ಉಪ್ಪಿನಂಗಡಿಯಲ್ಲಿ 50ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ

0

ಅಂತರಂಗದ ಸಂಸ್ಕರಣೆಯೇ ಹಬ್ಬದ ತಿರುಳು: ಸಾಧ್ವಿ ಶ್ರೀ ಮಾತಾನಂದಮಯೀ

ಉಪ್ಪಿನಂಗಡಿ: ಭಾರತದ ಆತ್ಮ ಆಧ್ಯಾತ್ಮವಾಗಿದ್ದು, ನಮ್ಮ ಸಂಸ್ಕೃತಿಯಲ್ಲಿ ಹಬ್ಬಗಳಿಗೆ ಹೆಚ್ಚಿನ ಮಹತ್ವವಿದೆ. ಹಬ್ಬದ ತಿರುಳೇ ಅಂತರಂಗದ ಸಂಸ್ಕರಣೆ. ಹಬ್ಗಗಳ ಆಚರಣೆಯಿಂದ ಆತ್ಮಜ್ಯೋತಿ ಬೆಳಗಲು ಸಾಧ್ಯ ಎಂದು ಒಡಿಯೂರು ಶ್ರೀ ಗುರುದೇವ ದತ್ತ ಸಂಸ್ಥಾನಮ್‌ನ ಸಾಧ್ವಿ ಶ್ರೀ ಮಾತಾನಂದಮಯೀ ತಿಳಿಸಿದರು.

ಉಪ್ಪಿನಂಗಡಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಸೇವಾ ಟ್ರಸ್ಟ್ ನ ವತಿಯಿಂದ ನಡೆಯುತ್ತಿರುವ 50ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ಕಾರ್ಯಕ್ರಮದ ಎರಡನೇ ದಿನವಾದ ಸೆ.15ರಂದು ನಡೆದ ʼಮಾತೃ ದೇವೋಭವ’ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಆಶೀರ್ವಚನ ನೀಡಿದರು.ಜನ ಜೀವನದ ಪ್ರೇರಕ ಶಕ್ತಿ ಗಣಪನಾಗಿದ್ದಾನೆ. ದೃಢವಾದ ಭಕ್ತಿಗೆ ಭಗವಂತನ ಅನುಗ್ರಹ ಖಂಡಿತಾ ಇದೆ. ಉಪ್ಪಿನಂಗಡಿಯ ಶ್ರೀ ಗಣೇಶೋತ್ಸವ ಸಮಿತಿಯು ಕೇವಲ ಹಬ್ಬಾಚರಣೆಗೆ ಮಾತ್ರ ಸೀಮಿತವಾಗದೇ ಸಾಮಾಜಿಕ ಕಾರ್ಯಗಳನ್ನು ನಡೆಸುತ್ತಿರುವುದು ಶ್ಲಾಘನೀಯ. ಒಂಟಿ ಬಡ ಮಹಿಳೆ ಬಾಗಿಯವರಿಗೆ ಮನೆ ನಿರ್ಮಾಣ ಮಾಡಿಕೊಟ್ಟಿರುವುದು ಪುಣ್ಯದ ಕಾರ್ಯ. ಇಂತಹ ಸಾಮಾಜಿಕ ಕಾರ್ಯಗಳು ಎಲ್ಲಾ ಸಮಿತಿಗಳಿಂದಲೂ ನಡೆಯಬೇಕು. ಸತ್ಕರ್ಮವೆನ್ನುವುದು ಜೀವನ ಧರ್ಮದ ಪಥ ಎಂದರು.

ಮುಖ್ಯ ಅತಿಥಿಯಾಗಿದ್ದ ಗೀತಾ ಚಂದ್ರಶೇಖರ ತಾಳ್ತಜೆ ಮಾತನಾಡಿ, ಪ್ರಕೃತಿಯೊಂದಿಗೆ ಚೌತಿಗೆ ಅವಿನಾಭವ ಸಂಬಂಧವಿದ್ದು, ಗಣಪತಿಯು ಜ್ಞಾನ, ವಿವೇಕ ಹಾಗೂ ವಿಘ್ನ ನಾಶಕದ ಪ್ರತೀಕ. ಸಮೃದ್ಧಿಯ ಸಂಕೇತ. ಗಣಪತಿಯ ಕಥೆಯಲ್ಲಿ ಜೀವನ ಮೌಲ್ಯದ ಪಾಠವಿದೆ. ಮಕ್ಕಳಿಗೆ ಉತ್ತಮ ಸಂಸ್ಕಾರ ಕೊಟ್ಟು ಅವರನ್ನು ಈ ಸಮಾಜದ ಉತ್ತಮ ನಾಗರಿಕರನ್ನಾಗಿ ಮಾಡುವುದು ತಾಯಿಯ ಮಹತ್ವದ ಜವಾಬ್ದಾರಿ ಎಂದರು.
ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ- ಮಹಾಕಾಳಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಸದಸ್ಯೆ ಡಾ. ರಮ್ಯ ರಾಜಾರಾಮ್ ಮಾತನಾಡಿ, ಸಾರ್ವಜನಿಕ ಶ್ರೀ ಗಣೇಶೋತ್ಸವದಂತಹ ಆಚರಣೆಗಳು ಸಂಬಂಧಗಳನ್ನು ಗಟ್ಟಿಗೊಳಿಸುವ ಕೆಲಸ ಮಾಡುತ್ತಿದೆ. ಜನರ ಒಗ್ಗೂಡುವಿಕೆಗೆ, ಸಮಾಜ ಸೇವೆಗೆ ಈ ಸಮಿತಿ ಕಾರಣವಾಗಿದೆ. ಸಮುದಾಯಗಳ ನಡುವಿನ ಈ ಒಗ್ಗಟ್ಟು, ಸಾಮರಸ್ಯ ಸದಾ ಇರಲಿ. ಸ್ವಸ್ಥ ಆರೋಗ್ಯವಂತ ಸಮಾಜ ನಮ್ಮದಾಗಲಿ ಎಂದರು.

ಉಪ್ಪಿನಂಗಡಿ ಸಿಎ ಬ್ಯಾಂಕ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶೋಭಾ ಕೆ. ಉಪ್ಪಿನಂಗಡಿ ಗ್ರಾ.ಪಂ. ಮಾಜಿ ಅಧ್ಯಕ್ಷೆ ವಿದ್ಯಾಲಕ್ಷ್ಮೀ ಪ್ರಭು ಮಾತನಾಡಿ ಶುಭ ಹಾರೈಸಿದರು.
ಅಗ್ನಿವೀರ್‌ಗೆ ಆಯ್ಕೆಗೊಂಡ ಪ್ರದೀಪ್ ಕೊಪ್ಪಳ ಹಾಗೂ ಇಂಡಿಯಾ ಬುಕ್ ಆಫ್ ರೆಕಾರ್ಡ್ ನಲ್ಲಿ ದಾಖಲಿಸಿಕೊಂಡ ಯೋಗಸಾಧಕಿ ಕುಮಾರಿ ಅದಿತಿ ಆರ್. ರೈ ಅವರನ್ನು ಈ ಸಂದರ್ಭ ಸನ್ಮಾನಿಸಿ, ಗೌರವಿಸಲಾಯಿತು. ಸುವರ್ಣ ಮಹೋತ್ಸವದ ಶಾಶ್ವತ ಯೋಜನೆಯಡಿ ಸುಮಾರು 8 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿಕೊಟ್ಟ ಮನೆಯ ಕೀಲಿಕೈಯನ್ನು ಬಾಗಿಯವರಿಗೆ ಹಸ್ತಾಂತರಿಸಲಾಯಿತು.

ಕಾರ್ಯಕ್ರಮದಲ್ಲಿ ಬಿಎಸ್ಸೆಫ್‌ನ ನಿವೃತ ಡೆಪ್ಯೂಟಿ ಕಮಾಂಡೆಂಟ್ ಚಂದಪ್ಪ ಮೂಲ್ಯ, ಪಟ್ಲ ಫೌಂಡೇಶನ್‌ನ ಉಪ್ಪಿನಂಗಡಿ ಘಟಕದ ಅಧ್ಯಕ್ಷ ಜಗದೀಶ್ ಶೆಟ್ಟಿ, ಪ್ರಮುಖರಾದ ಅಶೋಕ್ ಕುಮಾರ್ ರೈ ಅರ್ಪಿಣಿಗುತ್ತು, ಕಂಗ್ವೆ ವಿಶ್ವನಾಥ ಶೆಟ್ಟಿ, ಪ್ರಮುಖರಾದ ಜಯಂತಿ ಸುಧಾಕರ ಶೆಟ್ಟಿ, ಶುಭ ಜಯಪ್ರಕಾಶ್ ಶೆಟ್ಟಿ, ಮಾಧವಿ ರೈ, ಸುಜಾತ ಕೃಷ್ಣ, ಗೀತಾ ನೋಂಡಾ, ಶಯನಾ ಪ್ರವೀಣ್, ಗಾಯತ್ರಿ ವಸಂತ್, ವೈಶಾಲಿ ಕುಂದರ್, ಸಮಿತಿಯ ಅಧ್ಯಕ್ಷ ಸುಧಾಕರ ಶೆಟ್ಟಿ, ಕಾರ್ಯದರ್ಶಿ ಜಯಪ್ರಕಾಶ್ ಶೆಟ್ಟಿ, ಸಮಿತಿಯ ಯು. ಯತೀಶ್ ಶೆಟ್ಟಿ, ಚಂದ್ರಹಾಸ ಹೆಗ್ಡೆ, ಶರತ್ ಕೋಟೆ, ಕೀರ್ತನ್ ಕುಮಾರ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.
ಅಧ್ಯಕ್ಷತೆ ವಹಿಸಿದ್ದ ಸಮಿತಿಯ ಮಹಿಳಾ ವಿಭಾಗದ ಅಧ್ಯಕ್ಷೆ ಅನುರಾಧ ಆರ್. ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಸಮಿತಿಯ ಮಹಿಳಾ ವಿಭಾಗದ ಕಾರ್ಯದರ್ಶಿ ಉಷಾಚಂದ್ರ ಮುಳಿಯ ವಂದಿಸಿದರು. ಪ್ರಜ್ಞಾ ಶೆಟ್ಟಿ ನೆಕ್ಕಿಲಾಡಿ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here