






ಪುತ್ತೂರು:ಕಾರೊಂದನ್ನು ಕಳವು ಮಾಡಿ ನೋಂದಣಿ ಸಂಖ್ಯೆ ಬದಲಾವಣೆಗೊಳಿಸಿ ಮಾರಾಟ ಮಾಡುವರೇ ಯಾ ಮೋಸ,ವಂಚನೆ ಮಾಡಲು ಬಳಸುತ್ತಿದ್ದ ಪ್ರಕರಣದ ಆರೋಪಿಯನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ.


18-01-2008ರಂದು ಸಂಜೆ ಆರ್ಯಾಪು ಗ್ರಾಮದ ಸಂಟ್ಯಾರ್ ಬಳಿ ಲೇನ್ಸರ್ ಕಾರೊಂದು ರಸ್ತೆ ಬದಿ ಚರಂಡಿಗೆ ಬಿದ್ದು ಕಾರಲ್ಲಿದ್ದ ಇಬ್ಬರು ಯುವಕರು ಅಲ್ಪಸ್ವಲ್ಪ ಗಾಯಗೊಂಡಿದ್ದರು.ಅವರು ಕಾರಿನ ನಂಬರ್ ಪ್ಲೇಟನ್ನು ಕಿತ್ತು ಸ್ಥಳದಿಂದ ಪರಾರಿಯಾಗಿದ್ದರು.ಕಾರಿನ ಒಳಗಡೆಯೂ ಯಾವುದೇ ಸೊತ್ತು,ದಾಖಲೆಗಳು ಪೊಲೀಸರಿಗೆ ಕಂಡು ಬಂದಿರಲಿಲ್ಲ.ದಿನಗಳ ಬಳಿಕ ಅವರು ಕಾರನ್ನು ಅಲ್ಲಿಂದ ತೆಗೆಯಲು ಬಂದಿದ್ದ ವೇಳೆ ಪೊಲೀಸರು ವಿಚಾರಣೆ ನಡೆಸಿದ ಸಂದರ್ಭ ಪ್ರಕರಣ ಬೆಳಕಿಗೆ ಬಂದಿತ್ತು.ಕಾರಿನ ಚಾಲಕ ಆಂಧ್ರ ಮೂಲದ ಮಹಮ್ಮದ್ ಇಕ್ಬಾಲ್ ಯಾನೆ ಪ್ರವೀಣ್ ಕುಮಾರ್ ತೋಮಾರ್(37ವ.)ಹಾಗೂ ಕಾರಲ್ಲಿದ್ದಾತ ಜಗದೀಶ್ ಪೂಜಾರಿ ಯಾನೆ ಸಂದೀಪ್ ಗೋಸ್ವಾಮಿ(28ವ.)ಕಾರ್ಕಳ ಎಂದು ವಿಚಾರಣೆ ವೇಳೆ ತಿಳಿದು ಬಂದಿತ್ತು.ಕಾರಿನ ದಾಖಲೆ ಪತ್ರಗಳನ್ನು ಹಾಜರುಪಡಿಸುವಂತೆ ಸೂಚಿಸಿದ್ದ ಪೊಲೀಸರು, ಕಾರಿನ ನಂಬರ್ ಪ್ಲೇಟ್ ಕಳಚಿರುವ ಬಗ್ಗೆ ಕಾರಣ ಕೇಳಿದಾಗ ಅವರಿಬ್ಬರೂ ತಡವರಿಸುತ್ತಾ ಉತ್ತರ ನೀಡಿ, ಕಾರಿನ ನಂಬರ್ ಬಗ್ಗೆ ಅಸ್ಪಷ್ಟ ಮಾಹಿತಿ ನೀಡಿದ್ದರು.ಇದರಿಂದ ಅನುಮಾನಗೊಂಡ ಪೊಲೀಸರು ಅವರಿಬ್ಬರನ್ನೂ ವಶಕ್ಕೆ ಪಡೆದುಕೊಂಡು ವಿಚಾರಣೆಗೊಳಪಡಿಸಿದ್ದರು.ಕಾರನ್ನು ಕಳವು ಮಾಡಿ ನೋಂದಣಿ ಸಂಖ್ಯೆ ಬದಲಾವಣೆ ಮಾಡಿ ಮಾರಾಟ ಮಾಡುವುದು ಇಲ್ಲವೇ ಮೋಸ,ವಂಚನೆ ಮಾಡಲು ಬಳಸುವ ಗುಮಾನಿ ಮೇಲೆ ಪೊಲೀಸರು ಆರೋಪಿಗಳನ್ನು ಬಂಧಿಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.ಪ್ರಕರಣದ ವಿಚಾರಣೆ ಸಂದರ್ಭ ಆರೋಪಿ ಮಹಮ್ಮದ್ ಇಕ್ಬಾಲ್ ಯಾನೆ ಪ್ರವೀಣ್ ಕುಮಾರ್ ತೋಮಾರ್ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದರಿಂದ ಆತನ ವಿರುದ್ಧದ ಪ್ರಕರಣವನ್ನು ಪ್ರತ್ಯೇಕಿಸಿ ಇನ್ನೋರ್ವ ಆರೋಪಿಯ ವಿಚಾರಣೆ ಮುಂದುವರಿಸಿ ಆತನನ್ನು ನ್ಯಾಯಾಲಯ ಖುಲಾಸೆಗೊಳಿಸಿತ್ತು.ಬಳಿಕ ಆರೋಪಿ ಮಹಮ್ಮದ್ ಇಕ್ಬಾಲ್ ನ್ಯಾಯಾಲಯಕ್ಕೆ ಶರಣಾಗಿದ್ದ.ಆತನ ವಿರುದ್ಧದ ಪ್ರಕರಣದ ವಿಚಾರಣೆ ಪೂರ್ಣಗೊಳಿಸಿದ ನ್ಯಾಯಾಲಯ ಆರೋಪಿಯನ್ನು ದೋಷಮುಕ್ತಗೊಳಿಸಿದೆ.ಆರೋಪಿ ಪರ ವಕೀಲರಾದ ಉದಯಶಂಕರ ಶೆಟ್ಟಿ ಅರಿಯಡ್ಕ,ದೇವಾನಂದ ಕೆ.,ಕೃಷ್ಣವೇಣಿ ಎಂ.ವಾದಿಸಿದ್ದರು.












