






ಬೆಂಗಳೂರು: ದಕ್ಷಿಣ ಕನ್ನಡ ಗೌಡ ಕ್ಷೇಮಾಭಿವೃದ್ಧಿ ಸಂಘ (ಡಿಕೆಜಿಡಬ್ಲ್ಯುಎ)ದ ಬಿಸಿನೆಸ್ ಹಬ್ ಸಭೆಯು ಜೂನ್ 7ರಂದು ಬೆಂಗಳೂರಿನ ವಿಜಯನಗರ ಕ್ಲಬ್ನಲ್ಲಿ ನಡೆಯಿತು.
ಸಂಘದ ಅಧ್ಯಕ್ಷ ಪಿ. ಓಂಪ್ರಕಾಶ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಉದ್ಯಮಿಗಳ ನಡುವೆ ಬಲಿಷ್ಠ ಜಾಲಬಂಧ ನಿರ್ಮಾಣ ಹಾಗೂ ವ್ಯಾಪಾರ ವೃದ್ಧಿಗೆ ಪೂರಕವಾಗುವ ಹಲವು ಮಹತ್ವದ ನಿರ್ಧಾರಗಳನ್ನು ಕೈಗೊಳ್ಳಲಾಯಿತು.


ಸಂಘದ ಪ್ರಧಾನ ಕಾರ್ಯದರ್ಶಿ ಸಂದೀಪ್ ಡಿ.ಕೆ. ಸ್ವಾಗತ ಭಾಷಣ ಮಾಡಿದರು. ಅಧ್ಯಕ್ಷ ಪಿ. ಓಂಪ್ರಕಾಶ್ ಸಂಘದ ಇತಿಹಾಸ ಹಾಗೂ ಭವಿಷ್ಯದ ಅಭಿವೃದ್ಧಿ ಕಾರ್ಯತಂತ್ರಗಳ ಕುರಿತು ವಿವರಿಸಿದರು. ಇದೇ ಸಂದರ್ಭದಲ್ಲಿ ಸಂಘದ ಹಿರಿಯ ಸಂಸ್ಥಾಪಕ ಸದಸ್ಯ ದಿ. ಕೆ.ಆರ್. ಚಾಮಯ್ಯ ಅವರ ನಿಧನಕ್ಕೆ ಶ್ರದ್ಧಾಂಜಲಿ ಸಲ್ಲಿಸಿ ಎರಡು ನಿಮಿಷಗಳ ಮೌನಾಚರಣೆ ನಡೆಸಲಾಯಿತು. ಸಭೆಯ ಸ್ಥಳ ವ್ಯವಸ್ಥೆಗೆ ಸಹಕರಿಸಿದ ಹಿರಿಯ ಸಮಿತಿ ಸದಸ್ಯ ಹಾಗೂ ನಿಕಟಪೂರ್ವ ಅಧ್ಯಕ್ಷ ಡಿ.ವಿ. ಶಿವರಾಮ್ ಅವರಿಗೆ ಕೃತಜ್ಞತೆ ಸಲ್ಲಿಸಲಾಯಿತು.



ಸಭೆಯಲ್ಲಿ ಭಾಗವಹಿಸಿದ್ದ ಸದಸ್ಯರು ತಮ್ಮ ಉದ್ಯಮಗಳ ಪರಿಚಯ ಹಾಗೂ ವ್ಯವಹಾರಿಕ ಅವಕಾಶಗಳ ಕುರಿತು ಮಾಹಿತಿ ಹಂಚಿಕೊಂಡರು. ಸಾಮ್ರಾಟ್ ಹಾಗೂ ವಿಶ್ವಾಸ್ ಮಡ್ತಿಲ ಅವರು ಹಿಂದಿನ ಆನ್ಲೈನ್ ಸಭೆಗಳ ಮೂಲಕ ದೊರೆತ ಸಂಪರ್ಕಗಳು ತಮ್ಮ ವ್ಯವಹಾರ ಬೆಳವಣಿಗೆಗೆ ನೆರವಾದ ಬಗ್ಗೆ ಅನುಭವ ಹಂಚಿಕೊಂಡರು. ಸುದ್ದಿ ಸಮೂಹ ಸಂಸ್ಥೆಗಳ ಆಡಳಿತ ನಿರ್ದೇಶಕ ಡಾ. ಯು.ಪಿ. ಶಿವಾನಂದ್ ಮಾತನಾಡಿ, ಉದ್ಯಮಿಗಳಿಗೆ ಮಾಧ್ಯಮ ಹಾಗೂ ಪ್ರಚಾರದ ಮೂಲಕ ಹೆಚ್ಚಿನ ಅವಕಾಶಗಳನ್ನು ಕಲ್ಪಿಸುವ ಭರವಸೆ ನೀಡಿದರು.
ಸಭೆಯಲ್ಲಿ ಬಿಸಿನೆಸ್ ಹಬ್ ಚಟುವಟಿಕೆಗಳನ್ನು ಮತ್ತಷ್ಟು ಪರಿಣಾಮಕಾರಿಯಾಗಿ ರೂಪಿಸಲು ಹಲವು ಕಾರ್ಯತಂತ್ರಗಳನ್ನು ರೂಪಿಸಲಾಯಿತು. ಇನ್ನುಮುಂದೆ ಎರಡು ವಾರಕ್ಕೊಮ್ಮೆ ಆನ್ಲೈನ್ ಸಭೆ ಹಾಗೂ ಎರಡು ತಿಂಗಳಿಗೊಮ್ಮೆ ಭೌತಿಕ ಸಭೆ ನಡೆಸಲು ನಿರ್ಧರಿಸಲಾಯಿತು. ಬಿಸಿನೆಸ್ ಹಬ್ ಸದಸ್ಯತ್ವಕ್ಕಾಗಿ ದಕ್ಷಿಣ ಕನ್ನಡ ಗೌಡ ಕ್ಷೇಮಾಭಿವೃದ್ಧಿ ಸಂಘದ ನೋಂದಾಯಿತ ಸದಸ್ಯರಾಗಿರುವುದು ಕಡ್ಡಾಯ ಎಂದು ತಿಳಿಸಲಾಯಿತು. ಬೆಂಗಳೂರಿನಲ್ಲಿ ನೆಲೆಸಿರುವ ಅಥವಾ ನಿರಂತರ ಸಂಪರ್ಕ ಹೊಂದಿರುವ ಉದ್ಯಮಿಗಳಿಗೆ ಆದ್ಯತೆ ನೀಡಲಾಗುವುದು ಎಂದು ಸ್ಪಷ್ಟಪಡಿಸಲಾಯಿತು.
ಬಿಸಿನೆಸ್ ಹಬ್ನ ನೆಟ್ವರ್ಕಿಂಗ್ ಚಟುವಟಿಕೆಗಳಿಗೆ ಬದ್ಧರಾಗಿರುವ ಸದಸ್ಯರಿಗಾಗಿ ಪ್ರತ್ಯೇಕ ಎಲೈಟ್ ವಾಟ್ಸಾಪ್ ಗ್ರೂಪ್ ರಚಿಸಲು ಹಾಗೂ ವೆಬ್ಸೈಟ್ ಮತ್ತು ಸಾಮಾಜಿಕ ಜಾಲತಾಣಗಳ ಮೂಲಕ ಸದಸ್ಯರ ವ್ಯವಹಾರಗಳ ಬ್ರ್ಯಾಂಡಿಂಗ್ಗೆ ಅವಕಾಶ ಕಲ್ಪಿಸಲು ತೀರ್ಮಾನಿಸಲಾಯಿತು. ಬಿಸಿನೆಸ್ ಡೈರೆಕ್ಟರಿ ಹಾಗೂ ಸದಸ್ಯರ ವೈಯಕ್ತಿಕ ಮತ್ತು ವ್ಯವಹಾರಿಕ ಲ್ಯಾಂಡಿಂಗ್ ಪೇಜ್ಗಳ ನಿರ್ಮಾಣಕ್ಕೂ ಯೋಜನೆ ರೂಪಿಸಲಾಯಿತು.
ಸಭೆಯಲ್ಲಿ ಕಾರ್ಯಕಾರಿ ಸಮಿತಿಗೆ ಹರಿಕಿಶೋರ್ ಅಗರಿ, ಸಂದೇಶ್ ಪಿ., ಸಿಂಚನಾ ಉರುಬೈಲ್ ಹಾಗೂ ಸತೀಶ್ ಅಗ್ಪಲ ಅವರನ್ನು ಆಯ್ಕೆ ಮಾಡಲಾಯಿತು. ಸಲಹಾ ಸಮಿತಿಗೆ ಸಂದೀಪ್ ಡಿ.ಕೆ., ಸಮ್ರಾಟ್, ವಿವೇಕಾನಂದ ಎಂ., ಶಿವಪ್ರಸಾದ್ ಪಿ., ಶರತ್ ಹಾಗೂ ಹರಿಪ್ರಸಾದ್ ರೆಂಜಲ ಅವರನ್ನು ನೇಮಕ ಮಾಡಲಾಯಿತು.
ಕೆ.ಎಸ್. ಚಂದ್ರಶೇಖರ್, ಹರಿಪ್ರಸಾದ್ ರೆಂಜಾಳ, ಸಂತೋಷ್ ಕೆ.ಎನ್., ಸಿಂಚನಾ ಉರುಬೈಲ್, ಗೌತಮ್ ಪಲ್ತಾಡಿ, ಪಿ.ಎಂ. ಶಿವಪ್ರಸಾದ್, ವಿವೇಕಾನಂದ ಎಂ., ಲೋಕೇಶ್ ಜಿ., ಆನಂದ ಗೌಡ ಮಲ್ಲಾರ, ದಯಾನಂದ ಕುಂಬ್ಲಾಡಿ, ಸಂದೇಶ್ ಪರೇಪ್ಪಾಡಿ, ರವಿಕಿರಣ್, ಜಿತೇಂದ್ರ ಕೆ.ವಿ., ಶರತ್ ಡಿ.ಸಿ., ಸಂದೀಪ್, ಶಿವಪ್ರಸಾದ್ ಉಪಸ್ಥಿತರಿದ್ದರು. ಹರಿಕೃಷ್ಣ ಅಗರಿ ವಂದಿಸಿ, ಸತೀಶ್ ಅಗ್ಪಲ ನಿರೂಪಿಸಿದರು.










