






ಪುತ್ತೂರು: ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 1 ಕ್ವಿಂಟಾಲ್ 6 ಕೆ.ಜಿ 50 ಗ್ರಾಂ ಗಾಂಜಾ ವಶಪಡಿಸಿಕೊಂಡ ಪ್ರಕರಣಕ್ಕೆ ಸಂಬಂಧಿಸಿ, ಗಾಂಜಾ ಪೂರೈಕೆ ಮಾಡುತ್ತಿದ್ದ ಒರಿಸ್ಸಾ ಮೂಲದ ವ್ಯಕ್ತಿ ಸೇರಿದಂತೆ ಮೂವರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.



ಜ.19ರಂದು ನಡೆದ ಕಾರ್ಯಾಚರಣೆಯಲ್ಲಿ ಸುಮಾರು ರೂ.53,03,000/- ಮೌಲ್ಯದ ಗಾಂಜಾವನ್ನು ಪೊಲೀಸರು ವಶಪಡಿಸಿಕೊಂಡಿದ್ದು, ಪ್ರಕರಣದ ತನಿಖೆ ಮುಂದುವರಿದಂತೆ ಆರೋಪಿಗಳಿಗೆ ಹಣ ಹಾಗೂ ವಾಹನ ವ್ಯವಸ್ಥೆ ಮಾಡಿದ್ದ ಬೆಳ್ತಂಗಡಿ ಚಾರ್ಮಾಡಿ ನಿವಾಸಿ ಮಹಮ್ಮದ್ ಫಯಾಜ್ ಡಿ.ಕೆ (27) ಮತ್ತು ಬೆಳ್ತಂಗಡಿ ಕಕ್ಕಿಂಜೆ ನಿವಾಸಿ ನಝಿರ್ (42) ಎಂಬವರನ್ನು ಬಂಧಿಸಲಾಗಿದೆ.



ಇದಲ್ಲದೆ, ಆರೋಪಿಗಳಿಗೆ ಗಾಂಜಾವನ್ನು ಪೂರೈಕೆ ಮಾಡುತ್ತಿದ್ದ ಒರಿಸ್ಸಾ ರಾಜ್ಯದ ದೀಪಕ್ ಪಾತ್ರ (37) ಎಂಬಾತನನ್ನು ಪುತ್ತೂರು ಉಪವಿಭಾಗದ ಪೊಲೀಸ್ ಉಪ ಅಧೀಕ್ಷಕ ಪ್ರಮೋದ್ ಕುಮಾರ್ ಅವರ ನೇತೃತ್ವದ ತಂಡ ಒರಿಸ್ಸಾ ರಾಜ್ಯಕ್ಕೆ ತೆರಳಿ ಬಂಧಿಸಿದ್ದು, ರೂ.80,000/- ಮೌಲ್ಯದ 1 ಕೆ.ಜಿ 788 ಗ್ರಾಂ ಗಾಂಜಾವನ್ನೂ ವಶಪಡಿಸಿಕೊಳ್ಳಲಾಗಿದೆ.
ಕಾರ್ಯಾಚರಣೆಯಲ್ಲಿ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯ ಪೊಲೀಸ್ ಉಪನಿರೀಕ್ಷಕ ಗುಣಪಾಲ ಜೆ, ಸಿಬ್ಬಂದಿಗಳಾದ ದೇವರಾಜ್, ಹರ್ಷಿತ್, ಪ್ರಶಾಂತ್, ಅದ್ರಾಮ, ಪ್ರಶಾಂತ್ ರೈ, ಪ್ರವೀಣ್ ರೈ, ಸುಬ್ರಮಣಿ, ಭೀಮಸೆನ್, ಸುರೇಶ್ ಹಾಗೂ ದಿವ್ಯಾಪ್ರಕಾಶ್ ಭಾಗಿಯಾಗಿದ್ದರು.









