ಹಿರಿಯ ಪತ್ರಕರ್ತ ಹರೀಶ್ ಮಾಂಬಾಡಿ ಸೇರಿದಂತೆ 18 ಮಂದಿಗೆ ಕಾಸರಗೋಡು ಕನ್ನಡ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘದ ಕೆಯುಡಬ್ಲುಜೆ ದತ್ತಿನಿಧಿ ಪ್ರಶಸ್ತಿ ಘೋಷಣೆ

0

ವಿಟ್ಲ: ಹಿರಿಯ ಪತ್ರಕರ್ತರಾದ ಹರೀಶ್ ಮಾಂಬಾಡಿ, ಸತೀಶ್ ಇರಾ, ಬಿ.ಎಂ.ಹನೀಫ್, ವಾಸುದೇವ ಹೊಳ್ಳ ಸೇರಿದಂತೆ ದಕ್ಷಿಣ ಕನ್ನಡ, ಕಾಸರಗೋಡು, ಹಾಗೂ ರಾಜ್ಯದ ವಿವಿಧ ಭಾಗಗಳ 18 ಮಂದಿಗೆ ಕಾಸರಗೋಡು ಜಿಲ್ಲಾ ಕನ್ನಡ ಪತ್ರಕರ್ತರನ್ನು ಕ್ಷೇಮಾಭಿವೃದ್ಧಿ ಸಂಘ ವತಿಯಿಂದ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಬೆಂಗಳೂರು ಸಹಯೋಗದೊಂದಿಗೆ ನೀಡುವ ದತ್ತಿನಿಧಿ ಪ್ರಶಸ್ತಿಗೆ ಆಯ್ಕೆಮಾಡಲಾಗಿದೆ ಎಂದು ಕಾಸರಗೋಡು ಕನ್ನಡ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ರವಿ ನಾಯ್ಕಾಪು ಮತ್ತು ಕೆಯುಡಬ್ಲ್ಯುಜೆ ಕಾಸರಗೋಡು ಅಧ್ಯಕ್ಷ ಎ.ಆರ್. ಸುಬ್ಬಯ್ಯಕಟ್ಟೆ ಘೋಷಿಸಿದ್ದಾರೆ.

ದತ್ತಿನಿಧಿ ಪ್ರಶಸ್ತಿ ಪ್ರದಾನ ಹಾಗೂ ಕನ್ನಡ ಸಂಸ್ಕೃತಿ ಉತ್ಸವ ಮೇ 16ರಂದು ಬೆಳಗ್ಗೆ 9 ರಿಂದ ಕಾಸರಗೋಡು ಕುಡಾಲ್ ಮೇರ್ಕಳ ಸುಬ್ಬಯ್ಯ ಕಟ್ಟೆ ಅನುದಾನಿತ ಕಿ.ಪ್ರಾ. ಶಾಲಾ ವಠಾರದಲ್ಲಿ ನಡೆಯಲಿದೆ. ಕಾರ್ಯಕ್ರಮದಲ್ಲಿ ಕರ್ನಾಟಕ ವಿಧಾನಸಭಾ ಉಪಾಧ್ಯಕ್ಷ ರುದ್ರಪ್ಪ ಲಮಾಣಿ ಅವರು ಕರ್ನಾಟಕದ ಸಚಿವ ಬೋಸರಾಜು ಮತ್ತು ಮಂಜೇಶ್ವರ ಶಾಸಕ ವಿಕೆಎಂ ಅಶ್ರಫ್ ಉಪಸ್ಥಿತಿಯಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ.


ದತ್ತಿನಿಧಿ ಪ್ರಶಸ್ತಿ ಪುರಸ್ಕೃತರು:

ಹಿರಿಯ ಪತ್ರಕರ್ತರಾದ ಬಿ.ಎಂ.ಹನೀಫ್, ಕುರಿಯ ವಾಸುದೇವ ಎಂ.ಹೊಳ್ಳ, ಡಾ.ಯು.ಎಂ.ರವಿ, ವಿಜಯಲಕ್ಷ್ಮೀ ಶಿಬರೂರು, ಎಚ್.ಇ.ರವಿ ಸೋಮವಾರಪೇಟೆ, ವಿಶ್ವನಾಥ ಬೆಳಗಲ್ ಮಠ ಕೊಪ್ಪಳ, ಪ್ರಕಾಶ್ ಸುವರ್ಣ ಕಟಪಾಡಿ, ದೇವೇಂದ್ರಪ್ಪ ಆವಂಟಿ ಗುಲ್ಬರ್ಗ, ಸತೀಶ್ ಇರಾ, ಸುಭಾಷ್ ಸಿರಿಯ, ಹರೀಶ್ ಮಾಂಬಾಡಿ, ನವೀನ್ ಡಿಸೋಜ ಕೊಡಗು, ಸಂಶುದ್ದೀನ್ ಎಣ್ಮೂರು, ಎ.ಆರ್.ಚಿದಂಬರ ಕೊರಟಗೆರೆ, ತುಮಕೂರು, ಕೆ.ಆರ್.ಮಂಜುನಾಥ ಹಾಸನ, ತೆಕ್ಕೆಕೆರೆ ಶಂಕರನಾರಾಯಣ ಭಟ್ಟ, ಸುಬ್ಬಣ್ಣ ಶೆಟ್ಟಿ ಕುಚಿಕ್ಕಾಡ್ ರವರು ವಿವಿಧ ದತ್ತಿ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ಹರೀಶ ಮಾಂಬಾಡಿ:
ಕಳೆದ 27 ವರ್ಷಗಳಿಂದ ರಾಜ್ಯದ ಪ್ರಮುಖ ದೈನಿಕ ಹಾಗೂ ಡಿಜಿಟಲ್ ಮಾಧ್ಯಮಗಳಲ್ಲಿ ಹಲವು ಜವಾಬ್ದಾರಿಯುತ ಪ್ರಮುಖ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿದ ಅನುಭವವಿರುವ ಹರೀಶ ಮಾಂಬಾಡಿ ಅವರು ಪ್ರಸ್ತುತ ಬಂಟ್ವಾಳದಲ್ಲಿ ವಾಸವಾಗಿದ್ದು, ಡಿಜಿಟಲ್ ಮತ್ತು ಮುದ್ರಣ ಮಾಧ್ಯಮಗಳಲ್ಲಿ ಸಕ್ರಿಯರಾಗಿದ್ದಾರೆ.
ಕನ್ನಡದ ಒಟ್ಟು ಐದು ಪ್ರಮುಖ ದೈನಿಕ, ಒಂದು ವಾರಪತ್ರಿಕೆ, ಎರಡು ಡಿಜಿಟಲ್ ಪತ್ರಿಕೆ ಯಲ್ಲಿ ವರದಿಗಾರ, ಉಪಸಂಪಾದಕ, ಹಿರಿಯ ಉಪಸಂಪಾದಕ, ಮುಖ್ಯ ಉಪಸಂಪಾದಕ ಹೀಗೆ ವಿವಿಧ ಸ್ತರದ ಹುದ್ದೆಗಳಲ್ಲಿ ಸುದೀರ್ಘ ವರ್ಷಗಳ ಕಾಲ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಬಂಟ್ವಾಳನ್ಯೂಸ್ ಎಂಬ ಡಿಜಿಟಲ್ ಪತ್ರಿಕೆಯನ್ನು ಹತ್ತು ವರ್ಷಗಳ ಹಿಂದೆ ಆರಂಭಿಸಿ ಯಶಸ್ವಿಯಾಗಿ ಮುನ್ನಡೆಸಿಕೊಂಡು ಬಂದಿರುವ ಅವರು, ಪಾಸಿಟಿವ್ ಸುದ್ದಿಗಳಿಗೆ ಆದ್ಯತೆ ನೀಡುವ ಮೂಲಕ ಬ್ರೇಕಿಂಗ್ ಸುದ್ದಿಗಳ ಬೆನ್ನು ಬೀಳದೆ, ರಚನಾತ್ಮಕ ವಿಚಾರಗಳಿಗೆ ಆದ್ಯತೆ ನೀಡಿದ್ದಾರೆ.


ಪತ್ರಿಕಾರಂಗದ ಪಯಣ:
1999ರಲ್ಲಿ ಹೊಸ ದಿಗಂತ ದಿನಪತ್ರಿಕೆಗೆ ಬಂಟ್ವಾಳ ಭಾಗದ ವರದಿಗಾರನಾಗಿ ಮಾಧ್ಯಮ ರಂಗದಲ್ಲಿ ತೊಡಗಿಸಿಕೊಂಡ ಅವರು, ವಿಜಯ ಕರ್ನಾಟಕ ಮತ್ತು ಕನ್ನಡಪ್ರಭ ಪತ್ರಿಕೆಗೂ ಕೆಲಕಾಲ ಆ ಸಂದರ್ಭ ಬಂಟ್ವಾಳಕ್ಕೆ ವರದಿಗಾರರಾಗಿದ್ದರು. ಬಳಿಕ 2001ರಲ್ಲಿ ಮಣಿಪಾಲದಲ್ಲಿ ಉದಯವಾಣಿ ಬಳಗಕ್ಕೆ ಉಪಸಂಪಾದಕ, ವರದಿಗಾರನಾಗಿ ನಿಯುಕ್ತಿಗೊಂಡರು. ಆ ಸಂದರ್ಭ, ಉದಯವಾಣಿ ಬಳಗದ ತರಂಗ ವಾರಪತ್ರಿಕೆ, ಉದಯವಾಣಿಯ ಉಡುಪಿ ವರದಿಗಾರರಾಗಿಯೂ ಕರ್ತವ್ಯ ಸಲ್ಲಿಸಿದರು. 2005 ಡಿಸೆಂಬರ್ ತಿಂಗಳಲ್ಲಿ ಕನ್ನಡಪ್ರಭ ದಿನಪತ್ರಿಕೆಯ ಮಂಗಳೂರು ಆವೃತ್ತಿಯಲ್ಲಿ ಉಪಸಂಪಾದಕನಾಗಿ ನಿಯುಕ್ತಿಗೊಂಡು, ಹಿರಿಯ ಉಪಸಂಪಾದಕನಾಗಿ ಭಡ್ತಿ ಹೊಂದಿದರು. 2012ರಲ್ಲಿ ವಿಜಯವಾಣಿ ಪತ್ರಿಕೆ ಆರಂಭಗೊಂಡಾಗ ಮಂಗಳೂರು ಆವೃತ್ತಿಯಲ್ಲಿ ಹಿರಿಯ ಉಪಸಂಪಾದಕನಾಗಿ ನಿಯುಕ್ತಿಗೊಂಡು, ಮುಖ್ಯ ಉಪಸಂಪಾದಕನಾಗಿ ಭಡ್ತಿ ಹೊಂದಿದರು. 2016ರಲ್ಲಿ ಸ್ವಂತ ವೆಬ್ ಪತ್ರಿಕೆ ಬಂಟ್ವಾಳನ್ಯೂಸ್ ಆರಂಭಿಸಿದರು. ಇದೇ ಸಂದರ್ಭ ಬಂಟ್ವಾಳ ಭಾಗಕ್ಕೆ ವಿಜಯ ಕರ್ನಾಟಕ ದಿನಪತ್ರಿಕೆಯ ವರದಿಗಾರರಾಗಿ ನಿಯುಕ್ತಿಹೊಂದಿದ್ದು, ಇದರೊಂದಿಗೆ ಈಟೀವಿ ಭಾರತದ ಬಂಟ್ವಾಳ ಭಾಗದ ಸುದ್ದಿ ಸಂಗ್ರಾಹಕರಾಗಿ ಪ್ರಸ್ತುತ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ೨೦೨೩-೨೪ರಲ್ಲಿ ಹಿಂದುಸ್ತಾನ್ ಟೈಮ್ಸ್ ತನ್ನ ಕನ್ನಡ ಡಿಜಿಟಲ್ ಆವೃತ್ತಿಯನ್ನು ಆರಂಭಿಸಿದ ಸಂದರ್ಭ ಸುಮಾರು ಎರಡೂವರೆ ವರ್ಷ ದಕ್ಷಿಣ ಕನ್ನಡ, ಉಡುಪಿ ಭಾಗದ ವರದಿಗಾರರಾಗಿ ಕರ್ತವ್ಯ ಸಲ್ಲಿಸಿದ್ದಾರೆ. ನಮ್ಮೂರು ಎಂಬ ಡಿಜಿಟಲ್ ಪತ್ರಿಕೆಯನ್ನೂ ಹೊರತಂದಿದ್ದಾರೆ.


ಶಿಕ್ಷಣ, ಮಾನವಾಸಕ್ತಿಯ ವಿಷಯ, ಸಾಮಾಜಿಕ ಸಮಸ್ಯೆಗಳು, ಪೌರಸಮಸ್ಯೆ, ರಾಜಕೀಯ, ಕೃಷಿ, ಸಿನಿಮಾ, ವ್ಯಕ್ತಿಪರಿಚಯಗಳ ಕುರಿತು ತಾವು ಕರ್ತವ್ಯ ನಿರ್ವಹಿಸಿದ ಪತ್ರಿಕೆಗಳಲ್ಲಿ ನೂರಾರು ವಿಶೇಷ ವರದಿ, ಲೇಖನಗಳು ಪ್ರಕಟವಾಗಿದೆ. ಹಲವು ವರದಿಗಳು ಪರಿಣಾಮ ಬೀರಿವೆ. ತಳಸಮುದಾಯದ ಸಮಸ್ಯೆಗಳು, ಅಡಕೆ ಬೆಳೆಗಾರರ ಕುರಿತು ಬರೆದ ಸರಣಿ ಲೇಖನಗಳನ್ನು ಅವರು ಬರೆದಿದ್ದಾರೆ.


2004ರಲ್ಲಿ ನವದೆಹಲಿಯಲ್ಲಿ ಕಾಮನ್ ವೆಲ್ತ್ ದೇಶಗಳಿಗಾಗಿ ಆಯೋಜಿಸಲಾದ ಅಭಿವೃದ್ಧಿಪರ ವರದಿಗಾರಿಕೆ ಅಂತಾರಾಷ್ಟ್ರೀಯ ವಿಚಾರಸಂಕಿರಣದಲ್ಲಿ ಪಾಲ್ಗೊಂಡು ಪ್ರಬಂಧ ಮಂಡಿಸುವ ಭಾರತದ ಕನ್ನಡ ಪತ್ರಿಕೆಯ ಪ್ರತಿನಿಧಿಯಾಗಿ ಅವಕಾಶ ಪಡೆದಿದ್ದು, ಈ ಸಂದರ್ಭ ಅಭಿವೃದ್ಧಿಪರ ವರದಿಗಾರಿಕೆಗೆ ಇರುವ ಸವಾಲುಗಳು, ಸಾಧ್ಯತೆಗಳ ಕುರಿತು ವಿಚಾರ ಮಂಡಿಸಿದ್ದಾರೆ.

LEAVE A REPLY

Please enter your comment!
Please enter your name here