ಈಶ್ವರಮಂಗಲ: ಈಶ್ವರಮಂಗಲ ಹನುಮಗಿರಿ ಶ್ರೀ ಗಜಾನನ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಮಾತೃ ಸಂಗಮ ಕಾರ್ಯಕ್ರಮ ಡಿ.12ರಂದು ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಾತೃ ಮಂಡಳಿಯ ಅಧ್ಯಕ್ಷರಾದ ಶ್ರೀದೇವಿ ಭಟ್ ಉದ್ಘಾಟಿಸಿ, ಪ್ರತಿಯೊಂದು ಜೀವಿಗೂ ಜನ್ಮ ಕೊಟ್ಟ ಮಾತೆ ಅಬಲೆಯಲ್ಲ ಸಬಲೆ, ಮಾತೆ ಎಂದರೆ ಪ್ರತಿಯೊಬ್ಬರಲ್ಲೂ ಶಕ್ತಿ ತುಂಬುವವಳು ಎಂದರು.

ಸಂಸ್ಥೆಯ ಮುಖ್ಯೋಪಾಧ್ಯಾಯನಿ ಸೌಮ್ಯ ಎ ಪ್ರಾಸ್ತಾವಿಕವಾಗಿ ಮಾತನಾಡಿ, ಪ್ರತಿ ಸ್ತ್ರೀಯಲ್ಲೂ ಸಪ್ತ ಶಕ್ತಿಗಳು ನೆಲೆಸಿದ್ದು ಅದರಲ್ಲಿ ಭಗವಂತ ನೆಲೆಸಿರುತ್ತಾನೆ ಎಂದರು.
ಮಾತೃ ಮಂಡಳಿಯ ಸದಸ್ಯರಾದ ಸೌಮ್ಯ ಮಾತನಾಡಿ, ಒಬ್ಬ ಮಾತೆಯಾಗಿ ಕುಟುಂಬವನ್ನು ಸಮಾಜಮುಖಿಯಾಗಿ ಬೆಳೆಸುವ ಉನ್ನತ ಜವಾಬ್ದಾರಿ ಎಲ್ಲಾ ಮಾತೆಯರಲ್ಲಿರಬೇಕು. ಕುಟುಂಬದಲ್ಲಿ ಒಳಗೊಂಡ ಸ್ವಚ್ಛತೆ, ಹಬ್ಬ ಹರಿದಿನಗಳು, ಆಚಾರ ವಿಚಾರಗಳ ಬಗ್ಗೆ ಮಕ್ಕಳಲ್ಲಿ ಎಳವೆಯಲ್ಲೆ ಅರಿವು ಮೂಡಿಸಿ ಆಸಕ್ತಿಯನ್ನು ಬೆಳೆಸಬೇಕೆಂದರು.
ಸ್ಥಳೀಯ ನಾಟಿ ವೈದ್ಯೆ ವೆಂಕಮ್ಮ ಇವರನ್ನು ಮಾತೃ ಮಂಡಳಿಯ ಹಾಗೂ ಸಂಸ್ಥೆಯ ವತಿಯಿಂದ ಗೌರವಿಸಲಾಯಿತು.
ಸಂಸ್ಥೆಯ ಮಾತಾಜಿ ಅನುಶ್ರೀ ಪರ್ಯಾವರಣ ಬಗ್ಗೆ ಮಾತನಾಡಿ, ಉತ್ತಮ ಪರಿಸರವನ್ನು ಮುಂದಿನ ಪೀಳಿಗೆಗೆ ವರ್ಗಾಯಿಸುವುದು ನಮ್ಮೆಲ್ಲರ ಜವಾಬ್ದಾರಿ ಎಂದರು.ಮಾತೆಯರಿಗೆ ರಸಪ್ರಶ್ನೆ ಸ್ಪರ್ಧೆ ನಡೆಸಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಮಾತೆಯರು ಕಾರ್ಯಕ್ರಮದ ಬಗ್ಗೆ ಅನಿಸಿಕೆ ವ್ಯಕ್ತಪಡಿಸಿದರು. ರಶ್ಮಿ ಎಕ್ಕಡ್ಕ ಪ್ರಾರ್ಥಿಸಿದರು.ಆಡಳಿತ ಮಂಡಳಿಯ ಸದಸ್ಯರಾದ ಸೌಮ್ಯ ಜೋಶಿ ಸ್ವಾಗತಿಸಿ, ತೇಜಸ್ವಿನಿ ವಂದಿಸಿದರು.ಸಂಸ್ಥೆಯ ಮಾತಾಜಿ ರಾಜಶ್ರೀ ಕಾರ್ಯಕ್ರಮ ನಿರೂಪಿಸಿದರು.