






ನಾಯಕತ್ವ ಎಂದರೆ ಎಲ್ಲರೊಂದಿಗೆ ಸೇರಿ ಕೆಲಸ ಮಾಡುವುದಾಗಿದೆ- ವಂ| ವಿವಿಯನ್ ನಿಶಾಂತ್ ರೊಡ್ರಿಗಸ್


ಪುತ್ತೂರು: ಸಂತ ವಿಕ್ಟರ್ ಬಾಲಿಕಾ ಪ್ರೌಢಶಾಲೆಯ 2026-27ನೇ ಶೈಕ್ಷಣಿಕ ಸಾಲಿನ ನೂತನ ಮಂತ್ರಿಮಂಡಲದ ಉದ್ಘಾಟನೆ ಮಾಯ್ ದೆ ದೇವುಸ್ ಸಭಾಂಗಣದಲ್ಲಿ ನಡೆಯಿತು. ಜ್ಯೋತಿ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಲಾಯಿತು.




ಮುಖ್ಯಅತಿಥಿ ಮಾಯ್ ದೆ ದೇವುಸ್ ಚರ್ಚ್‌ನ ಸಹಾಯಕ ಧರ್ಮಗುರು ವಂ| ವಿವಿಯನ್ ನಿಶಾಂತ್ ರೊಡ್ರಿಗಸ್‌ರವರು ಮಂತ್ರಿಗಳಿಗೆ ತಮ್ಮ ಜವಾಬ್ದಾರಿಯ ನಾಮಫಲಕವನ್ನು ನೀಡಿ ಆಶೀರ್ವದಿಸಿ, ಆಭಿನಂದಿಸಿ ಮಾತನಾಡಿ ನಾಯಕತ್ವ ಎಂದರೆ ಕೇವಲ ಹುದ್ದೆಯಲ್ಲ, ಇತರರಿಗಿಂತ ಮೇಲಿರುವುದೂ ಅಲ್ಲ. ಅದು ಎಲ್ಲರೊಂದಿಗೆ ಸೇರಿ ಕೆಲಸ ಮಾಡುವುದಾಗಿದೆ. ಮಂತ್ರಿಮಂಡಲದ ಪ್ರತಿಯೊಬ್ಬ ನಾಯಕನು ಜವಾಬ್ದಾರಿಗಳ ಸರಪಳಿಯಲ್ಲಿ ಒಂದು ಪ್ರಮುಖ ಕೊಂಡಿಯಾಗಿದ್ದಾರೆ. ನಾಯಕತ್ವವು ಸಂಸ್ಕಾರ, ಶಿಸ್ತು, ಗೌರವ, ಜವಾಬ್ದಾರಿ ಮತ್ತು ಇತರರಿಗೆ ಸಹಾಯ ಮಾಡುವ ಮನಸ್ಸಿನಿಂದ ಕೂಡಿರುತ್ತದೆ ಎಂದು ತಿಳಿಸಿ ಅಭಿನಂದನೆ ಸಲ್ಲಿಸಿದರು.
ರಾಜ್ಯಪಾಲರಾದ ಮುಖ್ಯಶಿಕ್ಷಕಿ ರೋಸಲಿನ್ ಪ್ಲೇವಿ ಲೋಬೊ ಪ್ರಮಾಣವಚನ ಬೋಧಿಸಿ ಮಾತನಾಡಿ ಮಂತ್ರಿಗಳು ತಮ್ಮ ಜವಾಬ್ದಾರಿಯನ್ನು ಶೃದ್ಧಾಪೂರ್ವಕವಾಗಿ ನಿರ್ವಹಿಸಬೇಕು. ಮಂತ್ರಿಮಂಡಲದ ಮಂತ್ರಿಗಳ ಜೊತೆ ಎಲ್ಲಾ ವಿದ್ಯಾರ್ಥಿನಿಯರು ಸಮನಾದ ಜವಾಬ್ದಾರಿಯನ್ನು ಹೊಂದಿದ್ದಾರೆ. ಮಂತ್ರಿಮಂಡಲದ ಸರ್ವಸದಸ್ಯರು ಇತರರಿಗೆ ಆದರ್ಶರಾಗಬೇಕು. ಕಲಿಕೆಯಲ್ಲಿ ಮಾದರಿಯಾಗಿ ಇತರರಿಗೆ ಪ್ರೇರಣೆಯಾಗಬೇಕು. ಇಂದಿನ ಈ ನಾಯಕತ್ವದ ಅವಕಾಶವು ಮುಂದೆ ನಿಮ್ಮ ಜೀವನಕ್ಕೆ ಪ್ರೇರಣೆಯಾಗಲಿ ಎಂದು ಶುಭಹಾರೈಸಿದರು. ಶಾಲಾ ನಾಯಕಿ ಆರಾಧ್ಯ ಸಂದರ್ಭೋಚಿತವಾಗಿ ಮಾತನಾಡಿದರು. ಮುಖ್ಯ ಅತಿಥಿ, ರಾಜ್ಯಪಾಲರು ಹಾಗೂ ಮಂತ್ರಿಮಂಡಲದ ಮಂತ್ರಿಗಳನ್ನು ವಾದ್ಯಾಗೋಷ್ಠಿಯಲ್ಲಿ ವೇದಿಕೆಗೆ ಬರಮಾಡಿಕೊಳ್ಳಲಾಯಿತು. ವಿದ್ಯಾರ್ಥಿನಿಯರು ಶಾಲಾ ಪ್ರಾರ್ಥನಾ ಗೀತೆ ಹಾಡಿದರು. ಕು| ಪ್ರೀತಿಕ ಮತ್ತು ನಫಿಸ ಮೆಹರಿನ್ ಮಂತ್ರಿಮಂಡಲದ ಮಂತ್ರಿಗಳನ್ನು ಪರಿಚಯಿಸಿದರು. ಕು| ಕ್ರಿಶಾ ಡಾಯಸ್ ಕಾರ್ಯಕ್ರಮ ನಿರೂಪಿಸಿದರು.









