







ವಿಟ್ಲ: ವಿಟ್ಲ ಕಸಬಾ ಗ್ರಾಮದ ಕುರುಂಬಳ ನಿವಾಸಿ ಹಮೀದ್ ಎಂಬವರ ಮನೆಯಲ್ಲಿ ಆ.9ರಂದು ಬೆಳಿಗ್ಗೆ ಏಕಾಏಕಿ ಗ್ಯಾಸ್ ಸಿಲಿಂಡರ್ ಸ್ಪೋಟಗೊಂಡು ಮನೆ ಸಂಪೂರ್ಣವಾಗಿ ಜಖಂಗೊಂಡ ಘಟನೆ ಸಂಭವಿಸಿದೆ.


ಹಮೀದ್ ಅವರು ಪೇಟೆಗೆ ತೆರಳಿದ್ದ ಸಂದರ್ಭದಲ್ಲಿ ಅವರ ಪತ್ನಿ ಖೈರುನ್ನಿಸಾ ಅವರು ಅಡುಗೆ ಕೋಣೆಯಲ್ಲಿ ಕೆಲಸ ಮಾಡುತ್ತಿದ್ದರು. ಈ ವೇಳೆ ಏಕಾಏಕಿ ಗ್ಯಾಸ್ ಸಿಲಿಂಡರ್‌ನ ರೆಗ್ಯುಲೇಟರ್ ಬಳಿ ಬೆಂಕಿ ಹತ್ತಿಕೊಂಡಿದೆ.
ಇದನ್ನು ನೋಡಿ ಖೈರುನ್ನಿಸಾ ಬೊಬ್ಬೆ ಹೊಡೆದಿದ್ದು ನೆರೆಯ ನಿವಾಸಿ ಉಮ್ಮರ್‌ರವರು ತೋಟದಿಂದ ಓಡಿಬಂದು ಮನೆಯೊಳಗಿದ್ದ ಮೂವರನ್ನೂ ಅಂಗಳಕ್ಕೆ ಕರೆದೊಯ್ದು ರಕ್ಷಿಸಿದ್ದಾರೆ.
ಅವರು ಹೊರಗೆ ಬಂದ ಕೆಲವೇ ಕ್ಷಣಗಳಲ್ಲಿ ಸಿಲಿಂಡರ್ ಸ್ಪೋಟಗೊಂಡು ಛಿದ್ರಗೊಂಡಿದೆ.



ಸ್ಪೋಟದ ತೀವ್ರತೆಗೆ ಮನೆಯ ಗೋಡೆಗಳು ಬಿರುಕು ಬಿಟ್ಟು, ಅಡುಗೆ ಕೋಣೆ ಸಂಪೂರ್ಣ ಧ್ವಂಸಗೊಂಡಿದೆ. ಮನೆಯಲ್ಲಿದ್ದ ಗೃಹಬಳಕೆಯ ವಸ್ತುಗಳು, ದಾಖಲೆಗಳು ಹಾಗೂ ಪೀಠೋಪಕರಣಗಳು ಸುಟ್ಟು ಹೋಗಿದ್ದು, ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದೆ.
ಸ್ಥಳಕ್ಕೆ ಅಧಿಕಾರಿಗಳು, ಗ್ಯಾಸ್ ವಿತರಕರ ಭೇಟಿ:
ಘಟನೆ ವಿಷಯ ತಿಳಿಯುತ್ತಿದ್ದಂತೆ ವಿಟ್ಲ ಪೊಲೀಸ್ ಠಾಣೆಯ ಸಿಬ್ಬಂದಿ ಹಾಗೂ ವಿಟ್ಲದ ಇಂಡೇನ್ ಗ್ಯಾಸ್ ವಿತರಕ ಸಾಯಿ ಗಣೇಶ್ ಸಂಸ್ಥೆಯ ಮಾಲಕ ಸತೀಶ ಆಳ್ವ ಸೇರಿದಂತೆ ಪ್ರಮುಖರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಐದು ಲಕ್ಷಕ್ಕೂ ಹೆಚ್ಚು ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ.
ಶಾಸಕ ಅಶೋಕ್ ಕುಮಾರ್ ರೈ ಭೇಟಿ
ಗ್ಯಾಸ್ ಸಿಲಿಂಡರ್ ಸ್ಪೋಟಗೊಂಡು ಹಾನಿಗೊಂಡ ಮನೆಗೆ ಶಾಸಕ ಅಶೋಕ್ ಕುಮಾರ್ ರೈ ಭೇಟಿ ನೀಡಿದ್ದಾರೆ. ಗ್ಯಾಸ್ ಏಜೆನ್ಸಿಯವರಿಗೆ ಕರೆ ಮಾಡಿದ ಶಾಸಕರು, ಈ ಬಗ್ಗೆ ಪರಿಶೀಲನೆ ನಡೆಸಿ ಪರಿಹಾರ ಕೊಡಿಸುವ ಬಗ್ಗೆ ಸೂಚನೆಯನ್ನು ನೀಡಿದ್ದಾರೆ. ಮನೆ ಮಾಲಕಿಯ ಸಮಯಪ್ರಜ್ಞೆಗೆ ಶಾಸಕರು ಈ ಸಂದರ್ಭದಲ್ಲಿ ಮೆಚ್ಚುಗೆ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ವಿಟ್ಲ ಕಾಂಗ್ರೆಸ್ ಮುಖಂಡ ಅಬ್ದುಲ್ ರಹಿಮಾನ್ ಕರುಂಬಳ ಉಪಸ್ಥಿತರಿದ್ದರು.










