ಕುಂಬ್ರ ಶ್ರೀರಾಮ ಭಜನಾ ಮಂದಿರದಲ್ಲಿ ಶ್ರೀರಾಮ ತಾರಕ ಯಜ್ಞ

0

ಆಶ್ಲೇಷ ಬಲಿ, ಅಘೋರ ಹೋಮ, ದುರ್ಗಾನಮಸ್ಕಾರ ಪೂಜೆ

ಪುತ್ತೂರು: ಕುಂಬ್ರ ಶ್ರೀ ರಾಮ ಭಜನಾ ಮಂದಿರದ ಪುನರ್ ನಿರ್ಮಾಣದ ಸಂಕಲ್ಪದೊಂದಿಗೆ ಮಾಡಿದ ಪ್ರಶ್ನಾ ಚಿಂತನೆಯಲ್ಲಿ ಕಂಡ ಬಂದಂತೆ ಶ್ರೀ ಕ್ಷೇತ್ರದ ಸಾನಿಧ್ಯ ವೃದ್ಧಿಗಾಗಿ ಮತ್ತು ಲೋಕಕಲ್ಯಾಣಾರ್ಥವಾಗಿ ಅಯೋಧ್ಯೆಯಲ್ಲಿ ಶ್ರೀ ರಾಮನ ಪ್ರಾಣ ಪ್ರತಿಷ್ಠೆ ನಡೆದ ವರ್ಷಾಚರಣೆಯ ಶುಭ ಸಂದರ್ಭದಲ್ಲಿ ಶ್ರೀ ರಾಮ ಭಜನಾ ಮಂದಿರದ ಶ್ರೀ ರಾಮಗಿರಿ ಕುಂಬ್ರ ಇದರ ನೇತೃತ್ವದಲ್ಲಿ ಶ್ರೀ ರಾಮ ತಾರಕ ಯಜ್ಞ ಸಮಿತಿ ಕುಂಬ್ರ ಇದರ ಸಂಯೋಜನೆಯಲ್ಲಿ ಕೆಮ್ಮಿಂಜೆ ಶ್ರೀ ಲಕ್ಷ್ಮೀಶ ತಂತ್ರಿಗಳ ನೇತೃತ್ವದಲ್ಲಿ ಶ್ರೀರಾಮ ತಾರಕ ಯಜ್ಞ, ಶ್ರೀ ರಾಮ ನಾಪ ಜಪ ಸಮರ್ಪಣೆ ಜ.25 ಮತ್ತು 26 ರಂದು ಶ್ರೀರಾಮ ಭಜನಾ ಮಂದಿರದಲ್ಲಿ ವಿಜೃಂಭಣೆಯಿಂದ ಜರಗಿತು.


ಜ.25 ರಂದು ಸಂಜೆ ತಂತ್ರಿಗಳ ಆಗಮನದೊಂದಿಗೆ ದೇವತಾ ಪ್ರಾರ್ಥನೆ ನಡೆದು ಆಚಾರ್ಯವರಣ, ಸ್ವಸ್ತಿ ಪುಣ್ಯಾಹವಾಚನ, ಅಘೋರ ಹೋಮ, ಅಘೋರ ಬಲಿ, ಬಾಧಾ ಅವಾಹನೆ, ಬಾಧಾ ಉಚ್ಛಾಟನೆ ನಡೆದು ದುರ್ಗಾನಮಸ್ಕಾರ ಪೂಜೆ, ರಕ್ಷಾ ಸುದರ್ಶನ ಹೋಮ ನಡೆದು ರಾತ್ರಿ ಪ್ರಸಾದ ವಿತರಣೆ ಬಳಿಕ ಅನ್ನಸಂತರ್ಪಣೆ ನಡೆಯಿತು. ಜ.26 ರಂದು ಬೆಳಿಗ್ಗೆ 12 ಕಾಯಿ ಶ್ರೀ ಮಹಾಗಣಪತಿ ಹೋಮ ನಡೆದು ಶ್ರೀರಾಮ ತಾರಕ ಯಜ್ಞ ಆರಂಭಗೊಂಡು, ಸರ್ಪ ಪ್ರಾಯಶ್ಚಿತ್ತವಾಗಿ ಆಶ್ಲೇಷ ಬಲಿ ಪೂಜೆ ನಡೆಯಿತು. ಮಧ್ಯಾಹ್ನ ಶ್ರೀರಾಮ ತಾರಕ ಯಜ್ಞದ ಪೂರ್ಣಾಹುತಿಯೊಂದಿಗೆ ಶ್ರೀರಾಮ ದೇವರಿಗೆ ಮಹಾಪೂಜೆ ನಡೆದು ಪ್ರಸಾದ ವಿತರಣೆ ಭಕ್ತಾಧಿಗಳಿಗೆ ಅನ್ನಸಂತರ್ಪಣೆ ನಡೆಯಿತು.

ಈ ಸಂದರ್ಭದಲ್ಲಿ ಶ್ರೀರಾಮ ಭಜನಾ ಮಂದಿರದ ಆಡಳಿತ ಸಮಿತಿಯ ಅಧ್ಯಕ್ಷ ಮೋನಪ್ಪ ಪೂಜಾರಿ ಬಡೆಕ್ಕೋಡಿ, ಪ್ರ.ಕಾರ್ಯದರ್ಶಿ ಹರೀಶ್ ರೈ ಮುಗೇರು, ಉಪಾಧ್ಯಕ್ಷ ದಿನೇಶ್ ಗೌಡ ಪಂಜಿಗುಡ್ಡೆ, ಕೋಶಾಧಿಕಾರಿ ರಾಜ್‌ಪ್ರಕಾಶ್ ರೈ ಕುಂಬ್ರ, ಜತೆ ಕಾರ್ಯದರ್ಶಿ ಸುಶ್ಮಾ ಸತೀಶ್ ಪೂಜಾರಿ, ಶ್ರೀರಾಮ ತಾರಕ ಯಜ್ಞ ಸಮಿತಿಯ ಪ್ರಧಾನ ಸಂಚಾಲಕ ರತನ್ ರೈ ಕುಂಬ್ರ, ಸಂಚಾಲಕರುಗಳಾದ ಉಮೇಶ್ ಕುಮಾರ್ ಬರೆಮೇಲು, ಪುರಂದರ ಶೆಟ್ಟಿ ಮುಡಾಲ, ರಾಜೇಶ್ ರೈ ಪರ್ಪುಂಜ, ನಾರಾಯಣ ಪೂಜಾರಿ ಕುರಿಕ್ಕಾರ, ಉಷಾ ನಾರಾಯಣ ಗೌಡ, ಶಿವರಾಮ ಗೌಡ ಬೊಳ್ಳಾಡಿ ಮತ್ತು ಸರ್ವ ಸದಸ್ಯರುಗಳು ಉಪಸ್ಥಿತರಿದ್ದರು.


ಶ್ರೀರಾಮ ನಾಮ ಜಪ ಸಮರ್ಪಣೆ
ಶ್ರೀ ರಾಮ ತಾರಕ ಯಜ್ಷದ ಅಂಗವಾಗಿ ಶ್ರೀ ರಾಮ ತಾರಕ ಯಜ್ಞ ಸಮಿತಿ ಮತ್ತು ಶ್ರೀರಾಮ ಭಜನಾ ಮಂದಿರದ ಆಶಯದಂತೆ ಗ್ರಾಮದ ಪ್ರತಿ ಮನೆಯಿಂದ ‘ ಶ್ರೀರಾಮ ಜಯರಾಮ ಜಯ ಜಯ ರಾಮ’ ಎಂಬ ಜಪವನ್ನು ಪುಸ್ತಕದಲ್ಲಿ 1009 ಬಾರಿ ಬರೆದು ಸಮರ್ಪಣೆ ಮಾಡುವ ಕಾರ್ಯಕ್ರಮ ನಡೆಯಿತು. ಪೂಜೆಯ ಬಳಿಕ ಈ ಪುಸ್ತಕವನ್ನು ಮರಳಿ ಮನೆಗೆ ಕೊಡಲಾಯಿತು.


ಅನ್ನಸಂತರ್ಪಣೆ
ಜ.25 ರಂದು ರಾತ್ರಿ ಹಾಗೂ 26 ರಂದು ಮಧ್ಯಾಹ್ನ ಭಕ್ತಾಧಿಗಳಿಗೆ ಅನ್ನ ಸಂತರ್ಪಣೆ ನಡೆಯಿತು. ಊರ ಪರವೂರ ಸಾವಿರಾರು ಮಂದಿ ಭಕ್ತಾಧಿಗಳು ಆಗಮಿಸಿ ಶ್ರೀ ದೇವರ ಪ್ರಸಾದದೊಂದಿಗೆ ಅನ್ನಪ್ರಸಾದ ಸ್ವೀಕರಿಸಿದರು.


ಕ್ಷೇತ್ರದ ಸಾನಿಧ್ಯ ವೃದ್ದಿಗೆ ಶ್ರೀರಾಮ ತಾರಕ ಯಜ್ಞ
ಕುಂಬ್ರ ಪೇಟೆಯ ಹೃದಯ ಭಾಗದಲ್ಲಿರುವ ಶ್ರೀ ರಾಮ ಭಜನಾ ಮಂದಿರವು ಬಹಳ ಪುರಾತನವಾದ ಭಜನಾ ಮಂದಿರವಾಗಿದ್ದು ವಿಶೇಷ ಕಾರಣಿಕತೆಯನ್ನು ಒಳಗೊಂಡಿದೆ.ಒಂದು ದೇವಸ್ಥಾನದಲ್ಲಿ ನಡೆಯುವಂತಹ ಎಲ್ಲಾ ಕಾರ್ಯಕ್ರಮಗಳು ಅಂದರೆ ಸಾರ್ವಜನಿಕ ಶ್ರೀ ಗಣೇಶೋತ್ಸವ, ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ, ಸಾರ್ವಜನಿಕ ಶ್ರೀ ಶನೈಶ್ಚರ ಪೂಜೆ, ನವರಾತ್ರಿ ಉತ್ಸವ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಈ ಭಜನಾ ಮಂದಿರದಲ್ಲಿ ನಡೆಯುತ್ತದೆ. ಭಜನಾ ಮಂದಿರದ ಪುನರ್ ನಿರ್ಮಾಣದ ಸಂಕಲ್ಪದಲ್ಲಿ ಪ್ರಶ್ನಾ ಚಿಂತನೆಯಲ್ಲಿ ಕಂಡು ಬಂದಂತೆ ಹಾಗೂ ಲೋಕ ಕಲ್ಯಾಣಾರ್ಥವಾಗಿ ಅಯೋಧ್ಯೆಯಲ್ಲಿ ಶ್ರೀ ರಾಮನ ಪ್ರಾಣ ಪ್ರತಿಷ್ಠೆ ನಡೆದು ಶುಭ ಸಂದರ್ಭದಂತೆ ಈ ಶ್ರೀರಾಮ ತಾರಕ ಯಜ್ಞವನ್ನು ನಡೆಸಲಾಗಿದೆ.

LEAVE A REPLY

Please enter your comment!
Please enter your name here