







ಸಜ್ಜನ ಸಮಾಜ ನಿರ್ಮಾಣದ ಚಿಂತನೆಗಳು ಸರ್ವಜ್ಞನ ದೊಡ್ಡ ಕೊಡುಗೆ-ಎಸ್.ಬಿ ಕೂಡಲಗಿ


ಪುತ್ತೂರು:ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಹಾಗೂ ಕುಲಾಲ ಸೇವಾಸಂಘದದ ಆಶ್ರಯದಲ್ಲಿ ಸಂತ ಕವಿ ಸರ್ವಜ್ಞ ಜಯಂತಿ ದಿನಾಚರಣೆಯು ಫೆ.20ರಂದು ತಾಲೂಕು ಆಡಳಿತ ಸೌಧದ ಸಭಾಂಗಣದಲ್ಲಿ ನಡೆಯಿತು.



ಸಂಸ್ಮರಣಾ ದೀಪ ಬೆಳಗಿಸಿದ ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯ ಅಧ್ಯಕ್ಷರಾಗಿರುವ ತಹಶೀಲ್ದಾರ್ ಎಸ್.ಬಿ ಕೂಡಲಗಿ ಮಾತನಾಡಿ, ಸಜ್ಜನ ಸಮಾಜವನ್ನು ನಿರ್ಮಾಣ ಮಾಡುವ ಚಿಂತನೆಗಳು ಸರ್ವಜ್ಞ ನಮಗೆ ಕೊಟ್ಟ ದೊಡ್ಡ ಕೊಡುಗೆಯಾಗಿದೆ. ಜೀನದಲ್ಲಿ ಜಾತಿಯ ಕಂದಾಚಾರಗಳನ್ನು ದೂರ ಇಡಬೇಕಾದ ಅಗತ್ಯತೆಗಳನ್ನು ಸಮಾಜಕ್ಕೆ ತಿಳಿಸಿಕೊಟ್ಟ ಮಹಾಮೇಧಾವಿ, ತತ್ವಜ್ಞಾನಿ, ದಾರ್ಶನಿಕ, ಸರ್ವಜ್ಞನ ಚಿಂತನೆಗಳನ್ನು ನಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳುವುದು ಇಂದಿನ ಪ್ರಸ್ತುತತೆಯಾಗಿದೆ ಎಂದು ಅವರು ಹೇಳಿದರು.
ನಗರ ಯೋಜನಾ ಪ್ರಾಧೀಕಾರದ ಅಧ್ಯಕ್ಷ ಅಮಳ ರಾಮಚಂದ್ರ ಅವರು ಮಾತನಾಡಿ, ನಮ್ಮೊಲಗಿನ ಮೇಳು ಕೀಳು ಜಾತಿ ವೈಷಮ್ಯದಿಂದ ಸಮಾಜದ ಅವನತಿಯಾಗುತ್ತದೆ ಎಂಬ ಎಚ್ಚರಿಕೆಯನ್ನೂ ಸರ್ವಜ್ಞ ಅವರು ನೀಡಿದ್ದಾರೆ. ನಮ್ಮ ಬದುಕನ್ನು ಚಿಂತನೆಗೆ ಹಚ್ಚುವಂತೆ ಮಾಡಿದ ಸರ್ವಜ್ಞನ ವಚನಗಳು ಇಂದಿಗೂ ಮುಂದಿನ ಜನಾಂಗಕ್ಕೂ ಅತ್ಯಂತ ಪ್ರಸ್ತುತ. ಆದರೆ ಅವರಲ್ಲಿ ನಿಜವಾದ ಚಿಂತನೆಗಳನ್ನು ಅರಿತುಕೊಳ್ಳುವಲ್ಲಿ ಯುವಜನಾಂಗ ತಪ್ಪಿರುವುದು ನೋವಿನ ವಿಚಾರವಾಗಿದೆ ಎಂದರು.
ಸಂಸ್ಮರಣಾ ಮಾತುಗಳನ್ನಾಡಿದ ಸಂತಫಿಲೋಮಿನಾ ಕಾಲೇಜಿನ ಪ್ರಾಧ್ಯಾಪಕ ಡಾ.ಚಂದ್ರಶೇಖರ್ ಅವರು, ಇಂದಿನ ವಾಸ್ತವದಲ್ಲಿ ಕನ್ನಡ-ಆಂಗ್ಲ ಭಾಷಾ ಮಾಧ್ಯಮಗಳ ಗೊಂದಲದಲ್ಲಿ ಕನ್ನಡ ಅಕ್ಷರಗಳನ್ನೂ ಸರಿಯಾಗಿ ಬರೆಯಲೂ ಬಾರದ ಸ್ಥಿತಿ ನಿರ್ಮಾಣವಾಗಿದೆ. ಎಲ್ಲರೂ ಕಾಲಕೆಟ್ಟಿದೆ ಎಂಬ ಮಾತುಗಳನ್ನು ಆಡುತ್ತಿದ್ದಾರೆ. ಆದರೆ ಕಾಲಕೆಟ್ಟಿಲ್ಲ ಬದಲಾಗಿ ಕಾಲ ಬದಲಾಗಿದೆ. ಈ ಬದಲಾವಣೆಗೆ ನಮ್ಮನ್ನು ತೆರೆದುಕೊಳ್ಳುವ ಅಗತ್ಯತೆ ಇದೆ. ಯುವಜನತೆಗೆ ಈ ಬಗ್ಗೆ ಅರಿವು ಮೂಡಿಸುವ ಕೆಲಸ ನಡೆಯಬೇಕಾಗಿದೆ ಎಂದರು.
ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಸಂಚಾಲಕ ಪ್ರಭಾರ ಕ್ಷೇತ್ರ ಶಿಕ್ಷಣಾಧಿಕಾರಿ ವಿಷ್ಣುಪ್ರಸಾದ್, ಕುಲಾಲ ಸಮಾಜ ಸೇವಾ ಸಂಘದ ಅಧ್ಯಕ್ಷ ಸೇಸಪ್ಪ ಕುಲಾಲ್, ತಾಲೂಕು ಆರೋಗ್ಯಾಧಿಕಾರಿ ಡಾ.ದೀಪಕ್ ರೈ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ತಾಲೂಕು ಕಚೇರಿಯ ವಿಷಯ ನಿರ್ವಾಹಕ ದಯಾನಂದ ಡಿ.ಟಿ ಸ್ವಾಗತಿಸಿದರು. ಉಪತಹಶೀಲ್ದಾರ್ ರವಿ ಕುಮಾರ್ ನಾಡಗೀತೆ ಹಾಡಿದರು. ಕಂದಾಯ ಇಲಾಖೆಯ ಶ್ರೀಕಲಾ ವಂದಿಸಿ ಕಾರ್ಯಕ್ರಮ ನಿರೂಪಿಸಿದರು. ಕಂದಾಯ ಇಲಾಖೆಯ ಶಿವಾನಂದ ನಾಟೇಕರ್, ರಮೇಶ್, ಜಯಪ್ರಕಾಶ್, ಸರ್ವೆ ಇಲಾಖೆಯ ಮೋಹನ್, ಪ್ರಮೋದ್ ಹಾಗೂ ಆಹಾರ ಇಲಾಖೆಯ ಜಿತೇಶ್, ಸಿಡಿಪಿಒ ಹರೀಶ್ ಕುಮಾರ್, ಉಪತಹಶೀಲ್ದಾರ್ ಸುಲೋಚನಾ ಮತ್ತು ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಸಿಬಂದಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.










