







ಪುತ್ತೂರು: ಪಾಣಾಜೆ ಗ್ರಾಮದ ಪ್ರತಿಭಾವಂತ ಯುವಕ ವಿಜಿತ್ ರೈ ಸೂರಂಬೈಲ್ ಅವರು ಭಾರತೀಯ ಸೇನೆಯ ಅಗ್ನಿವೀರ್ ಆಗಿ ಆಯ್ಕೆಯಾಗಿರುವ ಹಿನ್ನೆಲೆಯಲ್ಲಿ ಸೂರಂಬೈಲ್ ಮನೆತನ ಹಾಗೂ ಎಂಸಿಸಿ ಸೂರಂಬೈಲ್ ವತಿಯಿಂದ ತರವಾಡು ಮನೆಯಲ್ಲಿ ಹಿರಿಯರ ಸಮ್ಮುಖದಲ್ಲಿ ಸನ್ಮಾನ ಕಾರ್ಯಕ್ರಮ ಆಯೋಜಿಸಲಾಯಿತು.



ಸೂರಂಬೈಲ್ ಮನೆತನದ ಹಿರಿಯರಾದ ಆನಂದ್ ರೈ ಸೂರಂಬೈಲ್ ಮಾತನಾಡಿ, ‘ನಮ್ಮ ಮನೆತನದ ಯುವಕನಿಗೆ ಅವನ ಕಠಿಣ ಪರಿಶ್ರಮ ದಿಂದ ದೇಶ ಸೇವೆಗೆ ಅವಕಾಶ ದೊರೆತಿರುವುದು ನಮ್ಮೆಲ್ಲರಿಗೂ ಹೆಮ್ಮೆಯ ವಿಚಾರ. ಹಾಗೆಯೇ ದೇಶಭಕ್ತಿ ಹಾಗೂ ಶಿಸ್ತುಬದ್ಧ ಜೀವನವನ್ನು ಅಳವಡಿಸಿಕೊಳ್ಳಲು ಮುಂದಿನ ಯುವಕರಿಗೆ ಇಂತಹ ಸಾಧನೆಗಳು ಪ್ರೇರಣೆಯಾಗಿವೆ. ಶ್ರೀ ದೈವ ದೇವರ ಕೃಪೆ ಹಾಗೂ ಹಿರಿಯರ ಆಶೀರ್ವಾದದಿಂದ ರಾಷ್ಟ್ರ ರಕ್ಷಣೆಯ ಈ ಸೇವೆಯಲ್ಲಿ ಅಪಾರ ಯಶಸ್ಸು, ಕೀರ್ತಿ, ಗೌರವಗಳು ಪ್ರಾಪ್ತಿಯಾಗಲಿ ಎಂದು ಶುಭ ಹಾರೈಸಿದರು.



ಈ ಸಂದರ್ಭದಲ್ಲಿ ವಿಜಿತ್ ರೈ ಅವರನ್ನು ಶಾಲು ಹೊದಿಸಿ, ಪೇಟ ತೊಡಿಸಿ, ಸ್ಮರಣಿಕೆ ನೀಡಿ ಗೌರವಿಸಲಾಯಿತು. ಸನ್ಮಾನ ಸ್ವೀಕರಿಸಿದ ಅವರು ಹಿರಿಯರ ಆಶೀರ್ವಾದ ಪಡೆದು ದೇಶ ರಕ್ಷಣೆಗೆ ಸಮರ್ಪಿತವಾಗಿ ಸೇವೆ ಸಲ್ಲಿಸುವ ಸಂಕಲ್ಪ ವ್ಯಕ್ತಪಡಿಸಿದರು. ಕುಟುಂಬದ ಸದಸ್ಯರು ಉಪಸ್ಥಿತರಿದ್ದರು.










