







ಪುತ್ತೂರು: ಹೆಲ್ಮೆಟ್ ಧರಿಸಿ ಸ್ಕೂಟರ್‌ನಲ್ಲಿ ಬಂದ ವ್ಯಕ್ತಿಯೊಬ್ಬ ನಕಲಿ ‘ಗೂಗಲ್ ಪೇ’ ಪಾವತಿಯ ನಟನೆಯಿಂದ ಸ್ಥಳೀಯ ಅಂಗಡಿಯೊಂದಕ್ಕೆ ಸಾವಿರಾರು ರೂಪಾಯಿ ವಂಚಿಸಿ ಪರಾರಿಯಾದ ಘಟನೆ ಆ. 26ರ ಸಂಜೆ ಕುಂಬ್ರದ ಗಾಣಿಗ ಆಯಿಲ್ ಮಿಲ್‌ನಲ್ಲಿ ನಡೆದಿದೆ.


ಸ್ಕೂಟರ್‌ನಲ್ಲಿ ಬಂದು ಇಳಿದ ಅಪರಿಚಿತ ವ್ಯಕ್ತಿಯೊಬ್ಬ, ತನ್ನ ಮುಖ ಕಾಣಿಸದಂತೆ ಹೆಲ್ಮೆಟ್ ಧರಿಸಿಕೊಂಡೇ ಅಂಗಡಿಗೆ ಪ್ರವೇಶಿಸಿದ್ದಾನೆ. ಬಳಿಕ 200 ರೂಪಾಯಿ ಮೌಲ್ಯದ ತೆಂಗಿನ ಎಣ್ಣೆ ಖರೀದಿಸಿ, ತನಗೆ ಜರೂರಾಗಿ 1,000 ರೂಪಾಯಿ ನಗದು (ಕ್ಯಾಶ್) ಅಗತ್ಯವಿದೆ ಎಂದು ಅಂಗಡಿ ಮಾಲಕಿಯಲ್ಲಿ ವಿನಂತಿಸಿಕೊಂಡಿದ್ದಾನೆ. ಬದಲಿಗೆ ಎಣ್ಣೆಯ ಬೆಲೆ ಸೇರಿ ಒಟ್ಟು 1,200 ರೂಪಾಯಿಯನ್ನು ತಕ್ಷಣವೇ ಗೂಗಲ್ ಪೇ ಮೂಲಕ ಪಾವತಿಸುವುದಾಗಿ ನಂಬಿಸಿದ್ದಾನೆ.



ಅತನ ಮಾತನ್ನು ನಂಬಿದ ಅಂಗಡಿ ಮಾಲಕಿ, 200 ರೂ. ಮೌಲ್ಯದ ತೆಂಗಿನ ಎಣ್ಣೆ ಹಾಗೂ 1,000 ರೂ. ನಗದನ್ನು ಆತನಿಗೆ ನೀಡಿದ್ದಾರೆ. ಈ ವೇಳೆ ತನ್ನ ಮೊಬೈಲ್‌ನಲ್ಲಿ ಹಣ ಪಾವತಿಸಿದಂತೆ ನಟಿಸಿದ ಆ ವ್ಯಕ್ತಿ, ಕ್ಷಣಾರ್ಧದಲ್ಲಿ ಅಲ್ಲಿಂದ ಸ್ಕೂಟರ್ ಏರಿ ಕಾಲ್ತೆಗೆದಿದ್ದಾನೆ. ನಂತರ ಪರಿಶೀಲಿಸಿದಾಗ ಖಾತೆಗೆ ಹಣ ಜಮೆಯಾಗದಿರುವುದು ಬೆಳಕಿಗೆ ಬಂದಿದ್ದು, ಅಂಗಡಿಯವರಿಗೆ ಹಣವೂ ಸಿಗದೆ, ಎಣ್ಣೆಯೂ ಇಲ್ಲದೆ ವಂಚನೆಗೊಳಗಾಗಿದ್ದಾರೆ.
ಘಟನೆಯುದ್ದಕ್ಕೂ ಆತ ಹೆಲ್ಮೆಟ್ ಕಳಚದೆ ಮುಖ ಮರೆಸಿಕೊಂಡೇ ಕೃತ್ಯ ಎಸಗಿದ್ದಾನೆ. ಡಿಜಿಟಲ್ ಪಾವತಿಯ ಹೆಸರಿನಲ್ಲಿ ನಡೆಯುತ್ತಿರುವ ಇಂತಹ ಹೊಸ ಮಾದರಿಯ ವಂಚನೆಗಳ ಬಗ್ಗೆ ಸ್ಥಳೀಯ ವರ್ತಕರು ಮತ್ತು ಸಾರ್ವಜನಿಕರು ಎಚ್ಚರಿಕೆಯಿಂದಿರಬೇಕಾಗಿ ವಿನಂತಿಸಲಾಗಿದೆ.










