ಎಸ್‌ಐಆರ್ ಫಾರಂ ಜು.29ರ ತನಕ ಕಾಯಬೇಡಿ – ಒಂದು ವಾರದೊಳಗೆ ಬಿಎಲ್‌ಓಗೆ ಹಿಂತಿರುಗಿಸಿ: ಜಿಲ್ಲಾಧಿಕಾರಿ ದರ್ಶನ್ ಮನವಿ

0

ಪುತ್ತೂರು: ದ.ಕ.ಜಿಲ್ಲೆಯಲ್ಲಿ ಎಸ್‌ಐಆರ್ ಪ್ರಕ್ರಿಯೆಗಳು ನಡೆಯುತ್ತಿದೆ. ಇದರಲ್ಲಿ ಅಧಿಕಾರಿಗಳಷ್ಟೇ ಅಲ್ಲ. ಮತದಾರರ ಕರ್ತವ್ಯವೂ ಇದೆ. ಬಿಎಲ್‌ಒಗಳು ಈಗಾಗಲೇ ಮನೆಗೆ ತಲುಪಿಸಿರುವ ಎಸ್‌ಐಆರ್ ಫಾರಂಗಳನ್ನು ಸಮಯವಿದೆಯಲ್ಲ ಎಂದು ಜು.29ರ ತನಕ ಕಾಯದೆ ಅತೀ ಶೀಘ್ರದಲ್ಲಿ ಭರ್ತಿ ಮಾಡಿ ಬಿಎಲ್‌ಓಗಳಿಗೆ ಹಿಂತಿರುಗಿಸುವ ಮೂಲಕ ಮತದಾರರು ಸಹಕರಿಸಬೇಕು ಎಂದು ದ.ಕ ಜಿಲ್ಲಾಧಿಕಾರಿ ದರ್ಶನ್ ವಿನಂತಿಸಿದ್ದಾರೆ.


ಜು.13ರಂದು ವಿಡಿಯೋ ಮೂಲಕ ಮಾತನಾಡಿದ ಜಿಲ್ಲಾಧಿಕಾರಿಗಳು, ದ.ಕ ಜಿಲ್ಲೆಯಲ್ಲಿ ಒಟ್ಟು 18,03,766 ಮತದಾರರಲ್ಲಿ 17,75,811 ಮಂದಿಗೆ ಶೇ.98.45ರಷ್ಟು ಎನ್ಯೂಮರೇಷನ್ ಫಾರಂ ವಿತರಿಸಲಾಗಿದೆ. ಆದರೆ ವಿತರಿಸಿದ ಫಾರಂಗಳಲ್ಲಿ ಭರ್ತಿ ಮಾಡಿದ ಕೇವಲ 2,13,939 ಎನ್ಯೂಮರೇಷನ್ ಫಾರಂ ವಾಪಸ್ ಬಂದಿದ್ದು ಶೇ.11.86 ಮಾತ್ರ ಪ್ರಗತಿಯಾಗಿದೆ.


ಮತದಾರರಿಗೆ ಈಗಾಗಲೇ ವಿತರಿಸಿದ ಎನ್ಯೂಮರೇಷನ್ ಫಾರಂ ಅನ್ನು ಬಿಎಲ್‌ಓಗಳು ಡಿಜಿಟೈಝ್ ಮಾಡಬೇಕಾಗಿದೆ. ಹೀಗಾಗಿ ಬಿಎಲ್‌ಓಗಳು ಮತದಾರರಿಗೆ ನೀಡಿದ ಫಾರಂಗಳನ್ನು ಆದಷ್ಟು ಶೀಘ್ರವಾಗಿ ಭರ್ತಿ ಮಾಡಿ ಬಿಎಲ್‌ಓಗಳಿಗೆ ಹಿಂತಿರುಗಿಸಬೇಕು. ಒಂದು ಫಾರಂ ಅನ್ನು ಡಿಜಿಟೈಝ್ ಮಾಡಲು ಬಿಎಲ್‌ಓಗಳಿಗೆ ಕನಿಷ್ಠ 2-4 ನಿಮಿಷದ ಆವಶ್ಯಕತೆಯಿದೆ. ಲಕ್ಷಾಂತರ ಮತದಾರರ ಎನ್ಯೂಮರೇಷನ್ ಪಾರಂಗಳನ್ನು ಡಿಜಿಟೈಝ್ ಮಾಡಲು ಸಾವಿರಾರು ಗಂಟೆಗಳ ಅವಶ್ಯಕತೆಯಿದೆ. ಇದನ್ನು ಶೀಘ್ರವಾಗಿ ಮಾಡಲು ಪ್ರತಿಯೊಬ್ಬ ಮತದಾರರ ಸಹಕಾರ ಅಗತ್ಯ. ಯಾವ ಫಾರಂ ಡಿಜಿಟೈಝ್ ಮಾಡಲಾಗುತ್ತದೆಯೋ ಆ ಮತದಾರರ ಹೆಸರು ಮಾತ್ರ ಮತದಾರರ ಪಟ್ಟಿಯಲ್ಲಿ ಬರುತ್ತದೆ. ಪ್ರತಿಯೊಬ್ಬ ಮತದಾರರ ಹಕ್ಕನ್ನು ಫಾರಂ ಮೂಲಕ ನೀಡಲಾಗುತ್ತಿದೆ. ನಿಮ್ಮ ಹಕ್ಕನ್ನು ನಿಮಗೆ ನೀಡುವಲ್ಲಿ ನಮ್ಮ ಕರ್ತವ್ಯವದ ಜೊತೆಗೆ ಮತದಾರರ ಸಹಕಾರವು ಅತೀ ಆವಶ್ಯಕವಾಗಿದೆ ಎಂದರು.


ಎನ್ಯೂಮರೇಷನ್ ಫಾರಂ ವಿತರಿಸಿದ ಬಳಿಕ ಹಿಂಪಡೆಯಲು ಯಾವಾಗ ಬರಬೇಕು ಎಂದು ಬಿಎಲ್‌ಓಗಳು ಕರೆ ಮಾಡಿದಾಗ ಇನ್ನೂ ಸಮಯವಿದೆಯಲ್ಲಾ. ನಂತರ ನೀಡುತ್ತೇವೆ ಎಂಬ ಉತ್ತರಗಳನ್ನು ಬಿಎಲ್‌ಓಗಳಿಗೆ ನೀಡುತ್ತಿರುವುದು ನಮ್ಮ ಗಮನಕ್ಕೆ ಬಂದಿದೆ. ಆದರೆ ಮತದಾರರು ಇಂತಹ ಉತ್ತರ ನೀಡಬಾರದು. ಜು.29ಕೊನೆ ದಿನವಾಗಿರುವುದು ಸಹಜ. ಆದರೆ ಕೊನೆಯ ಒಂದೆರಡು ದಿನಗಳಲ್ಲಿ ಸಾವಿರಾರು ಫಾರಂಗಳು ಒಂದೇ ಬಾರಿ ಬಂದರೆ ಅದನ್ನು ಡಿಜಿಟೈಝ್ ಮಾಡುವುದು ಅಸಾಧ್ಯ. ಹೀಗಾಗಿ ಪ್ರತಿಯೊಬ್ಬ ಮತದಾರರು ಬಿಎಲ್‌ಓಗಳೊಂದಿಗೆ ಸಹಕರಿಸಬೇಕು. ನೀವು ಪಡೆದುಕೊಂಡಿರುವ ಎನ್ಯೂಮರೇಷನ್ ಫಾರಂ ಅನ್ನು ಒಂದೇ ವಾರದಲ್ಲಿ ಭರ್ತಿ ಮಾಡಿ, ಬಿಎಲ್‌ಓಗಳಿಗೆ ತಲುಪಿಸುವ ಮೂಲಕ ನಮ್ಮೊಂದಿಗೆ ಸಹಕರಿಸಬೇಕು ಎಂದು ಅವರು ಮತದಾರರಲ್ಲಿ ಮನವಿ ಮಾಡಿದ್ದಾರೆ.

LEAVE A REPLY

Please enter your comment!
Please enter your name here