





ಕನ್ಯಾನ: ಇಲ್ಲಿನ ಬಂಡಿತ್ತಡ್ಕದ ದ.ಕ.ಜಿ.ಪಂ.ಹಿ.ಪ್ರಾ ಶಾಲೆಯಲ್ಲಿ ಇಲಾಖೆಯ ಆದೇಶದಂತೆ ರಕ್ಷಕ ಶಿಕ್ಷಕ ಸಂಘದ ಮಹಾಸಭೆ ಶುಕ್ರವಾರ ನಡೆಯಿತು. ಶಾಲಾ ಪ್ರಭಾರ ಮುಖ್ಯ ಶಿಕ್ಷಕಿ ಸೆಕೀನಾ ಕಾರ್ಯಕ್ರಮಕ್ಕೆ ಸಂಬಂಧಿಸಿದ ಇಲಾಖೆಯ ಯೋಜನೆಗಳು, ಕಲಿಕಾ ಪ್ರಗತಿಯ ವರದಿ, ಬಿಸಿಯೂಟ, ಕ್ಷೀರ ಭಾಗ್ಯ, ಪ್ರತಿದಿನ ಮೊಟ್ಟೆ, ಶೂ ವಿತರಣೆ, ಸಮವಸ್ತ್ರ, ವಿದ್ಯಾಥಿ ವೇತನ, ಉಚಿತ ಶಿಕ್ಷಣ, ಇತ್ಯಾದಿ ಶೈಕ್ಷಣಿಕ ಕಾರ್ಯಕ್ರಮಗಳ ಬಗ್ಗೆ ತಿಳಿಸಿದರು.


ಶಾಲಾ ಚಟುವಟಿಕೆಗಳಲ್ಲಿ ಶಿಕ್ಷಕರ ಜೊತೆ ಪೋ?ಕರ ಹೊಣೆಗಾರಿಕೆಯ ಮಹತ್ವ, ಮಕ್ಕಳ ಮೂಲಭೂತ ಹಕ್ಕುಗಳು ಹಾಗೂ ಮಗು ಸ್ನೇಹಿ ವಾತಾವರಣ ನಿರ್ಮಾಣದ ಬಗ್ಗೆ, ಕಲಿಕೆಯಲ್ಲಿ ಹಿಂದುಳಿದ ಮಕ್ಕಳಿಗೂ ಬದಲೀ ಯೋಜನೆಗಳ ಕುರಿತಾಗಿ ಮಾತ್ರವಲ್ಲದೆ ವಿದ್ಯಾರ್ಥಿಗಳ ಸುರಕ್ಷತಾ ಕ್ರಮಗಳು, ಪೋಕ್ಸೋ ಕಾಯ್ದೆ, ಶುಚಿತ್ವ, ಪೋಷಕರ ಜವಾಬ್ದಾರಿಗಳು, ಶಾಲೆಯಿಂದ ಹೊರಗುಳಿದ ಮಕ್ಕಳು, ಬಾಲಕಾರ್ಮಿಕ, ಬಾಲ್ಯ ವಿವಾಹ, ಮೂಢನಂಬಿಕೆಯಂತಹ ಸಾಮಾಜಿಕ ಪಿಡುಗುಗಳ ಬಗ್ಗೆ ಮಾಹಿತಿ ನೀಡಿದರು.





ಪಂಚಾಯತ್ ಸದಸ್ಯೆ ಬುಶ್ರೀಯ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಎಸ್‌ಡಿಎಂಸಿ ಅಧ್ಯಕ್ಷೆ ಕಮರುನ್ನೀಸಾ 2026-27 ನೇ ಶೈಕ್ಷಣಿಕ ಸಾಲಿನ ದಾಖಲಾತಿ ಆಂದೋಲನ ಓಲೆಯನ್ನು ಅನಾವರಣಗೊಳಿಸಿದರು. ಹಳೇವಿದ್ಯಾರ್ಥಿ ಸಂಘದ ಅಧ್ಯಕ್ಷ ಇಸ್ಮಾಯಿಲ್ ಕುಕ್ಕಾಜೆ ಶಾಲೆಯಲ್ಲಿ ಕಳೆದ ಬಾಲ್ಯವನ್ನು ಮೆಲುಕುಹಾಕುತ್ತಾ ಶಾಲಾಭಿವೃದ್ಧಿಗೆ ಶ್ರಮಿಸುವುದಾಗಿ ನುಡಿದರು. ವಿದ್ಯಾರ್ಥಿಗಳಿಂದ ವಿವಿಧ ಕಾರ್ಯಕ್ರಮಗಳು ನಡೆದವು. ಪೋಷಕರಿಗಾಗಿ ಮನರಂಜನಾ ಸ್ಪರ್ಧೆಗಳನ್ನು ಆಯೋಜಿಸಲಾಯಿತು. ಮಕ್ಕಳ ದಿನಾಚರಣೆ ಹಿನ್ನೆಲೆಯಲ್ಲಿ ದೇಶದ ಮೊದಲ ಪ್ರಧಾನಿ ಜವಾಹರಲಾಲ್ ನೆಹರು ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ನಡೆಯಿತು.
ಎಸ್.ಡಿ.ಎಮ್.ಸಿ. ಉಪಾಧ್ಯಕ್ಷೆ ಭುವನೇಶ್ವರಿ, ಹಿರಿಯ ವಿದ್ಯಾರ್ಥಿ ಶಶಿಧರ ಬಂಡಿತಡ್ಕ, ಪೋಷಕರು ಹಿರಿಯ ವಿದ್ಯಾರ್ಥಿಗಳು ಹಾಗೂ ಮಕ್ಕಳು ಉಪಸ್ಥಿತರಿದ್ದರು. ಶಾಲಾ ಪ್ರಭಾರ ಮುಖ್ಯ ಶಿಕ್ಷಕಿಯಾದ ಸೆಕೀನಾ ಸ್ವಾಗತಿಸಿದರು. ಅಂಗನವಾಡಿ ಕಾರ್ಯಕರ್ತೆ ಶಾರದಾ ವಂದಿಸಿದರು. ಅತಿಥಿ ಶಿಕ್ಷಕಿಯಾದ ವನಿತಾ ನಿರೂಪಿಸಿದರು.










