







ಪುತ್ತೂರು: ವಿದ್ಯಾರಶ್ಮಿ ಪ್ರಥಮ ದರ್ಜೆ ಕಾಲೇಜಿನ ಶೈಕ್ಷಣಿಕ ವರ್ಷದ ವಾರ್ಷಿಕೋತ್ಸವವು ಮೇ 25, 2026ರಂದು ಕಾಲೇಜು ಸಭಾಂಗಣದಲ್ಲಿ ನಡೆಯಿತು.


ಕಾರ್ಯಕ್ರಮವನ್ನು ಉದ್ಘಾಟಿಸಿದ ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕ ಸವಣೂರು ಕೆ. ಸೀತಾರಾಮ ರೈ ಮಾತನಾಡಿ, “ವಾರ್ಷಿಕೋತ್ಸವ ಎಂದರೆ ವಿದ್ಯಾರ್ಥಿಗಳ ಸಾಧನೆಯನ್ನು ಗುರುತಿಸುವ ಸಮಯ” ಎಂದರು. ಪ್ರಾಂಶುಪಾಲೆ ಡಾ. ರಾಜಲಕ್ಷ್ಮೀ ಎಸ್. ರೈ ಕಾಲೇಜಿನ ವಾರ್ಷಿಕ ವರದಿ ವಾಚಿಸಿದರು.ಸನ್ಮಾನ: ಸಂಸ್ಥೆಯಲ್ಲಿ 20 ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತರಾದ ಕನ್ನಡ ಉಪನ್ಯಾಸಕ ಶೇಷಗಿರಿ ಎಂ ಅವರನ್ನು ಸನ್ಮಾನಿಸಲಾಯಿತು. ಸನ್ಮಾನ ಪತ್ರವನ್ನು ಉಪನ್ಯಾಸಕ ಗಿರೀಶ್ ಭಟ್ ವಾಚಿಸಿದರು.




ಸನ್ಮಾನಿತರು ಸಂಸ್ಥೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.ಮುಖ್ಯ ಅತಿಥಿ ನಿತ್ಯೋಪಾಸನ ಕಲಾ ಅಕಾಡೆಮಿ ನೃತ್ಯ ತರಬೇತುದಾರರಾದ ವಿದುಷಿ ಶಾಲಿನಿ ಆತ್ಮಭೂಷಣ್ ಅವರನ್ನು ದ್ವಿತೀಯ ಬಿಸಿಎ ವಿದ್ಯಾರ್ಥಿ ಮೊಹಮ್ಮದ್ ಸುಫೈದ್ ಎಸ್.ಕೆ ಪರಿಚಯಿಸಿದರು. “ವಾರ್ಷಿಕೋತ್ಸವ ಒಂದು ದಿನದ ಹಬ್ಬವಲ್ಲ, ಅದು ಒಂದು ವರ್ಷದ ಶ್ರಮದಾನ” ಎಂದರು ಶಾಲಿನಿ.ಟ್ರಸ್ಟಿ ಮಹೇಶ್ ರೈ ಎಸ್, “ಟೀಮ್ ವರ್ಕ್‌ನಿಂದ ಯಶಸ್ಸು ಸಾಧ್ಯ. ಭಾರತ ಆರ್ಥಿಕ ಸ್ಥಿತಿಯಲ್ಲಿ ಮೊದಲ ಸ್ಥಾನದತ್ತ ದಾಪುಗಾಲು ಹಾಕುತ್ತಿದೆ” ಎಂದರು. ಡಾ. ರಾಜೇಶ್ ರೈ ಎಸ್ ಮಾತನಾಡಿ, “ಕಲಿಕೆ ನಿರಂತರ. ಅವಕಾಶಗಳು ಬರುತ್ತವೆ, ಕೌಶಲ್ಯ ಹೆಚ್ಚಿಸುವ ಕಡೆ ಗಮನವಿರಲಿ” ಎಂದು ಕರೆ ನೀಡಿದರು. ಪಲ್ಲವಿ ಮಹೇಶ್ ರೈ, “ಗುರಿ ಸಾಧಿಸುವ ಛಲ ಇರಬೇಕು” ಎಂದರು.
ಅಧ್ಯಕ್ಷತೆ ವಹಿಸಿದ್ದ ಆಡಳಿತಾಧಿಕಾರಿ ಅಡ್ವಕೇಟ್ ಅಶ್ವಿನ್ ಎಲ್. ಶೆಟ್ಟಿ, “ಮಾನಸಿಕವಾಗಿ ಗಟ್ಟಿಯಾಗಲು ಶಿಕ್ಷಣ ಸಂಸ್ಥೆಗಳು ಇವೆ. ಮನಸ್ಸು ಮಾಡಿದರೆ ಏನನ್ನೂ ಸಾಧಿಸಬಹುದು. ಗುರಿ ಮುಟ್ಟಲು ಕಷ್ಟದ ಅಭ್ಯಾಸ ಅವಶ್ಯಕ” ಎಂದರು.ವೇದಿಕೆಯಲ್ಲಿ ಟ್ರಸ್ಟಿಗಳಾದ ಸುಂದರ ರೈ, ರಶ್ಮಿ ಅಶ್ವಿನ್ ಎಲ್. ಶೆಟ್ಟಿ, ವಿದ್ಯಾರಶ್ಮಿ ವಿದ್ಯಾಲಯದ ಪ್ರಾಂಶುಪಾಲೆ ಶಶಿಕಲಾ ಎಸ್. ಆಳ್ವ ಉಪಸ್ಥಿತರಿದ್ದರು.ಕ್ರೀಡೆ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಬಹುಮಾನ ಪಡೆದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ತೃತೀಯ ಬಿಸಿಎ ವಿದ್ಯಾರ್ಥಿನಿ ಕುಷಿತಾ ಸ್ವಾಗತಿಸಿ, ದ್ವಿತೀಯ ಬಿಸಿಎ ವಿದ್ಯಾರ್ಥಿನಿ ಪವಿತ್ರಾ ವಂದಿಸಿದರು. ಕಾರ್ಯಕ್ರಮವನ್ನು ತೃತೀಯ ಬಿ.ಕಾಂ ವಿದ್ಯಾರ್ಥಿನಿ ಸಝಾನ ನಿರೂಪಿಸಿದರು. ವಿದ್ಯಾರ್ಥಿಗಳ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಆರಂಭವಾಯಿತು.










