





ಪುತ್ತೂರು: ಮುಂಡೂರು ಗ್ರಾಮದ ಪುತ್ತಿಲ ನಿವಾಸಿ ಸುನೀತಾ ಎಂಬವರು ಇತ್ತೀಚೆಗೆ ತನ್ನ ದ್ವಿಚಕ್ರ ವಾಹನದಲ್ಲಿ ಮಡಿಕೇರಿಗೆ ಹೋಗುತ್ತಿದ್ದ ವೇಳೆ ಕಾರೊಂದು ಡಿಕ್ಕಿಯಾಗಿ ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದು ಇದೀಗ ಡಿಸ್ಚಾರ್ಜ್ ಆಗಿ ಮನೆಯಲ್ಲಿದ್ದು ಅವರನ್ನು ಪುತ್ತೂರು ಬ್ಲಾಕ್ ಕಾಂಗ್ರೆಸ್ ಮಹಿಳಾ ಘಟಕದ ಕಾರ್ಯಾಧ್ಯಕ್ಷೆ ಚಂದ್ರಪ್ರಭಾ ಗೌಡ ನೀರ್ಪಾಡಿ ನೇತೃತ್ವದಲ್ಲಿ ಕಾಂಗ್ರೆಸ್ ಮುಖಂಡರು ಭೇಟಿ ಮಾಡಿ ಆರೋಗ್ಯ ವಿಚಾರಿಸಿದರು.


ಸುನೀತಾ ಅವರು ಕಾರು ಡಿಕ್ಕಿ ಹೊಡೆದು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ಸಂದರ್ಭದಲ್ಲಿ ಮುಂಡೂರು ವಲಯ ಕಾಂಗ್ರೆಸ್ ಅಧ್ಯಕ್ಷ ಪ್ರವೀಣ್ ಆಚಾರ್ಯ ಅವರು ತಕ್ಷಣ ಆಸ್ಪತ್ರೆಗೆ ಧಾವಿಸಿ ಮಾನವೀಯ ನೆರವು ನೀಡಿದ್ದರು. ಮುಂದಿನ ದಿನಗಳಲ್ಲಿ ನಿಮಗೆ ಯಾವುದೇ ಸಮಸ್ಯೆ ಆದರೂ ನಮ್ಮ ಗಮನಕ್ಕೆ ತರಬೇಕು, ನಾವು ನಿಮಗೆ ಸಹಕಾರ ನೀಡಲು ಸಿದ್ದ ಎಂದು ಚಂದ್ರಪ್ರಭಾ ಗೌಡ ಭರವಸೆ ನೀಡಿದರು. ಮುಂಡೂರು ವಲಯ ಕಾಂಗ್ರೆಸ್ ಅಧ್ಯಕ್ಷ ಪ್ರವೀಣ್ ಆಚಾರ್ಯ, ಪುತ್ತೂರು ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಯಾಕೂಬ್ ಮುಲಾರ್, ಬೂತ್ ಅಧ್ಯಕ್ಷ ಅಣ್ಣಿ ಪೂಜಾರಿ ಹಿಂದಾರ್, ಗಣೇಶ್ ಬಂಗೇರ ಕೊರುಂಗು ಉಪಸ್ಥಿತರಿದ್ದರು.














