬೆಳಿಗ್ಗೆ ಭಜನಾ ಕಾರ್ಯಕ್ರಮ ಉದ್ಘಾಟಿಸಿದ ಅಧ್ಯಕ್ಷರು:
ಮಹತೋಭಾರ ಶ್ರೀಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆಯವರು ಭಜನಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಲಕ್ಷದೀಪೋತ್ಸದ ಅಂಗವಾಗಿ ಬೆಳಗ್ಗಿನಿಂದ ಸಂಜೆಯ ತನಕ ಭಜನಾ ಕಾರ್ಯಕ್ರಮ ನಡೆಯುತ್ತಿದೆ. ಮಹಾಲಿಂಗೇಶ್ವರ ದೇವರ ಸಾನಿಧ್ಯದಲ್ಲಿ ನಿರಂತರ ಎಷ್ಟೋ ಭಜನಾ ತಂಡಗಳಿಗೆ ಭಾಗವಹಿಸುವ ಅವಕಾಶವನ್ನು ನಮ್ಮ ಸಮಿತಿ ನೀಡುತ್ತಿದೆ. ಅವರಿಗೆ ಮೈಕ್ಸೌಂಡ್ಸ್, ಉಪಹಾರದ ಸಹಿತ ಬೇಕಾದ ವ್ಯವಸ್ಥೆ ಮಾಡುತ್ತಿದ್ದೇವೆ. ಎಲ್ಲಾ ಭಜನಾ ತಂಡದವರು ಸೇವಾ ರೂಪದಲ್ಲಿ ಭಜನೆ ಮಾಡುತ್ತಿದ್ದಾರೆ. ಹಾಗಾಗಿ ನಿರಂತರ ಕಡಿಮೆ ಪಕ್ಷ ಮೂರು ಭಜನಾ ತಂಡಗಳಿಂದ ದೇವಳದಲ್ಲಿ ಭಜನಾ ಕಾರ್ಯಕ್ರಮ ನಡೆಯುತ್ತಾ ಇದೆ. ಯಾಕೆಂದರೆ ಸಾನಿಧ್ಯ ವೃದ್ಧಿಯಾಗಲು ಭಜನೆ ಅಗತ್ಯ. ಅದೇ ರೀತಿ ನಮ್ಮ ಮಾನವ ಕುಲಕ್ಕೆ ನೆಮ್ಮದಿಯ ವಾತಾವರಣಕ್ಕೂ ಇದ ಪೂರಕವಾಗಿದೆ ಎಂದರು.

ಈಶ ಶಿಕ್ಷಣ ಸಂಸ್ಥೆಯ ಪ್ರಾಂಶುಪಾಲ ಗೋಪಾಲಕೃಷ್ಣ ಅವರು ಭಜನಾ ಕಾರ್ಯಕ್ರಮ ನಿರ್ವಹಿಸಿದರು. ಈ ಸಂದರ್ಭದಲ್ಲಿ ಪವಿತ್ರ ಉಪಸ್ಥಿತರಿದ್ದರು. ಶ್ರೀಮಹಾದೇವಿ ಭಜನಾ ಮಂಡಳಿ ಅರ್ಕ, ಮರಾಟಿ ಮಹಿಳಾ ಭಜನಾ ಮಂಡಳಿ ಕೊಂಬೆಟ್ಟು, ಶ್ರೀವಜ್ರಮಾತಾ ಮಹಿಳಾ ಭಜನಾ ಮಂಡಳಿ ಪುತ್ತೂರು, ಶ್ರೀಕಾಳಿಕಾಂಬ ಭಜನಾ ಮಂಡಳಿ ಪುತ್ತೂರು, ಶ್ರೀ ವಿಶ್ವಕರ್ಮ ಮಹಿಳಾ ಭಜನಾ ಮಂಡಳಿ, ವಿಶ್ವಹಿಂದು ಮಾತೃ ಮಹಿಳಾ ಭಜನಾ ಮಂಡಳಿ, ಶ್ರೀಮಹಾಲಿಂಗೇಶ್ವರ ಧಾರ್ಮಿಕ ಶಿಕ್ಷಣ ಕೇಂದ್ರ, ಅಟಲ್ ಉದ್ಯಾನ ಧಾರ್ಮಿಕ ಶಿಕ್ಷಣ ಕೇಂದ್ರ ಕೊಂಬೆಟ್ಟು ಭಜನಾ ಸೇವೆ ಮಾಡಿದರು.

ಲಕ್ಷದೀಪ ಬೆಳಗಿಸಿ ಚಾಲನೆ ನೀಡಿದ ತಂತ್ರಿ:
ಸಂಜೆ ಪೂಜೆಯ ಮುಂದೆ ದೇವಳದ ರಥ ಬೀದಿಯಲ್ಲಿ ಕಂಗೊಳಿಸಿದ ವರ್ಣರಂಜಿತ ರಂಗೋಲಿಗಳ ಮೇಲೆ ಹಣತೆಯನ್ನು ಇಟ್ಟು ದೀಪ ಪ್ರಜ್ವಲನೆ ನಡೆಯಿತು. ಬ್ರಹ್ಮಶ್ರೀ ವೇ. ಮೂ. ಗುರು ತಂತ್ರಿಯವರು ರಥ ಬೀದಿಯಲ್ಲಿ ಬಾಳೆದಿಂಡಿನ ಧಳಿಯಲ್ಲಿರಿಸಿದ ಹಣತೆಗೆ ದೀಪ ಪ್ರಜ್ವಲನೆ ಮೂಲಕ ಲಕ್ಷ ದೀಪೋತ್ಸವಕ್ಕೆ ಚಾಲನೆ ನೀಡಿದರು.

ಬಳಿಕ ದೇವಳದ ಪ್ರಧಾನ ಅರ್ಚಕ ವೇ ಮೂ ವಸಂತ ಕೆದಿಲಾಯ, ವೇ ಮೂ ವಿ.ಎಸ್ ಭಟ್, ದೇವಳದ ವ್ಯವಸ್ಥಾಪನಾ ಸಮಿತಿ ಈಶ್ವರ ಭಟ್ ಪಂಜಿಗುಡ್ಡೆ, ಸದಸ್ಯರಾದ ದಿನೇಶ್ ಪಿ.ವಿ, ಮಹಾಬಲ ರೈ ವಳತ್ತಡ್ಕ, ನಳಿನಿ ಪಿ. ಶೆಟ್ಟಿ, ಸುಭಾಶ್ ರೈ ಬೆಳ್ಳಿಪ್ಪಾಡಿ, ವಿನಯ ಸುವರ್ಣ, ಈಶ್ವರ ಬೆಡೇಕರ್, ಕೃಷ್ಣವೇಣಿ ಅವರು ದೀಪ ಪ್ರಜ್ವಲಿಸಿದರು.

ಈ ಸಂದರ್ಭ ದೇವಳದ ಮಾಜಿ ಆಡಳಿತ ಮೊಕ್ತೇಸರ ಎನ್.ಕೆ.ಜಗನ್ನಿವಾಸ ರಾವ್, ವ್ಯವಸ್ಥಾಪನಾ ಸಮಿತಿ ಮಾಜಿ ಸದಸ್ಯೆ ನಯನಾ ರೈ, ರಾಮದಾಸ್ ಗೌಡ, ರತ್ನಾಕರ ನಾಕ್, ದೇವಳದ ಕಾರ್ಯನಿರ್ವಹಣಾಽಕಾರಿ ಕೆ.ವಿ.ಶ್ರೀನಿವಾಸ್, ಕಚೇರಿ ವ್ಯವಸ್ಥಾಪಕ ಹರೀಶ್ ಶೆಟ್ಟಿ ಸಹಿತ ಸಹಿತ ಹಲವಾರು ಮಂದಿ ಉಪಸ್ಥಿತರಿದ್ದರು.

ರಥ ಬೀದಿಯುದಕ್ಕೂ ಭಕ್ತರು ಹಣತೆ ಬೆಳಗಿಸಿದರು. ಎಣ್ಣೆ ಮತ್ತು ಬತ್ತಿಯನ್ನು ದೇವಳದ ವತಿಯಿಂದ ನೀಡಲಾಗಿತ್ತು. ದೇವಳದ ನಿತ್ಯ ಕರಸೇವಕರು ರಥ ಬೀದಿಯಲ್ಲಿ ಹಣತೆ ಬೆಳಗಿಸುವ ಕಾರ್ಯಕ್ಕೆ ಸಹಕಾರ ನೀಡಿದರು. ಪರಿಚಾರಕರು ಸಂಪ್ರದಾಯ ಉತ್ಸವದ ಕಾರ್ಯದಲ್ಲಿ ಭಾಗಿಯಾಗಿದ್ದರು.

ಶ್ರೀದೇವರ ಬಲಿ ಉತ್ಸವ, ಚಂದ್ರಮಂಡಲ, ತೆಪ್ಪೋತ್ಸವ
ರಾತ್ರಿ ಗಂಟೆ 7.30ಕ್ಕೆ ದೇವರ ಪೂಜೆಯ ಬಳಿಕ ದೇವರ ಉತ್ಸವ ಬಲಿ ಹೊರಟು, ಒಳಾಂಗಣ ಹಾಗೂ ಹೊರಾಂಗಣದಲ್ಲಿ ತಂತ್ರ ಸುತ್ತು, ರಾಜಾಂಗಣದಲ್ಲಿ ಉಡಿಕೆ ಸುತ್ತು, ಚೆಂಡೆ ಸುತ್ತು ನಡೆಯಿತು. ಬಳಿಕ ಖಂಡನಾಯಕನ ಕಟ್ಟೆಯಲ್ಲಿ ಕಟ್ಟೆಪೂಜೆಯ ಬಳಿಕ ವಾದ್ಯ, ಭಜನೆ, ಬ್ಯಾಂಡ್, ಸರ್ವವಾದ್ಯ ಸುತ್ತುಗಳು ನಡೆದು ಚಂದ್ರಮಂಡಲ ಉತ್ಸವ ಮತ್ತು ತೆಪ್ಪೋತ್ಸವ ನಡೆಯಿತು.









