






ಶಾಸಕರು ಹೇಳಿದ್ದಾರೆಂಬ ಒಂದೇ ಕಾರಣಕ್ಕೆ ನಾನು ರಸ್ತೆಗೆ ಜಾಗ ಬಿಡುತ್ತಿದ್ದೇನೆ – ದಿವಾಕರಶೆಟ್ಟಿ


ಪುತ್ತೂರು: ಬೆಳ್ಳಿಪ್ಪಾಡಿ ಗ್ರಾಮದ ಕಾರ್ನೋಜಿ- ಎಣ್ಣೈತೋಡಿ ರಸ್ತೆಯ ವಿವಾದ ಕೊನೆಗೂ ಇತ್ಯರ್ಥಗೊಂಡಿದೆ. ಕಳೆದ 14 ವರ್ಷಗಳಿಂದ ಈ ಭಗದ ಜನರು ರಸ್ತೆ ಸಂಪರ್ಕವಿಲ್ಲದೆ ತೀವ್ರ ಸಮಸ್ಯೆಯಲ್ಲಿದ್ದರು. ಜಾಗದ ಮಾಲಕರ ಜೊತೆ ಶಾಸಕ ಅಶೋಕ್ ರೈ ನಡೆಸಿದ ಮಾತುಕತೆಯ ಫಲವಾಗಿ 14 ವರ್ಷಗಳ ವಿವಾದಕ್ಕೆ ತೆರೆ ಎಳೆಯಲಾಗಿದ್ದು, ಶಾಸಕರು ಮತ್ತು ಜಾಗದ ಮಾಲಕರ ಮಾನವೀಯ ಕಾರ್ಯಕ್ಕೆ ಗ್ರಾಮಸ್ಥರು ಹರ್ಷ ವ್ಯಕ್ತಪಡಿಸಿದ್ದಾರೆ.



ಎಣ್ಣೈತೋಡಿಗೆ ತೆರಳುವ ರಸ್ತೆ ದಿವಾಕರ ಶೆಟ್ಟಿ ಎಂಬವರಿಗೆ ಸೇರಿದ ಖಾಸಗಿ ಜಾಗವಾಗಿತ್ತು. ಈ ಜಾಗದ ಮೂಲಕ ರಸ್ತೆ ನಿರ್ಮಾಣಕ್ಕೆ ದಿವಾಕರ ಶೆಟ್ಟಿ ಆಕ್ಷೇಪ ಮಾಡಿದ್ದರು. ವಿವಾದ ನ್ಯಾಯಾಲಯದ ಮೆಟ್ಟಿಲೇರಿತ್ತು. ನ್ಯಾಯಾಲಯದಲ್ಲಿ ದಿವಾಕರಶೆಟ್ಟಿಯವರ ಪರ ತೀರ್ಪು ಕೂಡಾ ಬಂದಿತ್ತು. ಇನ್ನು ನಮಗೆ ರಸ್ತೆ ನಿರ್ಮಾಣವಾಗಲು ಸಾಧ್ಯವೇ ಇಲ್ಲ ಎಂದು ಮನಗಂಡು ಗ್ರಾಮದ ಸುಮಾರು ೩೦ ಮನೆಯವರು ಶಾಸಕ ಅಶೋಕ್ ರೈ ಅವರನ್ನು ಭೇಟಿಯಾಗಿ ಮನವಿ ಮಾಡಿಕೊಂಡಿದ್ದರು.
ಸ್ಥಳಕ್ಕೆ ಭೇಟಿ ನೀಡಿದ ಶಾಸಕರಿಂದ ವಿವಾದ ಇತ್ಯರ್ಥ
ವಿವಾದಿತ ರಸ್ತೆಯನ್ನು ವೀಕ್ಷಣೆ ಮಾಡಲು ಶಾಸಕ ಅಶೋಕ್ ರೈ ಅವರು ಭಾನುವಾರದಂದು ಕಾರ್ನೋಜಿಗೆ ತೆರಳಿದ್ದರು. ಜಾಗದ ಮಾಲಕ ದಿವಾಕರಶೆಟ್ಟಿಯವರನ್ನು ಬರಹೇಳಿದ್ದರು. ಸ್ಥಳದಲ್ಲೇ ಸಾರ್ವಜನಿಕರ ಎದುರೇ ರಾಜಿ ಮಾತುಕತೆ ನಡೆಸಿದ ಶಾಸಕರು ಜನರ ಮನವಿಗೆ ಸ್ಪಂದಿಸುವಂತೆ ದಿವಾಕರಶೆಟ್ಟಿಯವರಲ್ಲಿ ಕೇಳಿಕೊಂಡರು.ರಸ್ತೆ ಗೆ ಜಾಗ ಬಿಟ್ಟುಕೊಟ್ಟಿಲ್ಲ ಎಂದು ಈ ಭಾಗದ ಜನರು ನನ್ನ ಮನಸ್ಸಿಗೆ ನೋವಾಗುವ ರೀತಿಯಲ್ಲಿ ವರ್ತಿಸಿದ್ದರು ಅದರಿಂದ ನನಗೆ ತುಂಬಾ ನೋವಾಗಿತ್ತು ಎಂದು ದಿವಾಕರಶೆಟ್ಟಿಯವರು ಹೇಳಿದರು. ಆ ವೇಳೆ ಗ್ರಾಮಸ್ಥರ ಪರವಾಗಿ ಕೆಲವರು ಅವರಲ್ಲಿ ಕ್ಷಮೆ ಕೇಳಿದ್ದಾರೆ. ಬಳಿಕ ಮಾತನಾಡಿದ ದಿವಾಕರಶೆಟ್ಟಿಯವರು ಶಾಸಕ ಅಶೋಕ್ ರೈ ಅವರ ಮಾತಿಗೆ ಬೆಲೆ ಕೊಟ್ಟು ನಾನು ನಿಮಗೆ ನನ್ನ ಸ್ವಂತ ಜಾಗವನ್ನು ರಸ್ತೆಗಾಗಿ ಬಿಟ್ಟು ಕೊಡುತ್ತಿದ್ದೇನೆ, ನ್ಯಾಯಾಲಯದ ತೀರ್ಪು ನನ್ನ ಪರವಾಗಿದೆ ಆದರೂ ಬಡವರ ಪರ ಕೆಲಸ ಮಾಡುವ ಶಾಸಕರಿಗೆ ಗೌರವ ನೀಡಿ ವಿವಾದವನ್ನು ಮುಗಿಸುತ್ತಿದ್ದೇನೆ ಎಂದು ಹೇಳಿದರು.
ದಿವಾಕರಶೆಟ್ಟಿಯವರಿಗೆ ರಸ್ತೆಯನ್ನೇ ಬಂದ್ ಮಾಡಬಹುದಿತ್ತು: ಅಶೋಕ್ ರೈ
ದಿವಾಕರಶೆಟ್ಟಿಯವರ ಕಾಸಗಿ ಜಾಗದಲ್ಲಿ ನಿಮಗೆ ರಸ್ತೆ ನಿರ್ಮಾಣಕ್ಕೆ ಬಿಟ್ಟು ಕೊಟ್ಟಿದ್ದಾರೆ , ನ್ಯಾಯಾಲಯದ ತೀರ್ಪು ಕೂಡಾ ಅವರ ಪರವಾಗಿದೆ ಅವರಿಗೆ ರಸ್ತೆಯನ್ನೇ ಬಂದ್ ಮಾಡುವ ಅಧಿಕಾರ ಇದೆ ಆದರೆ ಅವರು ಆರೀತಿ ಮಾಡದೆ ಮಾನವೀಯತೆ ತೋರಿದ್ದಾರೆ. ಅವರ ದೊಡ್ಡ ಗುಣಕ್ಕೆ ನಾನು ಅಭಿನಂದನೆ ಸಲ್ಲಿಸುತ್ತಿದ್ದೇನೆ. ಜಾಗದ ಮಾಲಿಕರು ಮಾಡಿದ ಸೇವೆಯನ್ನು ನೀವು ಮರೆಯಬಾರದು ಎಂದು ಹೇಳಿದರು.
ನಾವು ನಿಮ್ಮ ಜೊತೆ ಇದ್ದೇವೆ; ಗ್ರಾಮಸ್ಥರು
ಈ ವೇಳೆ ಭರವಸೆ ನೀಡಿದ ಗ್ರಾಮಸ್ಥರು ನಮ್ಮ ೧೪ ವರ್ಷಗಳ ಹಿಂದಿನ ಬೇಡಿಕೆಯನ್ನು ನೀವು ಈಡೇರಿಸಿದ್ದೀರಿ, ಇವತ್ತು ನಾವು ಮರೆಯಲಾಗದ ದಿನವಾಗಿದೆ. ಯಾರಿಂದಲೂ ಸಾಧ್ಯವಾಗದ ಕೆಲಸವನ್ನು ಕೇವಲ ಮಾತಿನ ಮೂಲಕ ಪರಿಹರಿಸಿದ್ದೀರಿ, ನೀವು ನೊಂದವರ ಪರ, ಬಡವರ ಪರ ಎಂಬುದನ್ನು ನಾವು ಮನವರಿಕೆ ಮಾಡಿಕೊಂಡೆವು. ಮುಂದಿನ ಚುನಾವಣೆಯಲ್ಲಿ ನಾವು ನಿಮ್ಮನ್ನು ಬೆಂಬಲಿಸುತ್ತೇವೆ ಎಂದು ಹೇಳಿ ಜಾಗದ ಮಾಲಿಕರಿಗೂ ಕೃತಜ್ಞತೆ ಸಲ್ಲಿಸಿದರು.
ಇಂಥಹ ಶಾಸಕರನ್ನು ಪಡೆದ ನಾವು ಪುಣ್ಯವಂತರು: ಪ್ರಭಾಕರ ಭಟ್
ಮಾಸ್ಟರ್ ಪ್ಲಾನರಿಯ ಪ್ರಭಾಕರ ಭಟ್ ಮಾತನಾಡಿ 14 ವರ್ಷದಿಂದ ಈ ಭಾಗದ ಜನ ರಸ್ತೆಇಲ್ಲದೆ ನರಕಯಾತನೆ ಅನುಭವಿಸುತ್ತಿದ್ದರು, ಶಾಸಕರು ಕೇವಲ 15 ನಿಮಿಷದಲ್ಲಿ ವಿವಾದವನ್ನು ಮುಗಿಸಿದ್ದಾರೆ, ಇಂಥಹ ಶಾಸಕರನ್ನು ಪಡೆದ ನಾವು ಪುಣ್ಯವಂತರು, ಶಾಸಕರ ಈ ಉಪಕಾರವನ್ನು ನಾವು ಯಾವತ್ತೂ ಮರೆಯಬಾರದು. ಜಾಗದ ಮಾಲಿಕರೂ ಅಬಿನಂದನಾರ್ಹರು. ಪುತ್ತೂರಿನಲ್ಲಿ ಈ ಹಿಂದೆ ಇದ್ದ ಯಾವ ಶಾಸಕರೂ ಈ ರೀತಿಯ ಬಡವರ ಸೇವೆ ಮಾಡಿದ್ದಿಲ್ಲ, ಮುಂದಿನ ಚುನಾವಣೆಯಲ್ಲಿ ಅವರನ್ನು ಬೆಂಬಲಸಿವುದೇ ನಾವು ಶಾಸಕರಿಗೆ ಸಲ್ಲಿಸುವ ಕೃತಜ್ಷತೆಯಾಗಿದೆ ಎಂದು ಹೇಳಿದರು.
ಕೋಡಿಂಬಾಡಿ ವಲಯ ಕಾಂಗ್ರೆಸ್ ಅಧ್ಯಕ್ಷ ಮೋನಪ್ಪ ಗೌಡ ಪಮ್ಮನಮಜಲು, ಪ್ರಧಾನ ಕಾರ್ಯದರ್ಶಿ ಯೋಗಿಶ್ ಎಸ್ ಸಾಮಾನಿ ಸಂಪಗೆದಡಿ, ಕೆಎಂಎಫ್ ನಾಮನಿರ್ದೇಶಿತ ಸದಸ್ಯ ಜಗನ್ನಾಥ ಶೆಟ್ಟಿ ನಡುಮನೆ, ಪ್ರಮುಖರಾದ ಪದ್ಮಪ್ಪ ಪೂಜಾರಿ ಪರನೀರಿ, ಬಾಬು ನೆಕ್ಕರೆ ಉಪಸ್ಥಿತರಿದ್ದರು.










