77ರ ಹರೆಯದಲ್ಲಿ ಜಾದೂ ಪ್ರದರ್ಶಿಸಿ ಸೈ ಎನಿಸಿದ ಗಂಗಾಧರ ಟೈಲರ್

0

ಉಪ್ಪಿನಂಗಡಿ: ದೇಹಕ್ಕೆ ವಯಸ್ಸಾದರೂ ಮನಸ್ಸಿಗೆ ವಯಸ್ಸಾಗಬಾರದು ಎಂಬಂತೆ ತನ್ನ 77 ರ ಹರೆಯದಲ್ಲೂ ವೃದ್ಧರೊಬ್ಬರು ಯುವಕರನ್ನು ನಾಚಿಸುವಂತೆ ಜಾದೂ ಪ್ರದರ್ಶನ ಗೈದು ಪ್ರೇಕ್ಷಕರ ಮನ ಗೆದ್ದ ಘಟನೆ ಉಪ್ಪಿನಂಗಡಿಯಲ್ಲಿ ನಡೆದಿದೆ.


ಅವರ ಹೆಸರು ಗಂಗಾಧರ ಟೈಲರ್. ಉಪ್ಪಿನಂಗಡಿ ಕೋಟೆ ನಿವಾಸಿಯಾಗಿರುವ ಅವರ ವಯಸ್ಸು 77 ವರ್ಷ. ಮೂಲ ಉದ್ಯೋಗ ಟೈಲರಿಂಗ್, ಹವ್ಯಾಸಿ ನಾಟಕ ಕಲಾವಿದ. ಈ ಬಾರಿಯ ಉಪ್ಪಿನಂಗಡಿಯ 50 ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಸ್ಥಳೀಯ ಪ್ರತಿಭೆಗಳಿಗೆ ಅವಕಾಶ ಕಲ್ಪಿಸಿದ ಕಾರಣ ತನ್ನ ಮೊಮ್ಮಗ ಕೋಟೆ ಆರ್ಯನ್ ಬಳಗ ಎಂಬ ಶಿರ್ಷಿಕೆಯಡಿ ಗಂಗಾಧರ ಟೈಲರ್‌ರವರ ಜಾದೂ ಪ್ರದರ್ಶನ ಆಯೋಜಿಸಲಾಗಿತ್ತು.


ಮೊಮ್ಮಗನನ್ನು ಒಳಗೊಂಡಂತೆ ಜಾದೂಪ್ರದರ್ಶನ ನಡೆಸಿದ ವಯೋವೃದ್ಧ ಗಂಗಾಧರ ಟೈಲರ್ ಮನೋಜ್ಞವಾದ ಜಾದೂ ಪ್ರದರ್ಶನಗೈದು ಗಮನ ಸೆಳೆದರು. ತನ್ನ ಶ್ವೇತವರ್ಣದ ತಲೆಕೂದಲಿನಿಂದ ತನಗೆ ವಯಸ್ಸಾಗಿದೆ ಎಂದು ತಿಳಿಸುವಂತಿದ್ದರೂ, ವೇದಿಕೆಯಲ್ಲಿನ ತನ್ನ ಪಾದರಸದಂತಹ ಚಲನವಲನದಿಂದ ಬಿಳಿಕೂದಲಿನ ತರುಣನಂತೆ ಕ್ರಿಯಾಶೀಲತೆಯನ್ನು ಪ್ರದರ್ಶಿಸಿ, ತನ್ನೊಳಗಿನ ಮಾಂತ್ರಿಕ ಕೌಶಲ್ಯವನ್ನು ಅನಾವರಣಗೊಳಿಸಿದರು. ಈ ಮೂಲಕ ಸರಿ ಸುಮಾರು 2 ಗಂಟೆಗಳ ಕಾಲ ಪ್ರೇಕ್ಷಕ ವರ್ಗವನ್ನು ಏಕಾಗ್ರ್ರತೆಯಿಂದ ಹಿಡಿದಿಟ್ಟುಕೊಳ್ಳುವಲ್ಲಿ ಯಶಸ್ವಿಯಾದರು.

LEAVE A REPLY

Please enter your comment!
Please enter your name here