







ಪುತ್ತೂರು : ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳ ಗ್ರಾಮೀಣ ಪ್ರದೇಶಗಳಲ್ಲಿ ನಿವೇಶನ ವಿನ್ಯಾಸ ಹಾಗೂ ಕಟ್ಟಡ ನಿರ್ಮಾಣಕ್ಕೆ ಅಗತ್ಯವಿರುವ ತಾಂತ್ರಿಕ ಅನುಮೋದನೆ ಪಡೆಯುವಲ್ಲಿ ಸಾರ್ವಜನಿಕರು ಎದುರಿಸುತ್ತಿರುವ ತಾಂತ್ರಿಕ ಮತ್ತು ಪ್ರಾಯೋಗಿಕ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಲ್ಪಿಸುವಂತೆ ವಿಧಾನ ಪರಿಷತ್ ಸದಸ್ಯರಾದ ಕಿಶೋರ್ ಕುಮಾರ್ ಪುತ್ತೂರು ಅವರು ನಗರಾಭಿವೃದ್ಧಿ ಸಚಿವರಾದ ಡಾ. ಯತೀಂದ್ರ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿದ್ದಾರೆ. ಗ್ರಾಮೀಣ ಪ್ರದೇಶಗಳಲ್ಲಿ ಭೂ ಪರಿವರ್ತನೆ, ಹಳೆಯ ವಿನ್ಯಾಸ ಅನುಮೋದನೆ, ಸ್ಥಳೀಯ ಸಂಸ್ಥೆಗಳ ಕಟ್ಟಡ ಪರವಾನಗಿ ಹಾಗೂ ನಗರ ಯೋಜನಾ ನಿಯಮಗಳ ನಡುವಿನ ಗೊಂದಲಗಳಿಂದಾಗಿ ಸಾರ್ವಜನಿಕರು ಸ್ವಂತ ಜಮೀನಿನಲ್ಲಿ ಮನೆ ನಿರ್ಮಿಸಲು ತೊಂದರೆ ಅನುಭವಿಸುತ್ತಿದ್ದಾರೆ ಎಂದು ಮನವಿಯಲ್ಲಿ ಸಚಿವರ ಗಮನಕ್ಕೆ ತರಲಾಗಿದೆ.


ಮನವಿಯ ಪ್ರಮುಖ ಆಗ್ರಹಗಳು
ಹಳೆಯ ಪ್ರಕರಣಗಳ ಸರಳೀಕರಣ: ಹಿಂದೆ ಒಂದು ಭಾಗಕ್ಕೆ ಅನುಮೋದನೆ ದೊರೆತು, ಉಳಿದ ಭಾಗಕ್ಕೆ ಪ್ರಸ್ತುತ ನಿಯಮಗಳಿಂದ ಅನುಮೋದನೆ ಸಿಗದ ಪ್ರಕರಣಗಳಿಗೆ ಸ್ಪಷ್ಟ ಮಾರ್ಗಸೂಚಿ ರೂಪಿಸುವುದು. ಹಳೆಯ ಭೂ ಪರಿವರ್ತಿತ ನಿವೇಶನಗಳಲ್ಲಿ ನಿರ್ಮಿಸಿದ ಕಟ್ಟಡಗಳಿಗೆ ಹಳೆಯ ವಿನ್ಯಾಸ ಅನುಮೋದನೆ ಕೊರತೆಯಿಂದ ಎದುರಾಗಿರುವ ತೊಂದರೆ ನಿವಾರಿಸಲು ವಿಶೇಷ ಸಕ್ರಮ ವ್ಯವಸ್ಥೆ ಮಾಡುವುದು. ತಾಂತ್ರಿಕ ಅನುಮೋದನೆ ನಂತರದ Commencement Certificate’ ಹಾಗೂ’Completion Certificate’ಪಡೆಯುವ ಪ್ರಕ್ರಿಯೆಯನ್ನು ನಿಗದಿತ ಕಾಲಮಿತಿಯಲ್ಲಿ ಪೂರ್ಣಗೊಳಿಸುವುದು. ಕಾನೂನುಬದ್ಧ ಕಟ್ಟಡಗಳ ವಿಸ್ತರಣೆ, ಹೆಚ್ಚುವರಿ ಮಹಡಿ ನಿರ್ಮಾಣ ಹಾಗೂ ನಿಯಮಾನುಸಾರ ಭೂ ಬಳಕೆ ಬದಲಾಯಿಸಿ ಪರಿಷ್ಕೃತ ವಿನ್ಯಾಸ ಕೋರುವ ಅರ್ಜಿಗಳಿಗೆ ಸರಳ ಕಾರ್ಯವಿಧಾನ ಜಾರಿಗೆ ತರುವುದು.



94ಸಿ, 94ಸಿಸಿ ಫಲಾನುಭವಿಗಳಿಗೆ ವಿನಾಯಿತಿ: ಸರ್ಕಾರದ ಹಕ್ಕುಪತ್ರ ಹೊಂದಿರುವ ಬಡ ಹಾಗೂ ಮಧ್ಯಮ ವರ್ಗದ ಫಲಾನುಭವಿಗಳು ಮನೆ ನಿರ್ಮಿಸುವಾಗ ಎದುರಾಗುವ ತಾಂತ್ರಿಕ ಆಕ್ಷೇಪಣೆಗಳನ್ನು ಸಡಿಲಗೊಳಿಸುವುದು.
ಸಂಪೂರ್ಣ ಆನ್ಲೈನ್ ವ್ಯವಸ್ಥೆ ಹಾಗೂ ‘ಸಕಾಲ’: ಕಚೇರಿಗಳಿಗೆ ಅಲೆದಾಡುವುದನ್ನು ತಪ್ಪಿಸಲು ಅರ್ಜಿ ಸ್ಥಿತಿ, ಆಕ್ಷೇಪಣೆ ಹಾಗೂ ವಿಲೇವಾರಿ ಹಂತಗಳನ್ನು ಆನ್ಲೈನ್ನಲ್ಲೇ ವೀಕ್ಷಿಸುವ ಪಾರದರ್ಶಕ ವ್ಯವಸ್ಥೆ ಜಾರಿಗೆ ತರುವುದು ಮತ್ತು ‘ಸಕಾಲ’ ಕಾಯ್ದೆಯಡಿ ನಿಗದಿತ ಅವಧಿಯಲ್ಲಿ ವಿಲೇವಾರಿ ಮಾಡುವುದು. ಮಂಗಳೂರು ನಗರದ ಪಚ್ಚನಾಡಿ ತ್ಯಾಜ್ಯ ಸಂಸ್ಕರಣಾ ಘಟಕದಲ್ಲಿ ಸುಮಾರು 9 ಲಕ್ಷ ಟನ್ಗೂ ಹೆಚ್ಚು ಕಸ ಶೇಖರಣೆಯಾಗಿದ್ದು, ಅದನ್ನು ತಕ್ಷಣ ವಿಲೇವಾರಿ ಮಾಡಲು ಕ್ರಮ ಕೈಗೊಳ್ಳಬೇಕೆಂದು ಹಾಗೂ ಒಮ್ಮೆ ಸ್ಥಳಕ್ಕೆ ಭೇಟಿ ನೀಡುವಂತೆ ಸಚಿವರಿಗೆ ವಿನಂತಿಸಲಾಯಿತು. ಮಂಗಳೂರಿನ ಸ್ವಚ್ಛತೆಗೆ ರಾಮಕೃಷ್ಣ ಮಿಷನ್ ಕೈಗೊಂಡ ಮಾದರಿ ಕಾರ್ಯಗಳನ್ನು ಈ ಸಂದರ್ಭದಲ್ಲಿ ಸ್ಮರಿಸಲಾಯಿತು. ಜೊತೆಗೆ ಜಿಲ್ಲೆಯ ಸ್ವಚ್ಛತೆಗಾಗಿ ಶ್ರಮಿಸುತ್ತಿರುವ `ಜನ ಶಿಕ್ಷಣ ಟ್ರಸ್ಟ್’ ನಿರ್ದೇಶಕರು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಸ್ವಚ್ಛತಾ ರಾಯಭಾರಿ ಶೀನ ಶೆಟ್ಟಿ ಮತ್ತು ನಿರ್ದೇಶಕ ಕೃಷ್ಣ ಮೂಲ್ಯ ಅವರ ಪರಿಶ್ರಮವನ್ನು ಉಲ್ಲೇಖಿಸಿ, ಮಂಗಳೂರು ನಗರದ ನೈರ್ಮಲ್ಯಕ್ಕೆ ಅಗತ್ಯ ಕ್ರಮ ಕೈಗೊಳ್ಳುವಂತೆ ಶಾಸಕ ಕಿಶೋರ್ ಕುಮಾರ್ ಸಚಿವರಲ್ಲಿ ಒತ್ತಾಯಿಸಿದ್ದಾರೆ.










