ವೈಭವದ ಮೆರವಣಿಗೆಯೊಂದಿಗೆ ಕುಂಜಾರು ಮದಗ ಶ್ರೀಜನಾರ್ದನ ದೇವಸ್ಥಾನಕ್ಕೆ ಸಾಗಿಬಂದ ಕೊಡಿಮರ – ಗ್ರಾಮದ ದೇವಸ್ಥಾನಕ್ಕೆ ಗ್ರಾಮದಿಂದಲೇ ಕೊಡಿಮರ ಸಮರ್ಪಣೆ

0

ಪುತ್ತೂರು; ಜೀರ್ಣೋದ್ಧಾರಗೊಳ್ಳುತ್ತಿರುವ ಪಡ್ನೂರು ಗ್ರಾಮದ ಕುಂಜಾರು ಮದಗ ಶ್ರೀ ಜನಾರ್ದನ ದೇವಸ್ಥಾನದಲ್ಲಿ ನೂತನವಾಗಿ ನಿರ್ಮಾಣಗೊಳ್ಳಿರುವ ಕೊಡಿಮರ(ಧ್ವಜಸ್ಥಂಭದ ಮರ)ವು ವೈಭವದ ಮೆರವಣಿಗೆಯ ಮೂಲಕ ಮಾ.15ರಂದು ಸಂಜೆ ದೇವಸ್ಥಾನಕ್ಕೆ ಆಗಮಿಸಿತು.


ಕೆಮ್ಮಿಂಜೆ ನಾಗೇಶ ತಂತ್ರಿಗಳ ನೇತೃತ್ವದಲ್ಲಿ ಮಾ.14ರಂದು ನೂತನ ಧ್ವಜಸ್ಥಂಭದ ಬಗ್ಗೆ ದಾರುಪರಿಗ್ರಹ ಕಾರ್ಯಕ್ರಮ ನಡೆದು ಮಾ.15ರಂದು ಹಾರಕರೆ ಗಂಗಮ್ಮ ಅವರ ಜಾಗದಲ್ಲಿ ಬೆಳಿಗ್ಗೆ ಹರೀಶ ಆಚಾರ್ಯರವರು ಧಾರ್ಮಿಕ ವಿಧಿಗಳೊಂದಿಗೆ ಮರ ಕಡಿಯುವ ಮುಹೂರ್ತ ನೆರವೇರಿಸಿದರು. ಅಲ್ಲಿಂದ ಲಾರಿಯ ಮೂಲಕ ಹಾರಕರೆ ಅಶ್ವತ್ಥಕಟ್ಟೆ ಬಳಿಗೆ ಆಗಮಿಸಿತು.


ವೈಭವದ ಮೆರವಣಿಗೆ:
ಸಂಜೆ ಹಾರಕರೆ ಅಶ್ವತ್ಥ ಕಟ್ಟೆಯ ಬಳಿಯಿಂದ ಕೊಡಿಮರವು ವೈಭವದ ಮೆರವಣಿಗೆಯ ಮೂಲಕ ದೇವಸ್ಥಾನಕ್ಕೆ ಆಗಮಿಸಿತು. ಜೀರ್ಣೋದ್ಧಾರ ಸಮಿತಿ ಗೌರವಾದ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆ ಉಪಾಧ್ಯಕ್ಷರಾದ ಬಾಲಕೃಷ್ಣ ಜೋಯಿಸ, ನಾರಾಯಣ ಭಟ್ ಹಾರಕರೆ, ಜೀರ್ಣೋದ್ಧಾರ ಸಮಿತಿ ಅದ್ಯಕ್ಷ ವಸಂತ ಸಫಲ್ಯ, ಉಪಾದ್ಯಕ್ಷೆ ರಮಣಿ ಡಿ ಗಾಣಿಗ ಹಾಗೂ ವ್ಯವಸ್ಥಾಪನಾ
ಸಮಿತಿ ಅಧ್ಯಕ್ಷ ಹಾರಕರೆ ವೆಂಕಟ್ರಮಣ ಭಟ್ ತೆಂಗಿನಕಾಯಿ ಒಡೆದು ಮೆರವಣಿಗೆಗೆ ಚಾಲನೆ ನೀಡಿದರು. ಅಲ್ಲಿಂದ ಹೊರಟು ಮೆರವಣಿಗೆಯಲ್ಲಿ ಅಶ್ವತ್ಥಕಟ್ಟೆ ದೇವತಾ ಸಮಿತಿ ಚೆಂಡೆ, ಪಡ್ನುರು ಜನಾರ್ದನ ಯುವಕ ಮಂಡಲ, ಪಡ್ಡಾಯೂರು ಅನ್ನಪೂರ್ಣೇಶ್ವರಿ ಭಜನಾ ಮಂಡಳಿ, ಯರ್ಮುಂಜ ಪಳ್ಳ ಗೆಳೆಯರ ಬಳಗದವರಿಂದ ಭಜನೆ, ಕುಣಿತ ಭಜನೆ, ಬ್ಯಾಂಡ್, ವಾಳಗದೊಂದಿಗೆ ಮೆರವಣಿಗೆಯು ದೇವಸ್ಥಾನಕ್ಕೆ ಸಾಗಿ ಬರುವ ಸಮಯದಲ್ಲಿ ಅಲ್ಲಲ್ಲಿ ತಂಪು ಪಾನೀಯಗಳನ್ನು ಒದಗಿಸಿದ್ದರು. ರಿಕ್ಷಾ ಚಾಲಕ-ಮ್ಹಾಲಕರ ಸಂಘ, ಮುಂಬಯಿ ಉದ್ಯಮ ವಸಂತ ಸಪಲ್ಯ ಕುಂಜಾರು, ಗಿರೀಶ್ ಪಡ್ಡಾಯೂರು, ವನಶಾಸ್ತಾರ ದೇವಸ್ಥಾನದ ಸಮಿತಿ ಹಾಗೂ ನಾಗರಾಜ ಕುಂಜಾರು ಪಾನೀಯ ಹಾಗೂ ಉಪಹಾರವನ್ನು ಒದಗಿಸಲಾಗಿತ್ತು. ದೇವಸ್ಥಾನಕ್ಕೆ ಆಗಮಿಸಿದ ಬಳಿಕ ಉಪಾಹಾರವನ್ನು ನೀಡಲಾಯಿತು. ದೇವಸ್ಥಾನದ ವ್ಯವಸ್ಥಾಪನಾ ಸಮಿತಿ, ಜೀರ್ಣೋದ್ಧಾರ ಸಮಿತಿ, ಬ್ಯೆಲುವಾರು ಸಮಿತಿ ಪದಾಧಿಕಾರಿಗಳು, ಸದಸ್ಯರು ಸೇರಿದಂತೆ ನೂರಾರು ಮಂದಿ ಭಕ್ತಾದಿಗಳು ಮೆರವಣಿಗೆಯಲ್ಲಿ ಸಾಗಿಬಂದರು.


ಗ್ರಾಮದ ದೇವಸ್ಥಾನಕ್ಕೆ ಗ್ರಾಮದಿಂದಲೇ ಕೊಡಿಮರ:
ಸಾಮಾನ್ಯವಾಗಿ ಯಾವುದೇ ದೇವಸ್ಥಾನಗಳಿಗೂ ಧ್ವಜಸ್ಥಂಭಕ್ಕೆ ಆವಶ್ಯಕವಾದ ಮರವನ್ನು ದೂರದ ಊರುಗಳಿಂದ ಮರ ತರಲಾಗುತ್ತಿದೆ. ಆದರೆ ಅಪರೂಪ ಎಂಬಂತೆ ಕುಂಜಾರು ಮದಗ ದೇವಸ್ಥಾನಕ್ಕೆ ಸ್ವ-ಗ್ರಾಮದಿಂದಲೇ ಧ್ವಜಸ್ಥಂಭಕ್ಕೆ ಬೇಕಾದ ಮರ ದೊರೆತಿರುವುದು ಈ ಕ್ಷೇತ್ರ ವಿಶೇಷತೆಯಾಗಿದೆ. ಸುಮಾರು 45 ಅಡಿ ಉದ್ದದ ಕಿರಾಲುಬೋಗಿ ಜಾತಿಯ ಮರವನ್ನು ಹಾರಕರೆ ಗಂಗಮ್ಮ ಮನೆಯವರು ದೇವಸ್ಥಾನಕ್ಕೆ ಉಚಿತವಾಗಿ ನೀಡಿರುತ್ತಾರೆ

ಕುಂಜಾರು ಮದಗ ಶ್ರೀ ಜನಾರ್ದನ ದೇವರ ಸನ್ನಿಧಿಗೆ ಆಗಮಿಸಿದ ದ್ವಜಸ್ಥಂಭದ ಮರದ ಮೆರವಣಿಗೆಯಲ್ಲಿ ಜಾತ್ರೆಯಂತೆ ಜನಸ್ತೋಮ ಸೇರಿತ್ತು. ಪುತ್ತೂರು ದೇವಸ್ಥಾನದ ಅವಭ್ರತ ಸವಾರಿಯ ಮಾದರಿಯಲ್ಲಿ ಮೆರವಣಿಗೆಯಲ್ಲಿ ಭಕ್ತಾದಿಗಳು ಸೇರಿದ್ದರು. ಮೆರವಣಿಗೆಯ ಸಮಯದಲ್ಲಿ ಭಕ್ತಾದಿಗಳು ಅಲ್ಲಲ್ಲಿ ತಂಪು ಪಾನೀಯ, ಉಪಹಾರಗಳನ್ನು ಒದಗಿಸಿದ್ದರು. ಮರ ಕಡಿಯುವ ಸಾಹಸಮಯ ಕೆಲಸ ಹಾಗೂ ಮರವನ್ನು ದೇವಸ್ಥಾನಕ್ಕೆ ತಲುಪಿಸುವಲ್ಲಿ ಭಕ್ತಾದಿಗಳು ಬಹಳಷ್ಟು ಶ್ರಮಿಸಿದ್ದರು. ಸಹಕರಿಸಿದ ಪ್ರತಿಯೊಬ್ಬರಿಗೂ ಕೃತಜ್ಷತೆಗಳು.
-ಹಾರಕರೆ ವೆಂಕಟ್ರಮಣ ಭಟ್,
ಅಧ್ಯಕ್ಷರು ವ್ಯವಸ್ಥಾಪನಾ ಸಮಿತಿ, ಮದಗ ಶ್ರೀ ಜನಾರ್ದನ ದೇವಸ್ಥಾನ

LEAVE A REPLY

Please enter your comment!
Please enter your name here