





ಉಪ್ಪಿನಂಗಡಿ: ನಮ್ಮ ಭಾಗದ ಸರಕಾರಿ ಶಾಲೆಗಳು ಸಮಸ್ಯೆಗಳ ಆಗರವಾಗಿದ್ದು, ಶಿಕ್ಷಕರ ಕೊರತೆ ಕಾಡುತ್ತಿದೆ. ಇದರಿಂದ ಗ್ರಾಮೀಣ ಭಾಗದ ಮಕ್ಕಳು ಶಿಕ್ಷಣದಿಂದ ವಂಚಿತರಾಗುವಂತಾಗಿದೆ. ಆದರೆ ಶಿಕ್ಷಣ ಇಲಾಖೆಯ ಅಧಿಕಾರಿಗಳು ಗ್ರಾಮ ಸಭೆಗೆ ಆಗಮಿಸಿ ನಮ್ಮ ಸಮಸ್ಯೆಗಳನ್ನು ಆಲಿಸಲು ನಿರ್ಲಕ್ಷ್ಯ ವಹಿಸುತ್ತಿದ್ದಾರೆ ಎಂದು ಇಳಂತಿಲ ಗ್ರಾ.ಪಂ.ನ ಗ್ರಾಮ ಸಭೆಯಲ್ಲಿ ಆಕ್ರೋಶ ವ್ಯಕ್ತವಾಗಿದೆ.


ಗ್ರಾ.ಪಂ. ಅಧ್ಯಕ್ಷೆ ಸವಿತಾ ಎಂ.ಎಸ್. ಅವರ ಅಧ್ಯಕ್ಷತೆಯಲ್ಲಿ ಇಳಂತಿಲ ಗ್ರಾ.ಪಂ. ಸಭಾಂಗಣದಲ್ಲಿ ನಡೆದ ಗ್ರಾಮ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಗ್ರಾಮಸ್ಥ ಅಬ್ದುಲ್ ಲತೀಫ್, ನಮ್ಮದು ಗ್ರಾಮೀಣ ಪ್ರದೇಶವಾಗಿದ್ದು, ಇಲ್ಲಿ ಸರಕಾರಿ ಶಾಲೆಗಳಲ್ಲಿ ಹಲವು ಮೂಲಭೂತ ಸೌಕರ್ಯಗಳ ಕೊರತೆ ಇದೆ. ನಮ್ಮ ಅಹವಾಲು ಆಲಿಸಲು ಶಿಕ್ಷಣ ಇಲಾಖೆಯ ಅಧಿಕಾರಿಗಳು ಕೂಡಾ ಗ್ರಾಮ ಸಭೆಗೆ ಬರುತ್ತಿಲ್ಲ. ಅವರು ಸಭೆಗೆ ಗೈರು ಆಗಲು ಕಾರಣವೇನೆಂದು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಗ್ರಾ.ಪಂ. ಪಿಡಿಒ ಶ್ರವಣ್ ಕುಮಾರ್, ಶಿಕ್ಷಣ ಇಲಾಖೆಯ ಅಧಿಕಾರಿಯವರು ಕಾರಣಾಂತರಗಳಿಂದ ಗ್ರಾಮ ಸಭೆಗೆ ಬರಲು ಸಾಧ್ಯವಾಗುತ್ತಿಲ್ಲ ಎಂದು ತಿಳಿಸಿದ್ದಾರೆ. ನಿಮ್ಮ ಸಮಸ್ಯೆಯೇನಾದರೂ ಇದ್ದರೆ ನಿರ್ಣಯ ಅಂಗೀಕರಿಸಿ ಇಲಾಖೆಗೆ ಕಳುಹಿಸಲಾಗುವುದು ಎಂದರು. ಆಗ ಆಕ್ರೋಶಗೊಂಡ ಗ್ರಾಮಸ್ಥರು ಶಿಕ್ಷಣ ಇಲಾಖೆಯಿಂದ ಅಧಿಕಾರಿ ಸಭೆಗೆ ಬರಬೇಕೆಂದು ಪಟ್ಟು ಹಿಡಿದರು. ಕೊನೆಗೆ ಪಿಡಿಒ ಅವರು ಮೊಬೈಲ್ ಮೂಲಕ ಶಿಕ್ಷಣ ಇಲಾಖೆಯ ಅಧಿಕಾರಿಯವರನ್ನು ಸಂಪರ್ಕಿಸಿ ಸಮಸ್ಯೆಯ ಬಗ್ಗೆ ಕೇಳಿದಾಗ ತಾಲೂಕಿನ ಎಲ್ಲಾ ಸರಕಾರಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆಗೆ ಅನುಗುಣವಾಗಿ ಶಿಕ್ಷಕರ ನೇಮಕವಾಗುತ್ತಿದೆ. ಸರಕಾರದ ನಿಯಮದಂತೆ ಇದು ನಡೆಯುತ್ತದೆ ಎಂದರು. ಆಗ ಗ್ರಾಮಸ್ಥರು ಇಲ್ಲಿನ ಒಂದೇ ಒಂದು ಗ್ರಾಮ ಸಭೆಗೆ ಶಿಕ್ಷಣ ಇಲಾಖೆಯ ಅಧಿಕಾರಿಗಳು ಬಂದು ಮಾಹಿತಿ ನೀಡುತ್ತಿಲ್ಲ. ನಮ್ಮ ಗ್ರಾಮದ ಬಗ್ಗೆ ಅವರು ನಿರ್ಲಕ್ಷ್ಯ ವಹಿಸುತ್ತಿದ್ದಾರೆ ಎಂದು ಆರೋಪಿಸಿದರು. ಆಗ ಶಿಕ್ಷಣ ಇಲಾಖೆಯ ಅಧಿಕಾರಿಯವರು ಮುಂದಿನ 15 ದಿನದೊಳಗೆ ಗ್ರಾಮದ ಶಾಲೆಗಳಿಗೆ ಭೇಟಿ ನೀಡಿ ಮಾಹಿತಿ ಪರಿಶೀಲಿಸುವುದಾಗಿ ಹೇಳಿ ಪ್ರಕರಣಕ್ಕೆ ತೆರೆ ಎಳೆದರು.





ಮಿತ್ತಿಲ ಬಳಿ ನೇತ್ರಾವತಿ ನದಿಗೆ ತೆರಳುವ ರಸ್ತೆಯನ್ನು ಯಾಕೆ ಅಭಿವೃದ್ಧಿ ಪಡಿಸಲು ಗ್ರಾ.ಪಂ. ಮೀನಾಮೇಷ ಎಣಿಸುತ್ತಿದೆ ಎಂದು ಗ್ರಾಮಸ್ಥ ರಮೇಶ ಆಚಾರ್ಯ ಪ್ರಶ್ನಿಸಿದರು. ಸದಸ್ಯೆ ಚಂದ್ರಿಕಾ ಭಟ್ ಉತ್ತರಿಸಿ, ಅದು ಕಾಲು ದಾರಿಯಾಗಿದ್ದು, ಅತ್ತ ತೆರಳದಂತೆ ಯಾರಿಗೂ ಅಡ್ಡಿಪಡಿಸಿಲ್ಲ ಎಂದರು. ಆಗ ರವಿ ಇಳಂತಿಲ ಮಾತನಾಡಿ ಕಾಲು ದಾರಿಯಾಗಲಿ, ರಸ್ತೆಯೂ ಆಗಿರಲಿ ಆದರೂ ಅದು ಗ್ರಾ.ಪಂ. ರಸ್ತೆ ಎಂದು ಖಾತ್ರಿ ಪಡಿಸಿ. ಇದಕ್ಕೆ ವ್ಯರ್ಥಾ ಚರ್ಚೆಗೆ ಅವಕಾಶ ಕೊಡಬೇಡಿ ಎಂದಾಗ, ಈ ಕುರಿತು ಕಂದಾಯ ಇಲಾಖೆಗೆ ಪತ್ರ ಬರೆದು ಪರಿಶೀಲಿಸುವುದಾಗಿ ಪಿಡಿಒ ಶ್ರವಣ್ ಕುಮಾರ್ ತಿಳಿಸಿದರು.
ಗ್ರಾಮ ಸಭೆಯಲ್ಲಿ ಅಧಿಕಾರಿಗಳ ಗೈರು ಹಾಜರಿಯನ್ನು ಪ್ರಶ್ನಿಸಿದಾಗ ನೋಡಲ್ ಅಧಿಕಾರಿಯಾಗಿದ್ದ ಪಂಚಾಯತ್ ರಾಜ್ ಇಲಾಖೆಯ ಕಾರ್ಯಪಾಲಕ ಎಂಜಿನಿಯರ್ ಜನಾರ್ದನ ಕೆ.ಬಿ., ಗ್ರಾಮಸ್ಥರು ಬೇಡಿಕೆಗಳನ್ನು ಸಲ್ಲಿಸಿದರೆ ನಿರ್ಣಯ ಅಂಗೀಕರಿಸಿ ಸಂಬಂಧಿತ ಇಲಾಖೆಗೆ ಕಳುಹಿಸಲಾಗುವುದು. ಗೈರು ಹಾಜರಾದ ಅಧಿಕಾರಿಗಳ ಮೇಲೆ ಸೂಕ್ತ ಕ್ರಮಕ್ಕೆ ಇಲಾಖೆಗಳಿಗೆ ಬರೆಯಲಾಗುವುದು ಎಂದರು.
ರಸ್ತೆಯಲ್ಲಿ ಹೊಂಡ, ದಾರಿದೀಪ ಕೆಟ್ಟು ಹೋಗಿದೆ
ಗ್ರಾಮಸ್ಥ ರವಿ ಮಾತನಾಡಿ, ರಸ್ತೆಯಲ್ಲಿ ಹೊಂಡಗಳು ಬಿದ್ದು ರಾತ್ರಿ ಹೊತ್ತು ನಡೆದಾಡಲು ಕಷ್ಟಕರವಾಗಿದ್ದು, ದಾರಿದೀಪ ಕೆಟ್ಟುಹೋಗಿ ಕತ್ತಲಲ್ಲಿ ಎದ್ದು ಬಿದ್ದು ನಡೆದಾಡುವಂತಾಗಿದೆ. ಸಮರ್ಪಕ ದಾರಿದೀಪ ವ್ಯವಸ್ಥೆ ಒದಗಿಸಿ ಎಂದರು.
ಪೊಲೀಸರ ಕೊರತೆ ಇದೆಯೇ?
ಉಪ್ಪಿನಂಗಡಿ ಠಾಣೆಯಲ್ಲಿ ಪೊಲೀಸರ ಕೊರತೆ ಇದೆಯೇ? ಈ ಸಭೆಗೆ ಓರ್ವ ಪೊಲೀಸ್ ಕೂಡಾ ಬಂದಿಲ್ಲ ಯಾಕೆ? ಗ್ರಾಮಕ್ಕೆ ಓರ್ವ ಬೀಟ್ ಪೊಲೀಸ್ ಸಿಬ್ಬಂದಿ ಇದ್ದರೂ ಸಭೆಗೆ ಬಾರದೇ ನಿರ್ಲಕ್ಷ್ಯ ವಹಿಸುವುದು ಯಾಕೆ ಎಂದು ಗ್ರಾಮಸ್ಥರು ಈ ಸಂದರ್ಭ ಪ್ರಶ್ನಿಸಿದರು.
ಸಭೆಯಲ್ಲಿ ಗ್ರಾ.ಪಂ. ಸದಸ್ಯರಾದ ಈಸುಬು, ಸಿದ್ದೀಕ್, ಕುಸುಮ, ಉಷಾ, ಜಾನಕಿ, ನುಸ್ರತ್, ರಮೇಶ ಉಪಸ್ಥಿತರಿದ್ದರು. ಗ್ರಾ.ಪಂ. ಕಾರ್ಯದರ್ಶಿ ವಿಜಯ ಸ್ವಾಗತಿಸಿ, ವಂದಿಸಿದರು. ಸಿಬ್ಬಂದಿ ಸತೀಶ ಸಹಕರಿಸಿದರು.










