






ಹಿಂದೂ ಸಮಾಜದೊಳಗಿನ ಸಾಮರಸ್ಯ ಸದೃಢ ವಾಗಬೇಕು: ಗುರುಪುರ ಶ್ರೀ


ಪುಣಚ: ಹಿಂದೂ ಸಂಗಮ ಆಯೋಜನಾ ಸಮಿತಿ ವಿಟ್ಲ ತಾ, ಪುಣಚ ಮಂಡಲ ವತಿಯಿಂದ ಪುಣಚ ಹಾಗೂ ಕೇಪು ಗ್ರಾಮಗಳನ್ನೊಳಗೊಂಡ ಹಿಂದೂ ಮಹಾಸಂಗಮ ಜ.25ರಂದು ಪುಣಚದ ಗರಡಿ ಬಳಿ ಕೋಟಿ ಚೆನ್ನಯ ವೇದಿಕೆಯಲ್ಲಿ ನಡೆಯಿತು. ಆರಂಭದಲ್ಲಿ ಸಾಯಂಕಾಲ ಪುಣಚ ದಂಬೆ-ಮಣಿಲ ಜಂಕ್ಷನ್ ನಿಂದ ಹೊರಟ ಭವ್ಯ ಶೋಭಾಯಾತ್ರೆಗೆ ಪುಣಚ-ಕೇಪು ಗ್ರಾಮದ ಹಿರಿಯ ನಿವೃತ್ತ ಯೋಧರು ಚಾಲನೆ ನೀಡಿದರು.



ಪೂರ್ಣ ಕುಂಭ ಸ್ವಾಗತ, ಗೋರಥ, ವಿವಿಧ ಭಜನಾ ತಂಡಗಳಿಂದ ಕುಣಿತ ಭಜನೆ, ಆಕರ್ಷಕ ಚೆಂಡೆವಾದನ, ನಾಸಿಕ್ ಬ್ಯಾಂಡ್, ವಿವಿಧ ವೇಷಧಾರಿ, ಸ್ತಬ್ದ ಚಿತ್ರಗಳ ಭವ್ಯ ಶೋಭಾಯಾತ್ರೆಯು ಪರಿಯಾಲ್ತಡ್ಕ ಮುಖ್ಯ ರಸ್ತೆಯಲ್ಲಿ ಸಾಗಿ ಸಮಾರಂಭ ನಡೆಯುವ ಗರಡಿ ವಠಾರಕ್ಕೆ ಸಾಗಿ ಬಂತು.

ಧರ್ಮ ಸಭೆ:
ಬಳಿಕ ನಡೆದ ಧರ್ಮಸಭೆಯಲ್ಲಿ ಆಶೀರ್ವಚನ ನೀಡಿದ ಗುರುಪುರ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮಿಜಿಯವರು ಮಾತನಾಡಿ, ಹಿಂದೂ ಸಮಾಜದ ವ್ಯವಸ್ಥೆ ಅದ್ಭುತವಾದದು. ಅದನ್ನು ನಾವು ಪಾಲಿಸಿಕೊಂಡು ಮುಂದುವರಿಸಬೇಕು. ಸಮಾಜದ ಉನ್ನತಿಯಾಗುವ ಮೂಲಕ ಹಿಂದೂ ಸಮಾಜದ ಒಳಗೆ ಸಾಮರಸ್ಯ ಮೂಡಬೇಕು. ಇಂದಿನ ರಾಜಕೀಯ ವ್ಯವಸ್ಥೆಯಿಂದ ಒಗ್ಗಟ್ಟಿನಲ್ಲಿ ಸಮಸ್ಯೆ ಇದೆ. ರಾಜಕೀಯ ಷಡ್ಯಂತರ ವ್ಯವಸ್ಥೆ ನಮ್ಮನ್ನು ನಿರಂತರವಾಗಿ ದೂರ ಮಾಡುತ್ತಲೇ ಇದೆ. ನಮ್ಮ ನಮ್ಮ ಮನೆಗಳಲ್ಲಿ ಅವಿನಾಭಾವ ಸಂಬಂಧಗಳು ಕಡಿತಗೊಳ್ಳುತ್ತಿದೆ. ಈ ರೀತಿ ಆಗಬಾರದು. ಅದನ್ನು ಸರಿಪಡಿಸುವ ಕೆಲಸ ನಮ್ಮಲ್ಲಿ ಆಗಬೇಕು. ನಾವು ಒಗ್ಗಟ್ಟಾಗಿರದ್ದರೆ ನಮ್ಮ ಮೇಲೆ ಯಾರು ದಬ್ಬಾಳಿಕೆ ಮಾಡಲು ಸಾಧ್ಯವಿಲ್ಲ. ನಮ್ಮೊಳಗಿನ ಸಾಮರಸ್ಯ ಹಿಂದೂ ಸಮಾಜದಲ್ಲಿ ಸದೃಢವಾಗಬೇಕು ಎಂದರು.
ಹೈಕೋರ್ಟ್ ಹಿರಿಯ ನ್ಯಾಯವಾದಿ ಅರುಣ್ ಶಾಮ್ ಮಾತನಾಡಿ, ಹಿಂದೂ ಧರ್ಮದಲ್ಲಿ ನಮ್ಮ ಇತಿಹಾಸ, ಪರಂಪರೆ, ಕುಟುಂಬ ಸಂಖ್ಯೆ ಕ್ಷೀಣವಾಗುತ್ತಿದೆ. ಇದರ ಬಗ್ಗೆ ಯುವ ಜನತೆಗೆ ತಿಳಿಸಬೇಕಾದ ಕಾರ್ಯಗಳು ನಡೆಯಬೇಕು. ಎಲ್ಲರನ್ನೂ ಸೇರಿಸಿಕೊಂಡು ಬದುಕಲು ಅದು ಹಿಂದೂ ಧರ್ಮದಲ್ಲಿ ಮಾತ್ರ ಸಾಧ್ಯ. ಯಾರ ಬಗ್ಗೆಯೂ ದ್ವೇಷ ಇಲ್ಲ, ತಾತ್ಸಾರವೂ ಇಲ್ಲ. ಎಲ್ಲರನ್ನೂ ಸೇರಿಸಿ ಜಗತ್ತನ್ನು ಸೇರಿಸಬೇಕೆಂಬ ಪರಿಕಲ್ಪನೆ ಹಿಂದೂ ಸಮಾಜದ್ದು. ಹಾಗಾಗಿ ನಮ್ಮಲ್ಲಿರುವ ವೈಯಕ್ತಿಕ ಭಿನ್ನಾಭಿಪ್ರಾಯ, ವಿಚಾರಗಳನ್ನು ಬಿಟ್ಟು ದೇಶ ಧರ್ಮ ಬಂದಾಗ ನಾವೆಲ್ಲರೂ ಸಂಘಟಿತರಾಗಬೇಕು. ಅಲಿಸಿ ಹೋದ ಪರಂಪರೆಯನ್ನು ಮತ್ತೆ ನೆನಪಿಸುವ ಕೆಲಸ ನಮ್ಮಿಂದಾಗಬೇಕು. ಸಮಾಜಕ್ಕೆ ಸರ್ವಸ್ವವನ್ನು ಅರ್ಪಿಸುವ ಮನೋಭಾವವನ್ನು ಬೆಳೆಸಬೇಕಾಗಿದೆ. ಆ ಮೂಲಕ ಹಿಂದೂ ಸಮಾಜದ ನಾವೆಲ್ಲರೂ ಭಾರತ ಮಾತೆಯ ಪುತ್ರರಾಗಿ ಸದೃಡರಾಗುವ ಎಂದರು.
ಅಧ್ಯಕ್ಷತೆ ವಹಿಸಿದ್ದ ಕೇಪು ಶ್ರೀದುರ್ಗಾ ಸೇವಾ ಸಮಿತಿಯ ಅಧ್ಯಕ್ಷ ಪ್ರಭಾಕರ ಶೆಟ್ಟಿ ದಂಬೆಕಾನ, ವಿಟ್ಲ ತಾಲೂಕು ಹಿಂದು ಸಂಗಮ ಆಯೋಜನಾ ಸಮಿತಿ ಉಪಾಧ್ಯಕ್ಷೆ ಗಂಗಮ್ಮ ಸಂದರ್ಭೋಚಿತವಾಗಿ ಮಾತನಾಡಿದರು. ಅತಿಥಿಯಾಗಿದ್ದ ಪುಣಚ ಮಹಿಷಮರ್ದಿನಿ ದೇವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷ ಮಾರಪ್ಪ ಶೆಟ್ಟಿ ಬೈಲುಗುತ್ತು, ಪುಣಚ ನೀರುಮಜಲು ಬ್ರಹ್ಮಬೈದರ್ಕಳ ಗರಡಿಯ ಆಡಳಿತ ಮೊಕ್ತೇಸರರಾದ ನಾರಾಯಣ ಪೂಜಾರಿ ನೀರುಮಜಲು, ನಿವೃತ್ತ ಸಿ.ಆರ್.ಪಿ.ಎಫ್ ಯೋಧ ಕುಂಞಣ್ಣ ನಾಯ್ಕ ಬುಡಲೆ, ದೈವ ನರ್ತಕ ಆನಂದ ನಲಿಕೆ ಧೂಮಾವತಿಮೂಲೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಪುಣಚ- ಕೇಪು ಗ್ರಾಮದಲ್ಲಿ ಸ್ವಚ್ಚತಾ ಕಾರ್ಯವನ್ನು ನಿರ್ವಹಿಸುತ್ತಿರುವ ಪುಷ್ಪಾವತಿ, ಲೀಲಾ, ಉಷಾ, ಶಶಿಕಲಾ, ಹೇಮಲತಾ, ಪುಷ್ಪಾವತಿ ಹಾಗೂ ಆಪತ್ಬಾಂದವ ಕುದ್ದುಪದವು ಆಂಬುಲೆನ್ಸ್ ಚಾಲಕ ಯಶೋಧರ ಅವರನ್ನು ಶಾಲು, ಫಲಪುಷ್ಪ, ಸ್ಮರಣಿಕೆ ನೀಡಿ ಗೌರವಿಸಲಾಯಿತು. ಸುಮಿತ್ರಾ ರಾಮಚಂದ್ರ ಪ್ರೇರಣಾ ಗೀತೆ ಹಾಡಿದರು. ಸದಾಶಿವ-ಸೀತಾ ದಂಪತಿ ಶ್ರೀ ಗಳಿಗೆ ಶಾಲು,ಫಲಪುಷ್ಪ ನೀಡಿ ಗೌರವಿಸಿದರು. ಅತಿಥಿಗಳನ್ನು ಶಾಲು,ತಾಂಬೂಲ ನೀಡಿ ಗೌರವಿಸಲಾಯಿತು. ಸಿಂಚನಲಕ್ಷ್ಮೀ ಭಾಗ್ಯಶ್ರೀ, ಆದರ್ಶಿಣಿ ಪ್ರಾರ್ಥಿಸಿದರು. ವಿಟ್ಲ ತಾ, ಹಿಂದು ಸಂಗಮ ಆಯೋಜನಾ ಸಮಿತಿ ಅಧ್ಯಕ್ಷ ರಾಜೀವ ಭಂಡಾರಿ ಸ್ವಾಗತಿಸಿ, ಸೃಜೇಶ್ ವಂದಿಸಿದರು. ಹರ್ಷಿತಾ ನಟ್ಟಿ, ಕಾರ್ತಿಕ್ ನೆಕ್ಕರೆಕಾನ ಕಾರ್ಯಕ್ರಮ ನಿರೂಪಿಸಿದರು.










