






ಪಾಣಾಜೆ: ಇಲ್ಲಿನ ರಣಮಂಗಲ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವರ್ಷಾವಧಿ ಉತ್ಸವದ ಅಂಗವಾಗಿ ಆರ್ಲಪದವು ದೈವಸ್ಥಾನದಲ್ಲಿ ಜ. 28 ರಂದು ಕಾರಣಿಕ ಮಹಿಮ ರಾಜನ್ ದೈವ ಶ್ರೀ ಹುಲಿಭೂತ ದೈವದ ನೇಮೋತ್ಸವ ನಡೆಯಿತು.



ಬೆಳಿಗ್ಗೆ ಶ್ರೀ ಮಲರಾಯ ದೈವದ ನೇಮ ನಡೆಯಿತು. ಹತ್ತೂರಿನಲ್ಲಿ ಕಾರಣಿಕತೆ ಹೊಂದಿರುವ ರಾಜನ್ ದೈವ ಎಂದೇ ಕರೆಯಲ್ಪಡುವ ‘ಪಿಲಿಭೂತ’ ದೈವದ ಪ್ರಸಾದ ಸ್ವೀಕರಿಸಲು ಊರ ಪರವೂರಿನಿಂದ ಸಾವಿರಾರು ಭಕ್ತಾಭಿಮಾನಿಗಳು ಪಾಲ್ಗೊಂಡರು. ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರ ಶ್ರೀಕೃಷ್ಣ ಬೋಳಿಲ್ಲಾಯ ಕಡಮ್ಮಾಜೆ ಪ್ರಾರ್ಥನೆ ಸಲ್ಲಿಸಿದರು.



ಮಾಜಿ ಶಾಸಕ ಸಂಜೀವ ಮಠಂದೂರು, ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಕಾವು ಹೇಮನಾಥ ಶೆಟ್ಟಿ, ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ಸ್ಥಾಪಕ ಅರುಣ್ ಕುಮಾರ್ ಪುತ್ತಿಲ, ಕ್ಷೇತ್ರದ ಜೀರ್ಣೋದ್ಧಾರ ಸಮಿತಿ ಸಂಚಾಲಕ ಶಶಿಕುಮಾರ್ ರೈ ಬಾಲ್ಯೊಟ್ಟು ಸೇರಿದಂತೆ ವಿವಿಧ ಕ್ಷೇತ್ರಗಳ ಗಣ್ಯರು ಭೇಟಿ ನೀಡಿ ದೈವದ ಪ್ರಸಾದ ಸ್ವೀಕರಿಸಿದರು. ದೈವದ ಕಾರಣಿಕತೆಗೆ ಪೂರಕವಾಗಿ ರಾತ್ರಿಯವರೆಗೂ ದೈವದ ಪ್ರಸಾದ ಸ್ವೀಕರಿಸಲು ಸರತಿ ಸಾಲಿನಲ್ಲಿ ಭಕ್ತರು ನಿಂತಿರುವುದು ಕಂಡುಬಂತು.

ಶಾಸಕ ಅಶೋಕ್ ರೈ ಮಹಾಪೋಷಕತ್ವದಲ್ಲಿ ಅನ್ನದಾನ
ಕ್ಷೇತ್ರದಲ್ಲಿ ಇದುವರೆಗೆ ದೈವ ಸಾನ್ನಿಧ್ಯದಲ್ಲಿ ಜಾತ್ರೋತ್ಸವದ ವೇಳೆ ಅನ್ನಸಂತರ್ಪಣೆ ನಡೆಯುತ್ತಿರಲಿಲ್ಲ. ರಣಮಂಗಲ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಅನ್ನದಾನ ನಡೆಯುತ್ತಿತ್ತು. ಈ ಬಾರಿ ಕ್ಷೇತ್ರದ ಜೀರ್ಣೋದ್ಧಾರ ಸಮಿತಿಯ ಗೌರವಾಧ್ಯಕ್ಷರೂ ಆದ ಶಾಸಕ ಅಶೋಕ್ ಕುಮಾರ್ ರೈಯವರ ನೇತೃತ್ವದಲ್ಲಿ ಅನ್ನದಾನ ವ್ಯವಸ್ಥೆ ಮಾಡಲಾಯಿತು. ಅನ್ನದಾನಕ್ಕಾಗಿ ಶಾಸಕರು 1 ಲಕ್ಷ ರೂ. ದೇಣಿಗೆ ನೀಡಿದ್ದರು. ಅಲ್ಲದೇ ಊರಿನ ಅನೇಕ ದಾನಿಗಳು ಅನ್ನದಾನ ಪೋಷಕರಾಗಿ ದೇಣಿಗೆ ನೀಡಿರುವ ಹಿನ್ನೆಲೆಯಲ್ಲಿ ಕೇವಲ 1 ದಿನದಲ್ಲಿ 5 ಸಾವಿರಕ್ಕೂ ಮಿಕ್ಕಿ ಭಕ್ತಾಭಿಮಾನಿಗಳಿಗೆ ಅನ್ನ ಪ್ರಸಾದ ವಿತರಣೆ ವ್ಯವಸ್ಥೆಗಳನ್ನು ನಡೆಸಲಾಯಿತು. ಊರಿನ ಭಕ್ತಾಭಿಮಾನಿಗಳೂ ಒಂದೇ ದಿನದಲ್ಲಿ ಎಲ್ಲಾ ರೀತಿಯ ವ್ಯವಸ್ಥೆಗಳಿಗೆ ಕರಸೇವಕರಾಗಿ ಶ್ರಮವಹಿಸಿದರು. ಆಗಮಿಸಿದ ಪ್ರತಿಯೊಬ್ಬ ಭಕ್ತನೂ ಅನ್ನದಾನ ವ್ಯವಸ್ಥೆಯಿಂದ ಸಂತೃಪ್ತನಾಗಿರುವುದು ಭಕ್ತರ ಅಭಿಪ್ರಾಯಗಳಿಂದ ತಿಳಿದುಬಂತು. ಎಷ್ಟೋ ವರ್ಷಗಳಿಂದ ಅನ್ನದಾನದ ಕನಸು ಕಂಡಿದ್ದ ಭಕ್ತರ ಕನಸು ಇಂದು ನನಸುಗೊಂಡಿದೆ ಎಂದೂ ಕೆಲ ಭಕ್ತರು ಅಭಿಪ್ರಾಯ ತಿಳಿಸಿದ್ದಾರೆ.

ನೇರ ಪ್ರಸಾರ
ಬೆಳಿಗ್ಗೆಯಿಂದ ನಡೆದ ನೇಮೋತ್ಸವವು ಸುದ್ದಿ ನ್ಯೂಸ್ ಪುತ್ತೂರು ಯುಟ್ಯೂಬ್ ಹಾಗೂ ಫೇಸ್ಬುಕ್ ಪೇಜ್ನಲ್ಲಿ ನೇರ ಪ್ರಸಾರಗೊಂಡು 10 ಸಾವಿರಕ್ಕೂ ಹೆಚ್ಚು ವೀಕ್ಷಣೆಗೊಳಪಟ್ಟಿತು. ಅಲ್ಲದೇ ಸ್ಥಳದಲ್ಲಿ ಎಲ್ಇಡಿ ಪರದೆ ಮೂಲಕ ನೇಮೋತ್ಸವ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿತ್ತು.

ಹೊರ ಜಿಲ್ಲೆ, ರಾಜ್ಯಗಳಿಂದಲೂ ಇಲ್ಲಿಗೆ ಭಕ್ತರ ಆಗಮನ
ಕ್ಷೇತ್ರದ ಪಿಲಿಭೂತ ದೈವವು ಕಾರಣಿಕ ಮಹಿಮೆಗೆ ಒಳಪಟ್ಟಿದೆ. ಇಲ್ಲಿ ಭಕ್ತಿಯಿಂದ ಪ್ರಾರ್ಥಿಸಿ ತಮ್ಮ ಕಷ್ಟ ಕಾರ್ಪಣ್ಯಗಳನ್ನು ಹೇಳಿಕೊಂಡರೆ ೬ ತಿಂಗಳೊಳಗಾಗಿ ಕಷ್ಟಗಳು ದೂರವಾಗಿ, ಇಷ್ಟಾರ್ಥಗಳು ಸಿದ್ದಿಗೊಂಡ ನಿದರ್ಶನ ನೂರಾರು ಇವೆ. ಈ ಹಿನ್ನೆಲೆಯಲ್ಲಿ ಜಾತ್ರೋತ್ಸವದ ವೇಳೆ ಇಲ್ಲಿಗೆ ಹೊರ ಜಿಲ್ಲೆ, ಹೊರ ರಾಜ್ಯಗಳಿಂದಲೂ ಭಕ್ತರು ಆಗಮಿಸುತ್ತಾರೆ. ವಿಶೇಷವಾಗಿ ʻಸುದ್ದಿ ಮಾಧ್ಯಮʼ ಇಲ್ಲಿನ ಮಹಿಮೆಯನ್ನು ಹತ್ತೂರಿಗೆ ಪಸರಿಸಿರುವುದು ಇದಕ್ಕೆ ಕಾರಣವಾಗಿದೆ. ಈ ಬಾರಿ ವಿಶೇಷವಾಗಿ ದೈವಗಳ ಅಪ್ಪಣೆ ಪಡೆದುಕೊಂಡು ಶಾಸಕರ ಮುಂದಾಳತ್ವದಲ್ಲಿ ಅನ್ನದಾನ ನಡೆದಿರುವುದು ಭವಿಷ್ಯದಲ್ಲಿ ಈ ಕ್ಷೇತ್ರ ಇನ್ನಷ್ಟು ಬೆಳಗಲಿರುವ ಶುಭ ಸೂಚಕವಾಗಿದೆ.
– ಶ್ರೀಕೃಷ್ಣ ಬೋಳಿಲ್ಲಾಯ ಅನುವಂಶಿಕ ಆಡಳಿತ ಮೊಕ್ತೇಸರರು










