ವಿವೇಕಾನಂದ ಪದವಿಪೂರ್ವ ವಿದ್ಯಾಲಯದಲ್ಲಿ “ವಿವೇಕ ವಿಜಯ” ಶೀರ್ಷಿಕೆಯಡಿ ವಿಶೇಷ ಉಪನ್ಯಾಸ – ಕಾರ್ಯಕ್ರಮಗಳ ಉದ್ಘಾಟನೆ

0

ಯುವಜನತೆ ನವಭಾರತದ ನಿರ್ಮಾತೃಗಳು : ಚಕ್ರವರ್ತಿ ಸೂಲಿಬೆಲೆ


ಪುತ್ತೂರು: ಸೆಪ್ಟೆಂಬರ್ 11, ಭಾರತ ಜಗತ್ತಿನ ಮೇಲೆ ಗೆಲುವನ್ನು ಸಾಧಿಸಿದ ದಿನ .. ಪ್ರಪಂಚವನ್ನು ಗೆಲ್ಲುವುದಕ್ಕೆ ಬೇರೆ ಬೇರೆ ಮಾರ್ಗಗಳಿವೆ. ಅವುಗಳಲ್ಲಿ ಬಹುಪಾಲು ಹಿಂಸಾತ್ಮಕ ಹಾಗೂ ದುರಾಸೆಯ ಮಾರ್ಗಗಳೇ ತುಂಬಿವೆ . ಆದರೆ ತನ್ನ ಜ್ಞಾನದಿಂದ ಜಗತ್ತನ್ನು ಗೆದ್ದ ಏಕೈಕ ರಾಷ್ಟ್ರವೆಂದರೆ ಭಾರತ ಮಾತ್ರ. ಈ ನೆಲ ಅಂತಹ ಜ್ಞಾನ ಪರಂಪರೆಯನ್ನು ಹೊಂದಿದೆ. ಸ್ವಾಮಿ ವಿವೇಕಾನಂದರು ಈ ವಿಶೇಷ ಜ್ಞಾನ ಪರಂಪರೆಯ ಆಧ್ಯಾತ್ಮ ಶಕ್ತಿಯ ರೂವಾರಿ. ಇಂತಹ ಮಹಾನ್ ಸಂತರ ಸಂದೇಶದಿಂದ ಪ್ರೇರಣೆ ಪಡೆದು ಇಂದಿನ ಯುವಕರು ಸ್ವಂತ ಬೆಳವಣಿಗೆಯ ಜೊತೆಗೆ ಸಮಾಜದ ಮತ್ತು ದೇಶದ ಬೆಳವಣಿಗೆಯನ್ನು ತಮ್ಮ ಗುರಿಯನ್ನಾಗಿಸಿಕೊಳ್ಳಬೇಕು. ಆಗ ಭಾರತೀಯತೆ ಕೇವಲ ಒಂದು ಗುರುತಾಗಿ ಉಳಿಯದೆ, ಮಾನವೀಯತೆ ಮತ್ತು ವಿಶ್ವಭ್ರಾತೃತ್ವದ ಜೀವನಮೌಲ್ಯವಾಗಿ ರೂಪುಗೊಳ್ಳುತ್ತದೆ. ಭಾರತೀಯತೆಯನ್ನು ಪೋಷಿಸಬೇಕಾದ ಇಂದಿನ ಯುವಜನತೆಯೇ ನವಭಾರತದ ನಿರ್ಮಾತೃಗಳು ಎಂದು ಚಿಂತಕರು ಹಾಗೂ ಖ್ಯಾತ ವಾಗ್ಮಿಗಳಾದ ಚಕ್ರವರ್ತಿ ಸೂಲಿಬೆಲೆ ನುಡಿದರು. ಇವರು ವಿವೇಕಾನಂದ ಪದವಿಪೂರ್ವ ವಿದ್ಯಾಲಯದಲ್ಲಿ ಸ್ವಾಮಿ ವಿವೇಕಾನಂದರ ಚಿಕಾಗೋ ಉಪನ್ಯಾಸದ 133ನೇ ವರ್ಷಾಚರಣೆಯ ಪ್ರಯುಕ್ತ ಹಮ್ಮಿಕೊಳ್ಳಲಾದ ವಿವೇಕ ವಿಜಯ ವಿಶೇಷ ಉಪನ್ಯಾಸ ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಗಳಾಗಿ ಪಾಲ್ಗೊಂಡು ಮಾತನಾಡಿದರು.


ಕಾರ್ಯಕ್ರಮವನ್ನು ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿಗಳಾದ ವಿಜಯನಾರಾಯಣ ಕೆ.ಎಂ. ಇವರು ದೀಪ ಪ್ರಜ್ವಲನೆಯ ಮೂಲಕ ಉದ್ಘಾಟಿಸಿ, ಸ್ವಾಮಿ ವಿವೇಕಾನಂದರ ಚಿಂತನೆಗಳಿಂದ ಪ್ರೇರಣೆ ಪಡೆದು ಯುವಕರು ತಮ್ಮ ಶಕ್ತಿಯನ್ನು ಆತ್ಮವಿಶ್ವಾಸ, ಜ್ಞಾನ, ಶಿಸ್ತು ಮತ್ತು ರಾಷ್ಟ್ರ ನಿರ್ಮಾಣದ ಕಾರ್ಯಗಳಲ್ಲಿ ಬಳಸಬೇಕು. ತರುಣ ಶಕ್ತಿ ಸಾಧನೆಯ ಬಲವಾದರೆ, ವೈಚಾರಿಕತೆ ದಿಕ್ಕು ಮತ್ತು ವಿವೇಕತೆ ವಿಜಯದ ಮಾರ್ಗವಾಗಿದೆ ಎಂದು ಹೇಳಿದರು. ಮುಖ್ಯ ಅತಿಥಿಗಳಾದ ಕೇಶನ ಅಮೈ ಮಾಲಕರು ಎಸ್.ಆರ್.ಕೆ ಲ್ಯಾಡರ್ಸ್ ಪುತ್ತೂರು,ಇವರು ಮಾತಾನಾಡುತ್ತಾ, ಹದಿಹರೆಯದ ಮನಸ್ಸಿನಲ್ಲಿ ಭಾರತೀಯತೆಯ ಬೀಜವನ್ನು ಬಿತ್ತಿ, ನಮ್ಮ ಸಂಸ್ಕೃತಿ, ಪರಂಪರೆ, ಮೌಲ್ಯಗಳು ಮತ್ತು ರಾಷ್ಟ್ರದ ಬಗ್ಗೆ ಹೆಮ್ಮೆಯ ಭಾವನೆಯನ್ನು ಬೆಳೆಸುವುದು ಇಂದಿನ ಅಗತ್ಯವಾಗಿದೆ ಎಂದು ನುಡಿದರು. ಕಾರ್ಯಕ್ರಮದ ವೇದಿಕೆಯಲ್ಲಿ ,ವಿವೇಕಾನಂದ ಪದವಿಪೂರ್ವ ವಿದ್ಯಾಲಯದ ಆಡಳಿತಮಂಡಳಿ ಅಧ್ಯಕ್ಷರು ಹಾಗೂ ವಿವೇಕಾನಂದ ವಿದ್ಯಾವರ್ಧಕ ಸಂಘದ ನಿರ್ದೇಶಕರಾದ ರವೀಂದ್ರ ಪಿ, ಪ್ರಾಂಶುಪಾಲರಾದ ಎಂ. ದೇವಿಚರಣ್ ರೈ ಇವರು ಉಪಸ್ಥಿತರಿದ್ದರು.

ವಿವೇಕಾನಂದ ಪದವಿಪೂರ್ವ ಕಾಲೇಜಿನ ಆಡಳಿತಮಂಡಳಿ ನಿರ್ದೇಶಕರಾದ ಡಾ. ಕೆ.ಎನ್ ಸುಬ್ರಹ್ಮಣ್ಯ, ಡಾ. ಕೃಷ್ಣ ಪ್ರಸನ್ನ ಕೆ. ಉಪನ್ಯಾಸಕ, ಉಪನ್ಯಾಸಕೇತರ ವೃಂದದವರು ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡರು.
ಕಾರ್ಯಕ್ರಮದ ಆರಂಭದಲ್ಲಿ ವಿದ್ಯಾರ್ಥಿನಿಯರು ಪ್ರೇರಣಾ ಗೀತೆ, ವಿವೇಕ ಗೀತಾ ನಮನವನ್ನು ಹಾಡಿದರು. ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಹಂಸಿನಿ ಪ್ರಾರ್ಥಿಸಿದರು. ,ಕಾಲೇಜಿನ ಆಡಳಿತಮಂಡಳಿ ಅಧ್ಯಕ್ಷರು ಹಾಗೂ ವಿವೇಕಾನಂದ ವಿದ್ಯಾವರ್ಧಕ ಸಂಘದ ನಿರ್ದೇಶಕರಾದ ರವೀಂದ್ರ ಪಿ, ಇವರು ಪ್ರಾಸ್ತಾವಿಕ ನುಡಿಗಳೊಂದಿಗೆ ಸ್ವಾಗತಿಸಿದರು. ಉಪನ್ಯಾಸಕಿ ಡಾ. ಸ್ನೇಹಾ ಬಿ.ಎಸ್ ಕಾರ್ಯಕ್ರಮವನ್ನು ನಿರೂಪಿಸಿ, ವಂದಿಸಿದರು.

LEAVE A REPLY

Please enter your comment!
Please enter your name here