







ಪುತ್ತೂರು: ಯಾವುದೇ ವ್ಯವಹಾರವನ್ನು ನಡೆಸುವಾಗಲೂ ಗ್ರಾಹಕರು ಸೂಕ್ತ ಮಾಹಿತಿಯನ್ನು ಪಡೆದುಕೊಳ್ಳುವುದು ಮತ್ತು ಸ್ವಯಂ ಜಾಗೃತಿಯನಿರಿಸಿಕೊಳ್ಳುವುದು ಅತೀ ಅಗತ್ಯ. ಇ-ಕಾಮರ್ಸ್ ಯುಗದಲ್ಲಿ ಎಷ್ಟೇ ಎಚ್ಚರಿಕೆಯಿಂದ ವ್ಯವಹಾರ ನಡೆಸಿದರೂ ಗ್ರಾಹಕರು ಮೋಸ ಹೋಗುವ ಸಂಭವಗಳಿರುತ್ತವೆ ಎಂದು ಪುತ್ತೂರು ಅನಿಕೇತನ ಲಾ ಛೇಂಬರ್ಸ್ ನ ನ್ಯಾಯವಾದಿ ಕೃಷ್ಣ ಪ್ರಸಾದ್ ನಡ್ಸಾರ್ ತಿಳಿಸಿದ್ದಾರೆ.



ರೋಟರಿ ಜಿ.ಎಲ್ ಸಭಾ ಭವನದಲ್ಲಿ ರೋಟರಿ ಕ್ಲಬ್ ಪುತ್ತೂರು ಆಯೋಜಿಸಿದ ಗ್ರಾಹಕ ಹಕ್ಕುಗಳು ಮತ್ತು ಹಿತರಕ್ಷಣೆ ಎಂಬ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿದರು. ಗ್ರಾಹಕ ಕಾಯ್ದೆಯ ವಿವಿಧ ಆಯಾಮಗಳು, ಗ್ರಾಹಕರ ಹಕ್ಕು ಮತ್ತು ಕರ್ತವ್ಯಗಳು, ಗ್ರಾಹಕ ಹಕ್ಕುಗಳಿಗೆ ಚ್ಯುತಿಯಾದರೆ ಮತ್ತು ಮೋಸಗಳಾದಲ್ಲಿ ಗ್ರಾಹಕರ ಹಕ್ಕುಗಳ ಹಿತರಕ್ಷಣೆಗಾಗಿರುವ ಕಾಯ್ದೆ ಮತ್ತು ಕಾನೂನಿನ ಪರಿಹಾರಗಳ ಬಗ್ಗೆ ಸವಿವರವಾಗಿ ಮಾಹಿತಿ ನೀಡಿದರು.



ಅಧ್ಯಕ್ಷತೆ ವಹಿಸಿದ ರೋಟರಿ ಕ್ಲಬ್‌ನ ಆಧ್ಯಕ್ಷ ಡಾ. ಶ್ರೀಪ್ರಕಾಶ್ ಅವರು ಮಾತನಾಡಿ ಜಾಗತೀಕರಣದ ವ್ಯಾವಹಾರಿಕ ನಾಗಾಲೋಟದಲ್ಲಿ ಸೂಕ್ತ ಮಾಹಿತಿ ಮತ್ತು ಜಾಗೃತಿಯ ಅವಶ್ಯಕತೆ ಇಂದು ಎಲ್ಲರಿಗೂ ಇದೆ ಮತ್ತು ಮೋಸ ಹೋದಾಗ ತಕ್ಷಣ ಅಗತ್ಯ ಕಾನೂನು ಮಾಹಿತಿ ಮತ್ತು ನೆರವು ಪಡೆದುಕೊಳ್ಳಬೇಕು ಎಂದರು. ರೋಟರಿ ಕ್ಲಬ್‌ನ ಕಾರ್ಯದರ್ಶಿ ಸುಬ್ಬಪ್ಪ ಕೈಕಂಬ, ನಿವೃತ್ತ ಪ್ರಾಧ್ಯಾಪಕರಾದ ದತ್ತಾತ್ರೇಯ ರಾವ್, ಪುತ್ತೂರು ಭಾರತೀಯ ವೈದ್ಯಕೀಯ ಸಂಘದ ಅಧ್ಯಕ್ಷರಾಗಿರುವ ಪ್ರಗತಿ ಸ್ಪೆಷಾಲಿಟಿ ಆಸ್ಪತ್ರೆಯ ಡಾ. ಶ್ರೀಪತಿ ರಾವ್ ವೇದಿಕೆಯಲ್ಲಿ ಉಪಸ್ಥಿತರಿದ್ದು ಶುಭ ಹಾರೈಸಿದರು.









