ಕೊಳ್ತಿಗೆಯಲ್ಲಿ 11ನೇ ವರ್ಷದ ಸೌಹಾರ್ದ ಶ್ರೀ ಗಣೇಶೋತ್ಸವ ಸಂಭ್ರಮ

0

ಪುತ್ತೂರು: ಕೊಳ್ತಿಗೆಯ ಮೊಗಪ್ಪೆಯ ಶ್ರೀ ಮುತ್ತುಮಾರಿಯಮ್ಮ ದೇವಸ್ಥಾನದ ಸಮೀಪ ಸೌಹಾರ್ದ ಸಮಿತಿ ವತಿಯಿಂದ 11ನೇ ವರ್ಷದ ಸೌಹಾರ್ದ ಶ್ರೀ ಗಣೇಶೋತ್ಸವವು ಸೆ.14ರಿಂದ 15ರವರೆಗೆ ಸಂಸ್ಥಾಪಕ ಅಧ್ಯಕ್ಷ ಪ್ರದೀಪ್ ಕುಮಾರ್ ರೈ ಪಾಂಬಾರು ಅವರ ನೇತೃತ್ವದಲ್ಲಿ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನೆರವೇರಿತು.

ಸೆ.14ರಂದು ಬೆಳಿಗ್ಗೆ ಶ್ರೀ ಗಣೇಶ ಪ್ರತಿಷ್ಠಾಪನೆ, ಗಣಹೋಮ, ಬಾಯಂಬಾಡಿ ಶ್ರೀ ಷಣ್ಮುಖದೇವ ಮಂಡಳಿಯವರಿಂದ ಭಜನಾ ಸಂಕೀರ್ತನೆ, ಮಹಾಪೂಜೆ, ಪ್ರಸಾದ ವಿತರಣೆ, ಸಾಮೂಹಿಕ ಭೋಜನ ಬಳಿಕ ಕಳಂಜ ಶ್ರೀ ಆದಿಮಹೇಶ್ವರಿ ಯಕ್ಷಗಾನ ಕಲಾ ತಂಡದಿಂದ ‘ಉಳ್ಳಾಲ್ತಿ ಕಾರ್ಣಿಕ’ ತುಳು ಯಕ್ಷಗಾನ, ಸಂಜೆ ಕಲಾ ಮಂದಿರ್ ಬೆಳ್ಳಾರೆ ಮತ್ತು ಅಂತಾರಾಷ್ಟ್ರೀಯ ಆಯರ್ಭಟ ಗೋಲ್ಡನ್ ಎನ್ನರ್ ತಂಡದಿಂದ ‘ನೃತ್ಯ ಸಂಭ್ರಮ’ ನಡೆಯಿತು. ಈ ಸಂದರ್ಭದಲ್ಲಿ ಶಾಸಕ ಅಶೋಕ್ ಕುಮಾರ್ ರೈ ಭಾಗವಹಿಸಿ ಶುಭ ಹಾರೈಸಿದರು.

ಬಳಿಕ ನಡೆದ ಸೌಹಾರ್ದ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರದೀಪ್ ಕುಮಾರ್ ರೈ ಪಾಂಬಾರು ಅವರು, ಮನುಷ್ಯ ಮನುಷ್ಯನನ್ನು ಪ್ರೀತಿಯಿಂದ ನೋಡುವುದೇ ಮನುಷ್ಯ ಧರ್ಮ. ರಕ್ತ ಬೇಕಾದಾಗ ಜಾತಿ-ಧರ್ಮ ಕೇಳುವುದಿಲ್ಲ, ದ್ವೇಷದ ಜೀವನ ವ್ಯರ್ಥ. ಜಾತಿವಾದ, ಕೋಮುವಾದ, ಭಯೋತ್ಪಾದನೆ ಹಿಮ್ಮೆಟ್ಟಿಸಿ ಯುವಜನಾಂಗದಲ್ಲಿ ಸೌಹಾರ್ದ ಮನೋಭಾವ ಮೂಡಿಸಲು ಪ್ರತಿವರ್ಷ ಸೌಹಾರ್ದ ಗಣೇಶೋತ್ಸವ, ಇಫ್ತಾರ್ ಕೂಟ, ಕ್ರಿಸ್‌ಮಸ್ ಆಚರಿಸುತ್ತೇವೆ ಎಂದರು.

ವಿಶೇಷ ಅತಿಥಿ ಉಪ್ಪಿನಂಗಡಿಯ ಹಿರಿಯ ಮತ ಪಂಡಿತ ಜನಾಬ್ ಎಸ್.ಬಿ. ಮಹಮ್ಮದ್ ಧಾರಿಮಿ ಮಾತನಾಡಿ, ಇದು ರಾಜ್ಯದಲ್ಲೇ ಪ್ರಥಮ, ದೇಶಕ್ಕೆ ಮಾದರಿಯಾದ ಸೌಹಾರ್ದ ಗಣೇಶೋತ್ಸವ ಎಂದರು. ಕೆಎಸ್‌ಆರ್‌ಟಿಸಿ ವಿಭಾಗೀಯ ಸಂಚಾರ ಅಧಿಕಾರಿ ಜೈ ಶಾಂತ್ ಕುಮಾರ್ ಎಂ.ಬಿ., ಪುತ್ತೂರು ಉಪವಿಭಾಗದ ಡಿವೈಎಸ್ಪಿ ಪ್ರಮೋದ್ ಕುಮಾರ್, ಲಯನ್ಸ್ ಪ್ರಾಂತೀಯ ಅಧ್ಯಕ್ಷ ಸಂತೋಷ್ ಜಾಕೆ, ಬಾಯಂಬಾಡಿ ಷಣ್ಮುಖ ದೇವಸ್ಥಾನದ ಮಾಜಿ ಅಧ್ಯಕ್ಷ ವಸಂತಕುಮಾರ್ ರೈ ದುಗ್ಗಳ ಮಾತನಾಡಿ ಸಮಿತಿಯನ್ನು ಶ್ಲಾಘಿಸಿದರು.

ಸನ್ಮಾನ: ಸಮಾಜ ಸೇವಕ ಕೆ.ಎಂ. ಬಾಬುರಾಜೇಂದ್ರ ಗೌಡ ಮತ್ತು ನಿವೃತ್ತ ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಡಾ. ಬದ್ರುದ್ದೀನ್ ಎಂ.ಎನ್. ಅವರನ್ನು ಸನ್ಮಾನಿಸಲಾಯಿತು. ಕಾರ್ಯಾಧ್ಯಕ್ಷ ಅಮಲ ರಾಮಚಂದ್ರ ಸ್ವಾಗತಿಸಿ, ಜತೆ ಕಾರ್ಯದರ್ಶಿ ವಿಜೇಶ್ ರೈ ಕೆಳಗಿನಮನೆ ವಂದಿಸಿದರು, ಸಾಹುಲ್ ಹಮೀದ್ ನಿರೂಪಿಸಿದರು.

ಎರಡನೇ ದಿನ: ಬೆಳಿಗ್ಗೆಯಿಂದ ಶ್ರೀ ಸದಾನಂದ ಆಚಾರ್ಯ ಕಾಣಿಯೂರು ನೇತೃತ್ವದಲ್ಲಿ ಕುಣಿತಾ ಭಜನಾ ಸ್ಪರ್ಧಾ ಕೂಟ ನಡೆಯಿತು. 12 ತಂಡಗಳು ಭಾಗವಹಿಸಿದ್ದು, ಪ್ರಥಮ – ಶೌರ್ಯ ಮಕ್ಕಳ ಕುಣಿತಾ ಭಜನಾ ತಂಡ ಬಾಳಿಲ ಮುಪ್ಪರ್ಯ (ರೂ.8000+ಶಾಶ್ವತ ಫಲಕ), ದ್ವಿತೀಯ – ಶ್ರೀ ಷಣ್ಮುಖದೇವ ಭಜನಾ ಮಂಡಳಿ ಬಾಯಂಬಾಡಿ (ರೂ.4000+ಫಲಕ), ಎಲ್ಲಾ ತಂಡಗಳಿಗೆ ಗೌರವಧನ, ಫಲಕ ನೀಡಲಾಯಿತು. ಸಂಜೆ ನಾಟ್ಯರಂಗ ಕಲಾಕೇಂದ್ರ ಪೆರ್ಲಂಪಾಡಿ ಅವರ ‘ನೃತ್ಯ ನಿನಾದ’ ನಡೆಯಿತು.

ರಾತ್ರಿ ನಡೆದ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರದೀಪ್ ಕುಮಾರ್ ರೈ ಪಾಂಬಾರು ವಹಿಸಿದ್ದರು. ಮುಖ್ಯ ಅತಿಥಿ ಲಯನ್ಸ್ ಕ್ಲಬ್ ಬೆಳ್ಳಾರೆ ಜಲದುರ್ಗಾ ಅಧ್ಯಕ್ಷ ಲಯನ್ ಕುಂಬ್ರ ದಯಾಕರ ಆಳ್ವ, ವಿಶೇಷ ಅತಿಥಿ ದ.ಕ. ಜಿ.ಪಂ ಮಾಜಿ ಉಪಾಧ್ಯಕ್ಷ ಎಂ.ಎಸ್. ಮಹಮ್ಮದ್, ಶ್ರೀ ರಾಮಕೃಷ್ಣ ಪ್ರೌಢಶಾಲಾ ಸಂಚಾಲಕ ಕಾವು ಹೇಮನಾಥ ಶೆಟ್ಟಿ, ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಇಂಜಿನಿಯರ್ ಉದಯಕುಮಾರ್ ಮಾತನಾಡಿದರು. ಕೊಳ್ತಿಗೆ ಗ್ರಾ.ಪಂ ಮಾಜಿ ಅಧ್ಯಕ್ಷ ಪ್ರಮೋದ್ ಕೆ.ಎಸ್. ವೇದಿಕೆಯಲ್ಲಿದ್ದರು. ಕಾರ್ಯಕ್ರಮಕ್ಕೆ ಸ್ಥಳಾವಕಾಶ ನೀಡಿದ ಉದ್ಯಮಿ ಪದ್ಮನಾಥನ್ ಮೊಗಪ್ಪ ಪರವಾಗಿ ಅವರ ತಾಯಿ ಪೊನ್ನಮ್ಮ ಅವರನ್ನು ಗೌರವಿಸಲಾಯಿತು. ಪವನ್ ದೊಡ್ಡಮನೆ ಸ್ವಾಗತಿಸಿ, ಅಮಲ ರಾಮಚಂದ್ರ ವಂದಿಸಿ, ಶಾಹುಲ್ ಹಮೀದ್ ನಿರೂಪಿಸಿದರು.

ಬಳಿಕ ನಡೆದ ವೈಭವದ ಶೋಭಾಯಾತ್ರೆಯಲ್ಲಿ ಶ್ರೀ ಷಣ್ಮುಖದೇವ ಭಜನಾ ಮಂಡಳಿಯ ಕುಣಿತ ಭಜನೆ, ಸೆವೆನ್ ಸ್ಟಾರ್ ಬೈಲೋಡಿ ಹುಲಿವೇಷ, ಟ್ಯಾಬ್ಲೋ, ಹರಿಹರ ಕಲಾಸ್ಮಿತ ದೇಲಂಪಾಡಿ ಅವರ ಕೇರಳ ಚೆಂಡೆ ಪ್ರದರ್ಶನ, ಸಿಡಿಮದ್ದು ಪ್ರದರ್ಶನದೊಂದಿಗೆ ಮೊಗಪ್ಪೆಯಿಂದ ಮೊಗಪ್ಪೆ ಸಾರ್ವಜನಿಕ ಕೆರೆವರೆಗೆ ಸಾಗಿ ವಿಸರ್ಜನೆ ನಡೆಯಿತು.

ಉಸ್ತುವಾರಿಗಳಾಗಿ ವಿಜೇಶ್ ರೈ ಕೆಳಗಿನಮನೆ, ಸತ್ತಾರ್ ಆಮಳ, ಎಡ್ವರ್ಡ್ ಡಿಸೋಜಾ, ರಘುನಾಥನ್ ಮೊಗಪ್ಪ, ಶಿವಪ್ರಸಾದ್ ಕುರ್ಮಕೋಡಿ, ಕ್ಯಾಂಕೋ ಗಣೇಶ್, ಲೋಹಿತ್ ಬಾರಿಕೆ, ದಿನೇಶ್ ಮೊಗಪ್ಪೆ, ಹರೀಶ್ ರೈ ಕೆಳಗಿನಮನೆ, ಪವನ್ ದೊಡ್ಡಮನೆ, ವಿನೋದ್ ರೈ ಕೆಳಗಿನಮನೆ, ನಿತಿನ್ ನೀಟಡ್ಕ, ವರುಣ್ ಕೊಳತ್ತು, ಲೋಕೇಶ್ ಮೊಗಪ್ಪೆ, ಶರಣಕುಮಾರ್ ಮೊಗಪ್ಪೆ, ಷಣ್ಮಖರಾಜ್ ಮೊಗಪ್ಪೆ, ತ್ರಿಶೋದ್ ರೈ ಉಳಿಯಡ್ಕ, ಶರೀಫ್ ಕರೋಡಂ ವಹಿಸಿದ್ದರು.

LEAVE A REPLY

Please enter your comment!
Please enter your name here