







ನೆಕ್ಕಿಲಾಡಿ: ನಮ್ಮೂರು ನಮ್ಮವರು ಮೈಂದಡ್ಕ (ರಿ) ಸಂಘಟನೆಯ ಇಪ್ಪತ್ತನೇ ವರ್ಷಾಚರಣೆ ಪ್ರಯುಕ್ತ “ಕೆಸರ್ದ ಕಂಡೊಡು ಒಂಜಿ ದಿನ ನಮ್ಮೂರುದ ಗಮ್ಮತ್” ಕಾರ್ಯಕ್ರಮ ಮರ್ವತ್ತಡ್ಕದ ಕೆಸರಿನ ಗದ್ದೆಯಲ್ಲಿ ಅದ್ದೂರಿಯಾಗಿ ನಡೆಯಿತು.



ಪಲ್ಲತ್ತಡ್ಕ ಹೊಸಮ್ಮ ದೈವಸ್ಥಾನದ ಪ್ರಧಾನ ಅರ್ಚಕ ರಮೇಶ್ ಭಟ್ ಅಲಿಮಾರ ತೆಂಗಿನ ಹೊಂಬಾಳೆ ಅರಳಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ತುಳುನಾಡಿನ ಸಂಸ್ಕೃತಿ ಉಳಿಸುವ ನಿಟ್ಟಿನಲ್ಲಿ ಇಂತಹ ಕಾರ್ಯಕ್ರಮ ಅಗತ್ಯ. ಇಂದು ಗದ್ದೆಗಳು ಕಟ್ಟಡಗಳಾಗುತ್ತಿವೆ, ಸಂಸ್ಕೃತಿ ನಾಶದ ಅಂಚಿನಲ್ಲಿದೆ. ಇಂತಹ ಕಾರ್ಯಕ್ರಮಗಳಿಂದ ಮಕ್ಕಳಿಗೆ ಹಳ್ಳಿಯ ಬದುಕಿನ ಅರಿವು ಮೂಡುತ್ತದೆ ಎಂದು ಅವರು ಶುಭ ಹಾರೈಸಿದರು.




ಉಪ್ಪಿನಂಗಡಿ ಶ್ರೀ ನಿಧಿ ಮೊಬೈಲ್ ಮಾಲಕ ಜಯಪ್ರಕಾಶ್ ಶೆಟ್ಟಿ ಮಾತನಾಡಿ, ಸಂಘಟನೆಯು ವಿಭಿನ್ನ ಕಾರ್ಯಶೈಲಿಯಿಂದ ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಿದೆ. ಇದರ ಕಾರ್ಯ ಇನ್ನಷ್ಟು ವಿಸ್ತರಿಸಲಿ. ಇಪ್ಪತ್ತರ ಸಂಭ್ರಮದಲ್ಲಿರುವ ಸಂಘಟನೆಯನ್ನು ಉಪ್ಪಿನಂಗಡಿ ಗಣೇಶೋತ್ಸವ ಸಮಿತಿಯಿಂದ ಸನ್ಮಾನಿಸಲಾಗುವುದು ಎಂದರು. ಅಧ್ಯಕ್ಷ ಪುರುಷೋತ್ತಮ ನಾಯ್ಕ, ಉಪಾಧ್ಯಕ್ಷ ಹೊನ್ನಪ್ಪ ನಾಯ್ಕ, ಸಂಚಾಲಕ ಗಣೇಶ್ ನಾಯಕ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ನೂತನ ಮಹಮ್ಮಾಯಿ ಭಜನಾ ತಂಡದ ಕುಣಿತ ಭಜನೆಯೊಂದಿಗೆ ಕಾರ್ಯಕ್ರಮ ಆರಂಭವಾಯಿತು. ಗದ್ದೆಗೆ ಹಾಲು ಎರೆಯುವ ಮೂಲಕ ಕ್ರೀಡಾಕೂಟ ಉದ್ಘಾಟಿಸಲಾಯಿತು. ಕೆಸರಿನ ಗದ್ದೆಯಲ್ಲಿ ವಿವಿಧ ಗ್ರಾಮೀಣ ಕ್ರೀಡೆಗಳನ್ನು ಆಯೋಜಿಸಿ ವಿಜೇತರಿಗೆ ಬಹುಮಾನ ನೀಡಲಾಯಿತು.
ಸಂಜೆ ನಡೆದ ಸಮಾರೋಪದಲ್ಲಿ ರೋಟರಿ ಕ್ಲಬ್ ನಿಕಟಪೂರ್ವಾಧ್ಯಕ್ಷ ಜಾನ್ ಕೆನ್ಯೂಟ್, ಪ್ರದೀಪ್ ನೆಕ್ಕಿಲ, ಕುಂಞಣ್ಣ ದರ್ಬೆ, ವಿಶ್ವನಾಥ ನಾಯ್ಕ ದರ್ಖಾಸು ಉಪಸ್ಥಿತರಿದ್ದರು. ಮಧ್ಯಾಹ್ನ 27 ಬಗೆಯ ತುಳುನಾಡಿನ ತಿಂಡಿಗಳ ಪ್ರದರ್ಶನ ಹಾಗೂ ವಿತರಣೆ ನಡೆಯಿತು. ಸಂಜೆ ತುಳು ಜನಪದ ನೃತ್ಯ ನಡೆಯಿತು. ಮಹಿಳೆಯರು, ಮಕ್ಕಳು ಸೇರಿ 300ಕ್ಕೂ ಅಧಿಕ ಮಂದಿ ಭಾಗವಹಿಸಿದ್ದರು. ಗದ್ದೆ ಬೇಸಾಯದ ಸಲಕರಣೆಗಳಿಂದ ವೇದಿಕೆ ಅಲಂಕರಿಸಲಾಗಿತ್ತು.










