ನಾಲ್ಕರ ಹರೆಯದಲ್ಲೇ ವಾದ್ಯ ಪರಿಕರಗಳ ಪರಿಜ್ಞಾನ : ಶ್ರೀ ದೇವರ ಬಲಿ ಉತ್ಸವದಲ್ಲಿ ಲಯಬದ್ಧವಾಗಿ ತಾಳ ಬಾರಿಸಿದ ಆರ್ಯ

0

ಉಪ್ಪಿನಂಗಡಿ: ಇಲ್ಲಿನ ಸಹಸ್ರಲಿಂಗೇಶ್ವರ ಮಹಾಕಾಳಿ ದೇವಾಲಯದ ವರ್ಷಾವಧಿ ಜಾತ್ರೆ ನಡೆಯುತ್ತಿರುವ ಸನ್ನಿವೇಶದಲ್ಲಿ ದೇವರ ಬಲಿ ಉತ್ಸವಗಳಲ್ಲಿ ತಾಳ, ಹಾರ್ಮೋನಿಯಂನ್ನು ನುಡಿಸುವ ಮೂಲಕ ನಾಲ್ಕರ ಹರೆಯದ ಆರ್ಯ ಭಕ್ತಾದಿಗಳ ಹುಬ್ಬೇರಿಸುವಂತೆ ಮಾಡಿದ್ದಾನೆ.


ಸರಿ ಸುಮಾರು ಹಾರ್ಮೋನಿಯಂನಷ್ಟೇ ಎತ್ತರವಿರುವ ಈತ ಕೆಲ ದಿನಗಳ ಹಿಂದೆ ಕುತ್ತಿಗೆಗೆ ಹಾರ್ಮೋನಿಯಂ ನೇತಾಡಿಸಿಕೊಂಡು ಹಾರ್ಮೋನಿಯಂ ನುಡಿಸುತ್ತಾ ದೇವರಿಗಿಂತ ಹೆಚ್ಚು ಅವನನ್ನೇ ನೋಡುವಂತೆ ಮಾಡುತ್ತಿದ್ದ. ಮಂಗಳವಾರ ರಾತ್ರಿ ದೇವಳದಲ್ಲಿ ನಡೆದ ಬಲಿ ಉತ್ಸವದಲ್ಲಿ ಪ್ರಬುದ್ಧ ಪರಿಣತ ಕಲಾವಿದರ ಜೊತೆ ಹಾಲ್ಗಲ್ಲದ ಹಸುಳೆಯಂತಿದ್ದ ಈ ಪುಟ್ಟ ಬಾಲಕ ದೊಡ್ಡದಾದ ತಾಳದೊಂದಿಗೆ ದೇವರ ಮುಂದೆ ಬಂದವನೇ ಡೋಲು ವಾದನಕ್ಕೆ ಪೂರಕವಾಗಿ ಲಯಬದ್ಧವಾಗಿ ತಾಳವನ್ನು ಏರಿಳಿತದ ರೀತಿಯಲ್ಲಿ ಬಡಿಯುತ್ತಿದ್ದ ರೀತಿ ಮನಮೋಹಕವಾಗಿತ್ತು. ಮುಂದು ಮುಂದಾಗಿ ಬರುವ ದೇವರ ಮುಂದೆ ಹಿಂದಡಿ ಇಡುತ್ತಾ ಸಾಗುವ ಕೌಶಲ್ಯ, ತಾಳವನ್ನು ಬಾರಿಸುವಾಗ ತನ್ಮಯತೆಯ ಭಾವಭಂಗಿ ಒರ್ವ ಪ್ರಬುದ್ಧ ಕಲಾವಿದನ ನಡೆಯಂತಿತ್ತು. ಪಾರಂಪರಿಕವಾಗಿ ಪುಟ್ಟದಾದ ಲುಂಗಿ ತೊಟ್ಟು , ಮೇಲೊಂದು ಶಾಲು ಧರಿಸಿ ಪ್ರೌಢಿಮೆಯೊಂದಿಗೆ ಬಲಿ ಉತ್ಸವದಲ್ಲಿ ಭಾಗಿಯಾದ ರೀತಿಯನ್ನು ನೋಡಿದಾಗ ಈತನು ಅನುವಂಶಿಯವಾಗಿ ಕಲಾ ವಿದ್ವತ್ತನ್ನು ಮೈಗೂಡಿಸಿ ಬಂದಂತಿತ್ತು.


ದೇವಾಲಯದ ಪರಿಚಾರಕ ಸಿಬ್ಬಂದಿ ಸುರೇಶ್ ಮತ್ತು ಹರಿಣಿ ದಂಪತಿಯ ಪುತ್ರನಾಗಿರುವ ಈತ ತನ್ನ ಬಾಲ್ಯದಾಟದ ಜೊತೆಗೆ ದೇವಾಲಯದಲ್ಲಿನ ವಿಧಿ ವಿಧಾನದಲ್ಲಿ ಬಳಕೆಯಾಗುತ್ತಿದ್ದ ಸಂಗೀತ ಸಾಧನಗಳ ಮೇಲೆ ವಿಶೇಷ ಆಸಕ್ತನಾಗಿರುತ್ತಿದ್ದ. ಈ ಕಾರಣದಿಂದ ಈ ಎಳೆಯ ವಯಸ್ಸಿನಲ್ಲೇ ಲೋಪ ರಹಿತನಾಗಿ ಲಯಬದ್ಧವಾಗಿ ಈತ ವಾದ್ಯ ಪರಿಕರಣಗಳನ್ನು ನುಡಿಸುತ್ತಿರುವುದನ್ನು ನೋಡಿದಾಗ ಮಕ್ಕಳಿಗೆ ನೋಡುವುದರಿಂದ ಕಲಿಯುವುದು ತುಂಬಾ ಸುಲಭ ಎನ್ನುವುದನ್ನು ಸಾಕ್ಷೀಕರಿಸಿದೆ.

LEAVE A REPLY

Please enter your comment!
Please enter your name here