







ಪುತ್ತೂರು:ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಭಾರತೀನಗರ ಸಮೀಪದ ಶೆಟ್ಟಹಳ್ಳಿ ಗ್ರಾಮದಲ್ಲಿ ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಯೊಬ್ಬರ ಕೊಲೆ ನಡೆದಿದ್ದು, ಕೆಮ್ಮಿಂಜೆ ಗ್ರಾಮ ಆಡಳಿತಾಧಿಕಾರಿ ಜಯಚಂದ್ರ ಕೊಲೆ ಮಾಡಿರುವುದಾಗಿ ಆರೋಪಿಸಲಾಗಿದೆ.


ಮದ್ದೂರಿನ ಭಾರತೀನಗರ ಸಮೀಪ ಶೆಟ್ಟಿ ಹಳ್ಳಿಯ ಗಣೇಶ್ (41ವ.)ಮೃತಪಟ್ಟವರಾಗಿದ್ದು, ಕೆಮ್ಮಿಂಜೆ ಗ್ರಾಮ ಆಡಳಿತಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಮಂಡ್ಯ ಮದ್ದೂರು ತಾಲೂಕು ಶೆಟ್ಟಹಳ್ಳಿ ಗ್ರಾಮದ ನಿವಾಸಿ ಜಯಚಂದ್ರ ಹತ್ಯೆಯ ಆರೋಪಿ ಎಂದು ಪೊಲೀಸರು ತಿಳಿಸಿದ್ದಾರೆ.



ಘಟನೆಯ ವಿವರ:
ಜೂ.22ರಂದು ರಾತ್ರಿ ವೇಳೆ ಗಣೇಶ್ ಅವರು ತನ್ನ ಮನೆಯ ಸಮೀಪದ ಅಂಗಡಿಯೊಂದರ ಬಳಿ ಕುಳಿತಿದ್ದರು.ಅದೇ ವೇಳೆ ಅಲ್ಲಿಗೆ ಬಂದ ಜಯಚಂದ್ರ ಗ್ರಾಮಸ್ಥರನ್ನು ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿದ್ದುದನ್ನು ಗಮನಿಸಿದ ಗಣೇಶ್,ಸಾರ್ವಜನಿಕರನ್ನು ಬೈಯ್ಯದಂತೆ ಆತನಿಗೆ ಬುದ್ಧಿವಾದ ಹೇಳಿದ್ದಾರೆ.ಇದರಿಂದ ಆಕ್ರೋಶಗೊಂಡ ಜಯಚಂದ್ರ ಏಕಾಏಕಿ ಗಣೇಶ್ ಅವರ ಮೇಲೆ ಹಲ್ಲೆಗೆ ಮುಂದಾಗಿದ್ದಾನೆ.ಬಳಿಕ ಗ್ರಾಮಸ್ಥರು ಅಡ್ಡಬಂದು ಅವರಿಬ್ಬರನ್ನೂ ಸಮಾಧಾನಪಡಿಸಿ ಮನೆಗಳಿಗೆ ತೆರಳುವಂತೆ ಹೇಳಿ ಅಲ್ಲಿಂದ ಕಳುಹಿಸಿದ್ದರು.ಬಳಿಕ,ಏನೂ ಆಗಿಲ್ಲವೆಂಬಂತೆ ವರ್ತಿಸಿದ್ದ ಜಯಚಂದ್ರ ಅಲ್ಲಿ ಗಣೇಶ್ ಅವರನ್ನು ತಬ್ಬಿಕೊಂಡು ಅಲ್ಲಿಂದ ಮನೆಗೆ ಕರೆದುಕೊಂಡು ಹೋಗಿ ಮನೆಯ ಕೋಣೆಗೆ ಚಿಲಕ ಹಾಕಿ ಮರದ ಕಟ್ಟಿಗೆಯಿಂದ ಮನಬಂದಂತೆ ಹಲ್ಲೆ ನಡೆಸಿದ್ದಾನೆ.ಗಂಭೀರವಾಗಿ ಗಾಯಗೊಂಡ ಗಣೇಶ್ ರಕ್ತದ ಮಡುವಿನಲ್ಲಿ ಬಿದ್ದಿದ್ದ ವಿಷಯ ತಿಳಿದ ಸಂಬಂಧಿಕರು ತಕ್ಷಣ ಅವರನ್ನು ಮಂಡ್ಯದ ಮಿಮ್ಸ್ ಆಸ್ಪತ್ರೆಗೆ ಕರೆದೊಯ್ದು ಪ್ರಾಥಮಿಕ ಚಿಕಿತ್ಸೆ ಕೊಡಿಸಿ ಮತ್ತೆ ಮನೆಗೆ ಕರೆತಂದಿದ್ದಾರೆ.ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದ ಗಣೇಶ್ ಅವರು ಜೂ.23ರಂದು ಬೆಳಗಿನ ಜಾವ ಮೃತಪಟ್ಟಿರುವುದಾಗಿ ತಿಳಿದುಬಂದಿದೆ.ಗಣೇಶ್ ಅವರ ಮೃತದೇಹವನ್ನು ಮಿಮ್ಸ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ವಾರಸುದಾರರಿಗೆ ಹಸ್ತಾಂತರಿಸಲಾಗಿದೆ.
ಆರೋಪಿ ಪರಾರಿ….?:
ಹಲ್ಲೆ ನಡೆಸಿ,ಕೊಲೆಗೈದ ಆರೋಪಿ ಗ್ರಾಮ ಆಡಳಿತಾಧಿಕಾರಿ ಜಯಚಂದ್ರ ಪರಾರಿಯಾಗಿದ್ದಾನೆ.ಘಟನೆಗೆ ಸಂಬಂಧಿಸಿದಂತೆ ಮದ್ಧೂರಿನ ಕೆ.ಎಂ.ದೊಡ್ಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು,ಪೊಲೀಸರು ಆರೋಪಿಯ ಬಂಧನಕ್ಕೆ ಬಲೆ ಬೀಸಿದ್ದಾರೆ.ಘಟನೆ ನಡೆದ ಸ್ಥಳವನ್ನು ವಿಧಿ ವಿಜ್ಞಾನ ಪ್ರಯೋಗಾಲಯದ ತಜ್ಞರನ್ನು ಕರೆಸಿ ಮಹಜರು ನಡೆಸಲಾಯಿತು.ಸ್ಥಳದಲ್ಲಿ ಜಿಲ್ಲಾ ಸಶಸ ಮೀಸಲು ಪಡೆಯ ತಂಡವನ್ನು ನಿಯೋಜಿಸಲಾಗಿದ್ದು, ಶಾಂತಿ ಕಾಪಾಡುವ ನಿಟ್ಟಿನಲ್ಲಿ ಕೆ.ಎಂ.ದೊಡ್ಡಿ ಪೊಲೀಸರು ಅಗತ್ಯ ಕ್ರಮ ಕೈಗೊಂಡಿದ್ದಾರೆ.ಘಟನೆ ಕುರಿತು ಮಾಹಿತಿ ಪಡೆದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶೋಭಾರಾಣಿ, ಡಿವೈಎಸ್ಪಿ ಯಶವಂತ್ ಹಾಗೂ ಪಿಐ ಆನಂದ ಅವರು ಕೆ.ಶೆಟ್ಟಹಳ್ಳಿ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಬೆಳ್ತಂಗಡಿಯಿಂದ ವರ್ಗಾವಣೆಗೊಂಡು ಪುತ್ತೂರುಗೆ ಬಂದಿದ್ದ ಜಯಚಂದ್ರ
ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಭಾರತೀನಗರ ಸಮೀಪದ ಶೆಟ್ಟಹಳ್ಳಿ ನಿವಾಸಿಯಾಗಿರುವ ಆರೋಪಿ ಜಯಚಂದ್ರ ಗ್ರಾಮ ಆಡಳಿತಾಽಕಾರಿಯಾಗಿ ಆರಂಭದಲ್ಲಿ ಸುಳ್ಯದಲ್ಲಿ ಬಳಿಕ ಕಡಬ,ಬೆಳ್ತಂಗಡಿಯಲ್ಲಿ ಕರ್ತವ್ಯ ನಿರ್ವಹಿಸಿ ವರ್ಷಗಳ ಹಿಂದೆ ಪುತ್ತೂರಿಗೆ ವರ್ಗಾವಣೆಗೊಂಡು ಆಗಮಿಸಿದ್ದರು.ಪ್ರಸ್ತುತ ಕೆಮ್ಮಿಂಜೆ ಗ್ರಾಮ ಆಡಳಿತಾಽಕಾರಿಯಾಗಿದ್ದು ಹೆಚ್ಚುವರಿಯಾಗಿ ಕುರಿಯ ಗ್ರಾಮ ಆಡಳಿತಾಽಕಾರಿಯಾಗಿಯೂ ಕರ್ತವ್ಯ ನಿರ್ವಹಿಸುತ್ತಿದ್ದು ಪುತ್ತೂರಿನಲ್ಲಿ ಬಾಡಿಗೆ ಮನೆಯೊಂದರಲ್ಲಿ ವಾಸ್ತವ್ಯವಿದ್ದರು. ಅವರ ಪತ್ನಿ ಮತ್ತು ತ್ರಿವಳಿ ಗಂಡು ಮಕ್ಕಳು ಊರಲ್ಲಿಯೇ ಇದ್ದು ವಾರಕ್ಕೊಮ್ಮೆ ಊರಿಗೆ ಹೋಗಿ ಬರುತ್ತಿದ್ದ ಜಯಚಂದ್ರ ಇದೀಗ ಊರಿಗೆ ಹೋಗಿದ್ದ ಸಂದರ್ಭದಲ್ಲಿಯೇ ಈ ಕೃತ್ಯ ಎಸಗಿದ್ದು ಪೊಲೀಸರು ಆತನಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.










