







ವೈಜ್ಞಾನಿಕ ಪದ್ಧತಿ ಅಳವಡಿಸಿಕೊಂಡಲ್ಲಿ ಉತ್ತಮ ಆದಾಯ -ಡಾ. ಎಂ.ಸಿ. ಶಿವಕುಮಾರ್


ರಾಮಕುಂಜ: ಭಾರತವು ಹಾಲು ಉತ್ಪಾದನೆಯಲ್ಲಿ ವಿಶ್ವದಲ್ಲೇ ಪ್ರಥಮ ಸ್ಥಾನದಲ್ಲಿದೆ. ಹಾಲಿಗೆ ಯಾವಾಗಲು ಮಾರುಕಟ್ಟೆಯಲ್ಲಿ ಬೇಡಿಕೆಯಿರುವುದರಿಂದ ಹೈನುಗಾರರು ಆರ್ಥಿಕವಾಗಿ ಸದೃಢರಾಗಬಹುದು ಹಾಗೂ ರೈತರು ವೈಜ್ಞಾನಿಕ ಪದ್ಧತಿಗಳನ್ನು ಅಳವಡಿಸಿಕೊಂಡಲ್ಲಿ ಉತ್ಪಾದನಾ ವೆಚ್ಚವನ್ನು ಕಡಿಮೆ ಮಾಡಿ ಉತ್ತಮ ಆದಾಯಗಳಿಸಬಹುದು ಎಂದು ಕೊೖಲ ಪಶುವೈದ್ಯಕೀಯ ಮಹಾವಿದ್ಯಾಲಯದ ಡೀನ್ ಡಾ. ಎಂ.ಸಿ. ಶಿವಕುಮಾರ್ ಹೇಳಿದರು.




ಅವರು ಜು.22ರಂದು ಕೊೖಲ ಪಶುವೈದ್ಯಕೀಯ ಮಹಾವಿದ್ಯಾಲಯದಲ್ಲಿ ನಡೆದ ‘ಆಧುನಿಕ ಹೈನುಗಾರಿಕೆ’ ತರಬೇತಿ ಶಿಬಿರದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮುಖ್ಯ ಅತಿಥಿಯಾಗಿದ್ದ ಕೊೖಲ ಜಾನುವಾರು ತರಬೇತಿ ಹಾಗೂ ತಳಿ ಸಂವರ್ಧನಾ ಕೇಂದ್ರದ ಉಪನಿರ್ದೇಶಕ ಡಾ. ಕೆ.ಬಿ.ಚಿದಾನಂದ್ ಅವರು ಮಾತನಾಡಿ, ವೈಜ್ಞಾನಿಕ ಹೈನುಗಾರಿಕೆ, ಆಧುನಿಕ ತಂತ್ರಜ್ಞಾನಗಳ ಅಳವಡಿಕೆ ಹಾಗೂ ಗುಣಮಟ್ಟದ ಹಾಲು ಉತ್ಪಾದನೆಯ ಮಹತ್ವವನ್ನು ರೈತರು ಈ ತರಬೇತಿಯಿಂದ ತಿಳಿದುಕೊಂಡು ಆರ್ಥಿಕವಾಗಿ ಸಬಲೀಕರಣಗೊಂಡು ಆದಾಯ ದ್ವಿಗುಣಗೊಳಿಸಿಕೊಳ್ಳಬೇಕೆಂದು ಹೇಳಿದರು.
ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕಿ ಡಾ.ಹರಿಣಿ ಕೆ.ಆರ್. ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಜಾನುವಾರುಗಳ ಸಂಖ್ಯೆ ನಮ್ಮ ದೇಶದಲ್ಲಿ ಹೆಚ್ಚಿದ್ದು ಇನ್ನೂ ಹೆಚ್ಚು ಮಾಡಲು ವೈಜ್ಞಾನಿಕ ಅರಿವು ಮೂಡಿಸುವುದು ಈ ಕಾರ್ಯಕ್ರಮದ ಮೂಲ ಉದ್ದೇಶ ಹಾಗೂ ರೈತರು ತಮ್ಮ ಸಮಸ್ಯೆಗೆ ಸೂಕ್ತ ಪರಿಹಾರ ಪಡೆದುಕೊಳ್ಳಲು ಸೂಕ್ತ ವೇದಿಕೆಯಿದು ಎಂದರು.
ಹೈನುಗಾರಿಕೆ ಕುರಿತು ಮಾಹಿತಿ
ತರಬೇತಿಯಲ್ಲಿ ತಜ್ಞರು ರೈತರಿಗೆ ವಿವಿಧ ಮಹತ್ವದ ವಿಷಯಗಳ ಕುರಿತು ಉಪನ್ಯಾಸ ನೀಡಿದರು. ಪ್ರಾಧ್ಯಾಪಕ ಡಾ. ಮಂಜುನಾಥ್ ಪಾಟೀಲ್ ಅವರು ಹೈನುರಾಸುಗಳ ಆರೋಗ್ಯ ನಿರ್ವಹಣೆ, ರೋಗ ತಡೆ ಹಾಗೂ ಲಸಿಕಾ ಕಾರ್ಯಕ್ರಮಗಳ ಮಹತ್ವವನ್ನು ವಿವರಿಸಿದರು.
ಸಹಾಯಕ ಪ್ರಾಧ್ಯಾಪಕರಾದ ಡಾ. ಸಾಗರ್ ಎಂ. ಅವರು ಉತ್ತಮ ತಳಿಗಳ ಆಯ್ಕೆ ಮತ್ತು ಸುಸ್ಥಿರ ಹಾಲು ಉತ್ಪಾದನೆಯಲ್ಲಿ ತಳಿಗಳ ಪಾತ್ರ, ಡಾ.ಹರಿಣಿ ಕೆ.ಆರ್.ಅವರು ಹೈನುಗಾರಿಕೆಯ ಮಹತ್ವ ಹಾಗೂ ವೈಜ್ಞಾನಿಕ ನಿರ್ವಹಣಾ ಪದ್ಧತಿ ಬಗ್ಗೆ, ಡಾ. ರಶ್ಮಿ ಕೆ.ಎಂ.ಅವರು ಪಶು ಆಹಾರ ಮತ್ತು ಸಮತೋಲಿತ ಪೋಷಣೆ, ಡಾ. ತೇಜಸ್ವಿನಿ ಎಂ.ಪಿ.ಅವರು ಹೈನುರಾಸುಗಳಲ್ಲಿ ಸಂತಾನೋತ್ಪತ್ತಿ ನಿರ್ವಹಣೆ, ಡಾ. ರಜತ್ ಸಗರೆ ಅವರು ಶುದ್ಧ ಹಾಲು ಉತ್ಪಾದನೆಗೆ ಅನುಸರಿಸಬೇಕಾದ ಸ್ವಚ್ಛತಾ ಕ್ರಮಗಳು ಹಾಗೂ ಹಾಲಿನ ಗುಣಮಟ್ಟ ಕಾಪಾಡುವ ವಿಧಾನಗಳ ಬಗ್ಗೆ ವಿವರಿಸಿದರು.
ತಳಿ ಸಂವರ್ಧನಾ ಕೇಂದ್ರಕ್ಕೆ ಭೇಟಿ
ತರಬೇತಿಯ ಕೊನೆಯಲ್ಲಿ ಕೊೖಲ ಜಾನುವಾರು ತರಬೇತಿ ಹಾಗೂ ತಳಿ ಸಂವರ್ಧನಾ ಕೇಂದ್ರಕ್ಕೆ ಭೇಟಿ ನೀಡಲಾಯಿತು. ಹಿರಿಯ ಪಶುವೈದ್ಯಾಧಿಕಾರಿ ಡಾ.ಪುನೀತ್ ಅವರು ರೈತರಿಗೆ ಆಧುನಿಕ ಹೈನುಗಾರಿಕಾ ಕೊಟ್ಟಿಗೆ, ಆಹಾರ ವ್ಯವಸ್ಥೆ, ಆರೋಗ್ಯ ಸಂರಕ್ಷಣೆ, ಗೋಮೂತ್ರದ ಉಪಯೋಗ ಮತ್ತು ಗೋಅರ್ಕ ಬಗ್ಗೆ ಪ್ರಾತ್ಯಕ್ಷಿಕೆ ಮೂಲಕ ಮಾಹಿತಿ ನೀಡಿದರು. ತರಬೇತಿಯಲ್ಲಿ ಭಾಗವಹಿಸಿದ ರೈತರಿಗೆ ಪ್ರಮಾಣ ಪತ್ರ ವಿತರಿಸಲಾಯಿತು. ತರಬೇತಿಯು ಅತ್ಯಂತ ಉಪಯುಕ್ತವಾಗಿದ್ದು ಇಂತಹ ಪ್ರಾಯೋಗಿಕ ತರಬೇತಿ ನಿರಂತರವಾಗಿ ಆಯೋಜಿಸಬೇಕೆಂದು ತರಬೇತಿ ಪಡೆದ ರೈತರು ಅಭಿಪ್ರಾಯ ವ್ಯಕ್ತಪಡಿಸಿದರು. ತರಬೇತಿಯಲ್ಲಿ ಕಡಬ, ಸುಳ್ಯ, ಪುತ್ತೂರು, ಬೆಳ್ತಂಗಡಿ, ಬಂಟ್ವಾಳ, ಬೈಂದೂರು, ಬೇಲೂರು ತಾಲೂಕುಗಳ 40ಕ್ಕೂ ಹೆಚ್ಚು ಹೈನುಗಾರರು, ಯುವ ರೈತರು, ಮಹಿಳಾ ರೈತರು ಭಾಗವಹಿಸಿದ್ದರು.
ರೈತರಿಗೆ ಸಿದ್ಧಪಡಿಸಲಾಗಿದ್ದ ತರಬೇತಿ ಕೈ ಪಿಡಿ ಬಿಡುಗಡೆ ಮಾಡಲಾಯಿತು. ಡಾ. ಮಂಜುನಾಥ್ ಪಾಟೀಲ್ ಸ್ವಾಗತಿಸಿದರು. ಡಾ.ರಶ್ಮಿ ಕೆ.ಎಂ. ವಂದಿಸಿದರು. ಡಾ.ರಜತ್ ಸಗರೆ ನಿರೂಪಿಸಿದರು. ಡಾ. ತೇಜಸ್ವಿನಿ ಎಂ.ಪಿ. ಪ್ರಾರ್ಥಿಸಿದರು.










