ದ್ವೇಷ ಭಾಷಣ ಆರೋಪದ ಎರಡು ಪ್ರತ್ಯೇಕ ಪ್ರಕರಣ : ಜಗದೀಶ್ ಕಾರಂತ್,ಶ್ರೀಕಾಂತ್ ಶೆಟ್ಟಿಗೆ ನಿರೀಕ್ಷಣಾ ಜಾಮೀನು

0

ಪುತ್ತೂರು: ಕೋಮುದ್ವೇಷದ ಹೇಳಿಕೆ,ಭಾಷಣ ಆರೋಪದ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಹಿಂದೂ ಜಾಗರಣ ವೇದಿಕೆಯ ಮುಖಂಡ ಜಗದೀಶ್ ಕಾರಂತ್ ಮತ್ತು ಶ್ರೀಕಾಂತ್ ಶೆಟ್ಟಿ ಕಾರ್ಕಳ ಅವರಿಗೆ ಪುತ್ತೂರು ಜಿಲ್ಲಾ ನ್ಯಾಯಾಲಯ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.


ಪುತ್ತೂರಿನ ದರ್ಬೆಯಲ್ಲಿ ಇತ್ತೀಚೆಗೆ ನಡೆದ ಘಟನೆಯಲ್ಲಿ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಗಾಯಾಳು ಅಂಜನಾ ಪೈ ಅವರನ್ನು ಆ.26ರಂಧು ಭೇಟಿ ಮಾಡಿ ಆರೋಗ್ಯ ವಿಚಾರಿಸಿದ ಬಳಿಕ ಅವರ ಪತಿ ಸದಾಶಿವ ಪೈ ಅವರೊಂದಿಗೆ ಮಾತುಕತೆ ನಡೆಸಿ ಬಳಿಕ ಮಾಧ್ಯಮದೊಂದಿಗೆ ಮಾತನಾಡಿದ್ದ ಜಗದೀಶ್ ಕಾರಂತ್,ಈ ಘಟನೆ ಅನಿರೀಕ್ಷಿತವಲ್ಲ.ಇದು ಮತಾಂಧತೆಯ ಮನಸ್ಥಿತಿಯ ಪ್ರದರ್ಶನವಾಗಿದ್ದು, ಪುತ್ತೂರಿನಲ್ಲಿ ಆರಂಭವಾಗಿರುವ ವಾಣಿಜ್ಯ ಭಯೋತ್ಪಾದನೆ’ಯ ಮೊದಲ ಘಟನೆ ಎಂದು ಹೇಳಿಕೆ ನೀಡಿದ್ದರು. ಬಳಿಕದ ಬೆಳವಣಿಗೆಯಲ್ಲಿ ಪುತ್ತೂರು ಮಾನವ ಬಂಧುತ್ವ ವೇದಿಕೆಯ ಪ್ರಧಾನ ಸಂಚಾಲಕ ಅಮಳ ರಾಮಚಂದ್ರ ಅವರು ಈ ಕುರಿತು ಪೊಲೀಸರಿಗೆ ದೂರು ನೀಡಿದ್ದರು. ಪುತ್ತೂರಿನ ಹೊರಗಿನ ಪ್ರದೇಶದ ಜಗದೀಶ ಕಾರಂತ್ ಎಂಬ ವ್ಯಕ್ತಿ ಪುತ್ತೂರಿಗೆ ಆಗಮಿಸಿ ವಿವಿಧ ಸಮುದಾಯಗಳ ನಡುವೆ ದ್ವೇಷ,ವಿರೋಧ ಮತ್ತು ಅಶಾಂತಿ ಹರಡುವ ಹೇಳಿಕೆಗಳನ್ನು ನೀಡಿದ್ದಾರೆ. ಅವರ ಹೇಳಿಕೆಯಲ್ಲಿ ಉದ್ದೇಶಪೂರ್ವಕವಾಗಿ ಸುಳ್ಳು ಮಾಹಿತಿ ಮತ್ತು ವದಂತಿಗಳನ್ನು ನೀಡಿ ಸಾರ್ವಜನಿಕರಲ್ಲಿ ಭಯ, ಗೊಂದಲ ಹಾಗೂ ಕೋಮು ದ್ವೇಷ ಉಂಟುಮಾಡುವ ಪ್ರಯತ್ನ ನಡೆಸಲಾಗಿದೆ ಎಂದು ಅವರು ದೂರಿನಲ್ಲಿ ಆರೋಪಿಸಿ,ಜಗದೀಶ್ ಕಾರಂತ ಅವರ ವಿರುದ್ಧ ಸೂಕ್ತ ಕಾನೂನು ಕ್ರಮಕ್ಕೆ ಆಗ್ರಹಿಸಿದ್ದರು.ಪೊಲೀಸರು ಕಾರಂತ ಅವರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದರು. ಇದೀಗ ಈ ಪ್ರಕರಣದಲ್ಲಿ ಆರೋಪಿ ಜಗದೀಶ್ ಕಾರಂತ್ ಅವರಿಗೆ ಪುತ್ತೂರು ಐದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ನಿರೀಕ್ಷಣಾ ಜಾಮೀನು ನಡೆದಿದೆ.


ಶ್ರೀಕಾಂತ್ ಶೆಟ್ಟಿಗೂ ನಿರೀಕ್ಷಣಾ ಜಾಮೀನು:
ದರ್ಬೆ ಘಟನೆಗೆ ಸಂಬಂಧಿಸಿ ಆ.31ರಂದು ನಡೆದಿದ್ದ ಪುತ್ತೂರು ಚಲೋ ಕಾರ್ಯಕ್ರಮದಲ್ಲಿ ಭಾಷಣ ಮಾಡಿದ್ದ ಹಿಂದೂ ಸಂಘಟನೆ ಮುಖಂಡ ಶ್ರೀಕಾಂತ್ ಶೆಟ್ಟಿ ಅವರ ವಿರುದ್ಧವೂ ಕೋಮುದ್ವೇಷದ ಭಾಷಣ ಮಾಡಿದ್ದ ಆರೋಪದಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು.ಈ ಪ್ರಕರಣದಲ್ಲಿ ಶ್ರೀಕಾಂತ್ ಶೆಟ್ಟಿಗೂ ಪುತ್ತೂರು ಐದನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.ಈ ಎರಡೂ ಪ್ರಕರಣಗಳಲ್ಲಿಯೂ ಆರೋಪಿಗಳ ಪರ ವಕೀಲ ಮಹೇಶ್ ಕಜೆ ಅವರು ವಾದಿಸಿದ್ದರು.

LEAVE A REPLY

Please enter your comment!
Please enter your name here