ಪುತ್ತೂರು : ಟಾಟಾ ಇನ್ಸ್ಟಿಟ್ಯೂಟ್ ಆಫ್ ಫಂಡಮೆಂಟಲ್ ರಿಸರ್ಚ್ ಕಾರ್ಯಕ್ರಮ ಮತ್ತು ಅಂತರ್ ಶಾಲಾ ಸ್ಪರ್ಧೆಗಳು, ನೆಹರು ನಗರದ ವಿವೇಕಾನಂದ ಸೆಂಟ್ರಲ್ ಸ್ಕೂಲ್ ನಲ್ಲಿ ಡಿಸೆಂಬರ್ 05ರಂದು ನಡೆಯಿತು.

ದೀಪ ಪ್ರಜ್ವಲನೆಯೊಂದಿಗೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ವಿವೇಕಾನಂದ ವಿದ್ಯಾವರ್ಧಕ ಸಂಘದ ನಿರ್ದೇಶಕ ಮುರಳೀಧರ ಕೆ. ಈ ಕಾರ್ಯಕ್ರಮವು ಮಕ್ಕಳಿಗೆ ಮುಂದೆ ತಮ್ಮ ಗುರಿ ಮುಟ್ಟಲು ಹೇಗೆ ಸಹಾಯವಾಗುತ್ತದೆ ಎಂದು ವಿವರಿಸಿದರು.
ಮುಖ್ಯ ಅತಿಥಿಗಳಾದ ಮುಂಬೈಯ ಟಾಟಾ ಇನ್ಸ್ಟಿಟ್ಯೂಟ್ ಆಫ್ ಫಂಡಮೆಂಟಲ್ ರಿಸರ್ಚ್ ನ ಸೈಂಟಿಫಿಕ್ ಆಫೀಸರ್ ಆಗಿರುವ ಉಲ್ಲಾಸ್ ಎಂ. ವಿ. ವೈದ್ಯ ಇವರು, ಡಿಜಿಟಲ್ ತಾರಾಲಯವನ್ನು ಸಾಂಕೇತಿಕವಾಗಿ ಉದ್ಘಾಟಿಸಿ, ನಮ್ಮ ದೈನಂದಿನ ಕೆಲಸಗಳಲ್ಲಿ ವಿಜ್ಞಾನವು ಹೇಗೆ ಹಾಸುಹೊಕ್ಕಾಗಿದೆ ಎಂಬುದನ್ನು ಕೆಲವು ಸರಳ ಪ್ರಯೋಗಗಳ ಮೂಲಕ ವಿವರಿಸಿದರು. ವಿಜ್ಞಾನದಲ್ಲಿ ಸಂಶೋಧನೆ ಮತ್ತು ಉದ್ಯೋಗದ ಕುರಿತು ಆಸಕ್ತಿ ಬೆಳೆಸಲು, ವಿದ್ಯಾರ್ಥಿಗಳಿಗೆ ಈ ರೀತಿಯ ಸಂಶೋಧನೆಯ ತರಬೇತಿಯನ್ನು ನೀಡುವುದೇ ಇದರ ಉದ್ದೇಶವಾಗಿದೆ. ವಿಜ್ಞಾನ, ಸಂಶೋಧನೆ ಮತ್ತು ಪ್ರಯೋಗಗಳು ತುಂಬಾ ಸಂತೋಷವನ್ನು ನೀಡುತ್ತವೆ. ಈ ಅನುಭವವನ್ನು ನಿಮ್ಮೆಲ್ಲರಿಗೆ ನೀಡಲು ನನಗೂ ಆನಂದವಿದೆ ಎಂದು ಪ್ರಾಯೋಗಿಕಾತ್ಮಕವಾಗಿ ತಿಳಿಸಿದರು. ಇವರಿಗೆ, TIFRನ ಸಂಶೋಧನಾ ವಿದ್ಯಾರ್ಥಿ ಶಾಂತನು ಎಸ್. ರೈ ಇವರು ಸಹಕರಿಸಿದರು.
ಮಣಿಪಾಲ್ ಶಾಲೆ, ಮಂಗಳೂರು, ಡಿ.ಎಂ. ರಾಮಣ್ಣ ಶೆಟ್ಟಿ ಸ್ಮಾರಕ ಆಂಗ್ಲ ಮಾಧ್ಯಮ ಶಾಲೆ ತೋಕೂರು, ಮಂಗಳೂರು, ಎನ್ಐಟಿಕೆ ಆಂಗ್ಲ ಮಾಧ್ಯಮ ಶಾಲೆ ಶ್ರೀನಿವಾಸನಗರ, ಸೂರತ್ಕಲ್, ರಘುರಾಮ ಮುಕುಂದ ಪ್ರಭು ಶತಮಾನೋತ್ಸವ ಸಾರ್ವಜನಿಕ ಶಾಲೆ ವಿದ್ಯಾಗಿರಿ, ಬಂಟ್ವಾಳ, ಇಂದ್ರಪ್ರಸ್ಥ ವಿದ್ಯಾಲಯ ಉಪ್ಪಿನಂಗಡಿ, ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ, ತೆಂಕಿಲ , ವಿವೇಕಾನಂದ ಕನ್ನಡ ಮಾಧ್ಯಮ ಶಾಲೆ ತೆಂಕಿಲ, ಪ್ರಿಯದರ್ಶಿನಿ ಆಂಗ್ಲ ಮಾಧ್ಯಮ ಶಾಲೆ, ಬೆಟ್ಟಂಪಾಡಿ, ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆ, ವಿದ್ಯಾನಗರ, ಪೆರಾಜೆ, ಮಾಣಿ, ರಾಮಕೃಷ್ಣ ಪ್ರೌಢಶಾಲೆ, ಪುತ್ತೂರು ಮತ್ತು ವಿವೇಕಾನಂದ ಸೆಂಟ್ರಲ್ ಸ್ಕೂಲ್, ನೆಹರು ನಗರ, ಪುತ್ತೂರು, ಅಂತರ್ ಶಾಲಾ ಸ್ಪರ್ಧೆಗಳಲ್ಲಿ ಭಾಗವಹಿಸಿದವು. ಕಾರ್ಯಕ್ರಮದಲ್ಲಿ ಪಾಲ್ಗೊಂಡ ವಿದ್ಯಾರ್ಥಿಗಳೆಲ್ಲರು ತಾರಾಲಯವನ್ನು ವೀಕ್ಷಿಸಿ ಆನಂದಿಸಿದರು.
ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಶಾಲಾ ಸಂಚಾಲಕ ಭರತ್ ಪೈ ಇವರು ವಹಿಸಿದರು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ತಂಡಗಳಿಗೆ ಬಹುಮಾನ ವಿತರಿಸಲಾಯಿತು. ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ, ತೆಂಕಿಲ ಪುತ್ತೂರು ಸಮಗ್ರ ಚಾಂಪಿಯನ್ ಆಗಿ ಹೊರಹೊಮ್ಮಿದರೆ, ವಿವೇಕಾನಂದ ಕನ್ನಡ ಮಾಧ್ಯಮ ಶಾಲೆ, ತೆಂಕಿಲ ಪುತ್ತೂರು, ಎರಡನೇ ಸ್ಥಾನ ಗಳಿಸಿತು.
ಶಾಲಾ ಆಡಳಿತ ಮಂಡಳಿ ಅಧ್ಯಕ್ಷರಾದ ವಸಂತಿ ಕೆ ಮತ್ತು ಶಾಲಾ ಪ್ರಾಂಶುಪಾಲರಾದ ಸಿಂಧು ವಿ.ಜಿ ಉಪಸ್ಥಿತರಿದ್ದರು. ಶಾಲಾ ಶಿಕ್ಷಕಿಯರಾದ ಜಯಶ್ರೀ ಎಸ್ ಸ್ವಾಗತಿಸಿ, ಜಯಶ್ರೀ ಭಟ್ ಮತ್ತು ಲತಾಶಂಕರಿ ನಿರೂಪಿಸಿ, ವೀಣಾ ಬಿ ವಂದಿಸಿದರು.