ಬತ್ತುತ್ತಿರುವ ಜೀವನದಿಗಳು: ಕಾಣುತ್ತಿರುವ ನದಿ ಒಡಲು : ಮತ್ತೆ ಗೋಚರವಾದ ಉದ್ಭವಲಿಂಗದ ಜಾಗ

0

ಉಪ್ಪಿನಂಗಡಿ: ಕಳೆದ ವಾರ ಸುರಿದ ಮಳೆಗೆ ಚೇತರಿಸಿಕೊಂಡಿದ್ದ ದ.ಕ. ಜಿಲ್ಲೆಯ ಜೀವನದಿಗಳಾದ ನೇತ್ರಾವತಿ- ಕುಮಾರಧಾರ ನದಿಗಳು ಮತ್ತೀಗ ಮಳೆ ಕೈಕೊಟ್ಟಿದ್ದರಿಂದ ನೀರು ಕಡಿಮೆಯಾಗಿ ಬಡವಾಗಿದ್ದು, ಇಲ್ಲಿನ ಶ್ರೀ ಸಹಸ್ರಲಿಂಗೇಶ್ವರ- ಮಹಾಕಾಳಿ ದೇವಾಲಯದ ಬಳಿ ನದಿಯಲ್ಲಿರುವ ಉದ್ಭವಲಿಂಗದ ಜಾಗ ಹೊರಜಗತ್ತಿಗೆ ಗೋಚರಿಸತೊಡಗಿದ್ದು, ‘ಎಲ್ಲಿ ಹೋಗುವಿರಿ ನಿಲ್ಲಿ ಮೋಡಗಳೇ… ನಾಲ್ಕು ಹನಿಯ ಚೆಲ್ಲಿ. ದಿನದಿನವೂ ಕಾದು ಬಾಯಾರಿ ಬೆಂದೆ… ಬೆಂಗದಿರ ತಾಪದಲಿ.’ ಎಂದು ಕವಿ ಡಾ. ಜಿ.ಎಸ್. ಶಿವರುದ್ರಪ್ಪನವರು ಬರೆದ ಕವನದ ಸಾಲುಗಳು ಈ ಬಾರಿ ನೆನಪಿಗೆ ಬರತೊಡಗಿವೆ.

ನೇತ್ರಾವತಿ 2025: 2025ರ ಜು.16ರಂದು ನೇತ್ರಾವತಿ- ಕುಮಾರಧಾರ ನದಿಗಳು ಸಂಗಮ ಸ್ಥಳದಲ್ಲಿ ಹರಿಯುತ್ತಿರುವ ದೃಶ್ಯ.


ಈ ಹಿಂದೆಲ್ಲಾ ಜೂನ್ ಮೊದಲ ವಾರದಲ್ಲೇ ಚೈತನ್ಯದಿಂದ ಹರಿಯುತ್ತಿದ್ದ ಉಭಯ ನದಿಗಳು ಈ ಬಾರಿ ಮುಂಗಾರು ಕೈಕೊಟ್ಟಿದ್ದರಿಂದ ನದಿಯೊಡಲಿನ ಹೆಚ್ಚಿನ ಭಾಗ ನೀರಿಲ್ಲದೆ ಬರಿದಾಗಿ ಮರಳು ಕಾಣಿಸುತ್ತಿತ್ತಲ್ಲದೇ, ನದಿಯೊಡಳಲ್ಲಿರುವ ಉದ್ಭವಲಿಂಗದ ದರ್ಶನ ಭಾಗ್ಯ ದೊರೆತ್ತಿತ್ತು. ಆದರೆ ಜೂನ್ ತಿಂಗಳ ಕೊನೆಯಲ್ಲಿ ಮಳೆಯಾದ ಕಾರಣ ನದಿಯ ಹರಿಯುವಿಕೆಯಲ್ಲಿ ಸ್ವಲ್ಪ ಚೇತರಿಕೆ ಕಂಡು ಬಂದಿದ್ದು, ಜೂ.30ರಂದು ಉದ್ಭವ ಲಿಂಗವು ಸಂಪೂರ್ಣ ಮುಳುಗಿತ್ತು. ಜುಲೈ ತಿಂಗಳ ಆರಂಭದಲ್ಲಿ ಕೆಲವು ದಿನ ನದಿ ಪಾತ್ರದ ಪ್ರದೇಶದಲ್ಲಿ ಉತ್ತಮ ಮಳೆಯಾಗಿದ್ದರಿಂದ ಈ ಬಾರಿಯ ಮಳೆಗಾಲದಲ್ಲಿ ಮೊದಲ ಬಾರಿಗೆ ಜು.7ರಂದು ನೇತ್ರಾವತಿ ಹಾಗೂ ಕುಮಾರಧಾರ ನದಿಯಲ್ಲಿ ಹೆಚ್ಚಿನ ನೀರು ಕಾಣಿಸಿಕೊಂಡಿತ್ತು. ಅಂದು ನದಿಯ ಒಡಲೆಲ್ಲಾ ನೀರಿನಿಂದಾವೃತಗೊಂಡು ನೇತ್ರಾವತಿ ನದಿಯು ಸಮುದ್ರಮಟ್ಟಕ್ಕಿಂತ 26.05 ಮೀ. ಎತ್ತರದಲ್ಲಿ ಹರಿದಿತ್ತು. ಮತ್ತೆ ಎರಡ್ಮೂರು ದಿನಗಳ ಕಾಲ ನದಿ ನೀರಿನ ಒಳಹರಿವು ಏರಿಕೆಯ ಹಾದಿಯಲ್ಲೇ ಸಾಗಿತ್ತು. ಆದರೆ ಮತ್ತೆ ಮಳೆ ಕೈಕೊಟ್ಟಿದ್ದರಿಂದ ನದಿಗಳ ಒಳ ಹರಿವು ಕ್ಷೀಣಿಸಿದ್ದು, ನದಿಯ ಒಡಲಲ್ಲಿರುವ ಮರಳು ಕಾಣಿಸತೊಡಗಿದೆ. ಜು.15ರಂದು ಇಲ್ಲಿನ ಶ್ರೀ ಸಹಸ್ರಲಿಂಗೇಶ್ವರ- ಮಹಾಕಾಳಿ ದೇವಾಲಯದ ಬಳಿ ನದಿಯಲ್ಲಿರುವ ಉದ್ಭವಲಿಂಗದ ಜಾಗ ಹೊರಜಗತ್ತಿಗೆ ಗೋಚರಿಸತೊಡಗಿದೆ. 2025ರ ಜು. 15ರಂದು ಉಪ್ಪಿನಂಗಡಿಯಲ್ಲಿ ನೇತ್ರಾವತಿ ನದಿಯು ಸಮುದ್ರಮಟ್ಟಕ್ಕಿಂತ 26.08 ಮೀಟರ್ ಎತ್ತರದಲ್ಲಿ ಹರಿದರೆ, ಈ ಬಾರಿ ಮಾತ್ರ ಅದೇ ದಿನ ಮೀಟರ್ ಗೇಜ್‌ನ ಬುಡ ತಲುಪುವಲ್ಲೂ ನೇತ್ರಾವತಿ ನದಿಯು ವಿಫಲವಾಗಿದೆ.


LEAVE A REPLY

Please enter your comment!
Please enter your name here