






ನದಿಯ ಶಿವ ಸಾನಿಧ್ಯದ ಬಳಿ ಕಾಮಗಾರಿ ಬೇಡ: ಲಿಂಗ ಹುಡುಕುವ ಸಹವಾಸವೂ ಬೇಡ
ಶ್ರೀ ಸಹಸ್ರಲಿಂಗೇಶ್ವರ ದೇವಾಲಯದಲ್ಲಿ ತಾಂಬೂಲ ಪ್ರಶ್ನಾ ಚಿಂತನೆ





ಉಪ್ಪಿನಂಗಡಿ: ಇಲ್ಲಿನ ನೇತ್ರಾವತಿ ನದಿಯ ಒಡಲೊಳಗೆ ಇರುವ ಶಿವ ಸಾನಿಧ್ಯವು ಯುಗಾಂತರದಲ್ಲಿ ಉದ್ಭವವಾಗಿದೆ. ಇಲ್ಲಿ ದೇವರ ಸ್ವರೂಪ ಅಂತರ್ಮುಖಿಯಾಗಿದ್ದು, ಇದು ಶಿವನ ಪ್ರಕೃತಿ ಜನ್ಯ ಸಾನಿಧ್ಯವಾಗಿದೆ. ಈತನಿಗೆ ನಿತ್ಯ ಪೂಜೆಯ ಅಗತ್ಯವಿಲ್ಲ. ಕಣ್ಣಿಗೆ ಕಾಣದಂತಹ ಯಕ್ಷರು, ಸಿದ್ಧರು ಹಾಗೂ ತಪಸ್ವಿಗಳಿಂದ ಆತ ಈಗಲೂ ನಿತ್ಯ ಪೂಜೆಯನ್ನು ಪಡೆಯುತ್ತಿದ್ದಾನೆ. ಅವನಿಗೆ ಪೂಜೆ ಬೇಕೆಂದೆನಿಸಿದಾಗ ಆತನೇ ನಿಮ್ಮ ಮುಂದೆ ಪ್ರಕಟವಾಗಿ ಪೂಜೆ ಪಡೆಯುತ್ತಾನೆ ಎಂದು ದೈವಜ್ಞರಾದ ಕೊರಂಗ್ರಪಾಡಿಯ ಕುಮಾರಗುರು ತಂತ್ರಿಯವರು ತಿಳಿಸಿದರು.
ಶ್ರೀ ಸಹಸ್ರಲಿಂಗೇಶ್ವರ- ಮಹಾಕಾಳಿ ದೇವಾಲಯದ ಬಳಿ ಅಣೆಕಟ್ಟನ್ನು ಕಟ್ಟಿ ನದಿಯಲ್ಲಿ ಮುಳುಗಿರುವ ಉದ್ಭವ ಲಿಂಗದ ಬಳಿ ತೆರಳಲು ಕೂಡಲಸಂಗಮದಂತಹ ವ್ಯವಸ್ಥೆಯನ್ನು ಮಾಡಿ ನಿತ್ಯ ಪೂಜೆಗೆ ಹಾಗೂ ಭಕ್ತರ ಭೇಟಿಗೆ ಅನುಕೂಲವಾಗುವಂತೆ ಹಾಗೂ ದೇವಾಲಯ ಮತ್ತು ಅದರ ಪರಿಸರದ ಸಮಗ್ರ ಅಭಿವೃದ್ಧಿಯ ನೀಲ ನಕಾಶೆ ತಯಾರಿಸಿ ಶಾಸಕ ಅಶೋಕ್ ಕುಮಾರ್ ರೈಯವರು ರಾಜ್ಯ ಸರಕಾರಕ್ಕೆ 352 ಕೋ.ರೂ.ನ ಪ್ರಸ್ತಾವನೆಯನ್ನು ಸಲ್ಲಿಸಿದ್ದು, ಈ ಕಾಮಗಾರಿಗಳ ಅನುಷ್ಠಾನದ ಬಗ್ಗೆ ಜು.4ರಂದು ಅವರು ದೇವಾಲಯದಲ್ಲಿ ತಾಂಬೂಲ ಪ್ರಶ್ನೆಯಿಟ್ಟು ಈ ಮಾತನ್ನು ಹೇಳಿದರು.
ಉದ್ಭವ ಲಿಂಗದ ಬಳಿಕ ನಿತ್ಯ ತೆರಳಿ ಪೂಜೆ ನಡೆಸಲು ಅನುಕೂಲವಾಗುವಂತೆ ಕಾಮಗಾರಿಯನ್ನು ನಡೆಸುವುದು ಶಿವನಿಗೆ ತೃಪ್ತಿಯಿಲ್ಲ. ಈ ಉದ್ಭವ ಲಿಂಗಕ್ಕೆ 5,೦೦೦ದಷ್ಟು ಇತಿಹಾಸವಿದ್ದು, ಇದು ಆದಿ ಶಿವಲಿಂಗವಾದರೆ ಕಡೇಶಿವಾಲಯದಲ್ಲಿ ಅಂತ್ಯ ಶಿವಲಿಂಗವಿದೆ. ಇವೆರಡು ಶಿವಲಿಂಗಗಳು ಒಂದೇ ನಾಣ್ಯದ ಎರಡು ಮುಖಗಳಂತಿವೆ. ಇಲ್ಲಿಂದ ಅಲ್ಲಿಯ ತನಕ ನದಿಯಲ್ಲಿರುವ ನೀರೇ ಶಿವನ ಸಾನಿಧ್ಯವಾಗಿದೆ. ಇಲ್ಲಿ ನಿತ್ಯ ಆರಾಧನೆಗೆಂದೇ ನದಿಯ ಮೇಲ್ಭಾಗದಲ್ಲಿ ದೇವಾಲಯವನ್ನು ಕಟ್ಟಿ ಶಿವನನ್ನು ಆರಾಧಿಸಿಕೊಂಡು ಬರಲಾಗುತ್ತಿದೆ. ನದಿಯಲ್ಲಿರುವುದು ಶಿವನ ಪ್ರಕೃತಿ ಜನ್ಯ ಸ್ಥಾನ. ಇದು ರಹಸ್ಯ ಹಾಗೂ ವಿಶೇಷವಾಗಿದೆ. ಈ ಶಿವಲಿಂಗವನ್ನು ಘಟಸರ್ಪಗಳು ಸುತ್ತುವರಿದಿವೆ. ಈ ಶಿವಲಿಂಗವು ಕುಂಭಾಕೃತಿಯಲ್ಲಿದ್ದು, ಹುಡುಕಿದರೂ ಅದು ಗೋಚರಿಸದು. ಅದನ್ನು ಹುಡುಕುವ ಸಾಹಸಕ್ಕೂ ಇಳಿಯಬಾರದು. ನದಿಯಲ್ಲಿರುವ ಶಿವ ಸಾನಿಧ್ಯದ ನಿತ್ಯ ದರ್ಶನ, ಪೂಜೆಗೆಂದು ಯಾವುದೇ ಕಾಮಗಾರಿಗಳನ್ನು ನಡೆಸಬಾರದು. ಈತನಿಗೆ ನಿತ್ಯ ಪೂಜೆಯ ಅಗತ್ಯವಿಲ್ಲ. ತನ್ನ ಸ್ಥಾನವನ್ನು ಸಂಕಲ್ಪಿಸಿಯೇ ಶಿವ ಇಲ್ಲಿ ಲಿಂಗ ಸ್ವರೂಪಿಯಾಗಿ ಉದ್ಭವವಾಗಿದ್ದು, ಆತನನ್ನು ಪ್ರಾಕೃತಿಕವಾಗಿ ಹೀಗೇ ಇರಲು ಬಿಡಬೇಕು. ಅವನಿಗೆ ಪೂಜೆ ಬೇಕೆಂದಾಗ ಅವನೇ ಪ್ರಕಟವಾಗುತ್ತಾನೆ ಎಂದರಲ್ಲದೇ, ಉಳಿದ ಕಾಮಗಾರಿಗಳನ್ನು ಯೋಜನಾ ಬದ್ಧವಾಗಿ ಮಾಡಲು ಅಡ್ಡಿಯಿಲ್ಲ ಎಂದರು.
ವಿಷ್ಣು ಕೋಪಗೊಂಡಿದ್ದಾನೆ:
ಒಂದು ಕಾಲಘಟ್ಟದಲ್ಲಿ ಮಠವೊಂದು ನಾಶವಾದ ಸಂದರ್ಭ ಅಲ್ಲಿದ್ದ ಅನಂತಪದ್ಮನಾಭನ ಮೂರ್ತಿಯನ್ನು ಶ್ರೀ ಸಹಸ್ರಲಿಂಗೇಶ್ವರ ತರಲಾಗಿದೆ. ಅದನ್ನು ಇಲ್ಲಿ ದೇವರ ಗರ್ಭಗುಡಿಯ ಹಿಂಬದಿ ಪಶ್ಚಿಮಾಭಿಮುಖವಾಗಿ ಇಡಲಾಗಿದ್ದು, ಅಲ್ಲಿ ಪಾರ್ವತಿಗೂ ದೀಪವನ್ನು ಹಚ್ಚಲಾಗುತ್ತದೆ. ಅನಂತಪದ್ಮನಾಭನಿಗೆ ನೈವೇದ್ಯವನ್ನು ಅರ್ಪಿಸಲಾಗುತ್ತದೆ. ಆದರೆ ಈ ರೀತಿ ಮಾಡಿದ್ದರಿಂದವಿಷ್ಣು ಕೋಪಗೊಂಡಿದ್ದಾನೆ. ಆದ್ದರಿಂದ ಆ ಮೂರ್ತಿಯನ್ನು ಅಲ್ಲಿಂದ ತೆಗೆಯಬೇಕು. ಅದನ್ನು ದೇವಾಲಯದ ಬೇರೆ ಕಡೆ ಇಟ್ಟು ಪೂಜಿಸಬೇಕು. ಮುಂದೊಂದು ದಿನ ನಾಶವಾದ ಆ ಮಠವು ಜೀರ್ಣೋದ್ಧಾರಗೊಳ್ಳುವ ಸಮಯ ಬರಬಹುದು. ಆಗ ಅವರು ಆ ಮೂರ್ತಿಯನ್ನು ವಾಪಸ್ ಕೇಳಿದರೆ ಅದನ್ನು ಕೊಡಬೇಕಾಗುತ್ತದೆ. ಆದ್ದರಿಂದ ವಿಷ್ಣುವಿಗೆ ಇಲ್ಲಿ ಪ್ರತ್ಯೇಕ ಗುಡಿಯ ಮಾಡುವುದು ಬೇಡ. ಮರದ ಪೀಠದಲ್ಲಿಟ್ಟು ಅದನ್ನು ಆರಾಧಿಸಿಕೊಂಡು ಬರಬೇಕು ಎಂದರು. ದೇವಾಲಯದ ಪ್ರಾಕಾರದೊಳಗೆ ವಿಷ್ಣುವನ್ನು ಎಲ್ಲಿ ಆರಾಧಿಸಿಕೊಂಡು ಬರಬೇಕೆಂದು ಪ್ರಶ್ನೆಯಲ್ಲಿ ನೋಡಿದಾಗ ದೇವರಿಗೆ ತೃಪ್ತಿಯಾಗುವ ಜಾಗ ಕಂಡು ಬರದಿದ್ದ ಕಾರಣ ಪ್ರಶ್ನಾ ಚಿಂತನೆಯಲ್ಲಿ ಕಂಡು ಬಂದ ಪ್ರಕಾರ ನಾಗನ ಕಟ್ಟೆಯ ಬಲಬದಿಗೆ ವಿಷ್ಣುವಿಗೆ ಗುಡಿಯೊಂದನ್ನು ನಿರ್ಮಿಸಿ ಅಲ್ಲಿ ವಿಷ್ಣುವನ್ನು ಪೂರ್ವಾಭಿಮುಖವಾಗಿ ಪ್ರತಿಷ್ಠಾಪಿಸಿ ಈ ಹಿಂದೆ ಆರಾಧಿಸಿಕೊಂಡು ಬಂದ ರೀತಿ ಆರಾಧಿಸಿಕೊಂಡು ಬರಬೇಕು. ಅದಕ್ಕೆ ಮಠದ ಶ್ರೀ ಅನಂತಪದ್ಮನಾಭ ಎಂದು ಹೆಸರಿಡಬೇಕು ಎಂದರು. ಈಗ ವಿಷ್ಣುವಿನ ವಿಗ್ರಹವಿದ್ದ ಜಾಗದಲ್ಲಿ ಮೊದಲಿನ ಹಾಗೆ ಪಾರ್ವತಿಗೆ ದರ್ಪಣ ಬಿಂಬ ಇಡಬೇಕು ಎಂದರು.
ದೇವಾಲಯದ ಬಳಿಯಿಂದ ಮಾರಿ ಓಡಿಸಿಕೊಂಡು ಹೋಗುವ ಸಂಪ್ರದಾಯ ಇಲ್ಲಿ ಮೊದಲಿನಂತೆ ನಡೆಯುತ್ತಿಲ್ಲ. ಮೊದಲಿಗೆ ಇದ್ದ ಮಾರಿಕಟ್ಟೆಯ ಬಳಿಯಿಂದ ಈಗ ಮಾರಿ ಓಡಿಸಿಕೊಂಡು ಹೋಗುವುದಿಲ್ಲ. ಆ ಜಾಗ ಈಗ ಮಲೀನಗೊಂಡಿದೆ. ಅದನ್ನು ಮೊದಲಿಗೆ ಸ್ವಚ್ಛಮಾಡಿ ಮೊದಲ ಪದ್ಧತಿಯನ್ನೇ ಪುನಸ್ಥಾಪನೆ ಮಾಡಬೇಕು. ಆಗ ಸಮುದಾಯ ಭವನದ ಮೇಲಂತಸ್ತಿನ ಕಾಮಗಾರಿ ಯಾವುದೇ ಅಡೆತಡೆಯಿಲ್ಲದೆ ನಡೆಯುತ್ತದೆ ಎಂದರು.
ಪಿತೃ ಸಂಸ್ಕಾರ ಸಂದರ್ಭದಲ್ಲಿ ಸಂಪ್ರದಾಯವನ್ನು ದಾಟಿಯೇ ದೇವಸ್ಥಾನಕ್ಕೆ ಬರುವ ಸಂಪ್ರದಾಯವನ್ನು ಇಟ್ಟುಕೊಳ್ಳಬೇಕು. ಮೈಲಿಗೆಯವರು ದೇವಾಲಯವನ್ನು ಪ್ರವೇಶಿಸಬಾರದು. ಈ ಬಗ್ಗೆ ನಾಮಫಲಕವನ್ನು ಅಳವಡಿಸಿ ಭಕ್ತರಿಗೆ ಮಾಹಿತಿ ನೀಡಬೇಕು ಎಂದರು.
ದೇವಾಲಯದಲ್ಲಿ ಮಡಿಯ ಹೆಸರಿನಲ್ಲಿ ಭಕ್ತರಿಗೆ ಪ್ರಸಾದವನ್ನು ಎತ್ತರದಿಂದ ಎಸೆದಂತೆ ನೀಡುವುದನ್ನು ಆಕ್ಷೇಪಿಸಿದ ಅವರು, ಮಡಿಯಲ್ಲಿರುವಾಗ ಅರ್ಚಕರು ಗರ್ಭಗುಡಿಯ ಹೊರಗೆ ಬರಲೇಬಾರದು. ಸಹಾಯಕ ಅರ್ಚಕರ ಮುಖೇನ ಗೌರವಯುತವಾಗಿ ಭಕ್ತರಿಗೆ ಪ್ರಸಾದ ವಿತರಣೆಯ ವ್ಯವಸ್ಥೆ ಮಾಡಬೇಕೆಂದರು.
ಮಹಾಕಾಳಿಯ ಅಣಿ ಇಡುವ ಕಟ್ಟೆಯು ಸ್ಥಾನಪಲ್ಲಟವಾಗಿದ್ದು, ಅದನ್ನು ಯಥಾಸ್ಥಾನದಲ್ಲಿಯೇ ಕಟ್ಟಬೇಕು. ಪೂರ್ವ ಶಿಷ್ಟಾಚಾರ- ಆಚರಣೆಗಳನ್ನು ಮುರಿಯಬಾರದು. ಶ್ರೀ ಸಹಸ್ರಲಿಂಗೇಶ್ವರ ದೇವಸ್ಥಾನಕ್ಕೂ ಕಡವಿನಬಾಗಿಲಿನ ಶ್ರೀ ಕಲ್ಕುಡ ದೈವಸ್ಥಾನಕ್ಕೂ ಅವಿನಾಭವ ಸಂಬಂಧವಿದ್ದು, ದೇವಾಲಯದ ತಂತ್ರಿಯವರನ್ನೇ ವರ್ಷಕ್ಕೊಮ್ಮೆ ಅಲ್ಲಿಗೆ ಕರೆದುಕೊಂಡು ಹೋಗಿ ಪೂಜೆ- ಪುನಸ್ಕಾರ ನಡೆಸುವುದು ಹಾಗೂ ದೈವಸ್ಥಾನದಲ್ಲಿ ನಡೆಯುವ ನೇಮಕ್ಕೆ ಮೊದಲಿನ ಹಾಗೆ ಇಲ್ಲೇ ದಿನ ನಿಗದಿ ಮಾಡುವುದು ಮಾಡಬೇಕು. ದೇವಾಲಯದಲ್ಲಿ ಕದಿಕ್ಕಾರು ಬೀಡಿನವರಿಗೆ ಗೌರವ ಕೊಡಬೇಕು ಎಂದರು.
ಶ್ರೀ ಸಹಸ್ರಲಿಂಗೇಶ್ವರ ದೇವಾಲಯದಲ್ಲಿ ಗರ್ಭಗುಡಿ ಬಿಟ್ಟು ಉಳಿದ ಪ್ರಾಕಾರಗಳ ನಿರ್ಮಾಣವು ಶಾಸ್ತ್ರೀಯವಾಗಿಲ್ಲ. ಆದ್ದರಿಂದ ಅದು ದೇವರಿಗೆ ತೃಪ್ತಿ ಇಲ್ಲ. ದೇವಾಲಯದಲ್ಲಿ ಭಕ್ತರ ಅನುಕೂಲತೆಗಾಗಿ ಮಾಡುವ ವ್ಯವಸ್ಥೆಗಳಿಂದ ದೇವರ ಅಸ್ತಿತ್ವಕ್ಕೆ ಧಕ್ಕೆ ಬರಬಾರದು. ದೇವಾಲಯದ ಪ್ರಾಂಗಣ ಸೇರಿದಂತೆ ಇತರ ಪ್ರಾಕಾರಗಳನ್ನು ವಾಸ್ತುಶಾಸ್ತ್ರದ ನಿಯಮದ ಪ್ರಕಾರ ಸರಿಪಡಿಸಿಕೊಳ್ಳಬೇಕು ಎಂದರಲ್ಲದೆ, ಇನ್ನು ಹಲವು ಪ್ರಾಯಶ್ಚಿತಗಳನ್ನು ಹೇಳಿದರು.
ಪ್ರಶ್ನಾ ಚಿಂತನೆಯ ವೇಳೆ ದೇವಾಲಯದ ತಂತ್ರಿಗಳಾದ ನಾಗೇಶ್ ತಂತ್ರಿ, ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಕೆ. ರಾಧಾಕೃಷ್ಣ ನಾೖಕ್, ಸದಸ್ಯರಾದ ಹರೀಶ್ ಉಪಾಧ್ಯಾಯ, ವೆಂಕಪ್ಪ ಪೂಜಾರಿ, ದೇವಿದಾಸ್ ರೈ, ಡಾ. ರಮ್ಯಾ ರಾಜಾರಾಂ, ಅನಿತಾ ಕೇಶವಗೌಡ, ಆರ್ತಿಲ ಕೃಷ್ಣರಾವ್, ಸೋಮನಾಥ, ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್, ಪ್ರಮುಖರಾದ ಕರುಣಾಕರ ಸುವರ್ಣ, ಚಂದ್ರಹಾಸ ಶೆಟ್ಟಿ, ನಿಹಾಲ್ ಶೆಟ್ಟಿ, ಮುರಳೀಧರ ರೈ ಮಠಂತಬೆಟ್ಟು, ಹರಿರಾಮಚಂದ್ರ, ಡಾ. ರಾಜಾರಾಮ್ ಕೆ.ಬಿ., ಕೈಲಾರು ರಾಜಗೋಪಾಲ ಭಟ್, ಬಾಲಕೃಷ್ಣ ಶೆಟ್ಟಿ, ಪ್ರವೀಣ್ ಕದಿಕ್ಕಾರು ಬೀಡು, ಜಯಪ್ರಕಾಶ್ ಬದಿನಾರು, ಜಯಂತ ಪೊರೋಳಿ, ಸುಧಾಕರ ಶೆಟ್ಟಿ, ಮನೋಹರ ರೈ, ಸಂಜೀವ ಗಾಣಿಗ, ನವೀನ್ ಕಲ್ಯಾಟೆ, ವಿಶ್ವನಾಥ ಶೆಟ್ಟಿ ಕಂಗ್ವೆ, ಶಿವಕುಮಾರ್ ಬಾರಿತ್ತಾಯ, ದೇವಾಲಯದ ವ್ಯವಸ್ಥಾಪಕ ವೆಂಕಟೇಶ್ ರಾವ್, ಸಿಬ್ಬಂದಿ ಕೃಷ್ಣಪ್ರಸಾದ್ ಬಡಿಲ, ಪದ್ಮನಾಭ, ದಿವಾಕರ, ಸುಧಾಕರ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.
ಶಾಸಕ ಅಶೋಕ್ ಕುಮಾರ್ ರೈಯವರು ಮಾತನಾಡಿ, 352 ಕೋ.ರೂ. ಯೋಜನೆಯಲ್ಲಿ ನೇತ್ರಾವತಿ ನದಿಗೆ ಅಣೆಕಟ್ಟು, ಪಿಂಡಪ್ರಧಾನಕ್ಕೆ, ವಸತಿಗೆ ಕಟ್ಟಡಗಳು, ನದಿಯಲ್ಲಿ ಬೊಟೀಂಗ್ ವ್ಯವಸ್ಥೆ, ತಡೆಗೋಡೆ, ನದಿ ತೀರದಲ್ಲಿ ರಸ್ತೆ, ಅದರಲ್ಲೂ ಮುಖ್ಯವಾಗಿ ಉದ್ಭವಲಿಂಗದ ನಿತ್ಯ ಪೂಜೆ ಮತ್ತು ದರುಷನಕ್ಕೆ ಬೇಕಾಗಿ ಕೂಡಲಸಂಗಮದಲ್ಲಿರುವಂತಹ ವ್ಯವಸ್ಥೆ ಸೇರಿದಂತೆ ದೇವಾಲಯದ ಸಮಗ್ರ ಅಭಿವೃದ್ಧಿಯ ರೂಪುರೇಷೆಗಳಿತ್ತು. ಉದ್ಭವಲಿಂಗದ ನಿತ್ಯ ಪೂಜೆ ಮತ್ತು ದರುಷನಕ್ಕೆ ಬೇಕಾಗಿ ಕೂಡಲಸಂಗಮದಲ್ಲಿರುವಂತಹ ವ್ಯವಸ್ಥೆ ಕಲ್ಪಿಸುವುದು ದೇವರಿಗೆ ತೃಪ್ತಿದಾಯಕವಲ್ಲ ಎಂಬುದು ಕಂಡು ಬಂದ ಪ್ರಕಾರ ಅದನ್ನು ಕೈಬಿಡುತ್ತೇವೆ. ಆದರೆ ಉಳಿದ ಕಾಮಗಾರಿಗಳ ಸಂಕಲ್ಪಕ್ಕೆ ದೈವಾನುಗ್ರಹ ಕಂಡು ಬಂದ ಕಾರಣ ಮುಂದುವರೆಯುತ್ತೇವೆ ಎಂದರು.










