ಬಂಬಿಲ ಹಾಲು ಉತ್ಪಾದಕರ ಸಹಕಾರ ಸಂಘದ ವಾರ್ಷಿಕ ಸಾಮಾನ್ಯ ಸಭೆ

0

ರೂ.2,72,36,446,14 ವ್ಯವಹಾರ |5.20 ಲಕ್ಷ ರೂ. ನಿವ್ವಳ ಲಾಭ | 1.36 ರೂ. ಬೋನಸ್ |

ಪುತ್ತೂರು: ಪಾಲ್ತಾಡಿ ಗ್ರಾಮದ ಬಂಬಿಲ ಹಾಲು ಉತ್ಪಾದಕರ ಸಹಕಾರ ಸಂಘದ ವಾರ್ಷಿಕ ಸಾಮಾನ್ಯ ಸಭೆ ಸೆ. 17 ರಂದು ಮಂಜುನಾಥನಗರ ಶ್ರೀ ಸಿದ್ದಿವಿನಾಯಕ ಸಭಾಭವನದಲ್ಲಿ ಸಂಘದ ಅಧ್ಯಕ್ಷ ಜಯಪ್ರಕಾಶ್ ಎನ್.ಆರ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.

ಪ್ರಗತಿಯ ಹಾದಿಯಲ್ಲಿ ಮುನ್ನಡೆಯಲಿ- ಡಾ.ಸತೀಶ್ ರಾವ್
ದ.ಕ. ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ಉಪ ವ್ಯವಸ್ಥಾಪಕ ಡಾ.ಸತೀಶ್ ರಾವ್ ಮಾತನಾಡಿ ಬಂಬಿಲ ಹಾಲು ಉತ್ಪಾದಕರ ಸಹಕಾರ ಸಂಘವು ಪ್ರಗತಿ ಪಥದಲ್ಲಿ ಸಾಗುತ್ತಿರುವುದು ತುಂಬಾ ಸಂತೋಷದ ವಿಚಾರವಾಗಿದೆ, ಸಂಘದ ಆಡಳಿತ ತುಂಬಾ ಚೆನ್ನಾಗಿದೆ, ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ನಿರ್ದೇಶಕರುಗಳು, ಕಾರ‍್ಯದರ್ಶಿ ಮತ್ತು ಸಿಬ್ಬಂಧಿ ಮತ್ತು ಸರ್ವ ಸದಸ್ಯರುಗಳ ಸಹಕಾರದಿಂದ ಸಂಘ ಉತ್ತಮ ಸಾಧನೆಯನ್ನು ಮಾಡಿದೆ. ಈ ಬಾರಿ ಹೆಚ್ಚು ಲಾಭ ಬಂದಿದೆ, ಹೆಚ್ಚು ಹಾಲು ಸಂಗ್ರಹ ಆಗುತ್ತಿದೆ. ಮುಂದೆಯೂ ಸಂಘ ಪ್ರಗತಿಯ ಹಾದಿಯಲ್ಲಿ ಮುನ್ನಡೆಯಲಿ ಎಂದು ಹೇಳಿದರು.

ಹೈನುಗಾರಿಕೆಯಿಂದ ಹೆಚ್ಚು ಲಾಭ ಇದೆ- ಮಾಲತಿ
ದ.ಕ. ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ವಿಸ್ತರಣಾಧಿಕಾರಿ ಮಾಲತಿ ಅವರು ಮಾತನಾಡಿ ಹೈನುಗಾರಿಕೆಯಿಂದ ಹೆಚ್ಚು ಲಾಭ ಇದೆ. ಹೈನುಗಾರಿಕೆಯನ್ನು ಅತ್ಯಂತ ವ್ಯವಸ್ಥಿತವಾಗಿ ಮಾಡಬೇಕು ಎಂದು ಹೇಳಿದರು.

ಸಂಘದ ಅಭಿವೃದ್ಧಿಗೆ ಸಹಕರಿಸಬೇಕು- ಜಯಪ್ರಕಾಶ್ ಎನ್.ಆರ್ : ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಘದ ಅಧ್ಯಕ್ಷ ಜಯಪ್ರಕಾಶ್ ಎನ್.ಆರ್. ವರದಿ ಸಾಲಿನಲ್ಲಿ ಸಂಘವು ರೂ.2,72,36,446,14 ವ್ಯವಹಾರ ಮಾಡಿದ್ದು, 5.20 ಲಕ್ಷ ರೂ. ನಿವ್ವಳ ಲಾಭ ಬಂದಿದ್ದು,1.36ರೂ. ಬೋನಸ್ ಅನ್ನು ಸದಸ್ಯರುಗಳಿಗೆ ನೀಡಲಾಗುವುದು ಎಂದರು. ಸಂಘದ ಬೆಳವಣಿಗೆಗಾಗಿ ಗುಣಮಟ್ಟದ ಹಾಲು ಪೂರೈಸಬೇಕು. ಹೆಚ್ಚು ಹಾಲು ಹಾಕುವ ಮೂಲಕ ಸಂಘದ ಅಭಿವೃದ್ಧಿಗೆ ಸಹಕರಿಸಬೇಕು, ಸಂಘದಿಂದಲೇ ಪಶು ಆಹಾರವನ್ನು ಖರೀದಿಸಿ, ಪ್ರೋತ್ಸಾಹವನ್ನು ನೀಡಬೇಕು ಎಂದರು. ಬಹು ವರ್ಷಗಳ ಬೇಡಿಕೆಯಾದ ಸಂಘದ ನೂತನ ಕಟ್ಟಡ ನಿರ್ಮಾಣ ಕಾರ್‍ಯ ಅದಷ್ಟು ಬೇಗ ಆಗಲಿ ಎಂದರು.

ಸಂಘದ ನಿರ್ದೇಶಕರುಗಳಾದ ಗಣೇಶ್ ನಾಯ್ಕ ಪರಣೆ, ಸುರೇಶ್ ಬಿ, ಜಗನ್ನಾಥ ಪೂಜಾರಿ, ನಾರಾಯಣ ಪೂಜಾರಿ, ವಸಂತ ಗೌಡ, ಶಾಂತಾರಾಮ, ಬಾಬು ಬಿ.ಸಿ, ಉಷಾ ಬಿ.ಕೆ ಉಪಸ್ಥಿತರಿದ್ದರು. ಸಂಘದ ಕಾರ‍್ಯದರ್ಶಿ ಕೋಮಲ ಅವರು ವರದಿ ವಾಚಿಸಿದರು. ಹಾಲು ಪರೀಕ್ಷಕಿ ವಿಮಲ ಸಹಕರಿಸಿದರು. ಸಂಘದ ಅಧ್ಯಕ್ಷ ಜಯಪ್ರಕಾಶ್ ಎನ್.ಆರ್ ಸ್ವಾಗತಿಸಿ, ನಿರ್ದೇಶಕಿ ತೇಜಾಕ್ಷಿ ಕೊಡಂಗೆ ವಂದಿಸಿದರು. ಉಪಾಧ್ಯಕ್ಷ ಅನ್ನಪೂರ್ಣ ಪ್ರಸಾದ್ ರೈ ಬೈಲಾಡಿ ಕಾರ್‍ಯಕ್ರಮ ನಿರೂಪಿಸಿದರು.

ಬಂಬಿಲ ಹಾಲು ಉತ್ಪಾದಕರ ಸಹಕಾರ ಸಂಘದ ಮಾಜಿ ನಿರ್ದೇಶಕರುಗಳಾದ ಇಂದಿರಾ ಬಿ.ಕೆ, ಹೊನ್ನಪ್ಪ ಗೌಡ ಅಂಗಡಿಮೂಲೆ, ವಿಠಲ ಶೆಟ್ಟಿ ಬಂಬಿಲ, ಕುಸುಮಾ ಅಂಗಡಿಮೂಲೆ, ಸದಸ್ಯ ಹೊನ್ನಪ್ಪ ಗೌಡ ಪರಣೆ ಅವರುಗಳು ವಿವಿಧ ಸಲಹೆ-ಸೂಚನೆಯನ್ನು ನೀಡಿದರು. ಮುಕ್ಕೂರು ಹಾಲು ಉತ್ವಾದಕರ ಸಹಕಾರ ಸಂಘದ ಅಧ್ಯಕ್ಷ ಕುಂಬ್ರ ದಯಾಕರ ಆಳ್ವ ಉಪಸ್ಥಿತರಿದ್ದರು.


ಸಂಘಕ್ಕೆ ಹೆಚ್ಚು ಹಾಲು ಪೂರೈಸಿ ಪ್ರಥಮ ಸ್ಥಾನ ಪಡೆದ ಜಯಪ್ರಕಾಶ್ ಎನ್.ಆರ್ ದ್ವಿತೀಯ ಸ್ಥಾನ ಪಡೆದ ಸುರೇಶ್ ಬಿ ಇವರಿಗೆ ಬಹುಮಾನ ನೀಡಲಾಯಿತು. ವರದಿ ವರ್ಷದಲ್ಲಿ ಸಂಘಕ್ಕೆ ಹಾಲು ಪೂರೈಸಿದ ಸದಸ್ಯರಿಗೆ ಸ್ಟೀಲ್ ಪಾತ್ರೆ ವಿತರಿಸಲಾಯಿತು.

LEAVE A REPLY

Please enter your comment!
Please enter your name here