






ಬಂದ್ ಅಂದರೆ ನಾಶ, ಕತ್ತಲು, ಸೋಲು, ತೊಂದರೆಗೆ ಒಳಗಾದವರಿಗೆ ನರಕ ದರ್ಶನ
ಪುತ್ತೂರನ್ನು ಬಂದ್ ಮುಕ್ತ ಮಾಡಲು ಪುತ್ತೂರಿನ ಜನತೆಗೆ, ನಾಯಕರಿಗೆ ಕರೆ


ಪುತ್ತೂರು ಮತ್ತು ದ.ಕ ಜಿಲ್ಲೆ ರಾಜ್ಯದಲ್ಲಿ ಅತ್ಯಂತ ಹೆಚ್ಚು ಬಂದ್ಗೆ ಒಳಗಾಗುವ ಊರಾಗಿತ್ತು. ಅದರಿಂದ ಉಂಟಾಗುತಿದ್ದ ಸಾಮಾಜಿಕ ಸಮಸ್ಯೆಗಳು, ತೊಂದರೆಗಳು ದಿನನಿತ್ಯ ವ್ಯವಹಾರ ಮಾಡುವವರಿಗೆ, ದಿನಕೂಲಿ ಮಾಡಿ ಬದುಕುತ್ತಿರುವವರಿಗೆ ಆಗುತ್ತಿದ್ದ ನಷ್ಟಗಳು ಇಲ್ಲಿನ ಆರ್ಥಿಕ, ಸಾಮಾಜಿಕ ವ್ಯವಸ್ಥೆಯನ್ನು ಹಾಳುಗೆಡುತ್ತಿದ್ದವು. ಊರಿನ ಅಭಿವೃದ್ಧಿಗೆ ಹಿನ್ನಡೆಯಾಗಿತ್ತು. ಕಳೆದ ಕೆಲವು ವರ್ಷಗಳಿಂದ ಪುತ್ತೂರು ಬಂದ್ ಮುಕ್ತ ಊರಾಗಿ ಪರಿವರ್ತನೆಯಾಗಿರುವುದಕ್ಕೆ ಪುತ್ತೂರಿನ ಜನತೆಯ ಪ್ರಯತ್ನವೇ ಕಾರಣವಾಗಿತ್ತು.
ಪುತ್ತೂರು ದರ್ಬೆಯ ಘಟನೆಯ ಬಗ್ಗೆ ಕೇಸುಗಳಾಗಿವೆ. ಪ್ರತಿಭಟನೆಗಳು ನಡೆಯುತ್ತಿವೆ. ಚರ್ಚೆಗಳಾಗುತ್ತಿವೆ. ಅದರ ಬಗ್ಗೆ ಎಲ್ಲಾ ಮಾಧ್ಯಮಗಳಲ್ಲಿ ವರದಿಗಳು, ವೀಡಿಯೋಗಳು ಬಂದಿವೆ. ಒಳಿತು, ಕೆಡುಕುಗಳ ಬಗ್ಗೆ ತಿಳಿಯುವ, ಸುಳ್ಳನ್ನು ಬದಿಗಿರಿಸಿ ಸತ್ಯವನ್ನು ಹುಡುಕುವ ಶಕ್ತಿ ಜನತೆಗೆ ಇದೆ ಎಂದು ನಾವು ನಂಬಿದ್ದೇವೆ. ಇಂದು ಹೋರಾಟಕ್ಕೆ, ವಿಷಯ ಪ್ರತಿಪಾದನೆಗೆ, ಪ್ರತಿಭಟನೆಗೆ, ನ್ಯಾಯಕ್ಕೆ ಹಲವು ದಾರಿಗಳಿವೆ. ಬಂದ್ ಅಂದರೆ ನಾಶ, ಕತ್ತಲು, ತೊಂದರೆಗೆ ಒಳಗಾದವರಿಗೆ ನರಕ ದರ್ಶನ ಮತ್ತು ಅಮಾಯಕರು ಅದಕ್ಕೆ ಬಲಿಯಾಗುತ್ತಾರೆ ಎಂಬುವುದನ್ನು ನೆನಪಿಸಿಕೊಂಡು ಪುತ್ತೂರಿನ ಎಲ್ಲಾ ಪಕ್ಷಗಳ, ಸಮುದಾಯದ ನಾಯಕರು ಮತ್ತು ಜನತೆ ಪುತ್ತೂರಿನಲ್ಲಿ ಬಂದ್ನ್ನು ಬಂದ್ ಮಾಡುವ ಕೆಲಸಕ್ಕೆ ಕೈ ಹಾಕಬೇಕು ಎಂದು ಜನತೆಯ ಪರವಾಗಿ ಕಳಕಳಿಯಿಂದ ವಿನಂತಿಸಿಕೊಳ್ಳುತ್ತೇನೆ. ಆ ಬಗ್ಗೆ ಸಾರ್ವಜನಿಕ ಚರ್ಚೆಯೂ ನಡೆಯಬೇಕೆಂದು ಆಶಿಸುತಿದ್ದೇವೆ.













