






ಪುತ್ತೂರು:ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಬಿಲ್ಲವ ಸಂಘ ಪುತ್ತೂರು ಇದರ ವ್ಯಾಪ್ತಿಯಡಿಯಲ್ಲಿ ಬರುವ ಬೆದ್ರಾಳ-ಕೇಪುಳು ಬಿಲ್ಲವ ನಗರ ಸಮಿತಿಯ ವಾರ್ಷಿಕ ಮಹಾಸಭೆ ಹಾಗೂ ಫಲಾನುಭವಿ ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕ ವಿತರಣೆ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಜೂ.7 ರಂದು ಬೆದ್ರಾಳ ನಂದಿಕೇಶ್ವರ ಭಜನಾ ಮಂದಿರದಲ್ಲಿ ನಡೆಯಿತು.


ಪುತ್ತೂರು ಬಿಲ್ಲವ ಸಂಘದ ಅಧ್ಯಕ್ಷ ಸತೀಶ್ ಕುಮಾರ್ ಕೆಡೆಂಜಿರವರು ಕಾರ್ಯಕ್ರಮದ ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿ, ಪುತ್ತೂರು ಬಿಲ್ಲವ ಸಂಘ ಹಮ್ಮಿಕೊಳ್ಳುವ ಪ್ರತಿಯೊಂದು ಕಾರ್ಯಕ್ರಮಗಳಿಗೆ ಬೆದ್ರಾಳ-ಕೇಪುಳು ಬಿಲ್ಲವ ನಗರ ಸಮಿತಿಯು ಸದಾ ಪ್ರೋತ್ಸಾಹ ನೀಡುತ್ತಾ ಬಂದಿದೆ. ಜೊತೆಗೆ ಬೆದ್ರಾಳ-ಕೇಪುಳು ವ್ಯಾಪ್ತಿಯ ಬಿಲ್ಲವ ಸಮುದಾಯದ ಬಾಂಧವರಿಗೆ ಬಹಳಷ್ಟು ನೆರವನ್ನು ನೀಡುತ್ತಾ ಬಂದಿರುವುದು ಶ್ಲಾಘನೀಯ. ಇದು ಮುಂದಿನ ದಿನಗಳಲ್ಲೂ ಮುಂದುವರೆಯಲಿ ಎಂದರು.



ಅಧ್ಯಕ್ಷತೆ ವಹಿಸಿದ ಬೆದ್ರಾಳ-ಕೇಪುಳು ಬಿಲ್ಲವ ನಗರ ಸಮಿತಿಯ ಅಧ್ಯಕ್ಷ ಕೇಶವ ಪೂಜಾರಿ ಬೆದ್ರಾಳ ಮಾತನಾಡಿ, ಪುತ್ತೂರು ಬಿಲ್ಲವ ಸಮುದಾಯ ಬಿಲ್ಲವ ಸಮುದಾಯಕ್ಕೆ ಹಾಗೂ ಸಮಾಜಕ್ಕೆ ಬಹಳಷ್ಟು ಕಾರ್ಯಗಳನ್ನು ಮಾಡುತ್ತಾ ಬಂದಿದೆ. ಬೆದ್ರಾಳ-ಕೇಪುಳು ಬಿಲ್ಲವ ನಗರ ಸಮಿತಿ ಬೆಳೆಯಲು ಪುತ್ತೂರು ಬಿಲ್ಲವ ಸಂಘ ಸದಾ ಪ್ರೋತ್ಸಾಹ ನೀಡುತ್ತಿದೆ ಎಂದರು.
ಮುಖ್ಯ ಅತಿಥಿಗಳಾಗಿ ಬೆದ್ರಾಳ ಶ್ರೀ ನಂದಿಕೇಶ್ವರ ಭಜನಾ ಮಂದಿರದ ಅಧ್ಯಕ್ಷ ಪದ್ಮನಾಭ ಪೂಜಾರಿ, ಪುತ್ತೂರು ಬಿಲ್ಲವ ಸಂಘದ ಪ್ರಥಮ ಉಪಾಧ್ಯಕ್ಷ ಚಿದಾನಂದ ಸುವರ್ಣ, ದ್ವಿತೀಯ ಉಪಾಧ್ಯಕ್ಷೆ ಶ್ರೀಮತಿ ಪುಷ್ಪಾವತಿ ಕೇಕುಡೆ, ಕಾರ್ಯದರ್ಶಿ ಬಿ. ಟಿ. ಮಹೇಶ್ಚಂದ್ರ ಸಾಲ್ಯಾನ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಬೆದ್ರಾಳ-ಕೇಪುಳು ಬಿಲ್ಲವ ನಗರ ಸಮಿತಿ ಅಧ್ಯಕ್ಷ ಕೇಶವ ಪೂಜಾರಿ ಬೆದ್ರಾಳ ಸ್ವಾಗತಿಸಿ, ಕಾರ್ಯದರ್ಶಿ ಪ್ರದೀಪ್ ಕೇಪುಳು ವಂದಿಸಿದರು. ಬೆದ್ರಾಳ-ಕೇಪುಳು ಬಿಲ್ಲವ ನಗರ ಸಮಿತಿ ಉಪಾಧ್ಯಕ್ಷ ಬೆಳಿಯಪ್ಪ ಪೂಜಾರಿ ರೋಟರಿಪುರ, ಜೊತೆ ಕಾರ್ಯದರ್ಶಿ ವಿಜಯಾ ರಾಗಿದಕುಮೇರು, ಕೋಶಾಧಿಕಾರಿ ಕೃಷ್ಣಪ್ಪ ಪೂಜಾರಿ ಕೂಡಮರ, ಮಹಿಳಾ ಅಧ್ಯಕ್ಷೆ ಸುಜಾತ ನಾರಾಯಣ ಪೂಜಾರಿ ತಾರಿಗುಡ್ಡೆ ಮತ್ತು ಪದಾಧಿಕಾರಿಗಳು ಸಹಕರಿಸಿದರು.
ಪ್ರತಿಭಾ ಪುರಸ್ಕಾರ/ಪುಸ್ತಕ ವಿತರಣೆ..
ಎಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇ.86 ಅಂಕ ಗಳಿಸಿ ಡಿಸ್ಟಿಂಕ್ಷನ್ ನಲ್ಲಿ ಉತ್ತೀರ್ಣರಾದ ನೆಕ್ಕರೆ-ಕೂಡಮರ ನಿವಾಸಿ ಹರ್ಷಿತ್ ಕೆರವರಿಗೆ ಶಾಲು ಹೊದಿಸಿ ಪ್ರತಿಭಾ ಪುರಸ್ಕಾರ ಮಾಡಲಾಯಿತು. ಜೊತೆಗೆ ಸುಮಾರು ರೂ.15 ಸಾವಿರ ವೆಚ್ಚದಲ್ಲಿ 48 ಫಲಾನುಭವಿ ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕ ವಿತರಣೆ ನಡೆಸಲಾಯಿತು.










