






ಪುತ್ತೂರು: ಸುಳ್ಳು ಸಾಕ್ಷಿ ಹೇಳುವಂತೆ ಕಲಾವಿದ ಸುಂದರ್ ರೈ ಮಂದಾರ ಅವರಿಗೆ ಬೆದರಿಕೆ ಒಡ್ಡಿದ ಆರೋಪದಡಿ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಕೇಸ್ಗೆ ಸಂಬಂಧಿಸಿ ಮಹೇಶ್ ಶೆಟ್ಟಿ ತಿಮರೋಡಿ ವಿರುದ್ಧ ಯಾವುದೇ ಬಲವಂತದ ಕ್ರಮ ಕೈಗೊಳ್ಳದಂತೆ ಹೈಕೋರ್ಟ್ ಪೊಲೀಸ್ ಇಲಾಖೆಗೆ ಸೂಚನೆ ನೀಡಿದೆ.


ಘಟನೆಯ ವಿವರ:
ಒಳಮೊಗ್ರು ಗ್ರಾಮದ ಮಂದಾರ ಮನೆಯ ನಿವಾಸಿ ಕಲಾವಿದ ಸುಂದರ ರೈ ಮಂದಾರ(55) ಅವರು ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಗೆ ಮೇ 7ರಂದು ಮಹೇಶ್ ಶೆಟ್ಟಿ ತಿಮರೋಡಿ ಮತ್ತಿತರರ ವಿರುದ್ದ ದೂರು ನೀಡಿದ್ದರು.
‘ನನ್ನ 9980202308 ಮೊಬೈಲ್ ಫೋನ್ ನಂಬ್ರಕ್ಕೆ 9082098933ನೇ ನಂಬ್ರದಿಂದ ಸತೀಶ್ ಕುಮಾರ್ ರೈ ಪಡುಮಲೆ ಎಂಬ ಹೆಸರಿನ ವ್ಯಕ್ತಿ 21-04-2026ರಂದು ಕರೆ ಮಾಡಿ 15.04.2026ರಂದು ಮಹೇಶ್ ತಿಮರೋಡಿರವರ ವಿರುದ್ದ ನಾನು ಕೇಸು ದಾಖಲಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸುತ್ತು ಬಳಸಿ ಮಾತನಾಡಿದ್ದಾರೆ. ತಿಮರೋಡಿ ಅವರನ್ನು ಸಮರ್ಥಿಸಿ ನನಗೆ ಅವಮಾನವಾಗುವಂತೆ ಮಾತನಾಡಿದ್ದಾರೆ. ಕೇಸು ನೀಡಿದ್ದಕ್ಕೆ ಹೆದರಿಸಿ ಬೆದರಿಸಿದ್ದಾರೆ. ಮುಂಬಯಿಯಲ್ಲಿ ಕಾರ್ಯಕ್ರಮ ಮಾಡಲು ಬಿಡುವುದಿಲ್ಲ ಎಂದು ಬೆದರಿಸಿದ್ದಾರೆ. ಸಾಮಾಜಿಕ ಜಾಲತಾಣವಾದ ಫೇಸ್ಬುಕ್ನಲ್ಲಿ ನನ್ನ ಬಗ್ಗೆ 29-04-2026ರಂದು ಕೆಟ್ಟದಾಗಿ ಬರೆದು ಪ್ರಸಾರ ಮಾಡಿದ್ದಾರೆ. ಇದೇ ರೀತಿ ಕುಡ್ಲ ರಾಂಪೇಜ್ ನವರು ಪ್ರಸನ್ನ ರವಿ ಮತ್ತು ಇತರರು ಈ ರೀತಿಯ ಪ್ರಯತ್ನ ಮಾಡಿದ್ದಾರೆ. ಅದೇ ರೀತಿ ತಿಮರೋಡಿಯ ಅನುಯಾಯಿಗಳು ನನ್ನ ಮತ್ತು ಪತ್ನಿಯ ಬಗ್ಗೆ ಅತ್ಯಂತ ಕೆಟ್ಟದಾಗಿ, ಅಶ್ಲೀಲವಾಗಿ ಯಕ್ಷಗಾನದ ಹಾಡು ರಚಿಸಿ ಪ್ರಸಾರ ಮಾಡಿದ್ದಾರೆ. ಈ ಎಲ್ಲಾ ವ್ಯಕ್ತಿಗಳು ತಾವು ಮಹೇಶ್ ಶೆಟ್ಟಿ ತಿಮರೋಡಿ ಅವರ ಬೆಂಬಲಿಗರು ಎಂದು ಹೇಳಿಕೊಂಡಿದ್ದಾರೆ. ತಿಮರೋಡಿಯ ವಿರುದ್ಧ ನಾನು ದೂರು ದಾಖಲಿಸಿದ ಏಕ ಮಾತ್ರ ಉದ್ದೇಶಕ್ಕೆ ನನ್ನ ಮತ್ತು ಮನೆಯವರ ಬಗ್ಗೆ ಕೀಳು ಪದ ಬಳಕೆ ಮಾಡಿ ಮಾನಸಿಕ ಒತ್ತಡಕ್ಕೆ ಒಳಪಡಿಸಿ ಅವಹೇಳನ ಮಾಡಿ ಬೆದರಿಕೆ ಒಡ್ಡಿದ್ದಾರೆ. ನನಗೆ ಸಂಬಂಧಪಟ್ಟ ವ್ಯಕ್ತಿಗಳನ್ನು ಕೂಡಾ ತಮಾಷೆ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ನನ್ನನ್ನು ಗುರಿಯಾಗಿಸಿ ಸುಳ್ಳು, ತಿರುಚಿದ ಕೆಟ್ಟ ಕೆಟ್ಟ ಕೀಳು ಅಭಿರುಚಿಯ ಸಂದೇಶಗಳನ್ನು ರವಾನಿಸಿದ್ದಾರೆ. ಮಾತ್ರವಲ್ಲದೆ ನನ್ನ ದೈನಂದಿನ ಉತ್ಪತ್ತಿಗೆ ಮತ್ತು ಜೀವನೋಪಾಯಕ್ಕೆ ಕುಂದು ಬರುವಂತೆ ಮಾಡಿದ್ದಾರೆ. ಈ ಮೂಲಕ ನಾವು ಪೊಲೀಸ್ ಹಾಗೂ ನ್ಯಾಯಾಲಯದ ಮುಂದೆ ನೀಡಿರುವ ಸತ್ಯ ಹೇಳಿಕೆ ಮತ್ತು ದೂರನ್ನು ಹಿಂತೆಗೆದುಕೊಳ್ಳುವಂತೆ ಹಾಗೂ ಮಹೇಶ್ ಶೆಟ್ಟಿ ತಿಮರೋಡಿ ಅವರ ಪರವಾಗಿ ಸುಳ್ಳು ಸಾಕ್ಷಿ ನೀಡುವಂತೆ ಒತ್ತಾಯಪಡಿಸಿದ್ದಾರೆ ಎಂದು ಸುಂದರ್ ರೈ ಮಂದಾರ ನೀಡಿದ್ದ ದೂರು ಸ್ವೀಕರಿಸಿದ ಪೊಲೀಸರು ಮೇ 7ರಂದು ಅ.ಕ್ರ. 73/2026ರಂತೆ ಬಿಎನ್ಎಸ್ 351 (2) ಮತ್ತು 232ರಡಿ ಮಹೇಶ್ ಶೆಟ್ಟಿ ತಿಮರೋಡಿ, ಸತೀಶ್ ಕುಮಾರ್ ರೈ ಪಡುಮಲೆ, ಕುಡ್ಲ ರಾಂಪೇಜ್ ಬುಝ್ ಯೂ ಟ್ಯೂಬ್ ಚಾನೆಲ್, ಪ್ರಸನ್ನರವಿ ಮತ್ತಿತರರ ವಿರುದ್ಧ ಕೇಸು ದಾಖಲಿಸಿ ಪುತ್ತೂರು ನ್ಯಾಯಾಲಯಕ್ಕೆ ವರದಿ ಸಲ್ಲಿಸಿದ್ದರು. ಬಳಿಕ ಬೆಳ್ತಂಗಡಿಯ ಪ್ರಜಾಪ್ರಭುತ್ವ ವೇದಿಕೆ ಮತ್ತು ರಾಷ್ಟ್ರೀಯ ಹಿಂದೂ ಜಾಗರಣ ವೇದಿಕೆಯ ಮುಖಂಡರಾಗಿರುವ ಮಹೇಶ್ ಶೆಟ್ಟಿ ತಿಮರೋಡಿ ಅವರು ಹೈಕೋರ್ಟ್ಗೆ ಅರ್ಜಿ ಸಲ್ಲಿಸಿ ತನ್ನ ವಿರುದ್ದ ದಾಖಲಾಗಿರುವ ಎಫ್ಐಆರ್ ಮತ್ತು ವಿಚಾರಣೆ ರದ್ದುಪಡಿಸಬೇಕು ಎಂದು ಕೋರಿದ್ದರು. ಈ ಅರ್ಜಿಯ ವಿಚಾರಣೆ ನ್ಯಾಯಮೂರ್ತಿ ಎಂ.ಜಿ.ಎಸ್. ಕಮಲ್ ಅವರಿದ್ದ ರಜಾ ಕಾಲದ ನ್ಯಾಯ ಪೀಠದಲ್ಲಿ ನಡೆದಿತ್ತು. ತಿಮರೋಡಿ ಪರ ವಕೀಲ ಎಂ.ಆರ್. ಬಾಲಕೃಷ್ಣ ಸುಳ್ಯ ಮತ್ತು ಮೋಹಿತ್ ಕುಮಾರ್ ಪುತ್ತೂರು ಹಾಜರಾಗಿ ಈ ಪ್ರಕರಣಕ್ಕೂ ಮಹೇಶ್ ಶೆಟ್ಟಿ ಅವರಿಗೂ ಯಾವುದೇ ಸಂಬಂಧವಿಲ್ಲ. ಕೇವಲ ಕಿರುಕುಳ ನೀಡಲು ಈ ದೂರು ದಾಖಲಿಸಲಾಗಿದೆ ಎಂದು ವಾದಿಸಿದ್ದರು. ದೂರುದಾರ ಪರ ವಕೀಲ ರಾಜ್ಶೇಖರ್ ಹಿಲಿಯಾರ್ ವಾದ ಮಂಡಿಸಿ ದೂರುದಾರರಿಗೆ ಸತೀಶ್ ಕುಮಾರ್ ರೈ ಕರೆ ಮಾಡಿ ಬೆದರಿಕೆ ಹಾಕಿರುವ ಸಂಬಂಧ ಅವರ ಫೋನ್ ಸಂಭಾಷಣೆಯ ದಾಖಲೆ ಇದೆ. ಇದನ್ನು ನ್ಯಾಯಾಲಯಕ್ಕೆ ಸಲ್ಲಿಸಲು ಕಾಲಾವಕಾಶ ನೀಡಬೇಕು ಎಂದು ಮನವಿ ಮಾಡಿದರು. ವಾದ ಪ್ರತಿವಾದ ಆಲಿಸಿದ ನ್ಯಾಯಮೂರ್ತಿಗಳು ಅರ್ಜಿಯ ಮುಂದಿನ ವಿಚಾರಣೆವರೆಗೆ ಮಹೇಶ್ ಶೆಟ್ಟಿ ತಿಮರೋಡಿ ವಿರುದ್ದ ಬಲವಂತದ ಕ್ರಮ ಜರುಗಿಸದಂತೆ ಪುತ್ತೂರು ಗ್ರಾಮಾಂತರ ಠಾಣಾ ಪೊಲೀಸರಿಗೆ ಸೂಚಿಸಿ ವಿಚಾರಣೆಯನ್ನು ಜೂನ್ 8ಕ್ಕೆ ಮುಂದೂಡಿದ್ದಾರೆ.













