ಹೈಕೋರ್ಟ್ ಆದೇಶ ಹಿನ್ನಲೆ: ಬಿಳಿನೆಲೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸಿಇಒ ಪುನೀತ್ ಕೊಪ್ಪಡ್ಕ ವಜಾ-ರಂಜಿತ್ ಡಿ.ನೂತನ ಸಿಇಒ

1

ಕಡಬ:ಕಳೆದ ಎರಡು ವರ್ಷಗಳಿಂದ ಬಿಳಿನೆಲೆ ಪ್ರಾಥಮಕ ಕೃಷಿ ಪತ್ತಿನ ಸಹಕಾರ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಪುನೀತ್ ಕೊಪ್ಪಡ್ಕ ಅವರನ್ನು ಹೈಕೋರ್ಟ್ ಆದೇಶದನ್ವಯ ಸೇವೆಯಿಂದ ವಜಾಗೊಳಿಸಿ ರಂಜಿತ್ ಡಿ.ಅವರನ್ನು ಸಂಘದ ನೂತನ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ಆಡಳಿತ ಮಂಡಳಿಯವರು ನೇಮಕಗೊಳಿಸಿದ್ದಾರೆ.


ಕಡಬ ತಾಲೂಕು ಎಡಮಂಗಲ ಗ್ರಾಮದ ಡೆಕ್ಕಲ ನಿವಾಸಿಯಾಗಿರುವ ರಂಜಿತ್ ಡಿ.ಅವರು ಎಂ.ಕಾಂ (ಫಿನಾನ್ಸ್), ಎಂ.ಬಿ.ಎ (ಟೂರಿಸಮ್ ಅಡ್ಮಿನಿಸ್ಟ್ರೇಷನ್), ಎಂ.ಎ (ಎಕನಾಮಿಕ್ಸ್) ಮತ್ತು ಹೆಚ್.ಡಿ.ಸಿ.ಎಂ ತರಬೇತಿಯನ್ನು ಪಡೆದಿದ್ದಾರೆ.ಇವರು ಈ ಹಿಂದೆ ಪುತ್ತೂರಿನಲ್ಲಿ ರಾಷ್ಟ್ರೀಯ ಗೇರುಸಂಶೋಧನಾ ನಿರ್ದೇಶನಾಲಯ, ಸಿ.ಎಫ್.ಸಿ.ಐ ಲಿಮಿಟೆಡ್, ಉಜ್ಜಿವನ್ ಸ್ಮಾಲ್ ಫಿನಾನ್ಸ್ ಬ್ಯಾಂಕ್ ಇಲ್ಲಿ ಕೆಲಸ ಮಾಡಿರುವ ಅನುಭವವನ್ನು ಹೊಂದಿರುತ್ತಾರೆ.


ಪುನೀತ್ ವಜಾ- ರಂಜಿತ್ ಡಿ.ನೇಮಕ ಏನಿದು ಪ್ರಕರಣ?:
ಬಿಳಿನೆಲೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಹಿಂದೆ ಸಿಬ್ಬಂದಿಯ ಹಿರಿತನದ ಆಧಾರದಲ್ಲಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹುದ್ದೆಯನ್ನು ನೀಡಲಾಗುತ್ತಿತ್ತು.ದಾಮೋದರ್ ಗುಂಡ್ಯ ಅವರ ಅಧ್ಯಕ್ಷತೆಯ ಕಳೆದ ಅವಧಿಯ ಆಡಳಿತ ಮಂಡಳಿಯು,ಸಿಇಒ ಹುದ್ದೆಗೆ ನೇಮಕಾತಿ ಪ್ರಕ್ರಿಯೆ ಮೂಲಕ ಆಯ್ಕೆಗೆ ತೀರ್ಮಾನಿಸಿತ್ತು.ಅದರಂತೆ ನೇಮಕಾತಿಗೆ ಪ್ರಕಟಣೆ ಹೊರಡಿಸಲಾಗಿತ್ತು. ಸಂಘದಲ್ಲಿ ಹಿರಿತನದ ಆಧಾರದಲ್ಲಿ ಸಿಇಒ ಹುದ್ದೆ ನೀಡಬೇಕೆನ್ನುವ ಆಗ್ರಹ ಆ ಸಮಯದಲ್ಲಿಯೂ ಕೇಳಿ ಬಂದಿತ್ತು.ಆದರೆ ಆವೇಳೆಗಾಗಲೇ ನೇಮಕಾತಿ ಪ್ರಕಟಣೆಯನ್ನು ಹೊರಡಿಸಿ ಅಭ್ಯರ್ಥಿಗಳಿಗೆ ಪರೀಕ್ಷೆಯೂ ನಡೆದಿತ್ತು.ಪರೀಕ್ಷೆಯಲ್ಲಿ ಅಂಕಗಳ ಆಧಾರದಲ್ಲಿ ರಂಜಿತ್ ಡಿ.ಯವರು ಪ್ರಥಮ ಸ್ಥಾನಿಯಾಗಿ ಆಯ್ಕೆಯಾಗಿದ್ದರು.ಪುನೀತ್ ಕೊಪ್ಪಡ್ಕ ಅವರು 4ನೇ ಸ್ಥಾನಿಯಾಗಿದ್ದರು ಎನ್ನಲಾಗಿದೆ.ಬಳಿಕದ ಬೆಳವಣಿಗೆಯಲ್ಲಿ ಪ್ರಥಮ ಸ್ಥಾನಿಯಾಗಿದ್ದ ರಂಜಿತ್ ಅವರನ್ನು ‘ಕ್ರಿಮಿನಲ್ ಪ್ರಕರಣ ಉಳ್ಳವರು’ ಎಂಬ ಕಾರಣಕ್ಕೆ ಕೈಬಿಟ್ಟು,ನಾಲ್ಕನೇ ಸ್ಥಾನ ಪಡೆದಿದ್ದ ಪುನೀತ್ ಅವರನ್ನು ಹಿಂದಿನ ಆಡಳಿತ ಮಂಡಳಿ ಮುಖ್ಯ ಕಾರ್ಯನಿರ್ವಹಣಾಽಕಾರಿಯಾಗಿ ನೇಮಕಗೊಳಿಸಿದ್ದರು.


ಕೋಲಾಹಲ ಸೃಷ್ಟಿ:
ಪರೀಕ್ಷೆಯಲ್ಲಿ ಪ್ರಥಮ ಸ್ಥಾನಿಯನ್ನು ಕೈಬಿಟ್ಟು ನಾಲ್ಕನೇ ಸ್ಥಾನಿಗೆ ಮುಖ್ಯಕಾರ್ಯನಿರ್ವಹಣಾಧಿಕಾರಿ ಹುದ್ದೆ ನೀಡಲಾಗಿದೆ ಎಂದು, ಈ ನೇಮಕದ ವಿರುದ್ದ ಸಂಘದ ಮಹಾಸಭೆಯಲ್ಲಿ ಪರ-ವಿರೋಧ ಅಭಿಪ್ರಾಯ ವ್ಯಕ್ತವಾಗಿ ಕೋಲಾಹಲ ಏರ್ಪಟ್ಟಿತ್ತಲ್ಲದೆ,ಸಾಮಾಜಿಕ ಜಾಲತಾಣದಲ್ಲಿಯೂ ಭಾರೀ ಚರ್ಚೆಗೆ ಕಾರಣವಾಗಿತ್ತು.


ರಂಜಿತ್‌ರಿಂದ ಹೈಕೋರ್ಟ್‌ನಲ್ಲಿ ರಿಟ್ ಅರ್ಜಿ:
ಬಳಿಕದ ಬೆಳವಣಿಗೆಯಲ್ಲಿ, ಪುನೀತ್ ಅವರ ನೇಮಕವನ್ನು ಪ್ರಶ್ನಿಸಿ ರಂಜಿತ್ ಅವರು ಸಹಾಯಕ ನಿಬಂಧಕರ ನ್ಯಾಯಾಲಯದಲ್ಲಿ ದೂರು ಅರ್ಜಿ ಸಲ್ಲಿಸಿದ್ದರು.ಆದರೆ ಈ ಪ್ರಕರಣ ನ್ಯಾಯಾಲಯದಲ್ಲಿ ತೀರ್ಮಾನವಾಗಬೇಕಿದ್ದರಿಂದ ಅವರು ಬಳಿಕ ಕರ್ನಾಟಕ ಉಚ್ಚನ್ಯಾಯಾಲಯದಲ್ಲಿ 2023ರ ಸೆಪ್ಟೆಂಬರ್‌ನಲ್ಲಿ ರಿಟ್ ಪಿಟಿಷನ್ ಹಾಕಿದ್ದರು.ವಿಚಾರಣೆ ನಡೆಸಿದ ನ್ಯಾಯಪೀಠ, ಸಹಕಾರ ಸಂಘಗಳ ಬೈಲಾ ಪ್ರಕಾರ ನೇಮಕಾತಿ ಪ್ರಕ್ರಿಯೆಯನ್ನು ಸರಿಯಾಗಿ ಪಾಲನೆ ಮಾಡಿ ಹುದ್ದೆಗೆ ನೇಮಕಗೊಳಿಸುವಂತೆ 2024ರ ಸೆಪ್ಟೆಂಬರ್‌ನಲ್ಲಿ ಆದೇಶ ನೀಡಿತ್ತು.


ಹೈಕೋರ್ಟ್‌ಗೆ ಮೇಲ್ಮನವಿ:
ಹೈಕೋರ್ಟ್‌ನ ಏಕಸದಸ್ಯ ಪೀಠದ ಆದೇಶವನ್ನು ಪ್ರಶ್ನಿಸಿ 2024 ನವೆಂಬರಿನಲ್ಲಿ ಸಂಘದ ಅಧ್ಯಕ್ಷರಾಗಿದ್ದ ದಾಮೋದರ ಗುಂಡ್ಯ ಹಾಗೂ ಸಿಇಒ ಪುನೀತ್ ಅವರು ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದ್ದರು.ಮುಖ್ಯನ್ಯಾಯಮೂರ್ತಿ ನೇತೃತ್ವದ ದ್ವಿಸದಸ್ಯ ನ್ಯಾಯಪೀಠ ಇದನ್ನು 2025ರ ಅಕ್ಟೋಬರ್‌ನಲ್ಲಿ ವಜಾಗೊಳಿಸಿ,ಹಿಂದಿನ ಏಕಪೀಠದ ಆದೇಶವನ್ನು ಮೂರು ತಿಂಗಳೊಳಗೆ ಪಾಲಿಸುವಂತೆ ಆದೇಶ ನೀಡಿತ್ತು.ಆದರೆ ಮೂರು ತಿಂಗಳೊಳಗೆ ಯಾವುದೇ ಪ್ರಕ್ರಿಯೆಗಳು ನಡೆಯದೆ ಇದ್ದಾಗ ಪುನಃ ರಂಜಿತ್ ಅವರು ನ್ಯಾಯಾಲಯದ ಆದೇಶ ಉಲ್ಲಂಘನೆಯ ಬಗ್ಗೆ ನ್ಯಾಯಪೀಠದ ಮೊರೆ ಹೋಗುವುದಾಗಿ ಮಾಹಿತಿ ನೀಡಿದ್ದರು.


ಪುನೀತ್ ಅವರಿಗೆ ಕಡ್ಡಾಯ ರಜೆ:
ಬಳಿಕದ ಬೆಳವಣಿಗೆಯಲ್ಲಿ ಸಹಕಾರ ಸಂಘದ ಆಡಳಿತ ಮಂಡಳಿಯು ಪುನೀತ್ ಅವರನ್ನು ಕಡ್ಡಾಯ ರಜೆ ಮೇಲೆ ಕಳಿಸಿತ್ತಲ್ಲದೆ,ಸಿಇಒ ಹುದ್ದೆಗೆ ಪುನೀತ್ ಹಾಗೂ ರಂಜಿತ್ ಇಬ್ಬರೂ ಬೇಡವೆಂದೂ ಸಾಮಾನ್ಯ ಸಭೆಯಲ್ಲಿ ನಿರ್ಣಯವನ್ನೂ ಅಂಗೀಕರಿಸಿತ್ತು.


ಸದಸ್ಯರಿಗೆ ಶೋಕಾಸ್ ನೋಟಿಸ್:
ಆದರೆ,ರಂಜಿತ್ ಅವರ ನೇಮಕಾತಿ ವಿಚಾರದಲ್ಲಿ ಹೈಕೋರ್ಟ್ ಆದೇಶ ಪಾಲನೆ ಮಾಡದೇ ಇದ್ದಲ್ಲಿ ಯಾಕೆ ಸೂಪರ್ ಸೀಡ್ ಮಾಡಬಾರದು ಎಂದು ಸಹಕಾರ ಸಂಘಗಳ ನಿಬಂಧಕರು ಆಡಳಿತ ಮಂಡಳಿಯ 12 ಮಂದಿಗೂ ಕಾರಣ ಕೇಳಿ ನೋಟಿಸ್ ನೀಡಿದ್ದರು.ಈ ಎಲ್ಲ ಬೆಳವಣಿಗೆಗಳ ಹಿನ್ನಲೆಯಲ್ಲಿ ರಂಜಿತ್ ಅವರನ್ನು ಜ.23ರಂದು ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ನೇಮಕಗೊಳಿಸುವ ತೀರ್ಮಾನಕ್ಕೆ ಬಂದ ಸಂಘದ ಆಡಳಿತ ಮಂಡಳಿ ಜ.27ರಂದು ರಂಜಿತ್ ಅವರಿಗೆ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹುದ್ದೆ ಅಧಿಕಾರ ನೀಡಿ,ಜ.28ಕ್ಕೆ ನ್ಯಾಯಾಲಯಕ್ಕೆ ವರದಿ ನೀಡಲಾಗಿದೆ ಎಂದು ತಿಳಿದು ಬಂದಿದೆ.

1 COMMENT

LEAVE A REPLY

Please enter your comment!
Please enter your name here