ಪುತ್ತೂರು ನಗರ, ಉಳ್ಳಾಲ್ತಿ ವಸತಿಯಿಂದ ಹಿಂದೂ ಸಂಗಮ

0

ಹಿಂದೂ ಎಂಬುದು ಸಾವಿರಾರು ವರ್ಷಗಳ ಜೀವನ ಪದ್ಧತಿ: ಗಿರೀಶ್ ಕಾಟಿಪಳ್ಳ

ಪುತ್ತೂರು: ಹಿಂದೂ ಎನ್ನಲು ಹಿಂಜರಿಯುತ್ತಿದ್ದ ಕಾಲದಲ್ಲಿ ಹಿಂದೂಗಳನ್ನು ಒಗ್ಗೂಡಿಸಲು ಡಾಕ್ಟರ್‌ಜೀಯವರು ರಾಷ್ಟ್ರೀಯ ಸ್ವಯಂ ಸೇವಕ ಸಂಘಟನೆಯನ್ನು ಸ್ಥಾಪಿಸಲಾಯಿತು. ಇದರ ಪರಿಣಾಮ ದೇಶಾದ್ಯಂತ ಹಿಂದೂಗಳು ಒಗ್ಗೂಡಲು ಸಾಧ್ಯವಾಯಿತು. ಬಲಿಷ್ಟ ಭಾರತದ ನಿರ್ಮಾಣಕ್ಕೂ ಕಾರಣವಾಯಿತು ಎಂದು ಆರ್‌ಎಸ್‌ಎಸ್ ಪ್ರಚಾರಕ, ಧರ್ಮಜಾಗರಣ ಮಂಗಳೂರು ವಿಭಾಗದ ಸಂಯೋಜಕ ಗಿರೀಶ್ ಕಾಟಿಪಳ್ಳ ಹೇಳಿದರು. ಹಿಂದೂ ಸಂಗಮ ಆಯೋಜನಾ ಸಮಿತಿ ಪುತ್ತೂರು ನಗರ, ಉಳ್ಳಾಲ್ತಿ ವಸತಿ ಆಶ್ರಯದಲ್ಲಿ ತೆಂಕಿಲ ನರೇಂದ್ರ ಪ.ಪೂ.ಕಾಲೇಜಿನ ಸಭಾಂಗಣದಲ್ಲಿ ಜ.25ರಂದು ನಡೆದ ಬಲ್ನಾಡು, ಕರ್ಕುಂಜ, ಬಪ್ಪಳಿಗೆ, ತೆಂಕಿಲ, ಉರ್ಲಾಂಡಿ, ಪಂಚವಟಿ ವ್ಯಾಪ್ತಿಯ ಹಿಂದೂ ಸಂಗಮ ಕಾರ್ಯಕ್ರಮದಲ್ಲಿ ದಿಕ್ಸೂಚಿ ಭಾಷಣಕಾರರಾಗಿ ಮಾತನಾಡಿದರು. ದೇಶದಾದ್ಯಂತ ಹಿಂದೂ ಸಂಗಮ ಆಯೋಜನಾ ಸಮಿತಿಯ ಮೂಲಕ ಹಿಂದೂ ಸಂಗಮ ಕಾರ್ಯಕ್ರಮ ನಡೆಸಲಾಗುತ್ತಿದೆ. ಭಾರತ ದೇಶ ಜಗತ್ತಿಗೆ ಮಾಗದರ್ಶನ, ಪ್ರೇರಣೆಯಾಗುವ ದೇಶವಾಗಿದೆ. ಭಾರತ ಬಹಳ ಬೇಗ ಬೆಳೆಯುತ್ತಿರುವ ದೇಶವಾಗಿದೆ. ಹಿಂದೂ ಅನ್ನುವುದು ಸಾವಿರಾರು ವರ್ಷಗಳಿಂದ ನಡೆದುಕೊಂಡು ಬಂದಿರುವ ಜೀವನ ಪದ್ಧತಿ. ಇದಕ್ಕೆ ಜನ್ಮ ದಿನಾಂಕ ಸಿಗಲು ಸಾಧ್ಯವಿಲ್ಲ. ಇನ್ನೊಬ್ಬರ ಕಲ್ಯಾಣ ಬಯಸುವವನೇ ಹಿಂದು. ಆದುದರಿಂದ ಹಿಂದುತ್ವದ ನಿಜವಾದ ತತ್ವ ಎಲ್ಲೆಡೆ ತಿಳಿಯಬೇಕು, ಗಟ್ಟಿಯಾಗಬೇಕು ಎನ್ನುವ ನಿಟ್ಟಿನಲ್ಲಿ ಸಂಘ ಕೆಲಸ ಮಾಡುತ್ತಿದೆ ಎಂದರು.

ಮುಖ್ಯ ಅತಿಥಿ ದೈವ ನರ್ತಕ ಕಿಟ್ಟು ಕಲ್ಲುಗುಡ್ಡೆ ಮಾತನಾಡಿ, ಬಾಲ್ಯದಿಂದಲೂ ಸಂಘದ ಒಡನಾಟ ಇತ್ತು. ಆ ಪ್ರೀತಿಯಿಂದ ಬಂದಿದ್ದೇನೆ. ಹಿರಿಯರು ಹಿಂದೂ ಧರ್ಮದ ಬೀಜ ಬಿತ್ತಿದರು. ಅದು ಈಗ ಹೆಮ್ಮರವಾಗಿ ಬೆಳೆದಿದೆ. ಹಿಂದೂ ಧರ್ಮ ಹೂವಿನ ಕೊಪ್ಪಳ. ಇಲ್ಲಿ ಸಾವಿರಾರು ವಿಧದ ಹೂವಿನ ಗಿಡಗಳಿವೆ. ಆದುದರಿಂದ ಇದು ಎಲ್ಲರೂ ಸೇರಿರುವ ನಂದನ ಬಿತ್ತಿಲು. ಭಾರತಮಾತೆ ಈ ನಂದನ ಬಿತ್ತಿಲ್‌ನ್ನು ಬೆಳೆಸಿದೆ ಆಗಿದೆ ಎಂದರು. ಹಿಂದೂ ಧರ್ಮ ಎಲ್ಲರನ್ನು ಒಂದುಗೂಡಿಸುವ ಧರ್ಮ. ನಾವೆಲ್ಲರೂ ಒಗ್ಗಟ್ಟಾಗಿ ಸಾಮರಸ್ಯದಿಂದ, ಸಹೋದರತೆಯಿಂದ ಬಾಳಬೇಕು ಎಂದರು.


ಪುರಾತತ್ವ ಇಲಾಖೆಯ ನಿವೃತ್ತ ಅಧಿಕಾರಿ ಹಾಗೂ ಹಿರಿಯರಾದ ರಾಮಚಂದ್ರ ಹೆಗಡೆ ಮಾತನಾಡಿ ಸಮಾಜದ ವಿಭಿನ್ನ ನಾಗರಿಕರನ್ನು ಒಟ್ಟುಗೂಡಿಸಿ ಒಂದೇ ವೇದಿಕೆಗೆ ತರುವುದು ಆರ್‌ಎಸ್‌ಎಸ್ ಉದ್ಧೇಶವೂ ಆಗಿತ್ತು. ಹಿಂದೂ ಧರ್ಮ ಧರ್ಮವಾಗಿರದೆ ಒಂದು ವಿಚಾರಧಾರೆಯಾಗಿದೆ. ಎಂದ ಅವರು ಒಟ್ಟಾಗಿ ಜಾತಿ ಮತ ಬೇಧ ಮರೆತು ಬಾಳೋಣ ಎಂದರು. ಹಿಂದೂ ಸಂಗಮ ಆಯೋಜನಾ ಸಮಿತಿ ಪುತ್ತೂರು ನಗರ ಅಧ್ಯಕ್ಷ ಸಂಜೀವ ಬಪ್ಪಳಿಗೆ ಸಭಾಧ್ಯಕ್ಷತೆ ವಹಿಸಿ ಮಾತನಾಡಿದರು.


ಹಿಂದೂ ಸಂಗಮ ಆಯೋಜನಾ ಸಮಿತಿ ನಗರ ಕಾರ್ಯದರ್ಶಿ ಅಶೋಕ್ ಕುಂಬ್ಳೆ, ಸಹ ಕಾರ್ಯದರ್ಶಿ ಮಹಾಲಕ್ಷ್ಮೀ ಕೆ, ಸದಸ್ಯ ಅಶೋಕ್ ಬಲ್ನಾಡು, ಉಳ್ಳಾಲ್ತಿ ವಸತಿ ಸಂಯೋಜಕ ಕಿರಣ್ ಕುಮಾರ್ ರೈ ಬಲ್ನಾಡು ವೇದಿಕೆಯಲ್ಲಿ ಉಪಸ್ಥಿತರಿದ್ದರು. ವಿವಿಧ ಸಾಧಕ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ಚಂದ್ರಶೇಖರ ಬಪ್ಪಳಿಗೆ ಪ್ರಾಸ್ತಾವಿಕ ಮಾತನಾಡಿ ಸ್ವಾಗತಿಸಿದರು. ಕಾರ್ಯಕ್ರಮದ ಆರಂಭದಲ್ಲಿ ಭಜನೆ, ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

LEAVE A REPLY

Please enter your comment!
Please enter your name here