






ಕಾವು: ಕಾವು: ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ಪುತ್ತೂರು ಇದರ ಕಾವು ಘಟಕದ ನೇತೃತ್ವದಲ್ಲಿ ಭಾರತೀಯ ಅಂಚೆ ಇಲಾಖೆ ಪುತ್ತೂರು ವಿಭಾಗ ಇವರ ಸಹಕಾರದೊಂದಿಗೆ ಒಂದು ದಿನದ ಆಧಾರ್ ನೋಂದಣಿ ಮತ್ತು ತಿದ್ದುಪಡಿ ಶಿಬಿರವು ಸೆ.6ರಂದು ಕಾವು ಸಮುದಾಯ ಭವನದಲ್ಲಿ ನಡೆಯಿತು.



ಶಿಬಿರವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ರೋಟರಿ ಕ್ಲಬ್ ಪುತ್ತೂರು ಈಸ್ಟ್ ಅಧ್ಯಕ್ಷ ರವಿಕುಮಾರ್ ರೈ ಕೆದಂಬಾಡಿ ಮಠರವರು ಮಾತನಾಡಿ ಇಂತಹ ಶಿಬಿರವು ಗ್ರಾಮೀಣ ಭಾಗದ ಜನರಿಗೆ ತುಂಬಾ ಸಹಕಾರಿಯಾಗಲಿದೆ. ಸಮಾಜದ ಎಲ್ಲಾ ವರ್ಗದ ಜನರು ಇಂತಹ ಶಿಬಿರದ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಶುಭ ಹಾರೈಸಿದರು.



ಅಧ್ಯಕ್ಷತೆ ವಹಿಸಿದ್ದ ಪುತ್ತಿಲ ಪರಿವಾರದ ಸಂಚಾಲಕ ಅರುಣ್ ಕುಮಾರ್ ಪುತ್ತಿಲರವರು ಮಾತನಾಡಿ, ಕಳೆದ 3 ವರ್ಷದಿಂದ ಪುತ್ತಿಲ ಪರಿವಾರ ಟ್ರಸ್ಟ್ ಮೂಲಕ ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಹಲವಾರು ಸಮಾಜಮುಖಿ ಕಾರ್ಯಗಳು, ಸೇವೆಗಳು, ಕೊಡುಗೆಗಳನ್ನು ನೀಡುವ ಕಾರ್ಯಕ್ರವನ್ನು ನಡೆಸುತ್ತಾ ಬಂದಿದ್ದೇವೆ, ಇದೀಗ ಪುತ್ತಿಲ ಪರಿವಾರದ ಕಾವು ಘಟಕದ ಮೂಲಕ ಇದೇ ಮೊದಲ ಬಾರಿಗೆ ಸರ್ಕಾರಿ ಸೇವೆಗಳನ್ನು ಗ್ರಾಮೀಣ ಭಾಗದ ಜನರಿಗೆ ಸುಲಭಗೊಳಿಸುವ ನಿಟ್ಟಿನಲ್ಲಿ ಆಧಾರ್ ಕಾರ್ಡ್‌ನಲ್ಲಿರುವ ಸಮಸ್ಯೆ ಸರಿಪಡಿಸಲು ಅಂಚೆ ಇಲಾಖೆಯ ಸಹಕಾರದೊಂದಿಗೆ ಒಂದು ದಿನದ ಆಧಾರ್ ನೋಂದಣಿ-ತಿದ್ದುಪಡಿ ಶಿಬಿರವನ್ನು ಆಯೋಜಿಸಲಾಗಿದೆ, ಮುಂದಿನ ದಿನಗಳಲ್ಲಿ ಪುತ್ತಿಲ ಪರಿವಾರದ ಮೂಲಕ ಸರ್ಕಾರದ ಎಲ್ಲಾ ಯೋಜನೆ, ಸೌಲಭ್ಯ, ಸವಲತ್ತುಗಳು ಜನಸಾಮಾನ್ಯರಿಗೆ ಸುಲಭವಾಗಿ ತಲುಪಲು ತಾಲೂಕಿನಾದ್ಯಂತ ಮಾಹಿತಿ ಶಿಬಿರವನ್ನು ಆಯೋಜಿಸಲಾಗುವುದು, ಸಮಾಜದ ಹಿತ ಚಿಂತನೆಯೇ ನಮ್ಮ ಮುಖ್ಯ ಧ್ಯೇಯ ಎಂದು ಹೇಳಿದರು.
ಕಾವು ಅಂಚೆ ಇಲಾಖೆಯ ಮುಖ್ಯಸ್ಥರಾದ ಸೌಮ್ಯರವರು ಇಲಾಖೆಯ ಜನಸ್ನೇಹಿ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು.ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ಅಧ್ಯಕ್ಷ ಶ್ರೀರಾಮ್ ಪಾತಾಳರವರು ಶುಭ ಹಾರೈಸಿದರು. ವೇದಿಕೆಯಲ್ಲಿ ಪುತ್ತಿಲ ಪರಿವಾರದ ಕಾವು ಘಟಕದ ಅಧ್ಯಕ್ಷ ಹರೀಶ್ ಕುಂಜತ್ತಾಯ, ಧ್ವನಿ ಮತ್ತು ಬೆಳಕು ತಾಲೂಕು ಸಮಿತಿಯ ಅಧ್ಯಕ್ಷ ಯೋಗೀಶ್ ಕಾವು ಉಪಸ್ಥಿತರಿದ್ದರು.
ಬೆಳಿಗ್ಗೆ ಗಂಟೆ 9.30ರಿಂದ ಸಂಜೆ 5 ಗಂಟೆಯವರೆಗೆ ನಡೆದ ಶಿಬಿರದಲ್ಲಿ ಹೊಸ ಆಧಾರ್ ಕಾರ್ಡ್ ನೋಂದಣಿ, ತಿದ್ದುಪಡಿ, ಬಯೋಮೆಟ್ರಿಕ್ ಅಪ್‌ಡೇಟ್ ಸೇವೆಗಳು ನಡೆಯಿತು. ಶಿಬಿರದಲ್ಲಿ ಸುಮಾರು 180 ಮಂದಿ ನೋಂದಾಯಿಸಿಕೊಂಡಿದ್ದು, ಸಮರ್ಪಕ ದಾಖಲೆಗಳನ್ನು ಹೊಂದಿದ್ದ 95 ಮಂದಿ ಶಿಬಿರದ ಪ್ರಯೋಜನ ಪಡೆದುಕೊಂಡರು.ಕು.ವಿಶಾಖ ಪ್ರಾರ್ಥಿಸಿದರು. ಚಿದಾನಂದ ಆಚಾರ್ಯ ಸ್ವಾಗತಿಸಿ, ಶ್ರೇಯಸ್ ಸಿ.ಎನ್ ವಂದಿಸಿದರು. ಸುನಿಲ್ ಬೋರ್ಕರ್ ಕಾರ್ಯಕ್ರಮ ನಿರೂಪಿಸಿದರು.

ಮನೆಗೆ ತೆರಳಿ ಆಧಾರ್ ಅಪ್ಡೇಟ್:
ಶಿಬಿರದಲ್ಲಿ ಪುತ್ತಿಲ ಪರಿವಾರ ಮತ್ತು ಅಂಚೆ ಇಲಾಖೆಯ ಮಾನವೀಯ ಕಾರ್ಯವೊಂದು ಹೆಚ್ಚು ಪ್ರಶಂಸೆಗೆ ಪಾತ್ರವಾಯಿತು. ಶಿಬಿರದ ಸಂಜೆಯ ವೇಳೆಗೆ ಅಶಕ್ತರ ಮನೆಗೆ ತೆರಳಿ ಅವರ ಮನೆಯಲ್ಲಿಯೇ ಅವರ ಆಧಾರ್ ಸಮಸ್ಯೆಯನ್ನು ಸರಿಪಡಿಸುವ ಕಾರ್ಯ ನಡೆಯಿತು. ಅನಾರೋಗ್ಯದಿಂದ ಅಶಕ್ತರಾಗಿದ್ದ ಸುಮಾರು 80 ವರ್ಷ ಪ್ರಾಯದ ಪೂವಂದೂರಿನ ರಾಧಾ ಅವರ ಮನೆಗೆ ತೆರಳಿ ಅವರ ಆಧಾರ್ ಅಪ್‌ಡೇಟ್ ಮಾಡಲಾಯಿತು. ಅಂಚೆ ಇಲಾಖೆಯ ಸಿಬ್ಬಂದಿಗಳೊಂದಿಗೆ ಪುತ್ತಿಲ ಪರಿವಾರದ ಕಾರ್ಯಕರ್ತರು ಸಹಕರಿಸಿದರು. ಜತೆಗೆ ಶಿಬಿರಕ್ಕೆ ಬರುವ ಅಶಕ್ತರು, ಅಂಗವಿಕಲರು, ಹಿರಿಯ ನಾಗರಿಕರಿಗೆ ಪುತ್ತಿಲ ಪರಿವಾರದಿಂದ ಉಚಿತ ವಾಹನದ ವ್ಯವಸ್ಥೆ ಮಾಡಲಾಯಿತು.










