ಓಂ ಶ್ರೀ ಶಕ್ತಿ ಆಂಜನೇಯ ಮಂತ್ರಾಲಯ, ಆಂಜನೇಯ ನಗರ, ಬೊಳುವಾರು, ಪುತ್ತೂರು, ದ.ಕ. ಫೋನ್: 08251-314353

ನಂಬಿಕೆ, ಭಕ್ತಿ, ಶ್ರದ್ಧೆ ಮೇಳೈಸಿದರೆ ಅಲ್ಲಿ ಭಗವಂತನ ದಿವ್ಯ ಸಾನಿಧ್ಯ ನೆಲೆಯಾಗುತ್ತದೆ ಎಂಬುದಕ್ಕೆ ಬೊಳುವಾರಿನ ಆಂಜನೇಯ ಮಂತ್ರಾಲಯ ಸಾಕ್ಷಿ. ೧೯೩೯ರಲ್ಲಿ ಪಂಡಿತ ಮಹಾಲಿಂಗ ಮಣಿಯಾಣಿ ಈ ಪುಣ್ಯ ತಾಣವನ್ನು ನಿರ್ಮಿಸಿದರು. ಮಂದಿರದ ರೂಪದಲ್ಲಿರುವ ಮಂತ್ರಾಲಯದ ಕಟ್ಟಡದ ಕೆಳಗಡೆ ಶ್ರೀ ಶಾರದೆಯ ಸನ್ನಿಧಾನ, ಗುಳಿಗನ ಕಲ್ಲು, ಮೇಲೆ ಮಹಡಿಯಲ್ಲಿ ಆಂಜನೇಯ ಮತ್ತು ಶ್ರೀಶಕ್ತಿಯ ಸಾನಿಧ್ಯ. ಭಕ್ತಿಯಿಂದ ಪ್ರಾರ್ಥಿಸಿದರೆ ಕಂಕಣಬಲ ಕೂಡಿ ಬರುವುದು ಇಲ್ಲಿನ ವಿಶೇಷತೆಯಾಗಿದೆ. ಶನಿದೋಷ ನಿವಾರಣೆಗಾಗಿ ಆಂಜನೇಯನಿಗೆ ಎಣ್ಣೆ ಸಮರ್ಪಣೆ, ಅಭಿಷೇಕ ಇಲ್ಲಿನ ವಿಶೇಷ ಸೇವೆಯಾಗಿದೆ.
ಪ್ರತೀವರ್ಷ ನವರಾತ್ರಿ ಉತ್ಸವವು ವಿಜೃಂಭಣೆಯಿಂದ ಜರಗುತ್ತಿದ್ದು ಒಂಭತ್ತು ದಿವಸಗಳ ಕಾಲ ಪೂಜೆ, ಭಜನೆ, ಮಂಗಲೋತ್ಸವ ಮತ್ತು ಶಾರದಾ ದೇವಿಯ ಮೆರವಣಿಗೆ ನಡೆಯುತ್ತದೆ. ಮಂತ್ರಾಲಯವು ಸಂಗೀತ, ನೃತ್ಯ, ಯಕ್ಷಗಾನ, ವಾದ್ಯವೃಂದ ಮುಂತಾದ ಸಾಂಸ್ಕೃತಿಕ ಸ್ವರೂಪ ಪಡೆದುಕೊಂಡಿದೆ. ಪ್ರಸ್ತುತ ಶ್ರೀ ಆಂಜನೇಯ ಯಕ್ಷಗಾನ ಕಲಾ ಸಂಘ ರಚನೆಗೊಂಡು ಸಕ್ರಿಯವಾಗಿ ಯಕ್ಷ ಲಹರಿಯ ಸಂವರ್ಧನೆಯಲ್ಲಿ ತೊಡಗಿದೆ.