ಹಿರೇಬಂಡಾಡಿ ಗ್ರಾಮ

ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ಹಿರೇಬಂಡಾಡಿ ಮೊ: 9980204752, 9740964766

ಒಂದು ಕಾಲದಲ್ಲಿ ತೋಳ್ಪಾಡಿತ್ತಾಯ ಮನೆತನದವರಲ್ಲಿದ್ದ ಹಿರೇಬಂಡಾಡಿ ಶ್ರೀ ಸುಬ್ರಹ್ಮಣ್ಯ ದೇವಳದ ಆಡಳಿತ ಪ್ರಸ್ತುತ ಧಾರ್ಮಿಕ ದತ್ತಿ ಇಲಾಖೆಯ ವ್ಯಾಪ್ತಿಗೊಳಪಟ್ಟಿದ್ದು, ಇದೀಗ ಇದರ ಹೆಸರು ಶ್ರೀ ಉಳತ್ತೋಡಿ ಷಣ್ಮುಖ ದೇವಸ್ಥಾನವೆಂದು ಉಲ್ಲೇಖವಾಗಿದೆ. ಈ ದೇವಸ್ಥಾನದ ಇತಿಹಾಸದ ಬಗ್ಗೆ ಸ್ಪಷ್ಟ ದಾಖಲೆಗಳು ಲಭ್ಯವಿರದಿದ್ದರೂ, ಊರಿನ ಹಿರಿಯರು ನೀಡುವ ಮಾಹಿತಿ ಈ ರೀತಿ ಇದೆ.
ಒಂದು ಕಾಲದಲ್ಲಿ ಇಲ್ಲಿ ಎರ್ಪೆತ್ತೋಡಿ ಬೀಡಿನ ಬಲ್ಲಾಳ ಅರಸು ಮನೆತನ ಬಳ್ಳಾಲ್ತಿ ಉಸ್ತುವಾರಿಯನ್ನು ನೋಡಿಕೊಳ್ಳುತ್ತಿದ್ದರು. ಅವರಿಗೆ ಮಕ್ಕಳಿಲ್ಲದ ಕಾರಣ ಪುತ್ರ ಸಂತಾನಕ್ಕಾಗಿ ಅವರೊಂದು ದೇವಸ್ಥಾನ ನಿರ್ಮಾಣ ಮಾಡಲು ಸಂಕಲ್ಪ ಮಾಡಿಕೊಂಡರು. ಅದರಂತೆ ಹಿರೇಬಂಡಾಡಿಯಲ್ಲಿ ಹರಿಯುತ್ತಿರುವ ಕುಮಾರಧಾರ ನದಿಯ ಸನಿಹದಲ್ಲಿ ದೇವಸ್ಥಾನವನ್ನು ನಿರ್ಮಿಸಿ ಅದರಲ್ಲಿ ಶ್ರೀ ಸುಬ್ರಹ್ಮಣ್ಯನನ್ನು ಪ್ರತಿಷ್ಠಾಪಿಸಿದರು. ಅದಕ್ಕೆ ಪೂಜೆ ನಡೆಸಲು ಗ್ರಾಮದಲ್ಲಿ ವೈದಿಕರಿರದ ಕಾರಣದಿಂದ ನದಿಯ ಆ ಬದಿಯಾದ ಶಾಂತಿಗೋಡಿನ ತೋಳ್ಪಾಡಿತ್ತಾಯ ಕುಟುಂಬದವರನ್ನು ಶ್ರೀ ಸುಬ್ರಹ್ಮಣ್ಯ ದೇವರ ಅರ್ಚಕರಾಗಿ ನೇಮಿಸಿದ್ದರು. ಮಳೆಗಾಲದ ಒಂದು ದಿನ ಕುಮಾರಧಾರ ನದಿ ಉಕ್ಕಿ ಹರಿಯುತ್ತಿದ್ದುದರಿಂದ ನದಿ ದಾಟಿ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಬರಲು ಸಾಧ್ಯವಾಗಲಿಲ್ಲ. ಆಗ ಅವರು ಅಲ್ಲಿಂದಲೇ ಸುಬ್ರಹ್ಮಣ್ಯನನ್ನು ಧ್ಯಾನಿಸಿದಾಗ ನದಿಯಲ್ಲಿ ಬುಡಸಮೇತ ಮಗುಚಿ ಬಿದ್ದ ಬಿದಿರಿನ ಸಸಿಯೊಂದು ತೇಲಿಕೊಂಡು ಬಂತು. ಅದನ್ನು ಏರಿ ಕುಳಿತುಕೊಂಡು ದಡ ದಾಟಿದ ಅರ್ಚಕರು ದೇವಸ್ಥಾನಕ್ಕೆ ಹೋಗಿ ಶ್ರೀ ಸುಬ್ರಹ್ಮಣ್ಯನಿಗೆ ಪೂಜೆಯನ್ನು ನೆರವೇರಿಸಿದರು. ಆ ಬಿದಿರು ನದಿಯ ಈ ಬದಿಗೆ ತಲುಪಿದ ಸ್ಥಳವು ಈಗಲೂ ‘ಓಟೆದ ಬಲ್ಲಿ ಎಂದು ಪ್ರಸಿದ್ಧವಾಗಿದೆ. ಇದು ದೇವಸ್ಥಾನದ ಸನಿಹದಲ್ಲಿದೆ. ಎರ್ಪೆತ್ತೋಡಿಯಲ್ಲಿ ಬಲ್ಲಾಳ್ತಿಯ ಬೀಡಿನ ಕುರುಹುಗಳಿತ್ತಾದರೂ, ಇದೀಗ ಅವುಗಳು ಮಣ್ಣಿನಡಿ ಸೇರಿವೆ. ಈಗ ಈ ಎರ್ಪೆತ್ತೋಡಿ ಬಂಟ ಕುಟುಂಬವೊಂದರ ಸ್ವಾಧೀನದಲ್ಲಿದೆ.
ಬಳಿಕ ಈ ಅರ್ಚಕರಿಗೆ ಇಲ್ಲಿಯೇ ಇರಲು ಉಂಬಳಿಯಾಗಿ ಜಾಗವನ್ನು ನೀಡಲಾಯಿತು. ಕಾಲಕ್ರಮೇಣ ಅರಸು ಮನೆತನಗಳು ನಿರ್ನಾಮ ಹೊಂದಿತಲ್ಲದೆ, ಈ ಪ್ರದೇಶವೆಲ್ಲಾ ಬ್ರಿಟಿಷರ ಆಳ್ವಿಕೆಗೆ ಒಳಪಟ್ಟಿತು. ಆ ಸಂದರ್ಭದಲ್ಲಿ ಈ ದೇವಸ್ಥಾನದ ಮೇಲ್ವಿಚಾರಣೆಯ ಸಂಪೂರ್ಣ ಜವಾಬ್ದಾರಿಯನ್ನು ತೋಳ್ಪಾಡಿತ್ತಾಯ ಕುಟುಂಬಕ್ಕೆ ಬಿಟ್ಟು ಕೊಡಲಾಯಿತು. ಈ ಕುಟುಂಬದ ಮನೆ ದೇವರೂ ಕೂಡಾ ಸುಬ್ರಹ್ಮಣ್ಯನೇ. ಈ ದೇವಸ್ಥಾನವನ್ನು ಇತ್ತೀಚಿನವರೆಗೆ ಮುನ್ನಡೆಸಿಕೊಂಡು ಬಂದವರು ತೋಳ್ಪಡಿತ್ತಾಯ ಕುಟುಂಬದ ಗೋಪಾಲಕೃಷ್ಣ ತೋಳ್ಪಾಡಿತ್ತಾಯ. ಇವರೇ ಇಲ್ಲಿಗೆ ಆಡಳಿತ ಮೊಕ್ತೇಸರರಾಗಿದ್ದರು.
ಇಲ್ಲಿ ಶ್ರೀ ಸುಬ್ರಹ್ಮಣ್ಯ ದೇವರೊಂದಿಗೆ ಗಣಪತಿ ದೇವರನ್ನೂ ಕೂಡಾ ಪ್ರತಿಷ್ಠಾಪಿಸಲಾಗಿದೆ. ಇದಲ್ಲದೇ, ದೇವಾಲಯಕ್ಕೆ ಸಂಬಂಧಿಸಿದ ನಾಗನ ಕಟ್ಟೆ, ಗುಳಿಗ, ದುಗಲಾಯ (ದುಗಲಾಯಿ), ರಕ್ತೇಶ್ವರಿ ಹಾಗೂ ಪಂಜುರ್ಲಿ ದೈವಗಳ ಕಟ್ಟೆಗಳಿವೆ. ಶ್ರೀ ಕುಕ್ಕೆ ಸುಬ್ರಹ್ಮಣ್ಯ ದೇಗುಲದಲ್ಲಿ ನಡೆಯುವ ಎಲ್ಲಾ ಪೂಜೆಗಳೂ ಇಲ್ಲಿಯೂ ನಡೆಯುತ್ತಿವೆ.
ವ್ಯವಸ್ಥಾಪನಾ ಸಮಿತಿ: ಅಧ್ಯಕ್ಷರು – ಮಾಧವ ಗೌಡ ಶಾಂತಿದಡ್ಡ, ಸದಸ್ಯರು: ಯಶವಂತ ಸರೋಳಿ, ನಾರಾಯಣ ಪೂಜಾರಿ ಕಜೆ, ಮಾಧವ ಗೌಡ ಹೆನ್ನಾಳ, ಶ್ರೀಮತಿ ಶಶಿಕಲಾ ಪಡ್ಯೊಟ್ಟು, ಶ್ರೀಮತಿ ಪುನು ಗುಂಡ್ಯ, ಮುತ್ತಪ್ಪ ಎ, ದೇವಿಪ್ರಸಾದ್ ಪಲ್ಲೆಜಾಲು, ಗೋಪಾಲಕೃಷ್ಣ ತೋಳ್ಪಾಡಿತ್ತಾಯ (ಅರ್ಚಕರು).

ಇತರ ದೇವಸ್ಥಾನ / ದೈವಸ್ಥಾನ / ಮಂದಿರಗಳು :-

* ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಕೆಮ್ಮಾರ, ೯೬೮೬೬೮೭೮೮೭
* ಶ್ರೀ ಮಂಜೂ ಭಜನಾ ಮಂದಿರ ಶಿವನಗರ
* ಶ್ರೀ ನಂದಿಕೇಶ್ವರ ಭಜನಾ ಮಂದಿರ (ರಿ.) ಹಿರೇಬಂಡಾಡಿ ನಂದಿನಿನಗರ ಉಪ್ಪಿನಂಗಡಿ ಹಿರೇಬಂಡಾಡಿ
* ಶ್ರೀ ಚಾಮುಂಡೇಶ್ವರಿ ದೇವಸ್ಥಾನ ಕಂಪದಕೋಡಿ, ಅತ್ತಾಜೆ ಹಿರೇಬಂಡಾಡಿ