







ಉಪ್ಪಿನಂಗಡಿ: ಇತಿಹಾಸ ಪ್ರಸಿದ್ಧ ಇಲ್ಲಿನ ಶ್ರೀ ಸಹಸ್ರಲಿಂಗೇಶ್ವರ- ಮಹಾಕಾಳಿ ದೇವಸ್ಥಾನದಲ್ಲಿ ಫೆ.15ರಿಂದ ವೇ.ಮೂ. ಕೆಮ್ಮಿಂಜೆ ನಾಗೇಶ ತಂತ್ರಿಗಳ ನೇತೃತ್ವದಲ್ಲಿ ಪವಿತ್ರಪಾಣಿ ಕರಾಯ ವಿಷ್ಣುಮೂರ್ತಿ ಕುದ್ದಣ್ಣಾಯರ ಉಪಸ್ಥಿತಿಯಲ್ಲಿ ಕಾಲಾವಧಿ ಜಾತ್ರೆ ಮಖೆಜಾತ್ರೆ ಮತ್ತು ಉತ್ಸವಾದಿಗಳು ಆರಂಭಗೊಂಡಿದ್ದು, ಮಾ.2ರ ಸೋಮವಾರದಂದು ಹುಣ್ಣಿಮೆ ೨ನೇ ಮಖೆಕೂಟ ನಡೆಯಲಿದೆ.
ರಾತ್ರಿ 8- 30ರಿಂದ ಬಲಿಹೊರಟು ಉತ್ಸವ, ಬ್ರಹ್ಮರಥ ಸೇವೆ, ರಥೋತ್ಸವ ನಡೆಯಲಿದೆ. ಮಾ.3ರಂದು ಪ್ರಾತಃಕಾಲ ತೀರ್ಥಸ್ನಾನ ನಡೆಯಲಿದ್ದು, ಬೆಳಿಗ್ಗೆ 7:30ರಿಂದ ಬಲಿ ಹೊರಟು ಉತ್ಸವ, ದರ್ಶನಬಲಿ, ಬಟ್ಟಲು ಕಾಣಿಕೆ, ಮಹಾಕಾಳಿ ಅಮ್ಮನವರ ನೇಮಕ್ಕೆ ಪಡಿಯಕ್ಕಿ ಕೊಡುವುದು, ಮಹಾಪೂಜೆ ನಡೆಯಲಿದೆ. ಆ ದಿನ ಚಂದ್ರಗ್ರಹಣ ಇರುವುದರಿಂದ ಮಧ್ಯಾಹ್ನ ಸಾರ್ವಜನಿಕ ಅನ್ನಸಂತರ್ಪಣೆ ಬದಲಿಗೆ ಫಲಹಾರದ ವ್ಯವಸ್ಥೆ ಇರುತ್ತದೆ. ಸಂಜೆ 7ರಿಂದ ಉತ್ಸವ ನಡೆಯಲಿದೆ.



ಮಾ.4ರಂದು ಬೆಳಗ್ಗೆ ಉತ್ಸವ, ಸಂಜೆ 7ರಿಂದ ಉತ್ಸವ ನಡೆಯಲಿದೆ. ಮಾ.5ರಂದು ಬೆಳಗ್ಗೆ ಉತ್ಸವ ಸಂಜೆ 7ರಿಂದ ಉತ್ಸವ, ಶ್ರೀ ದೇವರ ಶಯನೋತ್ಸವ ನಡೆಯಲಿದ್ದು, ಮಾ.6ರಂದು ಬೆಳಗ್ಗೆ 6ರಿಂದ ಕವಾಟೋದ್ಘಾಟನೆ, ಸಂಜೆ 7ರಿಂದ ದೇವರು ಬಲಿ ಹೊರಟು ರಥಬೀದಿಯಿಂದ ಹಳೆ ಬಸ್‌ಸ್ಟ್ಯಾಂಡ್‌ವರೆಗೆ ಹೋಗಿ ಕಟ್ಟೆಪೂಜೆಯಾಗಿ ಸರಕಾರಿ ಪ್ರಾಥಮಿಕ ಶಾಲಾ ಮಾರ್ಗವಾಗಿ ಬಂದು ಸಂಗಮದಲ್ಲಿ ಅವಭೃತ ಸ್ನಾನವಾಗಿ ಧ್ವಜಾವರೋಹಣ ನಡೆಯಲಿದೆ.



ಸಾಂಸ್ಕೃತಿಕ ಕಾರ್ಯಕ್ರಮದಂಗವಾಗಿ ಮಾ.2ರಂದು ಯಕ್ಷಧ್ರುವ ಪಟ್ಲ ಪೌಂಡೇಶನ್ ಟ್ರಸ್ಟ್ ಉಪ್ಪಿನಂಗಡಿಯ ವತಿಯಿಂದ ಪಾವಂಜೆ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ಸ್ವಾಮಿ ಕೃಪಾಪೋಷಿತ ಯಕ್ಷಗಾನ ಮಂಡಳಿನಾಗವೃಜ ಕ್ಷೇತ್ರ ಇವರಿಂದ ಶ್ರೀ ತುಳಸಿ ಯಕ್ಷಗಾನ ಪ್ರದರ್ಶನ ನಡೆಯಲಿದೆ. ರಾತ್ರಿ 9ರಿಂದ ಸಿಡಿಮದ್ದು ಪ್ರದರ್ಶನ ನಡೆಯಲಿದೆ. ಮಾ.6ರಂದು ಗೆಳೆಯರು-94 ಅರ್ಪಿಸುವ ಅನುಗ್ರಹ ಮೆಲೋಡಿಸ್ ಮಂಗಳೂರು ಇವರಿಂದ 33 ವರ್ಷದ ‘ಗೀತ್ ಸಂಗೀತ್’ ನಡೆಯಲಿದೆ ಎಂದು ದೇವಾಲಯದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ಕೆ.ರಾಧಾಕೃಷ್ಣ ನಾಕ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.










