ಪುತ್ತೂರು ಜಾತ್ರೆ : ತಾತ್ಕಾಲಿಕ ಗದ್ದೆ ಏಲಂ ಪ್ರಕ್ರಿಯೆ

0

ವ್ಯಾಪಾರಸ್ಥರ ಹಿತ, ಭಕ್ತರಿಗೆ ಅನುಕೂಲವೇ ಮೂಲ ಉದ್ದೇಶ : ಈಶ್ವರ ಭಟ್ ಪಂಜಿಗುಡ್ಡೆ

ಪುತ್ತೂರು: ಇತಿಹಾಸ ಪ್ರಸಿದ್ಧ ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವರ ಜಾತ್ರೋತ್ಸವವನ್ನು ವಿಜ್ರಂಭಣೆಯಿಂದ ಆಚರಿಸುವುದು ಪ್ರತಿಯೊಬ್ಬ ಭಕ್ತರ ಕರ್ತವ್ಯ ಆಗಿದೆ. ಹಾಗಾಗಿ ಈ ಬಾರಿ ಎಲ್ಲಾ ವ್ಯಾಪಾರಸ್ಥರಿಗೆ ಅವಕಾಶ ಸಿಗುವ ರೀತಿಯಲ್ಲಿ ಅಂಗಡಿ ಏಲಂ ಮಾಡಲಾಗಿದೆ. ವ್ಯಾಪಾರಸ್ಥರ ಹಿತ ಕಾಪಾಡುವುದು ಮತ್ತು ಭಕ್ತರಿಗೆ ಅನುಕೂಲ ಮಾಡಿಕೊಡುವುದು ನಮ್ಮ ಮೂಲ ಉದ್ದೇಶವಾಗಿದೆ ಎಂದು ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆ ಹೇಳಿದರು.


ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವರ್ಷಾವಧಿ ಜಾತ್ರೋತ್ಸವದ ಸಲುವಾಗಿ ಏ.2ರಂದು ದೇವಳದ ಸಭಾಭವನದಲ್ಲಿ ನಡೆದ ತಾತ್ಕಾಲಿಕ ಏಲಂ ಪ್ರಕ್ರಿಯೆಗಳಿಗೆ ಚಾಲನೆ ನೀಡಿ ಅವರು ಮಾತನಾಡಿದರು. ವ್ಯಾಪಾರಸ್ಥರಿದ್ದರೆ ಸಾಲದು ಗ್ರಾಹಕರು ಬೇಕು. ಹಾಗಾಗಿ ಜಾತ್ರೆ ಗದ್ದೆಯಲ್ಲಿ ವ್ಯಾಪಾರಸ್ಥರ ಬಳಿ ಗ್ರಾಹಕರು ಬರುವಂತೆ ವ್ಯವಸ್ಥಿತ ರೀತಿಯಲ್ಲಿ ಅಂಗಡಿಗೆ ಸ್ಥಳಗಳನ್ನು ಗುರುತಿಸಲಾಗಿದೆ. ಭೇದ ಬಾವ ಇಲ್ಲದೆ ಎಲ್ಲರೂ ಉತ್ತಮ ವ್ಯಾಪಾರ ನಡೆಸಬೇಕು. ಏನಾದರೂ ತೊಂದರೆ ಇದ್ದರೆ ನೇರ ನಮ್ಮ ಕಚೇರಿಯನ್ನು ಸಂಪರ್ಕಿಸಿ ಅಥವಾ ನನ್ನನ್ನು ಸಂಪರ್ಕಿಸಿ. ಅಂಗಡಿಗಳ ಏಲಂ ಪ್ರಕ್ರಿಯೆ ಆಗಬೇಕಾದರೆ ಅದರ ಹಿಂದೆ ಒಂದಷ್ಟು ದಿನಗಳ ಶ್ರಮವಿದೆ. ವ್ಯಾಪಾರಸ್ಥರಿಗೆ ಶೌಚಾಲಯದ ವ್ಯವಸ್ಥೆ, ನೀರಿನ ವ್ಯವಸ್ಥೆ ಮಾಡಲಾಗಿದೆ. ಜೊತೆಗೆ ಪ್ರತಿ ದಿನ ಕಸದ ವಾಹನ ಅಂಗಡಿಯ ಬಳಿ ಬಂದಾಗ ಕಸವನ್ನು ನೀಡಿ ಸಹಕರಿಸಿ. ಸ್ವಚ್ಛತೆ ಕಾಪಾಡುವ ಮೂಲಕ ಎಲ್ಲರೂ ಶಿಸ್ತು ಬದ್ಧವಾಗಿ ವ್ಯಾಪಾರ ಮಾಡಿ ಎಂದರು.


ಕಳೆದ ಬಾರಿಗಿಂತ ಹೆಚ್ಚು ಅಂಗಡಿಗೆ ಸ್ಥಳ ಗುರುತು:
ಶಾಸಕ ಅಶೋಕ್ ಕುಮಾರ್ ರೈ ಅವರ ಸೂಚನೆಯಂತೆ ವ್ಯಾಪಾರಸ್ಥರಿಗೆ ಪ್ರಯೋಜನ ಆಗಬೇಕೆಂದು ದೇವರಮಾರು ಗದ್ದೆಯನ್ನು ವಿಸ್ತಾರ ಮಾಡಿದ್ದೇವೆ. ಯಾರಿಗೂ ಇಕ್ಕಟ್ಟೂ ಆಗದ ರೀತಿಯಲ್ಲಿ ಎಲ್ಲಾ ವ್ಯಾಪಾರಸ್ಥರಿಗೂ ಉತ್ತಮ ವ್ಯಾಪಾರ ಆಗಲೆಂದು ಈ ಭಾರಿ ಕಳೆದ ಬಾರಿಗಿಂತಲೂ ಹೆಚ್ಚಿನ ಅಂಗಡಿಗಳಿಗೆ ಸ್ಥಳಾವಕಾಶ ಗುರುತಿಸಲಾಗಿದೆ ಎಂದು ಈಶ್ವರ ಭಟ್ ಪಂಜಿಗುಡ್ಡೆ ತಿಳಿಸಿದರು.


ದೇವಳದ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಮಹಾಬಲ ರೈ ವಳತ್ತಡ್ಕ, ನಳಿನಿ ಪಿ.ಶೆಟ್ಟಿ, ದಿನೇಶ್ ಪಿ.ವಿ., ಈಶ್ವರ ಬೇಡೆಕರ್, ಸುಭಾಷ್ ರೈ ಬೆಳ್ಳಿಪ್ಪಾಡಿ, ವಿನಯ ಸುವರ್ಣ, ಕೃಷ್ಣವೇಣಿ, ಕಾರ್ಯನಿರ್ವಹಣಾಧಿಕಾರಿ ಕೆ.ವಿ.ಶ್ರೀನಿವಾಸ್, ಇಂಜಿನಿಯರ್ ಪಿ.ಜಿ.ಜಗನ್ನಿವಾಸ ರಾವ್ ಏಲಂ ನಿಯಮಗಳನ್ನು ಸಭೆಗೆ ಮಂಡಿಸಿದರು. ಗಿರೀಶ್ ಕುಮಾರ್ ಏಲಂ ಕೂಗುವ ಪ್ರಕ್ರಿಯೆ ನಡೆಸಿದರು. ದೇವಳದ ಕಚೇರಿ ವ್ಯವಸ್ಥಾಪಕ ಹರೀಶ್ ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಇಎಮ್‌ಡಿ ಮೊತ್ತ ಪಾವತಿಸಿದವರನ್ನು ಗುರುತಿಸಿ ಏಲಂ ನಡೆಯುವ ಸಭಾಭವನ ಪ್ರವೇಶಕ್ಕೆ ಅವಕಾಶ ನೀಡಲಾಯಿತು.


ಸ್ಥಳ ಪಡೆದು ಕೊಂಡವರು ಪಾಲಿಸಬೇಕಾದ ಷರತ್ತುಗಳು:
ಶ್ರೀ ಮಹಾಲಿಂಗೇಶ್ವರ ದೇವಸ್ಥಾನವು ಕರ್ನಾಟಕ ಸರಕಾರ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಇಲಾಖೆಗೆ ಸೇರಿರುವುದರಿಂದ ಷರತ್ತುಗಳಿಗೆ ವಿರುದ್ಧವಾಗಿ ವರ್ತಿಸುವುದು ಹಾಗೂ ಉದ್ದೇಶಪೂರ್ವಕ ಗಲಾಟೆ, ಗೊಂದಲಕ್ಕೆ ಆಸ್ಪದ ನೀಡುವುದು ಕಂಡು ಬಂದಲ್ಲಿ ನಿರ್ಧಾಕ್ಷಿಣ್ಯವಾಗಿ ಸೂಕ್ತ ಕಾನೂನು ಕ್ರಮಗಳನ್ನು ತೆಗೆದುಕೊಳ್ಳಲು ಆರಕ್ಷಕ ಠಾಣೆಗೆ ವರದಿ ಮಾಡಲಾಗುವುದು. ಯಶಸ್ವಿ ಬಿಡ್ಡುದಾರರು ಬಿಡ್ಡು ಮೊತ್ತವನ್ನು ಏಲಂ ನಡೆದ ದಿನದಂದೇ ಪೂರ್ತಿಯಾಗಿ ಕಚೇರಿಯಲ್ಲಿ ಪಾವತಿಸಿ ರಶೀದಿ ಪಡೆಯಬೇಕು. ತಪ್ಪಿದಲ್ಲಿ ಮುಂಗಡ ಠೇವಣಿ ಮೊಬಲಗನ್ನು ಮುಟ್ಟುಗೋಲು ಹಾಕಿಕೊಂಡು ಮರು ಹರಾಜು ಮಾಡಲಾಗುವುದು. ಸಂತೆ ಸ್ಥಳದಲ್ಲಿ ಜೂಜು, ಜುಗಾರಿ, ಲಕ್ಕಿಡಿಪ್, ಮಾಂಸದ ಹೊಟೇಲ್ ನಡೆಸುವುದನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ. ಸ್ವಚ್ಚತೆಯನ್ನು ಕಾಪಾಡಬೇಕು. ಧ್ವನಿ ವರ್ಧಕ ಅಳವಡಿಸಲು ಸಂಬಂಧಿಸಿ ಇಲಾಖೆಯಿಂದ ಅನುಮತಿ ಪಡೆಯಬೇಕು. ಕರ್ಕಶವಾಗಿ ಧ್ವನಿ ಬಿತ್ತರಿಸುವ ಧ್ವನಿವರ್ಧಕಗಳನ್ನು ಕಡ್ಡಾಯವಾಗಿ ನಿಷೇಽಸಲಾಗುವುದು. ಜನರೇಟರ್ ಜೋಡಣೆಗೆ ಕಚೇರಿಯಿಂದ ಅಥವಾ ಅವಶ್ಯ ಬಿದ್ದಲ್ಲಿ ಮೆಸ್ಕಾಂನಿಂದ ಪರವಾನಿಗೆ ಪಡೆಯಬೇಕು. ಏಲಂನಲ್ಲಿ ಅಂಗಡಿ ವಹಿಸಿಕೊಂಡವರು ಕಚೇರಿಯಿಂದ ನೀಡುವ ಪರವಾನಿಗೆ ಪತ್ರ, ಭಾವಚಿತ್ರವನ್ನು ಅಂಗಡಿಯ ಎದುರು ಫಲಕದೊಂದಿಗೆ ಕಡ್ಡಾಯವಾಗಿ ತೂಗು ಹಾಕತಕ್ಕದ್ದು, ಏಲಂನಲ್ಲಿ ಪಡೆದುಕೊಂಡ ಸ್ಟಾಲ್ ಅನ್ನು ಯಾವುದೇ ಕಾರಣಕ್ಕೆ ಒಳಬಾಡಿಗೆಗೆ ನೀಡುವಂತಿಲ್ಲ. ನೀಡಿದ್ದು ಕಂಡು ಬಂದಲ್ಲಿ ಪರವಾನಿಗೆಯನ್ನು ಯಾವುದೇ ಸೂಚನೆ ನೀಡದೆ ರದ್ದುಪಡಿಸಲಾಗುವುದು. ಜಾತ್ರೋತ್ಸವ ಬೇಸಿಗೆ ಕಾಲವಾದ್ದರಿಂದ ಯಾವುದೇ ರೀತಿಯ ಸಾಂಕ್ರಾಮಿಕ ರೋಗ ಹರಡದಂತೆ, ನೀರು ಮತ್ತು ಆಹಾರದ ಸ್ವಚ್ಚತೆ ಕಾಪಾಡಲು ಮುಂಜಾಗೃತಾ ಕ್ರಮವಾಗಿ ಗದ್ದೆ ಬಯಲಿನಲ್ಲಿ ತೆರೆಯುವ ಹೋಟೇಲ್, ತಿಂಡಿ ತಿನಿಸುಗಳ ಅಂಗಡಿ ಮತ್ತು ಜ್ಯೂಸ್ ಅಂಗಡಿಗಳ ಮಾಲಿಕರು ಆಹಾರ ಸುರಕ್ಷತೆಯ ಪರವಾನಿಗೆಯನ್ನು ತಾಲೂಕು ಆರೋಗ್ಯ ಅಽಕಾರಿಯವರಿಂದ ಪಡೆಯಬೇಕು ಎಂಬ ಷರತ್ತು ವಿಧಿಸಲಾಗಿದೆ.

ಸುದೀರ್ಘವಾಗಿ ನಡೆದ ಏಲಂ ಪ್ರಕ್ರಿಯೆ
ಜಾತ್ರೆ ಗದ್ದೆಯ ತಾತ್ಕಾಲಿಕ ಅಂಗಡಿಗಳಿಗೆ ನಡೆದ ಏಲಂ ಪ್ರಕ್ರಿಯೆ ಬೆಳಿಗ್ಗೆ 10 ಗಂಟೆಗೆ ಆರಂಭಗೊಂಡಿತ್ತು. ಮಧ್ಯಾಹ್ನ ಊಟದ ವಿರಾಮದ ಬಳಿಕ ಮತ್ತೆ ಏಲಂ ಪ್ರಕ್ರಿಯೆ ನಡೆದಿದೆ. ರಾತ್ರಿ 8 ಗಂಟೆಯ ತನಕ ಸುದೀರ್ಘವಾಗಿ ನಡೆದ ಏಲಂ ಪ್ರಕ್ರಿಯೆ ಯಾವುದೇ ಗೊಂದಲವಿಲ್ಲದೆ ನಡೆದಿರುವುದು ದಾಖಲೆಯಾಗಿದೆ. ಬಿಡ್ಡುದಾರರಿಗೆ ಮಧ್ಯಾಹ್ನ ಊಟ, ಸಂಜೆ ಚಹಾ ತಿಂಡಿ ವ್ಯವಸ್ಥೆಯನ್ನು ದೇವಸ್ಥಾನದ ವತಿಯಿಂದ ಮಾಡಲಾಗಿತ್ತು. ಈ ಬಾರಿ ಹೆಚ್ಚಿನ ಅಂಗಡಿ, ಸ್ಥಳ ವಿಸ್ತರಣೆ ಮಾಡಿದ್ದರಿಂದ ಇನ್ನಷ್ಟು ಅಂಗಡಿ ಸ್ಥಳಗಳು ಖಾಲಿ ಇದೆ. ಏ.3ರಂದು ಅಮ್ಯೂಸ್‌ಮೆಂಟ್ ಪಾರ್ಕ್ ಮೊದಲಾದ ದೊಡ್ಡ ಮಟ್ಟದ ಕಾರ್ಯಕ್ರಮಗಳಿಗೆ ಜಾಗದ ಹಂಚಿಕೆ ಏಲಂ ನಡೆಯಲಿದೆ. ಬಿಡ್ಡುದಾರರು ರೂ. 50ಸಾವಿರ ಪಾವತಿಸಿ ಏಲಂನಲ್ಲಿ ಭಾಗವಹಿಸಬಹುದು. ಏಲಂ ರೂ. 35 ಲಕ್ಷದಿಂದ ಆರಂಭಿಸಲಾಗುತ್ತದೆ ಎಂದು ದೇವಸ್ಥಾನದಿಂದ ಮಾಹಿತಿ ನೀಡಲಾಗಿದೆ.


ತುಪ್ಪದ ದೀಪ ಬೆಳಗಿಸಿ ವ್ಯಾಪಾರ ಆರಂಭಿಸಿ
ಏಲಂನಲ್ಲಿ ತಾತ್ಕಾಲಿಕ ಅಂಗಡಿ ಪಡೆದುಕೊಂಡವರು ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಶ್ರೀ ದೇವರಿಗೆ ತುಪ್ಪದ ದೀಪ ಬೆಳಗಿಸಿ ವ್ಯಾಪಾರ ಆರಂಭಿಸಿ. ನಿಮ್ಮ ವ್ಯಾಪಾರ ದ್ವಿಗುಣಗೊಳ್ಳುತ್ತದೆ. ವ್ಯಾಪಾರಸ್ಥರೂ ದೇವರ ಭಕ್ತರೇ ಆಗಿದ್ದಾರೆ. ಏಲಂ ಪಡೆಯುವ ಮೂಲಕ ದೇವಳದ ಭಂಡಾರಕ್ಕೆ ಅವರ ಹಣ ಸಂದಾಯ ಆಗುತ್ತದೆ. ಅದು ಕೂಡಾ ದೇವರ ಸೇವೆಯೇ ಆಗಿದೆ.
-ಈಶ್ವರ ಭಟ್ ಪಂಜಿಗುಡ್ಡೆ ಅಧ್ಯಕ್ಷರು ವ್ಯವಸ್ಥಾಪನಾ ಸಮಿತಿ
ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಪುತ್ತೂರು

LEAVE A REPLY

Please enter your comment!
Please enter your name here