ಪುತ್ತೂರು: ದಕ್ಷಿಣ ಕನ್ನಡ, ಕಾಸರಗೋಡು ಜಿಲ್ಲೆಗಳ ಕಾಳುಮೆಣಸು, ಅಡಿಕೆ ಮತ್ತು ಕಾಫಿ ಬೆಳೆಗಾರರ ಮಾಹಿತಿ ಶಿಬಿರ ಮತ್ತು ಸಮಾವೇಶವು ಡಿ.14ರಂದು ಮುಕ್ರಂಪಾಡಿ ಸುಭದ್ರ ಕಲಾಮಂದಿರದಲ್ಲಿ ನಡೆಯಲಿದೆ ಎಂದು ಕಾರ್ಯಕ್ರಮ ಸಂಘಟಕ ಶಶಿಕುಮಾರ್ ಭಟ್ ಪಡಾರು ಅವರು ಪತ್ರಿಕಾಗೋಷ್ಟಿಯಲ್ಲಿ ಹೇಳಿದ್ದಾರೆ.
ದಕ್ಷಿಣ ಕನ್ನಡದಲ್ಲಿ ಅಡಿಕೆಯ ಜೊತೆಗೆ ಕಾಳುಮೆಣಸು ಮತ್ತು ಕಾಫಿ ಬೆಳೆ ವ್ಯಾಪಕವಾಗಿ ವಿಸ್ತರಿಸಿಕೊಂಡಿದೆ. ಈ ಹಿನ್ನೆಲೆಯಲ್ಲಿ ಕಾಳುಮೆಣಸು ಹಾಗು ಕಾಫಿಬೆಳೆಯಲ್ಲಿ ತೊಡಗಿಕೊಂಡವರ ಲಕ್ಷ್ಯವನ್ನು ಇಟ್ಟುಕೊಂಡು ದಕ್ಷಿಣ ಕನ್ನಡ ಮತ್ತು ಕಾಸರಗೋಡು ಜಿಲ್ಲೆಗಳ ಕಾಳುಮೆಣಸು ಬೆಳೆಗಾರರ ಒಕ್ಕೂಟದ ವತಿಯಿಂದ ಒಂದು ದಿನದ ಕಾಳುಮೆಣಸು ಹಾಗು ಕಾಫಿ ಬೆಳೆಯ ಬಗೆಗಿನ ಮಾಹಿತಿ ಸಮಾವೇಶ ಅ.10ರಂದು ಆಯೋಜಿಸಲಾಗಿತ್ತು. ಸಮಾವೇಶದಲ್ಲಿ ಪ್ರಯೋಜನ ಪಡೆದುಕೊಂಡ ಕೃಷಿಕರ ಅಪೇಕ್ಷೆ ಮೇರೆಗೆ ಮತ್ತೊಮ್ಮೆ ಸಮಾವೇಶ ಹಮ್ಮಿಕೊಳ್ಳಲಾಗಿದೆ.
ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಎಜುಕೇಶನ್ ಸೊಸೈಟಿಯ ಕಾರ್ಯದರ್ಶಿ ಹರ್ಷೇಂದ್ರ ಕುಮಾರ್ ಅವರು ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಅಖಿಲ ಭಾರತ ಕಾಳುಮೆಣಸು ಬೆಳೆಗಾರರ ಸಂಘದ ವಿಜ್ಞಾನಿ ಡಾ. ವೇಣುಗೋಪಾಲ್ ಅವರು ಸಮಗ್ರ ಕಾಳುಮೆಣಸು ಕೊಯ್ಲು ಮಾಡುವ ವಿಧಾನ, ಸಂಸ್ಕರಣೆ, ಶೇಖರಣೆಗೊಳಿಸುವ ವಿಧಾನದ ಕುರಿತು ವಿಷಯ ಮಂಡನೆ ಮಾಡಲಿದ್ದಾರೆ. ಸೆವೆನ್ ಬೀನ್ ಟೀಮ್ನ ಮುಖ್ಯಸ್ಥ ಡಾ. ಎಚ್.ಎಸ್.ಧರ್ಮರಾಜ್ ಸಕಲೇಶಪುರ ಅವರು ಕಾಫಿ ಕೊಯ್ಲು ಮಾಡುವ ವಿದಾನದ ಕುರಿತು ಮಾಹಿತಿ ನೀಡಲಿದ್ದಾರೆ. ಅನಂತರಾಮಕೃಷ್ಣ ಭಟ್ ಪಳ್ಳತ್ತಡ್ಕ ಅವರು ಧೂಪದ ಗಿಡಗಳ ನಾಟಿ ಮತ್ತು ಅದರಲ್ಲ ಕಾಳುಮೆಣಸು ಗಿಡಗಳನ್ನು ಬೆಳೆಸುವ ಕುರಿತು ಮಾಹಿತಿ ನೀಡಲಿದ್ದಾರೆ. ಇಂದೋರ್ನ ಶ್ರೀ ಸಿದ್ಧಿ ಅಗ್ರಿ ಪೈ ಲಿ ಮುಖ್ಯಸ್ಥ ಪೆರುವೋಡಿ ನಾರಾಯಣ ಭಟ್ ಅಡಿಕೆ ಎಲೆಚುಕ್ಕಿ ರೋಗ ಹತೋಟಿ ಮತ್ತು ನಿರ್ಮೂಲನೆ ಕುರಿತು ಮಾಹಿತಿ ನೀಡಲಿದ್ದಾರೆ. ಕಾರ್ಯಕ್ರಮದಲ್ಲಿ ಹಲವಾರು ಮಂದ ಅತಿಥಿಗಳಾಗಿ ಭಾಗವಹಿಸಲಿದ್ದು, ಕಾಫಿ ಮತ್ತು ಕಾಳುಮೆಣಸು ಕೃಷಿಯಲ್ಲಿ ಐಪಿಸಿ ಪ್ರಶಸ್ತಿ ಪುರಸ್ಕೃತ ಕೃಷ್ಣೆಗೌಡ, ಅಖಿಲ ಭಾರತ ಕಾಳುಮೆಣಸು ಬೆಳೆಗಾರರ ಸಂಘದ ವಿಜ್ಞಾನಿ ಡಾ. ವೇಣುಗೋಪಾಲ್ ಮತ್ತು ಕೃಷಿಕ ಅನಂತರಾಮಕೃಷ್ಣ ಭಟ್ ಅವರನ್ನು ಸನ್ಮಾನಿಸಲಾಗುವುದು. ಕಾರ್ಯಗಾರ ಸಂಪೂರ್ಣ ಉಚಿತವಾಗಿದ್ದು, ಸಮಾವೇಶದಲ್ಲಿ ಹಲವಾಗು ಗಿಡಗಳ ಪ್ರದರ್ಶನ, ಕೃಷಿಗೆ ಸಂಬಂಧಿತ ಹಲವು ಮಳೆಗೆಗಳು ಇರಲಿದೆ ಎಂದು ಅವರು ಹೇಳಿದರು.
ಪತ್ರಿಕಾಗೋಷ್ಟಿಯಲ್ಲಿ ಜಿ.ಕೆ ಪ್ರಸನ್ನ, ಪ್ರಗತಿಪರ ಕೃಷಿಕ ಅಜಿತ್ ಪ್ರಸಾದ್ ರೈ, ಶ್ರೀನಿಧಿ ಬೋರ್ ವೆಲ್ ನ ಗೋಪಾಲಕೃಷ್ಣ ಭಟ್ ಉಪಸ್ಥಿತರಿದ್ದರು.
