






ನೆಲ್ಯಾಡಿ: ಲಯನ್ಸ್ ಕ್ಲಬ್ ಆಲಂಕಾರು ದುರ್ಗಾಂಬಾ, ಸೀನಿಯರ್ ಚೇಂಬರ್ ಇಂಟರ್‌ನ್ಯಾಷನಲ್ ನೆಲ್ಯಾಡಿ ಲೀಜಿಯನ್, ಪ್ರಾಥಮಿಕ ಆರೋಗ್ಯ ಕೇಂದ್ರ ನೆಲ್ಯಾಡಿ ಹಾಗೂ ಪ್ರಗತಿಬಂಧು ಸ್ವಸಹಾಯ ಸಂಘಗಳ ಒಕ್ಕೂಟ ಕಟ್ಟೆಮಜಲು ಕೌಕ್ರಾಡಿ ಇವರ ಆಶ್ರಯದಲ್ಲಿ ಜಿಲ್ಲಾ ಅಂಧತ್ವ ನಿವಾರಣ ಸಂಸ್ಥೆ ಮಂಗಳೂರು, ಸಂಚಾರಿ ನೇತ್ರ ಚಿಕಿತ್ಸಾ ಘಟಕ ಮಂಗಳೂರು ಮತ್ತು ಜಿಲ್ಲಾ ವೆನ್ಲಾಕ್ ಆಸ್ಪತ್ರೆಯ ಸಹಯೋಗದಲ್ಲಿ ತಜ್ಞ ವೈದ್ಯರಿಂದ ಉಚಿತ ನೇತ್ರ ತಪಾಸಣಾ ಶಿಬಿರ, ಶಸ್ತ್ರ ಚಿಕಿತ್ಸಾ ಶಿಬಿರ ಮತ್ತು ಉಚಿತ ಕನ್ನಡಕ ವಿತರಣೆ ಕಾರ್ಯಕ್ರಮ ನೆಲ್ಯಾಡಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನಡೆಯಿತು.






ನೆಲ್ಯಾಡಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಶಿಶಿರ ಅವರು ಉದ್ಘಾಟಿಸಿ ಮಾತನಾಡಿ, ಗ್ರಾಮೀಣ ಭಾಗದಲ್ಲಿ ಕಣ್ಣಿನ ಪೊರೆ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಇಂತಹ ಶಿಬಿರ ವರದಾನವಾಗಲಿದೆ. ನಮ್ಮ ಮನೆ ಬಾಗಿಲಿಗೆ ಬಂದು ಸೇವೆಯನ್ನು ನೀಡತಕ್ಕಂತಹ ಶಿಬಿರಗಳ ಪ್ರಯೋಜನವನ್ನು ಸದುಪಯೋಗ ಪಡೆದುಕೊಳ್ಳುವಂತೆ ಹೇಳಿದರು. ಮುಖ್ಯ ಅತಿಥಿಯಾಗಿದ್ದ ಬೆಳ್ತಂಗಡಿ ತಾಲೂಕಿನ ಕರಾಯ ಸರಕಾರಿ ಹಿ.ಪ್ರಾ.ಶಾಲೆಯ ಮುಖ್ಯಗುರು ಮಹಾಲಿಂಗ ಪಡುಬೆಟ್ಟು ಮಾತನಾಡಿ, ಸೇವಾ ಕಾರ್ಯಗಳನ್ನು ನಮ್ಮ ಕರ್ತವ್ಯ ಎನ್ನುವ ದೃಷ್ಟಿಯಿಂದ ಮಾಡಿದಾಗ ಸೇವೆ ಅರ್ಥಪೂರ್ಣವಾಗುತ್ತದೆ. ನಾವು ಸಮಾಜದಿಂದ ಬಹಳಷ್ಟು ಪಡೆದುಕೊಂಡಿದ್ದೇವೆ. ಸಮಾಜಕ್ಕೆ ನಾವು ಮಾಡುವ ಸೇವೆ ನಮ್ಮ ಕರ್ತವ್ಯವಾಗಿದೆ. ನಾವು ಮಾಡುವ ವೃತ್ತಿ ಮತ್ತು ಪ್ರವೃತ್ತಿಗೂ ಇದು ಅನ್ವಯಿಸುತ್ತದೆ. ೬೧ನೇ ನೇತ್ರ ಚಿಕಿತ್ಸಾ ಶಿಬಿರವನ್ನು ಸಂಘಟಿಸಿದ ಗಂಗಾಧರ ಶೆಟ್ಟಿ ಹೊಸಮನೆರವರ ಸೇವೆ ಶ್ಲಾಘನೀಯ ಎಂದು ಹೇಳಿದರು.
ಅತಿಥಿಗಳಾಗಿದ್ದ ನೆಲ್ಯಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ದಯಾಕರ ರೈ ಮುಂಡಾಳಗುತ್ತು, ಲಯನ್ಸ್ ಕ್ಲಬ್ ಆಲಂಕಾರು ದುರ್ಗಾಂಬಾ ಇದರ ನಿತ್ಯಾನಂದ ಶೆಟ್ಟಿ ಮನವಳಿಕೆಗುತ್ತು, ಕೌಕ್ರಾಡಿ ಗ್ರಾ.ಪಂ.ಮಾಜಿ ಸದಸ್ಯೆ ಸವಿತಾ ಸರ್ವೋತ್ತಮ ಗೌಡ, ಕಟ್ಟೆಮಜಲು ಪ್ರಗತಿಬಂಧು ಸ್ವಸಹಾಯ ಸಂಘಗಳ ಒಕ್ಕೂಟದ ಅಧ್ಯಕ್ಷ ಮಾರ್ಷಲ್ ಡಿ’ಸೋಜ ಅರರು ಸಂದರ್ಭೋಚಿತವಾಗಿ ಮಾತನಾಡಿ ಶುಭಹಾರೈಸಿದರು. ಸೀನಿಯರ್ ಚೇಂಬರ್ ಇಂಟರ್‌ನ್ಯಾಷನಲ್ ನೆಲ್ಯಾಡಿ ಲೀಜನ್ ಅಧ್ಯಕ್ಷ ಉಲಹನನ್ ಅಧ್ಯಕ್ಷತೆ ವಹಿಸಿದ್ದರು.
ಸನ್ಮಾನ
ನೆಲ್ಯಾಡಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಶಿಶಿರ ಅವರನ್ನು ಶಾಲು ಹೊದಿಸಿ, ಸ್ಮರಣಿಕೆ, ಹಣ್ಣು ಹಂಪಲು ನೀಡಿ ಗೌರವಿಸಲಾಯಿತು. ಶಿಬಿರದಲ್ಲಿ 100ಕ್ಕೂ ಮಿಕ್ಕಿ ಸಾರ್ವಜನಿಕರು ನೇತ್ರ ತಪಾಸಣೆ ಮಾಡಿಸಿಕೊಂಡರು. ಕಣ್ಣಿನ ಪೊರೆ ಸಮಸ್ಯೆಯಿಂದ ಬಳಲುತ್ತಿರುವ 20 ಮಂದಿಯನ್ನು ಉಚಿತ ಶಸ್ತ್ರಚಿಕಿತ್ಸೆಗಾಗಿ ಜಿಲ್ಲಾ ವೆನ್ಲಕ್ ಆಸ್ಪತ್ರೆಗೆ ಶಿಫಾರಸು ಮಾಡಲಾಯಿತು. 80 ಮಂದಿಗೆ ಉಚಿತ ಕನ್ನಡಕ ನೀಡಲಾಯಿತು.
61ನೇ ನೇತ್ರ ಚಿಕಿತ್ಸಾ ಶಿಬಿರದ ಸಂಘಟಕ ದ.ಕ.ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಮಾಜ ಸೇವಕ ಗಂಗಾಧರ ಶೆಟ್ಟಿ ಹೊಸಮನೆ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ನಿತ್ಯಾನಂದ ಶೆಟ್ಟಿ ಮನವಳಿಕೆಗುತ್ತು ವಂದಿಸಿದರು. ನೆಲ್ಯಾಡಿ ಪ್ರಾಥಮಿಕ ಆರೋಗ್ಯ ಕೇಂದ್ರದ ಶುಶ್ರೂಷಕ ಅಧಿಕಾರಿ ಲೀನಾ ಪ್ರಾರ್ಥಿಸಿದರು. ಆರೋಗ್ಯ ಕೇಂದ್ರದ ಸಿಬ್ಬಂದಿಗಳು, ಆಶಾ ಕಾರ್ಯಕರ್ತೆಯರು ಶಿಬಿರ ನಿರ್ವಹಿಸಿದರು. ಜಿಲ್ಲಾ ವೆನ್ಲಾಕ್ ಆಸ್ಪತ್ರೆಯ ಸಂಚಾರಿ ನೇತ್ರ ಚಿಕಿತ್ಸಾ ಘಟಕದ ನೇತ್ರಾಧಿಕಾರಿ ಸುಮನ ಅವರು ಶಿಬಿರದ ಬಗ್ಗೆ ಉಚಿತ ಪೊರೆಶಸ್ತ್ರ ಚಿಕಿತ್ಸೆಯ ಬಗ್ಗೆ ಮಾಹಿತಿ ನೀಡಿದರು. ವೆನ್ಲಾಕ್ ಆಸ್ಪತ್ರೆಯ ನೇತ್ರತಜ್ಞ ಡಾ.ನಿತ್ಯ ಶಿಬಿರಾರ್ಥಿಗಳ ನೇತ್ರ ತಪಾಸಣೆ ಮಾಡಿದರು.










